ಹೆಚ್ಚು ಗಳಿಕೆ ಬರದಿದ್ದರೂ ಪರವಾಗಿಲ್ಲ, ಆದರೆ ಹೂಡಿಕೆ ಮೊತ್ತಕ್ಕೆ ಸುರಕ್ಷತೆ ಮುಖ್ಯ ಎನ್ನುವ ಅನೇಕರಿದ್ದಾರೆ. ಅಂತಹ ಹೂಡಿಕೆದಾರರಿಗೆ ಒಪ್ಪುವಂತಹ, ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಅನೇಕ ಹೂಡಿಕೆ ಆಯ್ಕೆಗಳಿವೆ. ಅವುಗಳ ಪೈಕಿ ಸಾರ್ವಜನಿಕ ಭವಿಷ್ಯ ನಿಧಿ, ಎನ್‌ಪಿಎಸ್, ಆರ್‌ಬಿಐ ಬಾಂಡ್ಸ್, ಸಾಲ ಪತ್ರಗಳು, ಸಾವರಿನ್ ಗೋಲ್ಡ್ ಬಾಂಡ್, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪತ್ರದ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಸಾರ್ವಜನಿಕ ಭವಿಷ್ಯ ನಿಧಿಯ (ಪಿಪಿಎಫ್) ಸದ್ಯದ ಬಡ್ಡಿ ದರ ಶೇ 7.1 ರಷ್ಟಿದೆ. 15 ವರ್ಷಗಳ ಲಾಕಿನ್ ಅವಧಿ ಹೊಂದಿರುವ ಈ ಯೋಜನೆ ತೆರಿಗೆ ಉಳಿತಾಯಕ್ಕೆ ಒಳ್ಳೆಯ ಸಾಧನ. ಹೂಡಿಕೆ ಹಂತದಲ್ಲಿ, ಹೂಡಿಕೆ ಮೇಲೆ ಗಳಿಸುವ ಬಡ್ಡಿಗೆ ಮತ್ತು ಮೆಚ್ಯೂರಿಟಿ ಬಳಿಕ ತೆಗೆದುಕೊಳ್ಳುವ ಹಣಕ್ಕೆ ಈ ಯೋಜನೆಯಲ್ಲಿ ತೆರಿಗೆ ಇಲ್ಲ. ಪಿಪಿಎಫ್ ಖಾತೆ ಆರಂಭಿಸಿ 6 ವರ್ಷಗಳ ಬಳಿಕ ಶೇ 50 ರಷ್ಟು ಮೊತ್ತವನ್ನು ಹಿಂಪಡೆಯುವ ಅವಕಾಶವೂ ಇದೆ. ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಹೂಡಿಕೆಗೆ ತೆರಿಗೆ ವಿನಾಯಿತಿಯೂ ಸಿಗುತ್ತದೆ. ಭಾರತದ ಪ್ರಜೆಗಳು ಪಿಪಿಎಪ್‌ನಲ್ಲಿ ಹೂಡಿಕೆ ಮಾಡಬಹುದು.
ರಾಷ್ಟ್ರೀಯ ಪಿಂಚಣೆ ಯೋಜನೆ (ಎನ್‌ಪಿಎಸ್): ನಿವತ್ತಿ ಜೀವನಕ್ಕಾಗಿ ಹೂಡಿಕೆ ಮಾಡುವವರಿಗೆ ಎನ್‌ಪಿಎಸ್ ಒಂದು ಅತ್ಯುತ್ತಮ ಆಯ್ಕೆ. ಎನ್‌ಪಿಎಸ್ ಹೂಡಿಕೆಯಲ್ಲಿ ಶೇ 9 ರಿಂದ ಶೇ 12 ರವರೆಗೂ ಲಾಭಾಂಶ ನಿರೀಕ್ಷೆ ಮಾಡಬಹುದು. ಎನ್‌ಪಿಎಸ್‌ನಲ್ಲಿ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆ ಬೇಕೋ ಅಥವಾ ಡೆಟ್ (ಸುರಕ್ಷಿತ) ಹೂಡಿಕೆಗಳು ಬೇಕೋ ಎನ್ನುವುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೂಡಿಕೆದಾರನಿಗಿದೆ. 60 ವರ್ಷಗಳ ಬಳಿಕ ಎನ್‌ಪಿಎಸ್ ಹೂಡಿಕೆ ನಗದೀಕರಣ ಸಾಧ್ಯವಾಗುತ್ತದೆ.
ಆರ್‌ಬಿಐ ಬಾಂಡ್ಸ್: ಆರ್‌ಬಿಐ ಬಾಂಡ್‌ಗಳು ನಿಶ್ಚಿತ ಆದಾಯ ಖಾತರಿಪಡಿಸುವ ಹೂಡಿಕೆಗಳಾಗಿವೆ. ನೀವು ಹೂಡಿಕೆ ಮಾಡುವ ಮೊತ್ತಕ್ಕೆ ಆರ್‌ಬಿಐ ಪ್ರತಿ ವರ್ಷ ಇಂತಿಷ್ಟು ಬಡ್ಡಿ ಎಂದು ನೀಡುತ್ತಾ ಹೋಗುತ್ತದೆ. ಆರ್‌ಬಿಐ ಬಾಂಡ್‌ನ ಸದ್ಯದ ಬಡ್ಡಿ ದರ ಶೇ 7.10 ರಷ್ಟಿದ್ದು 7 ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ. ಆರ್‌ಬಿಐ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಭಾರತದ ಪ್ರಜೆಯಾಗಿರಬೇಕು, ಅಪ್ರಾಪ್ತರ ಹೆಸರಿನಲ್ಲೂ ಹೂಡಿಕೆಗೆ ಅವಕಾಶವಿದೆ. ಕನಿಷ್ಠ ₹ 1 ಸಾವಿರ ಹೂಡಿಕೆಯನ್ನು ಆರ್‌ಬಿಐ ಬಾಂಡ್ ಗಳಲ್ಲಿ ಮಾಡಬಹುದಾಗಿದೆ.
ಸರ್ಕಾರಿ ಸಾಲಪತ್ರಗಳು (Government Securities): ಸರ್ಕಾರದ ವಿವಿಧ ಕೆಲಸಗಳಿಗೆ ಹಣಕಾಸಿನ ಅಗತ್ಯ ಬೀಳುತ್ತದೆ. ಹೀಗೆ ಬರುವ ಆರ್ಥಿಕ ಆಗತ್ಯವನ್ನು ಪೂರೈಸಿಕೊಳ್ಳಲು ಸರ್ಕಾರ ನೀಡುವ ಪತ್ರಗಳೇ ಸಾಲ ಪತ್ರಗಳು ಅಥವಾ ಗವರ್ನಮೆಂಟ್ ಸೆಕ್ಯೂರಿಟಿಸ್. ಸರ್ಕಾರದಿಂದ ಸಾಲ ಪತ್ರಗಳನ್ನು ಖರೀದಿಸಿದವರಿಗೆ ನಿಯಮಿತವಾಗಿ ಬಡ್ಡಿ ಸಿಗುತ್ತದೆ. ಮೆಚ್ಯೂರಿಟಿ ಅವಧಿ ಪೂರೈಸಿದ ಬಳಿಕ ಹೊಡಿಕೆ ಮೊತ್ತವೂ ವಾಪಸ್ ಆಗುತ್ತದೆ. ಸರಳವಾಗಿ ಹೇಳುವುದಾದರೆ ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುವ ಬಾಂಡ್‌ಗಳನ್ನು ಸಾಲ ಪತ್ರಗಳು ಎಂದು ಕರೆಯಬಹುದು. ಸದ್ಯ ಸರ್ಕಾರಿ ಸಾಲ ಪತ್ರಗಳ ಬಡ್ಡಿ ದರ ಶೇ 7.20 ರಷ್ಟಿದ್ದು ಹೂಡಿಕೆ ಅವಧಿ 10 ವರ್ಷಗಳಾಗಿವೆ.
ಸಾವರಿನ್ ಗೋಲ್ಡ್ ಬಾಂಡ್: ಚಿನ್ನದ ಮೌಲ್ಯಕ್ಕೆ ಪ್ರತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡುವ ಬಾಂಡ್ ಗಳನ್ನು ಸಾವರಿನ್ ಗೋಲ್ಡ್ ಬಾಂಡ್ ಎಂದು ಕರೆಯಬಹುದು. ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿತರಿಸುತ್ತದೆ. ಭೌತಿಕರೂಪದ ಚಿನ್ನಕ್ಕೆ ಪ್ರತಿಯಾಗಿ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರಮುಖ ಅಂಚೆ ಕಚೇರಿಗಳು, ಬ್ಯಾಂಕ್‌ಗಳಿಂದ ಇವನ್ನು ಖರೀದಿಸಬಹುದಾಗಿದೆ. ಭಾರತದ ಪ್ರಜೆಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ಚಾರಿಟೆಬಲ್ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ತೊಡಗಿಸಬಹುದು.
ವ್ಯಕ್ತಿಗಳು ಮತ್ತು ಅವಿಭಕ್ತ ಕುಟುಂಬಗಳು ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ 4 ಕೆ.ಜಿ. ವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟಿಗಳಿಗೆ 20 ಕೆ.ಜಿ. ವರೆಗೆ ಹೂಡಿಕೆಗೆ ಅವಕಾಶವಿದೆ. ಸಾವರಿನ್ ಗೋಲ್ಡ್ ಬಾಂಡ್ 8 ವರ್ಷಗಳ ನಂತರ ಮೆಚ್ಯೂರಿಟಿಗೆ ಒಳಪಡುತ್ತದೆ. ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಿದಾಗ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಅದರ ಲಾಭ ಸಿಗುವ ಜೊತೆಗೆ ವಾರ್ಷಿಕ ಶೇ 2.5 ರಷ್ಟು ಬಡ್ಡಿ ಲಾಭಾಂಶವೂ ಲಭಿಸುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಯಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್): ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್) ಸರ್ಕಾರಿ ಸಹಭಾಗಿತ್ವದ ಹೂಡಿಕೆ ಯೋಜನೆಯಾಗಿದ್ದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಎಸ್‌ಸಿಎಸ್ಎಸ್‌ನಲ್ಲಿ ಕನಿಷ್ಠ ₹ 1 ಸಾವಿರ, ಗರಿಷ್ಠ ₹ 30 ಲಕ್ಷ ಹೂಡಿಕೆಗೆ ಅವಕಾಶವಿದೆ. ಸದ್ಯ ಇದರ ಬಡ್ಡಿ ದರ ಶೇ 8.20 ರಷ್ಟಿದೆ. ಈ ಹೂಡಿಕೆಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದು ಸ್ಥಿರ ಆದಾಯ ನಿರೀಕ್ಷಿಸುವ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಆಯ್ಕೆ.
ರಾಷ್ಟ್ರೀಯ ಉಳಿತಾಯ ಪತ್ರ (ಎಸ್‌ಎಸ್‌ಸಿ): ತೆರಿಗೆ ಉಳಿಸುವ ಜೊತೆಗೆ ಸುರಕ್ಷತೆ ಮತ್ತು ನಿಶ್ಚಿತ ಆದಾಯವನ್ನು ಎಸ್‌ಎಸ್‌ಸಿ ಹೂಡಿಕೆ ಒದಗಿಸುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರದ ಸದ್ಯದ ಬಡ್ಡಿ ದರ ಶೇ 7.70 ರಷ್ಟಿದೆ. ಎನ್ಎಸ್‌ಸಿ ಹೂಡಿಕೆಯಲ್ಲಿ 5 ವರ್ಷಗಳ ಲಾಕಿನ್ ಅವಧಿಯಿದ್ದು ನಂತರ ಹೂಡಿಕೆ ನಗದೀಕರಣ ಮಾಡಬಹುದಾಗಿದೆ. ಅಂಚೆ ಕಚೇರಿಗಳಲ್ಲಿ ಎನ್ಎಸ್‌ಸಿ ಹೂಡಿಕೆ ಪತ್ರಗಳನ್ನು ಪಡೆಯಬಹುದು. ಎನ್ಎಸ್‌ಸಿ ಹೂಡಿಕೆಗೆ ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಭಾರಿ ಕುಸಿತ ಕಂಡ ಷೇರುಪೇಟೆಗಳು
ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. ಅಕ್ಟೋಬರ್ 27ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಇಳಿಕೆ ಕಂಡಿವೆ. 63,782 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.46 ರಷ್ಟು ಕುಸಿದಿದೆ. 19,047 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.53 ರಷ್ಟು ತಗ್ಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ, ಪ್ರಮುಖ ದೇಶಗಳ ಸೆಂಟ್ರಲ್ ಬ್ಯಾಂಕ್ ಗಳಿಂದ ಬಡ್ಡಿ ದರ ಹೆಚ್ಚಳ, ಇಸ್ರೇಲ್–ಹಮಾಸ್ ಯುದ್ಧ ಸೇರಿ ಹಲವು ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ.
ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 5.3, ಲೋಹ ಸೂಚ್ಯಂಕ ಶೇ 4 ರಷ್ಟು ಕುಸಿದಿವೆ. ಮಾಹಿತಿ ತಂತ್ರಜ್ಞಾನ ಸೂಚ್ಯಂಕ, ಅನಿಲ-ತೈಲ ಸೂಚ್ಯಂಕ, ರಿಯಲ್ ಎಸ್ಟೇಟ್ ಸೂಚ್ಯಂಕ ತಲಾ ಶೇ 3 ರಷ್ಟು ಕುಸಿದಿವೆ.
ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಪೇಟಿಎಂ, ಇಂಡಸ್ ಟವರ್ಸ್, ಬರ್ಜರ್ ಪೇಂಟ್ಸ್, ಯುಪಿಎಲ್, ಜೊಮಾಟೊ, ಅದಾನಿ ಎಂಟರ್ ಪ್ರೈಸಸ್, ಗೇಲ್ ಇಂಡಿಯಾ, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟೋಟಲ್ ಗ್ಯಾಸ್ ಕುಸಿತ ದಾಖಲಿಸಿವೆ.
***
ಷೇರುಪೇಟೆ ಮುನ್ನೋಟ: ಈ ವಾರ ಅದಾನಿ ಗ್ರೀನ್, ಮಾರಿಕೋ, ಪೆಟ್ರೋನೆಟ್, ಟಿವಿಎಸ್ ಮೋಟರ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಟಾಟಾ ಮೋಟರ್ಸ್, ಹೀರೊ ಮೋಟರ್ಸ್, ಟಾಟಾ ಸ್ಟೀಲ್ ಸೆರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ದೇಶಿಯ ಮತ್ತು ಜಾಗತಿಕ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
(ಲೇಖಕ ರಾಜೇಶ್ ಕುಮಾರ್ ಟಿ.ಆರ್ ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.