ADVERTISEMENT

ಸಾಲ ಮುಂದೂಡಿಕೆ ವಿಚಾರ: ಯಾರ ಹಿತ ಮುಖ್ಯ, ಸಾಲಗಾರ ಅಥವಾ ಠೇವಣಿದಾರ

ಪ್ರಮೋದ್
Published 14 ಸೆಪ್ಟೆಂಬರ್ 2020, 3:56 IST
Last Updated 14 ಸೆಪ್ಟೆಂಬರ್ 2020, 3:56 IST
   
""

ಸಾಲದ ಕಂತು ಪಾವತಿ ಮುಂದೂಡಿಕೆ (ಮೊರಟೋರಿಯಂ) ಅವಧಿಯಲ್ಲಿ ಬ್ಯಾಂಕ್‌ಗಳು ‘ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದು ಸರಿಯಲ್ಲ’ ಎಂಬ ಬಗ್ಗೆ ಪರ–ವಿರೋಧದ ಚರ್ಚೆ ನಡೆಯುತ್ತಿದೆ. ಸಾಲದ ಕಂತು ಮುಂದೂಡಿಕೆ ಅವಧಿಗೆ ಬಡ್ಡಿ ಮೇಲೆ ಬಡ್ಡಿ ವಿಧಿಸದಿದ್ದರೆ ಬ್ಯಾಂಕ್‌ಗಳು ₹ 2 ಲಕ್ಷ ಕೋಟಿ ಕಳೆದುಕೊಳ್ಳಲಿವೆ ಎಂದು ಆರ್‌ಬಿಐ ಜೂನ್ 4ರಂದು ಹೇಳಿದೆ. ಇದರ ನಡುವೆ, ಸೆಪ್ಟೆಂಬರ್ 28ರವರೆಗೆ ಸಾಲದ ಕಂತು ಪಾವತಿ ಮುಂದೂಡಿಕೆಗೆ ಅವಕಾಶ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ‘ಠೇವಣಿದಾರನ ಹಿತವೋ, ಇಲ್ಲ ಸಾಲಗಾರರ ಹಿತವೋ?’ ಎನ್ನುವ ಚರ್ಚೆ ಮತ್ತು ಚಿಂತನೆ ಬ್ಯಾಂಕಿಂಗ್ ತಜ್ಞರ ವಲಯದಲ್ಲಿ ನಡೆಯುತ್ತಿದೆ.

ಹಿನ್ನೆಲೆ: ಕೋವಿಡ್–19 ಸಂಕಷ್ಟದ ಕಾರಣದಿಂದಾಗಿ ಬ್ಯಾಂಕ್‌ಗಳು, ಸಾಲ ಪಡೆದಿರುವವರಿಗೆ ಒಟ್ಟು ಆರು ತಿಂಗಳ ಅವಧಿಗೆ ಸಾಲದ ಕಂತು ಪಾವತಿ ಮುಂದೂಡಿಕೆ ಮಾಡಿಕೊಳ್ಳಲು ಅವಕಾಶ ನೀಡಿದವು. ಆದರೆ ಈ ಅನುಕೂಲ ಪಡೆದವರು ಬಡ್ಡಿಯ ಮೇಲೆ ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಬ್ಯಾಂಕ್‌ಗಳು ಹೇಳಿದವು. ಉದಾಹರಣೆಗೆ, ನೀವು 20 ವರ್ಷಗಳ ಅವಧಿಗೆ ₹ 35 ಲಕ್ಷ ಸಾಲ ಪಡೆದಿದ್ದು, ಪ್ರತಿ ತಿಂಗಳು ಬಡ್ಡಿ ಸೇರಿಸಿ ₹ 32,384 ಕಂತು (ಇಎಂಐ) ಪಾವತಿ ಮಾಡಬೇಕು ಎಂದುಕೊಳ್ಳಿ. ಹೀಗಿದ್ದಾಗ, ನೀವು ಆರು ತಿಂಗಳ ಅವಧಿಯ ಮೊರಟೋರಿಯಂ ಸೌಲಭ್ಯ ಪಡೆದರೆ, ಈ ಆರು ತಿಂಗಳ ಇಎಂಐ ಮೊತ್ತವನ್ನು (32,384 X 6 = 1,94,304) ಅಸಲಿನ ಬಾಬ್ತಿಗೆ ಸೇರಿಸಲಾಗುತ್ತದೆ. ಅಂದರೆ ನಿಮ್ಮ ಸಾಲದ ಅಸಲಿನ ಮೊತ್ತಕ್ಕೆ ಹೆಚ್ಚುವರಿಯಾಗಿ ₹ 1,94,304 ಸೇರ್ಪಡೆಯಾಗುತ್ತದೆ. ಈ ಮೊತ್ತವನ್ನೂ ಒಳಗೊಂಡು ನೀವು ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಬ್ಯಾಂಕ್‌ಗಳು ತಿಳಿಸಿದವು. ಹೀಗೆ ಬ್ಯಾಂಕ್‌ಗಳು ಸಾಲಗಾರನಿಗೆ ಬಡ್ಡಿಯ ಮೇಲೆ ಬಡ್ಡಿಯ ಹೊರೆ ಹಾಕುವುದು ಸರಿಯಲ್ಲ ಎನ್ನುವ ಚರ್ಚೆ ಅಲ್ಲಿಂದ ಆರಂಭವಾಯಿತು.

ಬಡ್ಡಿಯ ಮೇಲೆ ಬಡ್ಡಿ ಸರಿಯೇ?

ADVERTISEMENT

1. ಬ್ಯಾಂಕ್‌ಗಳು ಸಾಲದ ಕಂತು ಪಾವತಿ ಮುಂದೂಡಿಕೆ ಅವಕಾಶ ನೀಡಿದಾಗ ‘ಬಡ್ಡಿ ಮೇಲೆ ಬಡ್ಡಿ ವಿಧಿಸುವುದಿಲ್ಲ’ ಎಂದಿದ್ದರೆ ಏನಾಗುತ್ತಿತ್ತು, ಒಮ್ಮೆ ಯೋಚಿಸಿ. ಸಾಲ ಕಟ್ಟಲು ಶಕ್ತರಿರುವವರೂ ಒಳಗೊಂಡಂತೆ ಎಲ್ಲರೂ ಮೊರಟೋರಿಯಂ ಪಡೆಯುತ್ತಿದ್ದರು. ‘ಹೇಗೂ ಬಡ್ಡಿ ಇಲ್ಲವಲ್ಲ’ ಎಂದುಕೊಂಡು ತಮ್ಮ ಸಾಲದ ಮಾಸಿಕ ಕಂತಿನ (ಇಎಂಐ) ಮೊತ್ತವನ್ನು ಬ್ಯಾಂಕ್ ಎಫ್.ಡಿ., ಮ್ಯೂಚುವಲ್ ಫಂಡ್ ಅಥವಾ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಲಾಭ ಪಡೆದುಕೊಳ್ಳಲು ಮುಂದಾಗುತ್ತಿದ್ದರು. ಹೀಗೆ ಮಾಡಿದ್ದರೆ ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿಯಾಗಿ ಇಟ್ಟಿರುವವರಿಗೆ, ಬ್ಯಾಂಕ್‌ ಮೇಲೆ ಹೂಡಿಕೆ ಮಾಡಿರುವ ಷೇರುದಾರರಿಗೆ ಬಡ್ಡಿ ಲಾಭ ಸಿಗದೆ ನಷ್ಟವಾಗುತ್ತಿತ್ತು. ಆದ್ದರಿಂದಲೇ, ಮೊರಟೋರಿಯಂ ಪಡೆದವರು ಬಡ್ಡಿಯ ಮೇಲೆ ಬಡ್ಡಿ ಕಟ್ಟಬೇಕಾಗುತ್ತದೆ, ಅದು ಬ್ಯಾಂಕಿಂಗ್ ವ್ಯವಸ್ಥೆಯ ಭಾಗ ಎಂದು ಬ್ಯಾಂಕ್‌ಗಳು ಹೇಳಿದವು.

2. ಉದಾಹರಣೆಗೆ, 20 ವರ್ಷಗಳ ಅವಧಿಗೆ ವ್ಯಕ್ತಿಯೊಬ್ಬರು ₹ 35 ಲಕ್ಷ ಸಾಲ ಪಡೆದಿದ್ದಾರೆ ಎಂದು ಭಾವಿಸಿ. ಆ ವ್ಯಕ್ತಿಯು ಪ್ರತಿ ತಿಂಗಳು ₹ 30,000 ಇಎಂಐ ಪಾವತಿಸಬೇಕು ಎಂದುಕೊಳ್ಳೋಣ. ವ್ಯಕ್ತಿ ಆರು ತಿಂಗಳ ಅವಧಿಗೆ ಮೊರಟೋರಿಯಂ ಸೌಲಭ್ಯ ಪಡೆದರೆ ಸಾಲದ ಅಸಲಿನ ಬಾಬ್ತಿಗೆ ₹ 1,80,000 ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳುತ್ತದೆ. ಆದರೆ ಹೀಗೆ ಸೇರ್ಪಡೆಗೊಂಡ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಸಾಲ ಪಡೆದ ವ್ಯಕ್ತಿಗೆ, 5, 10, 15, 20 ವರ್ಷ ಅವಧಿ ಸಿಗುತ್ತದೆ. ₹ 1,80,000ದ ಇಂದಿನ ಬೆಲೆ ಎಷ್ಟು? ಐದು ವರ್ಷಗಳ ನಂತರ ಅದರ ಮೌಲ್ಯ ಎಷ್ಟು? ಯೋಚಿಸಿ. ಹಣದುಬ್ಬರದ ಅಂದಾಜಿನಲ್ಲಿ ಲೆಕ್ಕ ಹಾಕಿದಾಗ, ₹ 1,80,000 ಹಣವು ಐದು ವರ್ಷಗಳ ನಂತರ ಶೇ 30ರಿಂದ ಶೇ 35ರಷ್ಟು ಕೊಳ್ಳುವಿಕೆ ಸಾಮರ್ಥ್ಯ (ಪರ್ಚೇಸಿಂಗ್ ಪವರ್) ಕಳೆದುಕೊಳ್ಳುತ್ತದೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ ಸಮಯ ಆಧರಿಸಿ ಹಣಕ್ಕೆ ಅದರದ್ದೇ ಆದ ಬೆಲೆ ಇರುತ್ತದೆ (ಟೈಂ ವ್ಯಾಲ್ಯೂ ಆಫ್ ಮನಿ). ಹಾಗಾಗಿ ಬಡ್ಡಿ ಮೇಲೆ ಬಡ್ಡಿ ಪಾವತಿ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವೇ ಆಗಿದೆ.

3. ಬ್ಯಾಂಕ್ ಅನ್ನುವುದು ಒಂದು ಮಧ್ಯವರ್ತಿ ಸಂಸ್ಥೆ. ಠೇವಣಿದಾರರು, ಷೇರು ಹೂಡಿಕೆದಾರರಿಂದ ಪಡೆದ ಹಣವನ್ನು ಸಾಲವಾಗಿ ನೀಡಿ ಒಂದಿಷ್ಟು ಲಾಭ ಮಾಡಿಕೊಂಡು, ಬಡ್ಡಿ ನೀಡಬೇಕಾಗುತ್ತದೆ. ಮೊರಟೋರಿಯಂ ಅವಧಿಗೆ ಬಡ್ಡಿ ರದ್ದು ಮಾಡಿದರೆ ಬ್ಯಾಂಕಿಂಗ್ ವ್ಯವಸ್ಥೆಯ ಪಾಲುದಾರರೇ ಆಗಿರುವ ಠೇವಣಿದಾರರು ಮತ್ತು ಹೂಡಿಕೆದಾರರಿಗೆ ನಷ್ಟವಾಗುತ್ತದೆ. ಹೀಗಾದಾಗ, ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ವಿಶ್ವಾಸ ಇಲ್ಲವಾಗುತ್ತದೆ.

ಪ್ರಮೋದ್ ಬಿ.ಪಿ.

4. ಕೋವಿಡ್–19ರ ಸಂಕಷ್ಟವು ಸಾಲ ಪಡೆದವರಿಗೆ ಮಾತ್ರ ಇದೆ ಎಂದು ನಾವು ಭಾವಿಸುತ್ತಿದ್ದೇವೆ. ಆದರೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರೂ ಕೋವಿಡ್–19ರಿಂದ ಸಂಕಷ್ಟಕ್ಕೆ ಒಳಗಾಗಿರಬಹುದು ಎಂದು ನಾವು ಯೋಚಿಸುತ್ತಲೇ ಇಲ್ಲ. ಹಾಗೆ ನೋಡಿದರೆ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ವ್ಯಕ್ತಿಯ ಗಳಿಕೆ ಸಾಮರ್ಥ್ಯ ಕೊಂಚ ಹೆಚ್ಚೇ ಇರುತ್ತದೆ. ಠೇವಣಿ ಇಡುವ ಬಹುತೇಕರು ಬಡ್ಡಿ ಹಣವನ್ನೇ ನಂಬಿ ಜೀವನ ನಡೆಸುತ್ತಿರುತ್ತಾರೆ. ನಿವೃತ್ತಿ ವೇಳೆ ಸಿಕ್ಕ ಒಂದಿಷ್ಟು ದೊಡ್ಡ ಮೊತ್ತವನ್ನ ಫಿಕ್ಸೆಡ್ ಡೆಪಾಸಿಟ್ ಮಾಡಿ, ಅದರಿಂದ ಬರುವ ಬಡ್ಡಿ ನಂಬಿ ಬದುಕುತ್ತಿರುತ್ತಾರೆ. ಮೊರಟೋರಿಯಂ ಅವಧಿಗೆ ಬಡ್ಡಿ ಇಲ್ಲ ಎಂದಾದರೆ ಠೇವಣಿದಾರರಿಗೆ, ಷೇರುದಾರರಿಗೆ ಬ್ಯಾಂಕ್‌ಗಳು ಬಡ್ಡಿ ಕೊಡುವುದು ಎಲ್ಲಿಂದ?

ಷೇರುಪೇಟೆ: ತಗ್ಗಿದ ಉತ್ಸಾಹ

ಸೆಪ್ಟೆಂಬರ್ ಮೊದಲ ವಾರದಲ್ಲಿ‌ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಸೆಪ್ಟೆಂಬರ್ 11ಕ್ಕೆ ಕೊನೆಗೊಂಡ ವಾರದಲ್ಲಿ ಕೊಂಚ ಚೇತರಿಸಿಕೊಂಡಿವೆ. 38,854 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇಕಡ 1.30ರಷ್ಟು ಜಿಗಿದಿದೆ. 11,464 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.15ರಷ್ಟು ಹೆಚ್ಚಳ ಕಂಡಿದೆ. ಆದರೆ ಬ್ಯಾಂಕ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.31ರಷ್ಟು ಮತ್ತು ಶೇ 1ರಷ್ಟು ಕುಸಿದಿವೆ.

ಕೋವಿಡ್–19ಕ್ಕೆ ಸಿದ್ಧಪಡಿಸುತ್ತಿರುವ ಲಸಿಕೆಯ ಪ್ರಯೋಗದಲ್ಲಿ ಆಗಿರುವ ಅಡೆತಡೆ, ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿನ ಹಿನ್ನಡೆ, ಮೊರಟೋರಿಯಂ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಸೇರಿದಂತೆ‌ ಕೆಲವು ಪ್ರಮುಖ ಬೆಳವಣಿಗೆಗಳು‌ ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ಹಾಗಾಗಿ ಹೂಡಿಕೆದಾರರಲ್ಲಿ ಉತ್ಸಾಹ ತಗ್ಗಿದೆ.

ಗಳಿಕೆ-ಇಳಿಕೆ: ನಿಫ್ಟಿಯಲ್ಲಿ ರಿಲಯನ್ಸ್ ಶೇ 11.4ರಷ್ಟು, ವಿಪ್ರೋ ಶೇ 6ರಷ್ಟು, ಎಚ್‌ಡಿಎಫ್‌ಸಿ‌ ಲೈಫ್ ಶೇ 5ರಷ್ಟು, ಬಿಪಿಸಿಎಲ್ ಶೇ 5ರಷ್ಟು, ಏಷಿಯನ್ ಪೇಂಟ್ಸ್ ಶೇ 4.2ರಷ್ಟು, ಟಿಸಿಎಸ್ ಶೇ 3.7ರಷ್ಟು, ಎಚ್‌ಸಿಎಲ್ ಶೇ 3ರಷ್ಟು ಹೆಚ್ಚಳ ಕಂಡಿವೆ.

ಗೇಲ್ ಶೇ 7.5ರಷ್ಟು, ಇನ್ಫ್ರಾಟೆಲ್ ಶೇ 6ರಷ್ಟು, ಏರ್‌ಟೆಲ್ ಶೇ 6ರಷ್ಟು, ಒಎನ್‌ಜಿಸಿ ಶೇ 6ರಷ್ಟು ಮತ್ತು ಕೋಲ್ ಇಂಡಿಯಾ ಶೇ 5.5ರಷ್ಟು ಕುಸಿದಿವೆ.

ಮುನ್ನೋಟ: ನೀಲ್ ಕಮಲ್, ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್, ಹುಡ್ಕೋ, ರೇಮಂಡ್‌, ಫ್ಯೂಚರ್ ರಿಟೇಲ್, ಅಪೋಲೋ ಹಾಸ್ಪಿಟಲ್ಸ್, ಪಿವಿಆರ್, ಸೇಲ್, ವೇದಾಂತ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಸಗಟು ದರ ಸೂಚ್ಯಂಕದ ದತ್ತಾಂಶ, ಬಡ್ಡಿ ದರ ಕುರಿತು ಫೆಡರಲ್‌ ಮುಕ್ತ ಮಾರುಕಟ್ಟೆ ಸಮಿತಿಯ ತೀರ್ಮಾನ, ಜಪಾನ್‌ನ ಹಣಕಾಸು ನೀತಿ ಸೇರಿ ಪ್ರಮುಖ ಬೆಳವಣಿಗೆಗಳು ಸೂಚ್ಯಂಕಗಳ‌ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ‌ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.