ADVERTISEMENT

ಹಣಕಾಸು ಸಾಕ್ಷರತೆ ಅಂಕಣ: ವಿಮಾ ಮೋಸ: ಪಾರಾಗುವುದು ಹೇಗೆ?

ರಾಜೇಶ್ ಕುಮಾರ್ ಟಿ. ಆರ್.
Published 24 ನವೆಂಬರ್ 2024, 23:55 IST
Last Updated 24 ನವೆಂಬರ್ 2024, 23:55 IST
   

ಭಾರತದಲ್ಲಿ ಹೂಡಿಕೆದಾರರ ದಿಕ್ಕು ತಪ್ಪಿಸಿ ಮೋಸದಿಂದ ವಿಮೆ ಮಾರಾಟ ಮಾಡುವ ಪ್ರವೃತ್ತಿ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ. 2024ರ ಆರ್ಥಿಕ ಸಮೀಕ್ಷೆಯಲ್ಲಿಯೂ ಸಾಲು ಸಾಲು ಸುಳ್ಳು ಹೇಳಿ ಗ್ರಾಹಕರಿಗೆ ವಿಮೆ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಲಾದೆ.

ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಅಧ್ಯಕ್ಷ ದೇಬಶೀಶ್ ಪಾಂಡಾ ಅವರು, ಮೋಸದಿಂದ ವಿಮೆ ಮಾರಾಟ ಮಾಡದಂತೆ ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿವಿಧ ಸಂಸ್ಥೆಗಳು ವಿಮಾ ಪಾಲಿಸಿಗಳ ಮೋಸದ ಮಾರಾಟಕ್ಕೆ ಕಡಿವಾಣ ಹಾಕಲು ಶತಪ್ರಯತ್ನ ನಡೆಸಿದ್ದರೂ ವಾಸ್ತವದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭವಲ್ಲ. ಪರಿಸ್ಥಿತಿ ಹೀಗಿರುವಾಗ, ವಿಮಾ ಪಾಲಿಸಿಗಳ ಮೋಸದ ಮಾರಾಟ ಕುರಿತು ಗ್ರಾಹಕರಿಗೆ ಸರಿಯಾದ ಮಾಹಿತಿ ಮತ್ತು ಶಿಕ್ಷಣ ನೀಡುವ ಅಗತ್ಯವಿದೆ.

ADVERTISEMENT

ಬನ್ನಿ, ಬ್ಯಾಂಕ್‌ಗಳು, ಮಧ್ಯವರ್ತಿಗಳು ಮತ್ತು ವಿಮಾ ಏಜೆಂಟ್‌ಗಳು ಮೋಸದಿಂದ ವಿಮೆ ಮಾರಾಟ ಮಾಡಲು ಏನೆಲ್ಲಾ ತಂತ್ರಗಳನ್ನು ಪ್ರಯೋಗಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ಮೋಸದ ಮಾರಾಟ ಹೇಗೆ?: ನಿರ್ದಿಷ್ಟ ವಿಮಾ ಪಾಲಿಸಿ ಭಾರಿ ಗಳಿಕೆ ತಂದು ಕೊಡುತ್ತದೆ ಎಂದು ಬಿಂಬಿಸುವುದು, ಪಾಲಿಸಿಯ ಕೆಲ ಮಾಹಿತಿಯನ್ನು ಗ್ರಾಹಕನಿಂದ ಮರೆಮಾಚುವುದು, ತಡ ಮಾಡದೆ ಬೇಗ ಪಾಲಿಸಿಕೊಳ್ಳುವಂತೆ ಒತ್ತಡ ಹೇರುವುದು, ಗೋಪ್ಯ ಶುಲ್ಕದ ಮಾಹಿತಿಯನ್ನು ಮುಚ್ಚಿಡುವುದು ಸೇರಿ ಹಲವು ರೀತಿಯಲ್ಲಿ ವಿಮಾ ವಲಯದಲ್ಲಿ ಮೋಸದ ಮಾರಾಟ ನಡೆಯುತ್ತದೆ. ಅವುಗಳಲ್ಲಿ ಕೆಲವು ಉದಾಹರಣೆ ಇಲ್ಲಿವೆ. 

ಮ್ಯೂಚುವಲ್ ಫಂಡ್ ಹೂಡಿಕೆ ತರಹದ ವಿಮೆ: 

ಕಳೆದ ಒಂದೂವರೆ ವರ್ಷದಲ್ಲಿ ಹಲವು ವಿಮಾ ಕಂಪನಿಗಳು ಎನ್‌ಎಫ್‌ಒ (ನ್ಯೂ ಫಂಡ್ ಆಫರ್) ಬಿಡುಗಡೆ ಮಾಡಿವೆ. ಕೆಲವು ಕಂಪನಿಗಳು ವಿಮಾ ಪಾಲಿಸಿಗಳನ್ನು ಮ್ಯೂಚುವಲ್ ಫಂಡ್‌ಗಳೆಂದು ಬಿಂಬಿಸಿ ಗ್ರಾಹಕರಿಗೆ ಮೋಸ ಮಾಡುತ್ತಿವೆ. ಸಾಮಾನ್ಯವಾಗಿ ವಿಮೆ ಮಾರಾಟ ಮಾಡುವವರು ಎಂಡೋಮೆಂಟ್, ಮನಿ ಬ್ಯಾಕ್ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಈ ವಿಮೆಗಳು ಮ್ಯೂಚುವಲ್ ಫಂಡ್ ಮಾದರಿಯಲ್ಲಿ ಗರಿಷ್ಠ ಲಾಭ ಒದಗಿಸುತ್ತವೆ ಎಂದು ಬಣ್ಣದ ವಿವರಣೆ ಕೊಡುತ್ತಾರೆ.

ಆದರೆ, ಮ್ಯೂಚುವಲ್ ಫಂಡ್ ಯಾವುದು, ಇನ್ಶೂರೆನ್ಸ್ ಯಾವುದು ಎಂಬ ಸ್ಪಷ್ಟತೆ ಇಲ್ಲದಿದ್ದರೆ ಸುಲಭವಾಗಿ ಮೋಸದ ಮಾರಾಟದ ಬಲೆಗೆ ಬೀಳುತ್ತೀರಿ. ಹಾಗಾಗಿ, ಯಾವುದೇ ಮಧ್ಯವರ್ತಿಯ ಸಲಹೆ ಪರಿಗಣಿಸಿ ಹೂಡಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಿ.

ಕಮಿಷನ್ ಜಾಸ್ತಿ ಇರುವ ಪಾಲಿಸಿಗಳ ಮಾರಾಟ:

ಸಾಮಾನ್ಯವಾಗಿ ನೋಡಿದಾಗಿ ವಿಮೆ ಮಾರಾಟ ಮಾಡುವಾಗ ಮಧ್ಯವರ್ತಿಗಳು, ಬ್ಯಾಂಕ್‌ಗಳು ಗ್ರಾಹಕನಿಗೆ ಹೆಚ್ಚು ಲಾಭವಾಗುವ ಪಾಲಿಸಿಗಳಿಗಿಂತ ತಮಗೆ ಹೆಚ್ಚು ಕಮಿಷನ್ ಸಿಗುವ ಪಾಲಿಸಿಗಳ ಮಾರಾಟಕ್ಕೆ ಒತ್ತು ನೀಡುತ್ತವೆ. ಎಂಡೋಮೆಂಟ್, ಮನಿ ಬ್ಯಾಕ್ ಪಾಲಿಸಿಯಂತಹ ಇನ್ಶೂರೆನ್ಸ್‌ಗಳನ್ನು ಮಾರಾಟ ಮಾಡಿದಾಗ ಮೊದಲ ವರ್ಷ ಶೇ 20ರಿಂದ ಶೇ 25ರಷ್ಟು ಕಮಿಷನ್ ಸಿಗುತ್ತದೆ. ಅದರ ಸಲುವಾಗಿ ಅಂತಹ ಪಾಲಿಸಿಗಳನ್ನು ಗ್ರಾಹಕನ ತಲೆಗೆ ಕಟ್ಟಿ ಟೋಪಿ ಹಾಕುತ್ತಿವೆ. 

ಎಂಡೋಮೆಂಟ್, ಮನಿ ಬ್ಯಾಕ್‌ನಂತಹ ಪಾಲಿಸಿಗಳಲ್ಲಿ ಗಳಿಕೆ ಕಡಿಮೆ ಮತ್ತು ಕವರೇಜ್ ಕೂಡ ಹೆಚ್ಚಿರುವುದಿಲ್ಲ. ಗ್ರಾಹಕನಿಗೆ ಇಂತಹ ಪಾಲಿಸಿಗಳಿಂದ ಹೆಚ್ಚು ಅನುಕೂಲವಾಗುವುದಿಲ್ಲ. ವಾಸ್ತವದಲ್ಲಿ ಟರ್ಮ್ ಇನ್ಶೂರೆನ್ಸ್‌ನಿಂದ ಗ್ರಾಹಕನಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಹಣಕಾಸು ಸಂಸ್ಥೆಗಳು ಅದರ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ.

ಹೂಡಿಕೆ ಮತ್ತು ತೆರಿಗೆ ಲಾಭ:

ಜನವರಿ, ಫೆಬ್ರುವರಿ ಮತ್ತು ಮಾರ್ಚ್ ವೇಳೆ ಬ್ಯಾಂಕ್‌‌ಗಳು ಅಥವಾ ವಿಮಾ ಏಜೆಂಟ್‌ಗಳ ಬಳಿ ಹೋದರೆ ಅವರು ಹೇಳುವ ಮೊದಲ ಮಾತು ಈ ಸಲ ಆದಾಯ ತೆರಿಗೆ ಉಳಿಸುವ ಜೊತೆಗೆ ಕವರೇಜ್ ಮತ್ತು ಹೂಡಿಕೆ ಲಾಭ ಕೊಡುವ ಜೀವ ವಿಮೆ ತೆಗೆದುಕೊಳ್ಳಿ ಎನ್ನುವುದಾಗಿದೆ. ಹೀಗೆ ಹೇಳಿದ ತಕ್ಷಣ ವೇತನ ಪಡೆಯುವ ಹಲವರು ಪೂರ್ವಾಪರ ಯೋಚಿಸದೆ ಎಂಡೋಮೆಂಟ್ ಅಥವಾ ಮನಿ ಬ್ಯಾಕ್ ಪಾಲಿಸಿಗಳನ್ನು ತೆಗೆದುಕೊಂಡು ಬಿಡುತ್ತಾರೆ.

ಆದರೆ, ಎಷ್ಟೋ ಮಂದಿಗೆ ತೆರಿಗೆ ಉಳಿಸಲು ಜೀವ ವಿಮೆ ಪಾಲಿಸಿಯ ಅಗತ್ಯವೇ ಇರುವುದಿಲ್ಲ. ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಮತ್ತು ಮಕ್ಕಳ ಶಿಕ್ಷಣ ವೆಚ್ಚ (ಟ್ಯೂಷನ್ ಫೀಸ್) ಮೂಲಕವೇ ಸೆಕ್ಷನ್ 80ಸಿ ಅಡಿಯಲ್ಲಿ ₹1.5 ಲಕ್ಷ ವರೆಗಿನ ತೆರಿಗೆ ವಿನಾಯಿತಿ ಸಿಕ್ಕಿಬಿಡುತ್ತದೆ. ಹೀಗಿದ್ದೂ ಮೋಸದ ವಿಮೆ ಮಾರಾಟಕ್ಕೆ ಅವರು ಸಿಲುಕುತ್ತಾರೆ. ತೆರಿಗೆ ಉಳಿತಾಯಕ್ಕೆ ವರ್ಷದ ಕೊನೆಯಲ್ಲಿ ಯೋಜನೆ ರೂಪಿಸುವ ಬದಲು ವರ್ಷದ ಆರಂಭದಲ್ಲೇ ಈ ಕೆಲಸ ಮಾಡಿದರೆ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

ಪಾರಾಗುವುದು ಹೇಗೆ?:

ಯಾವುದೇ ವೃತ್ತಿಪರ ಹಣಕಾಸು ಸಲಹೆಗಾರರು ನಿಮ್ಮ ಅಗತ್ಯತೆ ಆಧರಿಸಿ ಯಾವ ಹಣಕಾಸು ಉತ್ಪನ್ನ ಖರೀದಿಸಬೇಕು ಎಂದು ಸಲಹೆ ನೀಡುತ್ತಾರೆ. ಹಾಗೆ ಮಾಡದೆ ನಿರ್ದಿಷ್ಟ ಹಣಕಾಸು ಉತ್ಪನ್ನದಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದರೆ ಅಲ್ಲಿ ಮೋಸದ ಮಾರಾಟ ನಡೆಯುವ ಸಾಧ್ಯತೆ ಇರುತ್ತದೆ.

ನಿಮಗೆ ಯಾವುದೇ ಹೂಡಿಕೆ ಉತ್ಪನ್ನವನ್ನು ಹಣಕಾಸು ಸಲಹೆಗಾರರು ಶಿಫಾರಸು ಮಾಡಿದಾಗ ಅದನ್ನು ಯಾಕೆ ಮಾಡಿದ್ದಾರೆ. ಅದು ನಿಮಗೆ ಸರಿಹೊಂದುವುದೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ. ಧುತ್ತೆಂದು ಹೂಡಿಕೆಯ ನಿರ್ಧಾರ ಮಾಡಿಬಿಡಬೇಡಿ. ಯಾವುದೇ ಹೂಡಿಕೆ ಮಾಡುವಾಗ ನಿಬಂಧನೆ ಪತ್ರವನ್ನು ಪೂರ್ತಿಯಾಗಿ ಓದಿ. ನಿಮಗೆ ಹಣಕಾಸು, ವಿಮೆ ಬಗ್ಗೆ ಸಲಹೆ ನೀಡುವವರು ನೋಂದಾಯಿತ ಪ್ರತಿನಿಧಿಗಳೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಮೋಸ ಹೋದರೆ ಏನು ಮಾಡಬೇಕು?: ಸಾಮಾನ್ಯವಾಗಿ ವಿಮೆ ಖರೀದಿಸಿದಾಗ 15 ರಿಂದ 30 ದಿನಗಳ ಫ್ರೀ ಲುಕ್ ಪೀರಿಯಡ್ ನೀಡಲಾಗುತ್ತದೆ. ಒಂದೊಮ್ಮೆ ನೀವು ಪಡೆದಿರುವ ಪಾಲಿಸಿ ಸರಿಯಿಲ್ಲ ಎಂದು ನಿಮಗೆ ಅನಿಸಿದರೆ ನಿಗದಿತ ಸಮಯದೊಳಗೆ ಪಾಲಿಸಿ ಹಿಂದಿರುಗಿಸಿ ಹಣ ಹಿಂಪಡೆಯಬಹುದು. ಈ ಅವಧಿ ಮುಗಿದಿದ್ದರೆ ನೇರವಾಗಿ ವಿಮಾ ಕಂಪನಿಗೆ ದೂರು ಸಲ್ಲಿಸಿ ಸಮಸ್ಯೆಗೆ ಪರಿಹಾರ ಕೇಳಿ. ಆಗಲೂ ಸಮಸ್ಯೆಗೆ ಸ್ಪಂದನೆ ಸಿಗದಿದ್ದರೆ ವಿಮಾ ಒಂಬುಡ್ಸ್‌ಮನ್‌ಗೆ ದೂರು ನೀಡಿ. ಎಲ್ಲ ಪ್ರಯತ್ನಗಳ ಬಳಿಕವೂ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಐಆರ್‌ಡಿಎಐಗೆ ದೂರು ಸಲ್ಲಿಸಬಹುದು.

ಎರಡು ವಾರದ ಬಳಿಕ ಷೇರುಪೇಟೆ ಗಳಿಕೆ ಸತತ ಎರಡು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಉತ್ತಮ ಗಳಿಕೆಯ ಲಯಕ್ಕೆ ಮರಳಿವೆ. ನವೆಂಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ದಾಖಲಿಸಿವೆ. 79117 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.98ರಷ್ಟು ಜಿಗಿದಿದೆ. 23907 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.59ರಷ್ಟು ಗಳಿಸಿಕೊಂಡಿದೆ. ಏಷ್ಯಾ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ದೀರ್ಘಾವಧಿಯಲ್ಲಿ ಭಾರತದ ಮಾರುಕಟ್ಟೆ ಬೆಳವಣಿಗೆ ಸಾಧಿಸಲಿದೆ ಎಂಬ ಆಶಾಭಾವ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಶೇ 1.65 ಎನರ್ಜಿ ಶೇ 1.41 ಮತ್ತು ಅನಿಲ ಮತ್ತು ತೈಲ ಸೂಚ್ಯಂಕಗಳು ಶೇ 1.23ರಷ್ಟು ಕುಸಿದಿವೆ. ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 6.26 ಆಟೊ ಶೇ 2.79 ಮಾಹಿತಿ ತಂತ್ರಜ್ಞಾನ ಶೇ 2.22 ಎಫ್‌ಎಂಸಿಜಿ ಶೇ 2.1 ಬ್ಯಾಂಕ್ ಶೇ 1.9 ಫೈನಾನ್ಸ್ ಶೇ 1.83 ಫಾರ್ಮಾ ಶೇ 0.97 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.24 ಮತ್ತು ಲೋಹ ವಲಯ ಶೇ 0.2ರಷ್ಟು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ವಾರದ ಲೆಕ್ಕಾಚಾರದಲ್ಲಿ ನೋಡಿದಾಗ ನಿಫ್ಟಿಯಲ್ಲಿ ಅದಾನಿ ಎಂಟರ್ ಪ್ರೈಸಸ್ ಶೇ 20.92 ಅದಾನಿ ಪೋರ್ಟ್ಸ್ ಶೇ 10.01 ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 5.16 ಬಿಪಿಸಿಎಲ್ ಶೇ 4.26 ಬಜಾಜ್ ಫಿನ್‌ಸರ್ವ್ ಶೇ 2.37 ಒಎನ್‌ಜಿಸಿ ಶೇ 2.27 ಎನ್‌ಟಿಪಿಸಿ ಶೇ 2.09 ಇಂಡಸ್‌ಇಂಡ್ ಬ್ಯಾಂಕ್ ಶೇ 1.82 ಸಿಪ್ಲಾ ಶೇ 1.57 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 1.33 ಬ್ರಿಟಾನಿಯಾ ಇಂಡಸ್ಟ್ರಿಸ್ ಶೇ 1.28 ಮತ್ತು ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 1.14ರಷ್ಟು ಕುಸಿದಿವೆ. ಪವರ್ ಗ್ರಿಡ್ ಕಾರ್ಪೊರೇಷನ್ ಶೇ 7.34 ಮಹೀಂದ್ರ ಆ್ಯಂಡ್‌ ಮಹೀಂದ್ರ ‌ಶೇ 6.79 ಅಲ್ಟ್ರಾಟೆಕ್ ಸಿಮೆಂಟ್ ಶೇ 5.29 ಹೀರೊ ಮೋಟೊಕಾರ್ಪ್‌ ಶೇ 4 ಹಿಂಡಾಲ್ಕೋ ಇಂಡಸ್ಟ್ರಿಸ್ ಶೇ 3.91 ಜೆಎಸ್‌ಡಬ್ಲ್ಯು ಸ್ಟೀಲ್ ಶೇ 3.8 ಟೈಟನ್ ಕಂಪನಿ ಶೇ 3.53 ಟಾಟಾ ಸ್ಟೀಲ್ ಶೇ 3.26 ಟೆಕ್ ಮಹೀಂದ್ರ ಶೇ 3.19 ಟ್ರೆಂಟ್ ಶೇ 3.11 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 3.01 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.85ರಷ್ಟು ಗಳಿಸಿ ಕೊಂಡಿವೆ. ಮುನ್ನೋಟ: ಈ ವಾರ ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಆಮ್ಕೋಲ್ ಟೂಲ್ಸ್ ಅನ್ಸಾಲ್ ಪ್ರಾಪರ್ಟೀಸ್ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್ ಹರೀಶ್ ಟೆಕ್ಸ್ ಟೈಲ್ ಎಂಜಿನಿಯರಿಂಗ್ ಮಿನಾಲ್ ಇಂಡಸ್ಟ್ರೀಸ್ ಸೇರಿ ಕೆಲ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಡಿಸೆಂಬರ್‌ನಲ್ಲಿ ನಡೆಯುವ ಆರ್‌ಬಿಐ ಹಣಕಾಸು ಸಮಿತಿ ಸಭೆಯ ಮೇಲೆ ಹೂಡಿಕೆದಾರರ ದೃಷ್ಟಿ ನೆಟ್ಟಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೇಂದ್ರದ ಕೆಲವು ಸಚಿವರು ರೆಪೊ ದರ ಇಳಿಕೆಗೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಆರ್‌ಬಿಐ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವ ಕುತೂಹಲವಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.