ADVERTISEMENT

ಯಾವಾಗ ಬಂದೀತು ಬಡ್ಡಿ ಇಳಿಕೆಯ ಕಾಲ?

ರಾಜೇಶ್ ಕುಮಾರ್ ಟಿ. ಆರ್.
Published 11 ಜೂನ್ 2023, 21:15 IST
Last Updated 11 ಜೂನ್ 2023, 21:15 IST
   

ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳದಿಂದ ತೊಂದರೆಗೆ ಒಳಗಾಗಿರುವವರಿಗೆ 2023ರ ವರ್ಷಾಂತ್ಯದಲ್ಲಿ ಬಡ್ಡಿ ದರ ಕಡಿತದ ಸಿಹಿ ಸುದ್ದಿ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಕಳೆದ ಎರಡು ಸಭೆಗಳಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿರುವುದು ಇಂಥದ್ದೊಂದು ಆಶಾಭಾವನೆ ಹುಟ್ಟುಹಾಕಿದೆ. ಸಾಲದ ಮೇಲಿನ ಬಡ್ಡಿ ಕಡಿತದ ಮುನ್ಸೂಚನೆ ಸಿಕ್ಕಿರುವ ಈ ಸಂದರ್ಭದಲ್ಲಿ ಈಗಾಗಲೇ ಸಾಲ ಪಡೆದಿರುವವರು ಏನು ಮಾಡಬೇಕು, ಹೊಸದಾಗಿ ಸಾಲದ ಮೊರೆ ಹೋಗುವವರು ಯಾವ ಮಾರ್ಗ ಅನುಸರಿಸಬೇಕು, ಸಾಲವನ್ನು ಅವಧಿಗೆ ಮುನ್ನ ಮರುಪಾವತಿ ಮಾಡಬೇಕೇ ಎಂಬ ಪ್ರಶ್ನೆಗಳು ಮೂಡಬಹುದು. ಆ ಬಗ್ಗೆ ಒಂದು ನೋಟ ಹರಿಸೋಣ.

ಹೆಚ್ಚಾಗಿದೆ ಸಾಲದ ಇಎಂಐ: 2022ರ ಮೇ ತಿಂಗಳಿನಿಂದ ಈಚೆಗೆ ಆರ್‌ಬಿಐ, ರೆಪೊ ದರವನ್ನು (ಅಂದರೆ, ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ಒಟ್ಟಾರೆ ಶೇಕಡ 2.5ರಷ್ಟು ಹೆಚ್ಚಳ ಮಾಡಿದೆ. ಬೆಲೆ ಏರಿಕೆ (ಹಣದುಬ್ಬರ) ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರೆಪೊ ದರ ಹೆಚ್ಚಳದ ಪರಿಣಾಮವಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ತುಟ್ಟಿಯಾಗಿದೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಬಡ್ಡಿ ದರ ಹೆಚ್ಚಳದಿಂದಾಗಿ, ಸಾಲ ಪಡೆದಿರುವವರ ಮಾಸಿಕ ಕಂತುಗಳ ಮೊತ್ತದಲ್ಲಿ ಹೆಚ್ಚಳವಾಗಿದೆ.

ಉದಾಹರಣೆಗೆ, ಬಡ್ಡಿ ಹೆಚ್ಚಳದ ಪರಿಣಾಮ ಹೇಗಿದೆ ಎಂದರೆ, 15 ವರ್ಷಗಳ ಅವಧಿಗೆ ಸಾಲ ಪಡೆದಿರುವವರ ಮಾಸಿಕ ಕಂತಿನ ಮೊತ್ತದಲ್ಲಿ (ಇಎಂಐ) ಶೇಕಡ 16ರಷ್ಟು ಹೆಚ್ಚಳವಾಗಿದೆ. 20 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ದರೆ, ಮಾಸಿಕ ಕಂತಿನ ಮೊತ್ತವು ಶೇ 20ರಷ್ಟು ಮತ್ತು 30 ವರ್ಷಕ್ಕೆ ಸಾಲ ಪಡೆದಿದ್ದರೆ ಇಎಂಐ ಶೇ 26.5ರಷ್ಟು ಏರಿಕೆಯಾಗಿದೆ. ಸರಳವಾಗಿ ಹೇಳುವುದಾದರೆ 2022ರ ಏಪ್ರಿಲ್‌ನಲ್ಲಿ ನಿಮ್ಮ ಸಾಲದ ಮೇಲಿನ ಬಡ್ಡಿ ದರ ಶೇ 6.75ರಷ್ಟಿದ್ದರೆ ಈಗ ಬಡ್ಡಿ ದರ ಶೇ 9.25ಕ್ಕೆ ತಲುಪಿದೆ. ಆದರೆ, ಇನ್ನು ಎರಡು ತ್ರೈಮಾಸಿಕ ಅವಧಿಗಳ ಬಳಿಕ ಬಡ್ಡಿ ದರದ ಇಳಿಕೆ ಕಾಲ ಶುರುವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ADVERTISEMENT

ಫ್ಲೋಟಿಂಗ್ ದರ ಸೂಕ್ತ: ಹೊಸದಾಗಿ ಗೃಹ ಸಾಲ ಪಡೆಯುವವರು ಫ್ಲೋಟಿಂಗ್ ರೇಟ್ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಸೂಕ್ತ. ಮುಂದಿನ ಕೆಲವು ತಿಂಗಳ ಬಳಿಕ ಬಡ್ಡಿ ದರದಲ್ಲಿ ಇಳಿಕೆ ಆಗಬಹುದು ಎಂದು ಹಣಕಾಸು ತಜ್ಞರು ನಿರೀಕ್ಷೆ ಮಾಡಿರುವ ಕಾರಣ, ನಿಶ್ಚಿತ ಬಡ್ಡಿ ದರಕ್ಕೆ ಸಾಲ ಪಡೆಯುವುದು ಅಷ್ಟು ಸೂಕ್ತ ನಿರ್ಧಾರವಾಗುವುದಿಲ್ಲ. ಸದ್ಯದ ಬಡ್ಡಿ ದರದ ಸ್ಥಿತಿಯಲ್ಲಿ ಗೃಹ ಸಾಲ ಪಡೆಯುವಾಗ ನಿಶ್ಚಿತ ಬಡ್ಡಿ ದರ ಆಯ್ಕೆ ಮಾಡಿಕೊಂಡರೆ ಹೆಚ್ಚೆಂದರೆ ಶೇ 9.5ರ ನಿಗದಿತ ದರದಲ್ಲಿ ಸಾಲ ಲಭಿಸಬಹುದು. ಆದರೆ ಈಗ ನೀವು ಫ್ಲೋಟಿಂಗ್ ರೇಟ್ ಆಯ್ಕೆ ಮಾಡಿಕೊಂಡರೆ, ಮುಂದೆ ಆರ್‌ಬಿಐ ರೆಪೊ ದರವನ್ನು ಶೇ 1ರಷ್ಟು ಇಳಿಕೆ ಮಾಡಿದರೂ ನಿಮ್ಮ ಸಾಲದ ಬಡ್ಡಿ ದರ ಶೇ 8.5ಕ್ಕೆ ಇಳಿಕೆಯಾಗಬಹುದು. ಹಾಗಾಗಿ ನಿಶ್ಚಿತ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಸದ್ಯಕ್ಕೆ ಸೂಕ್ತವಲ್ಲ.

ಗೃಹ ಸಾಲ ಸ್ವಿಚ್ ಮಾಡಿ: ಹಾಲಿ ಸಾಲ ಪಡೆದಿರುವ ಬ್ಯಾಂಕಿನಲ್ಲಿ ಬಡ್ಡಿ ದರ ವಿಪರೀತವಾಗಿದ್ದರೆ ಗೃಹ ಸಾಲ ಸ್ವಿಚ್ ಮಾಡುವ ಬಗ್ಗೆ ಚಿಂತನೆ ಮಾಡಬಹುದು. ಬಡ್ಡಿ ದರದಲ್ಲಿ ಶೇ 0.5ಕ್ಕಿಂತ ಹೆಚ್ಚು ವ್ಯತ್ಯಾಸವಿದ್ದರೆ ಗೃಹ ಸಾಲವನ್ನು ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಮತ್ತೊಂದು ಬ್ಯಾಂಕಿಗೆ ವರ್ಗಾಯಿಸಿಕೊಳ್ಳುವ ಆಲೋಚನೆ ಮಾಡಬಹುದು. ಗೃಹ ಸಾಲ ವರ್ಗಾವಣೆಗೆ ಮುಂದಾಗುವಾಗ ಸಾಧಕ ಬಾಧಕಗಳನ್ನು ಅಳೆದು ತೂಗಿ ಮುಂದುವರಿಯಬೇಕು.

ಬೇಗ ಸಾಲ ಮರುಪಾವತಿ ಮಾಡಬೇಕಾ?: ಆರ್‌ಬಿಐ ಮೇಲಿಂದ ಮೇಲೆ ರೆಪೊ ದರ ಹೆಚ್ಚಳ ಮಾಡಿದ ಪರಿಣಾಮವಾಗಿ ಸಾಲ ಪಡೆದವರಿಗೆ ಇಎಂಐ ಹೊರೆ ಜಾಸ್ತಿಯಾಗುತ್ತಿತ್ತು. ಸದ್ಯ ಆರ್‌ಬಿಐ ರೆಪೊ ದರವನ್ನು ಶೇ 6.5ರಲ್ಲಿ ಇರಿಸಿದೆ. ಇಂತಹ ಹೊತ್ತಿನಲ್ಲಿ, ಗೃಹಸಾಲದ ಭಾಗಶಃ ಪಾವತಿ ಅಥವಾ ಪೂರ್ಣ ಮರುಪಾವತಿ ಪರಿಗಣಿಸಬಹುದು. ಬೇಗ ಸಾಲ ಮರುಪಾವತಿ ಮಾಡಿದಾಗ ಸಾಲಕ್ಕೆ ಕಟ್ಟುವ ದೊಡ್ಡ ಮೊತ್ತದ ಬಡ್ಡಿ ಉಳಿತಾಯವಾಗುತ್ತದೆ.

ಎಫ್.ಡಿ.ಗಳಿಗಿಂತ ಉತ್ತಮ: ಸದ್ಯ ಬಡ್ಡಿ ದರ ಹೆಚ್ಚಿದೆ ಎನ್ನುವ ಕಾರಣಕ್ಕೆ ಅನೇಕರು ನಿಶ್ಚಿತ ಠೇವಣಿ (ಎಫ್.ಡಿ) ಹೂಡಿಕೆ ಮಾಡಿದ್ದಾರೆ. ಆದರೆ ಬಡ್ಡಿ ದರ ಇಳಿಕೆಯ ಸಮಯ ಬಂದಾಗ ಎಫ್.ಡಿ. ಹೂಡಿಕೆಗಳಿಂದ ಪ್ರಯೋಜನವಾಗುವುದಿಲ್ಲ. ರೆಪೊ ದರ ಇಳಿಕೆಯಾದಂತೆ ಎಫ್.ಡಿ ಬಡ್ಡಿ ದರಗಳೂ ತಗ್ಗುತ್ತವೆ. ಹಾಗಾಗಿ ಹಣದುಬ್ಬರ ಪ್ರಮಾಣ ಮೀರಿದ ಲಾಭಾಂಶ ಕೊಡುವ ಮ್ಯೂಚುವಲ್ ಫಂಡ್‌ನಂತಹ ಹೂಡಿಕೆಗಳತ್ತ ಚಿತ್ತ ಹರಿಸುವುದು ಒಳಿತು.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.