ಹುಬ್ಬಳ್ಳಿ: ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ₹10 ಮುಖಬೆಲೆಯ ನಾಣ್ಯಗಳು ರಾಶಿ ರಾಶಿಯಾಗಿ ಜಮಾ ಆಗಿವೆ. ಗ್ರಾಹಕರು ಅವುಗಳನ್ನು ಮರಳಿ ಪಡೆಯದ ಕಾರಣ ಈ ನಾಣ್ಯಗಳು ಬ್ಯಾಂಕ್‌ಗಳಿಗೆ ಹೊರೆಯಾಗಿವೆ.
‘₹10 ನಾಣ್ಯಗಳು ಚಲಾವಣೆಯಲ್ಲಿ ಇಲ್ಲ’ ಎನ್ನುವ ಗಾಳಿ ಸುದ್ದಿಯಿಂದಾಗಿ ಅಂಗಡಿ ಮಾಲೀಕರು ನಾಣ್ಯ ಪಡೆಯುತ್ತಿಲ್ಲ. ಹಾಗಾಗಿ, ಗ್ರಾಹಕರು ಆ ನಾಣ್ಯಗಳನ್ನು ಬ್ಯಾಂಕ್‌ನ ತಮ್ಮ ಖಾತೆಗಳಲ್ಲಿ ಜಮೆ ಮಾಡಿದ್ದಾರೆ. ಹೀಗಾಗಿ ಅವು ಬ್ಯಾಂಕ್‌ಗಳಲ್ಲಿ ಶೇಖರಣೆಯಾಗುತ್ತಿವೆ.
ಜಿಲ್ಲೆಯಲ್ಲಿನ ಸಂಗ್ರಹದ ಮೊತ್ತ ₹ 20 ಕೋಟಿಯಾಗಿದ್ದರೆ, ರಾಜ್ಯದಲ್ಲಿ ₹ 300 ಕೋಟಿಗೂ ಹೆಚ್ಚು ಮೊತ್ತದ ನಾಣ್ಯಗಳು ಸಂಗ್ರಹವಾಗಿವೆ ಎನ್ನುತ್ತಾರೆ ಅಧಿಕಾರಿಗಳು. ನಾಣ್ಯಗಳ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮನವಿ ತಿರಸ್ಕರಿಸಿದ ಆರ್‌ಬಿಐ
ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ₹10 ನಾಣ್ಯಗಳು ಚಲಾವಣೆಯಲ್ಲಿವೆ. ನಾಣ್ಯಗಳನ್ನು ಅಲ್ಲಿಗೆ ಕಳುಹಿಸುವ ಸಂಬಂಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜತೆ ಮಾತುಕತೆ ನಡೆಸಲಾಗಿತ್ತು. ಆದರೆ ಆರ್‌ಬಿಐ ಇದಕ್ಕೆ ಒಪ್ಪಿಲ್ಲ.
₹10 ನಾಣ್ಯಗಳು ಚಲಾವಣೆಯಲ್ಲಿವೆ. ಹಾಗೆ ಚಲಾವಣೆಯಲ್ಲಿರುವ ಹಣವನ್ನು ಇಲ್ಲಿ ಯಾರೂ ತೆಗೆದುಕೊಳ್ಳುತ್ತಿಲ್ಲ ಎಂದು ಬೇರೆ ರಾಜ್ಯಗಳಿಗೆ ಕಳುಹಿಸುವಂತಿಲ್ಲ ಎಂದಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಚಲಾವಣೆ ಮಾಡಲು ಸಾಧ್ಯವಾಗುತ್ತದೆ ಎನ್ನುವುದಾದರೆ ನಿಮಗೇಕೆ ಸಾಧ್ಯವಿಲ್ಲ ಎಂದೂ ಪ್ರಶ್ನಿಸಿದೆ.
ಗ್ರಾಹಕರು ತಮ್ಮ ಖಾತೆಯಿಂದ ಮರಳಿ ಪಡೆಯುವ ಹಣದ ಜೊತೆಗೆ ₹10ರ ಒಂದು ನಾಣ್ಯ ನೀಡುವ ಮೂಲಕ ಮತ್ತೆ ಅವುಗಳ ಚಲಾವಣೆಗೆ ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ‘ಬಹುತೇಕ ಗ್ರಾಹಕರು ಯಾವುದೇ ಕಾರಣಕ್ಕೂ ನಾಣ್ಯ ಪಡೆಯಲು ಒಪ್ಪುತ್ತಿಲ್ಲ. ಒತ್ತಾಯ ಮಾಡಿದರೆ ಜಗಳಕ್ಕೆ ಇಳಿಯುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬ್ಯಾಂಕ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರ್‌ಬಿಐ ₹10 ನಾಣ್ಯದ ಚಲಾವಣೆ ಹಿಂಪಡೆದಿಲ್ಲ. ಹಾಗಾಗಿ, ಅವುಗಳಿಗೆ ಕಾನೂನು ಮಾನ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಲ್ಲಿ, ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ. ಈಶ್ವರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.