ADVERTISEMENT

ಹಣಕಾಸು ಸಾಕ್ಷರತೆ: ಇಪಿಎಫ್‌ ಜತೆ ವಿಪಿಎಫ್‌ ಹೂಡಿಕೆ ಮಾಡಿ

ರಾಜೇಶ್‌ ಕುಮಾರ್‌ ಟಿ.ಆರ್‌
Published 24 ಡಿಸೆಂಬರ್ 2023, 22:46 IST
Last Updated 24 ಡಿಸೆಂಬರ್ 2023, 22:46 IST
<div class="paragraphs"><p> ಹೂಡಿಕೆ </p></div>

ಹೂಡಿಕೆ

   

ಭಾರತದಲ್ಲಿ ಇರುವ ಶೇ 90ರಷ್ಟು ಮಂದಿಯ ವಾರ್ಷಿಕ ಆದಾಯ ₹4 ಲಕ್ಷಕ್ಕಿಂತ ಕಡಿಮೆ. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ದಿನಸಿ ವೆಚ್ಚ ಹೀಗೆ ಎಷ್ಟೊಂದು ಖರ್ಚುಗಳಿರುವ ಕಾರಣ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ ಹೂಡಿಕೆ ಮಾಡೋದು ಕಷ್ಟಸಾಧ್ಯ. ಇದೆಲ್ಲದರ ನಡುವೆ ಅಷ್ಟೋ ಇಷ್ಟೋ ಕಷ್ಟಪಟ್ಟು ಉಳಿಸಿದರೂ ಹೆಚ್ಚು ಲಾಭ ಕೊಡುವ, ಕಡಿಮೆ ರಿಸ್ಕ್ ಇರುವ ಹೂಡಿಕೆಗಳನ್ನು ಹುಡುಕಿ ತೊಡಗಿಸೋದು ಮತ್ತೊಂದು ಸವಾಲು.

ನಿಮಗೆ ಗೊತ್ತಾ, ನಿಶ್ಚಿತ ಠೇವಣಿ (ಎಫ್.ಡಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿಗಿಂತ (ಪಿಪಿಎಫ್) ಹೆಚ್ಚಿನ ಬಡ್ಡಿ ಲಾಭ ಕೊಡುವ ಹೂಡಿಕೆಯೊಂದಿದೆ. ಅದೇ ವಿಪಿಎಫ್ ಅಥವಾ ವಾಲೆಂಟರಿ ಪ್ರಾವಿಡೆಂಟ್ ಫಂಡ್. ಏನೀ ವಾಲೆಂಟರಿ ಪ್ರಾವಿಡೆಂಟ್ ಫಂಡ್? ಅದರಲ್ಲಿ ಹೂಡಿಕೆ ಹೇಗೆ? ಬನ್ನಿ ವಿವರವಾಗಿ ತಿಳಿಯೋಣ.

ADVERTISEMENT

ಏನಿದು ವಿಪಿಎಫ್ ಹೂಡಿಕೆ?

ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಇಪಿಎಫ್‌ನ ಭಾಗವೇ ಆಗಿರುವ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಾಲೆಂಟರಿ ಪ್ರಾವಿಡೆಂಟ್ ಫಂಡ್) ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಕಾರ್ಮಿಕರ ಭವಿಷ್ಯ ನಿಧಿ ಖಾತೆಗೆ ಸ್ವಯಂಪ್ರೇರಿತವಾಗಿ ಹೆಚ್ಚುವರಿ ಕೊಡುಗೆ ನೀಡುವುದನ್ನು ವಿಪಿಎಫ್ ಎನ್ನಲಾಗುತ್ತದೆ.

ನಿಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ 100ರಷ್ಟು ಪಾಲನ್ನು ಮಾಸಿಕವಾಗಿ ವಿಪಿಎಫ್‌ಗೆ ಕೊಡುಗೆಯಾಗಿ ನೀಡಬಹುದು. ವಿಪಿಎಫ್ ಅನ್ನು ವಾಲೆಂಟರಿ ರಿಟೈರ್‌ ಫಂಡ್ ಸ್ಕೀಂ ಅಂತಲೂ ಕರೆಯುತ್ತಾರೆ. ಇಪಿಎಫ್ ಉಳಿತಾಯಕ್ಕೆ ನೀಡುವ ಬಡ್ಡಿಯನ್ನೇ ವಿಪಿಎಫ್‌ಗೂ ನೀಡಲಾಗುತ್ತದೆ. ಮಾಸಿಕ ವೇತನ ಪಡೆಯುತ್ತಿದ್ದು, ಇಪಿಎಫ್ ಅಕೌಂಟ್ ಇರುವ ಎಲ್ಲ ನೌಕರರು ವಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು.

ವಿಪಿಎಫ್ ಅನುಕೂಲಗಳು:

ವಿಪಿಎಫ್ ಯೋಜನೆಯ ಪ್ರಮುಖ ಅನುಕೂಲ ಅಂದರೆ ಬಡ್ಡಿದರ. ವಿಪಿಎಫ್‌ನಲ್ಲಿ ಹೂಡಿಕೆ ಮಾಡಿದಾಗ ಇಪಿಎಫ್‌ಗೆ ಸಿಗುವ ಬಡ್ಡಿದರವೇ ವಿಪಿಎಫ್‌ಗೂ ಸಿಗುತ್ತದೆ. ಪ್ರಸ್ತುತ ಇಪಿಎಫ್‌ನ ಬಡ್ಡಿದರ ಶೇ 8.15ರಷ್ಟಿದೆ. ಅದೇ ಬಡ್ಡಿದರ ವಿಪಿಎಫ್‌ಗೂ ಸಿಗುತ್ತದೆ.

ವಿಪಿಎಫ್ ಹೂಡಿಕೆ ವೇಳೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಹೂಡಿಕೆ ಮೇಲಿನ ಬಡ್ಡಿ ಗಳಿಕೆಗೂ ತೆರಿಗೆ ವಿನಾಯಿತಿ ಲಭಿಸುತ್ತದೆ. ಅಷ್ಟೇ ಅಲ್ಲ 5 ವರ್ಷಗಳ ಬಳಿಕ ನಗದೀಕರಣ (ವಿತ್ ಡ್ರಾ) ಮಾಡಿದಾಗ ಅದಕ್ಕೂ ತೆರಿಗೆ ಇರುವುದಿಲ್ಲ. ಇದೊಂದು ಸುರಕ್ಷಿತ ಹೂಡಿಕೆಯಾಗಿದ್ದು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಕೆಲಸ ಬದಲಾವಣೆ ಮಾಡಿದಾಗಲೂ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.

ವರ್ಷದ ಯಾವುದೇ ತಿಂಗಳಲ್ಲಿ ವಿಪಿಎಫ್ ಖಾತೆ ಆರಂಭಿಸಬಹುದು. ಆದರೆ, ಹೂಡಿಕೆಯನ್ನು 5 ವರ್ಷಗಳವರೆಗೆ ನಿಲ್ಲಿಸುವಂತಿಲ್ಲ. ಸಾಲದ ರೂಪದಲ್ಲಿ ವಿಪಿಎಫ್‌ನಲ್ಲಿ ಭಾಗಶಃ ಹಣ ಪಡೆಯಬಹುದು. ಆದರೆ, ಮೆಚ್ಯೂರಿಟಿ ಅವಧಿಗಿಂತ ಮೊದಲೇ ಹಣ ಹಿಂಪಡೆದರೆ ತೆರಿಗೆ ಅನ್ವಯಿಸುತ್ತದೆ. ವೈದ್ಯಕೀಯ ತುರ್ತು, ಉನ್ನತ ಶಿಕ್ಷಣದ ಉದ್ದೇಶ, ಮದುವೆ, ಮನೆ ನಿರ್ಮಾಣ, ಖರೀದಿಯಂತಹ ಸಂದರ್ಭದಲ್ಲಿ ಅವಧಿಪೂರ್ವ ವಿಪಿಎಫ್ ಹಿಂಪಡೆತಕ್ಕೆ ವಿನಾಯಿತಿ ಇದೆ.

ಯಾವಾಗ ವಿಪಿಎಫ್ ಹೂಡಿಕೆ ಮಾಡಬೇಕು?

ನಿಮ್ಮ ವಾರ್ಷಿಕ ಇಪಿಎಫ್ ಹೂಡಿಕೆಯ ಮೊತ್ತ ₹2.5 ಲಕ್ಷದ ಒಳಗಿದೆ ಅಂತಾದರೆ ಆಗ ವಿಪಿಎಫ್ ಹೂಡಿಕೆಯನ್ನು ಪರಿಗಣಿಸುವುದು ಸೂಕ್ತ. ಯಾಕಂದ್ರೆ ₹2.5 ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆಯನ್ನು ಇಪಿಎಫ್ ಅಥವಾ ವಿಪಿಎಫ್‌ನಲ್ಲಿ ಮಾಡಿದರೆ ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ಉದಾಹರಣೆಗೆ ತಿಂಗಳಿಗೆ ₹12,500ರಂತೆ ವಾರ್ಷಿಕವಾಗಿ ₹1.5 ಲಕ್ಷವನ್ನು ಇಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದುಕೊಳ್ಳಿ. ಆಗ ವಿಪಿಎಫ್‌ನಲ್ಲಿ ತಿಂಗಳಿಗೆ ₹8,333 ಹೂಡಿಕೆ ಮಾಡಿದರೆ ವಾರ್ಷಿಕವಾಗಿ ವಿಪಿಎಫ್ ಹೂಡಿಕೆ ಮೊತ್ತ ₹1 ಲಕ್ಷ ಆಗುತ್ತದೆ. ವಿಪಿಎಫ್ ಮತ್ತು ಇಪಿಎಫ್ ಮೊತ್ತ ಸೇರಿ ಒಟ್ಟು ಹೂಡಿಕೆ ಮೊತ್ತ ₹2.5 ಲಕ್ಷ ಆಗುತ್ತದೆ. ಈ ರೀತಿ ಇಪಿಎಫ್ ಮತ್ತು ವಿಪಿಎಫ್ ಹೂಡಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ.

ಯಾವ ದಾಖಲೆಗಳು ಬೇಕು? 

ವಿಪಿಎಫ್ ಖಾತೆ ಆರಂಭಿಸಲು ನೀವು ಕೆಲಸ ಮಾಡುತ್ತಿರುವ ಕಂಪನಿಯ ನೋಂದಣಿ ಪ್ರಮಾಣ ಪತ್ರ, ಫಾರಂ 24, ಫಾರಂ 49, ಕಂಪನಿ ಬಗ್ಗೆ ಮಾಹಿತಿ ಪತ್ರ, ಉದ್ದಿಮೆ ಪ್ರಮಾಣ ಪತ್ರ  ಹಾಗೂ ಇನ್ನು ಕೆಲವು ದಾಖಲೆಗಳು ಅಗತ್ಯ. ಈ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ ನಿಮ್ಮ ಕಂಪನಿಯ ಮಾನವ ಸಂಪನ್ಮೂಲ ಮತ್ತು ಹಣಕಾಸು ವಿಭಾಗವನ್ನು ಸಂಪರ್ಕಿಸಬಹುದು. ವಿಪಿಎಫ್ ಖಾತೆ ನೋಂದಣಿ ಫಾರಂ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿದ ಬಳಿಕ ನಿಮ್ಮ ಇಪಿಎಫ್ ಖಾತೆಯಲ್ಲೇ ಪ್ರತ್ಯೇಕವಾಗಿ ಒಂದು ವಿಪಿಎಫ್ ಖಾತೆಯೂ ಚಾಲ್ತಿಗೆ ಬರಲಿದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಸೆನ್ಸೆಕ್ಸ್ , ನಿಫ್ಟಿ ಸೂಚ್ಯಂಕಗಳ ಗೂಳಿ ಓಟಕ್ಕೆ ಬ್ರೇಕ್

ಸತತ ಏಳು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಡಿಸೆಂಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. 71,106ರಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.52ರಷ್ಟು ಕುಸಿತ ಕಂಡಿದೆ.

21,349ರಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 0.49ರಷ್ಟು ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ, ಕೋವಿಡ್ ಪ್ರಕರಣಗಳ ಹೆಚ್ಚಳ ಸೇರಿ ಹಲವು ಅಂಶಗಳು ಷೇರುಪೇಟೆ ಓಟಕ್ಕೆ ತಡೆ ಒಡ್ಡಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3, ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 2, ನಿಫ್ಟಿ ಆಟೊ ಸೂಚ್ಯಂಕ ಶೇ 1.4 ಮತ್ತು ನಿಫ್ಟಿ ಮೆಟಲ್ ಸೂಚ್ಯಂಕ ಶೇ 1ರಷ್ಟು ಕುಸಿದಿವೆ. ಮತ್ತೊಂದೆಡೆ ನಿಫ್ಟಿ ಎಫ್‌ಎಂಸಿಜಿ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇ 1ರಷ್ಟು ಗಳಿಸಿಕೊಂಡಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹6,422.24 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹9,093.99 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ –ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ವರುಣ್ ಬಿವರೇಜಸ್, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ, ಪೇಟಿಎಂ, ಜೈಡಸ್ ಲೈಫ್ ಸೈನ್ಸಸ್ ಗಳಿಸಿಕೊಂಡಿವೆ. ಬಂಧನ್ ಬ್ಯಾಂಕ್, ಅದಾನಿ ಎಂಟರ್ ಪ್ರೈಸಸ್, ಇಂಡಸ್ ಟವರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಇಳಿಕೆ ಕಂಡಿವೆ.

ಮುನ್ನೋಟ: ಕ್ರಿಸ್‌ಮಸ್ ಪ್ರಯುಕ್ತ ಇಂದು ಷೇರು ಮಾರುಕಟ್ಟೆಗೆ ರಜೆ. ಇನ್ನು ಸದ್ಯದಲ್ಲೇ ಕಂಪನಿಗಳ ಮೂರನೇ ತ್ರೈಮಾಸಿಕ ಅವಧಿ ಶುರುವಾಗಲಿದ್ದು, ಅದರ ಮೇಲೆ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.