ಈಚಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರ ಗಮನವು ಇಂಡೆಕ್ಸ್ ಫಂಡ್‌ಗಳತ್ತ ತಿರುಗಿದೆ. 2021ರಲ್ಲಿ 15ಕ್ಕಿಂತ ಹೆಚ್ಚು ಇಟಿಎಫ್‌ಗಳು (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಮತ್ತು ಇಂಡೆಕ್ಸ್ ಫಂಡ್‌ಗಳು ಹೊಸದಾಗಿ ಆರಂಭವಾಗಿವೆ.
ಇಂಡೆಕ್ಸ್ ಫಂಡ್ ಎಂದರೇನು?: ಷೇರುಪೇಟೆಯ ನಿರ್ದಿಷ್ಟ ಸೂಚ್ಯಂಕವೊಂದರಲ್ಲಿ ಯಾವ ಕಂಪನಿಯ ಷೇರಿಗೆ ಎಷ್ಟು ಆದ್ಯತೆ ಇದೆಯೋ, ಅಷ್ಟೇ ಪ್ರಮಾಣದಲ್ಲಿ ಆ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡುತ್ತವೆ ಇಂಡೆಕ್ಸ್ ಫಂಡ್‌ಗಳು. ಇಂಡೆಕ್ಸ್ ಫಂಡ್‌ನ ಮೂಲಕ ನಿರ್ದಿಷ್ಟ ಕಂಪನಿಯ ಷೇರಿನಲ್ಲಿ ಮಾಡುವ ಹೂಡಿಕೆಯ ಪ್ರಮಾಣವು, ಆ ಷೇರಿಗೆ ನಿರ್ದಿಷ್ಟ ಸೂಚ್ಯಂಕದಲ್ಲಿ ಎಷ್ಟು ಪ್ರಮಾಣದ ಆದ್ಯತೆ ಇರುತ್ತದೆಯೋ ಅಷ್ಟೇ ಇರುತ್ತದೆ. ಷೇರು ಸೂಚ್ಯಂಕದಲ್ಲಿ ಕಂಪನಿಯ ಷೇರಿಗೆ ನೀಡಿರುವ ಆದ್ಯತೆಯಲ್ಲಿ ಬದಲಾವಣೆ ಆದ ಸಂದರ್ಭದಲ್ಲಿ, ಫಂಡ್ ನಿರ್ವಾಹಕ ಕೂಡ ಹೂಡಿಕೆಯ ಪ್ರಮಾಣದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಉದಾಹರಣೆಗೆ, ನಿಫ್ಟಿ ಇಂಡೆಕ್ಸ್ ಫಂಡ್ ಮೂಲಕ ಮಾಡುವ ಹೂಡಿಕೆಯು, ನಿಫ್ಟಿ–50 ಸೂಚ್ಯಂಕದಲ್ಲಿ ಇರುವ ಕಂಪನಿಗಳ ಷೇರುಗಳಲ್ಲಿ ಹಣ ತೊಡಗಿಸುತ್ತದೆ.
ಇಂಡೆಕ್ಸ್ ಫಂಡ್‌ನ ಲಾಭಗಳು:
1) ವೈವಿಧ್ಯ: ಇಂಡೆಕ್ಸ್ ಫಂಡ್‌ಗಳು ಬೇರೆ ಬೇರೆ ಕಂಪನಿಗಳ ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಹೂಡಿಕೆಯಲ್ಲಿ ವೈವಿಧ್ಯವನ್ನು ತಂದುಕೊಳ್ಳಲು ಸರಳವಾಗಿ, ಸುಲಭವಾಗಿ ನೆರವಾಗುತ್ತವೆ. ಉದಾಹರಣೆಗೆ, ನಿಫ್ಟಿ50 ಇಂಡೆಕ್ಸ್ ಫಂಡ್ ಗಮನಿಸೋಣ. ನಿಫ್ಟಿ50 ಸೂಚ್ಯಂಕದ ಮೂಲಕ ಹೂಡಿಕೆದಾರರಿಗೆ 50 ಬೇರೆ ಬೇರೆ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶ ಸಿಗುತ್ತದೆ. ಇದರಿಂದಾಗಿ, ಸೂಚ್ಯಂಕದ ಭಾಗವಾಗಿರುವ ಯಾವುದೇ ಒಂದು ಕಂಪನಿಯಲ್ಲಿ ನಕಾರಾತ್ಮಕವಾದುದು ಏನೇ ಆದರೂ, ಒಟ್ಟಾರೆ ಹೂಡಿಕೆಗೆ ದೊಡ್ಡ ಅಪಾಯ ಆಗುವುದಿಲ್ಲ. ಅಷ್ಟೇ ಅಲ್ಲ, ಕನಿಷ್ಠ ₹ 100 ಇದ್ದರೂ ಇಂಡೆಕ್ಸ್ ಫಂಡ್ ಮೂಲಕ ಈ 50 ಕಂಪನಿಗಳಲ್ಲಿ ಏಕಕಾಲಕ್ಕೆ ಹೂಡಿಕೆ ಮಾಡಲು ಸಾಧ್ಯ.
2) ಕಡಿಮೆ ವೆಚ್ಚ: ಇಂಡೆಕ್ಸ್ ಫಂಡ್‌ಗಳಿಗೆ ಹೂಡಿಕೆದಾರರು ಮಾಡಬೇಕಿರುವ ವೆಚ್ಚಗಳು ಸಾಮಾನ್ಯವಾಗಿ ಬಹಳ ಕಡಿಮೆ ಇರುತ್ತವೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ರೂಪಿಸಿರುವ ನಿಯಮಗಳ ಅನ್ವಯ ಇಂಡೆಕ್ಸ್ ಫಂಡ್‌ಗಳು ನಿಗದಿ ಮಾಡಬಹುದಾದ ವೆಚ್ಚ ಅನುಪಾತವು (ಎಕ್ಸ್‌ಪೆನ್ಸ್ ರೇಷ್ಯೊ) ಶೇಕಡ 1ಕ್ಕಿಂತ ಹೆಚ್ಚಾಗುವಂತೆ ಇಲ್ಲ. ಫಂಡ್ ಮ್ಯಾನೇಜರ್‌ಗಳು ಸಕ್ರಿಯವಾಗಿ ನಿರ್ವಹಣೆ ಮಾಡುವ ಫಂಡ್‌ಗಳನ್ನು (ಉದಾಹರಣೆಗೆ ಮ್ಯೂಚುವಲ್ ಫಂಡ್‌ಗಳು) ಗಮನಿಸಿದರೆ, ಇಂಡೆಕ್ಸ್ ಫಂಡ್‌ಗಳ ಮೇಲಿನ ಹೂಡಿಕೆ ವೆಚ್ಚವು ಅಗ್ಗ.
3) ಲಾಭ ನೀಡುವ ಸಾಮರ್ಥ್ಯ: ಇಂಡೆಕ್ಸ್ ಫಂಡ್‌ಗಳು ತಾವು ಯಾವ ಸೂಚ್ಯಂಕವನ್ನು ಮಾನದಂಡವಾಗಿ ಇರಿಸಿಕೊಂಡಿವೆಯೋ, ಆ ಸೂಚ್ಯಂಕದ ಏರಿಕೆಯ ಪ್ರಮಾಣಕ್ಕೆ ಅನುಗುಣವಾದ ಲಾಭವನ್ನು ತಂದುಕೊಡಲು ಯತ್ನಿಸುತ್ತವೆ. ಹೂಡಿಕೆದಾರರು ದೀರ್ಘ ಅವಧಿಗೆ ಹಣ ತೊಡಗಿಸಲು ಸಿದ್ಧವಿದ್ದರೆ, ಅವರಿಗೆ ಸಿಗುವ ಲಾಭದ ಪ್ರಮಾಣವು ಇಡೀ ಅರ್ಥ ವ್ಯವಸ್ಥೆಯ ಬೆಳವಣಿಗೆ ಪ್ರಮಾಣಕ್ಕೆ ತಕ್ಕಂತೆ ಇರುತ್ತದೆ. ಉದಾಹರಣೆಗೆ, ಐದು ವರ್ಷಗಳಲ್ಲಿ ನಿಫ್ಟಿ 50 ಟಿಆರ್‌ಐ ಇಂಡೆಕ್ಸ್‌ನ ಕಂಪನಿಗಳು ನೀಡಿರುವ ಸಂಯುಕ್ತ ವಾರ್ಷಿಕ ವೃದ್ಧಿ ದರವು (ಸಿಎಜಿಆರ್) ಸರಿಸುಮಾರು ಶೇಕಡ 15ರಷ್ಟು ಇದೆ.
4) ಎಸ್‌ಐಪಿ ಸೌಲಭ್ಯ: ಸಕ್ರಿಯವಾಗಿ ನಿರ್ವಹಣೆ ಕಾಣುವ ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಇರುವಂತೆ ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡುವವರು ಕೂಡ ದಿನನಿತ್ಯ, ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಹಣ ತೊಡಗಿಸಬಹುದು.
ಇಂಡೆಕ್ಸ್ ಫಂಡ್‌ನ ಮಿತಿಗಳು
1) ಅರ್ಥ ವ್ಯವಸ್ಥೆಯಲ್ಲಿ ಅಥವಾ ಷೇರು ಮಾರುಕಟ್ಟೆಗಳಲ್ಲಿ ಮಹತ್ವದ ಬದಲಾವಣೆಗಳು ಆದ ಸಂದರ್ಭದಲ್ಲಿ, ಸಕ್ರಿಯವಾಗಿ ನಿರ್ವಹಣೆ ಮಾಡುವ ಫಂಡ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಫಂಡ್ ನಿರ್ವಾಹಕರು ತರುತ್ತಾರೆ. ಆದರೆ, ಇಂಡೆಕ್ಸ್ ಫಂಡ್‌ಗಳಲ್ಲಿ ಅಂತಹ ಬದಲಾವಣೆಗೆ ಅವಕಾಶ ಇಲ್ಲ. ಇದರ ಪರಿಣಾಮವಾಗಿ, ಮಾರುಕಟ್ಟೆಯು ಕುಸಿತದ ಹಾದಿಯಲ್ಲಿ ಇದ್ದಾಗ ಅದನ್ನು ನಿಭಾಯಿಸಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಫಂಡ್ ನಿರ್ವಾಹಕರಿಗೆ ಅವಕಾಶ ಇಲ್ಲ.
2) ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರು, ಆ ಫಂಡ್ ಯಾವ ಸೂಚ್ಯಂಕವನ್ನು ಅನುಕರಣೆ ಮಾಡುತ್ತದೆಯೋ ಅದು ನೀಡುವಷ್ಟು ಲಾಭಾಂಶವನ್ನು ಮಾತ್ರ ನಿರೀಕ್ಷೆ ಮಾಡಬಹುದು.
3) ಇಂಡೆಕ್ಸ್ ಫಂಡ್ ನೀಡುವ ಲಾಭಾಂಶ ಹಾಗೂ ಆ ಫಂಡ್ ಅನುಕರಣೆ ಮಾಡುತ್ತಿರುವ ಸೂಚ್ಯಂಕವು ನೀಡುವ ಲಾಭಾಂಶದ ನಡುವಿನ ವ್ಯತ್ಯಾಸವನ್ನು ಟ್ರ್ಯಾಕಿಂಗ್ ಎರರ್ ಎಂಬ ಪಾರಿಭಾಷಿಕ ಬಳಸಿ ಗುರುತಿಸಲಾಗುತ್ತದೆ. ಸೂಚ್ಯಂಕವು ನೀಡುವಷ್ಟೇ ಲಾಭಾಂಶವನ್ನು ತಂದುಕೊಡಲು ಇಂಡೆಕ್ಸ್ ಫಂಡ್‌ಗಳು ಯತ್ನಿಸುತ್ತವಾದರೂ, ಫಂಡ್‌ಗಾಗಿ ಮಾಡುವ ವೆಚ್ಚ ಅಥವಾ ಇತರ ಕೆಲವು ವೆಚ್ಚಗಳ ಕಾರಣದಿಂದಾಗಿ ಲಾಭಾಂಶದಲ್ಲಿ ತುಸು ವ್ಯತ್ಯಾಸ ಆಗುವ ಸಾಧ್ಯತೆ ಇರುತ್ತದೆ.
ಇಂಡೆಕ್ಸ್ ಫಂಡ್ ಯಾರಿಗೆ?
ಪ್ರತಿ ಹೂಡಿಕೆದಾರನೂ ಇಂಡೆಕ್ಸ್ ಫಂಡ್‌ಗಳಲ್ಲಿ ಹಣ ತೊಡಗಿಸಬೇಕು. ಮೊದಲ ಬಾರಿಗೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರು, ಈಕ್ವಿಟಿಗಳ ಲೋಕಕ್ಕೆ ಪ್ರವೇಶ ಪಡೆಯಲು ಇಂಡೆಕ್ಸ್ ಫಂಡ್‌ಗಳನ್ನು ಆರಂಭಿಕ ಮೆಟ್ಟಿಲಾಗಿ ಬಳಸಿಕೊಳ್ಳಬಹುದು. ಕಿರು ಅವಧಿಯಲ್ಲಿ ಇಂಡೆಕ್ಸ್ ಫಂಡ್‌ಗಳಲ್ಲಿನ ಹೂಡಿಕೆಯಿಂದ ಸಿಗುವ ಲಾಭದ ಪ್ರಮಾಣ ಅಸ್ಥಿರವಾಗಿ ಇರಬಹುದು. ಆದರೆ, ದೀರ್ಘಾವಧಿಯಲ್ಲಿ ಅವು ಸರಿಹೋಗುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಇರುವ ಅತ್ಯಂತ ಕಡಿಮೆ ವೆಚ್ಚ ಮಾರ್ಗಗಳಲ್ಲಿ ಒಂದು ಇಂಡೆಕ್ಸ್ ಫಂಡ್‌ಗಳು. ಆದರೆ, ಯಾವುದೇ ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು ಅದು ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸೂಕ್ತವಾಗಿ ಇದೆಯೇ ಎಂಬುದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.
ಲೇಖಕ ಐಸಿಐಸಿಐ ಪ್ರುಡೆನ್ಷಿಯಲ್ ಆಸ್ತಿ ನಿರ್ವಹಣಾ ಕಂಪನಿಯ ಉತ್ಪನ್ನ ಅಭಿವೃದ್ಧಿ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.