ADVERTISEMENT

ಕ್ರಿಪ್ಟೋಕರೆನ್ಸಿ ಎಂಬ ‘ಮಾಯ’ಧನ: ಇದು ಅಕ್ರಮವೂ ಅಲ್ಲ, ಸಕ್ರಮವೂ ಅಲ್ಲ!

ಕೃಷ್ಣ ಭಟ್ಟ
Published 16 ನವೆಂಬರ್ 2021, 19:30 IST
Last Updated 16 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಬಿಟ್‌ಕಾಯಿನ್ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ಅದೊಂದು ಹವಾಲಾ ಹಗರಣದಂತೆಯೋ, ಅಕ್ರಮ ವಹಿವಾಟಿನ ಹಾಗೆಯೋ ಕಾಣಿಸಬಹುದಾದರೂ, ಬಿಟ್‌ಕಾಯಿನ್‌ ಎಂಬ ಕ್ರಿಪ್ಟೋಕರೆನ್ಸಿ ಬಗ್ಗೆ ತಿಳಿದುಕೊಂಡರೆ ಈಗಿನ ಪ್ರಕರಣಕ್ಕೂ ಕ್ರಿಪ್ಟೋಕರೆನ್ಸಿಗೂ ಇರುವ ವ್ಯತ್ಯಾಸ ತಿಳಿದೀತು. ಏಕೆಂದರೆ, ಸದ್ಯ ಚಾಲ್ತಿಯಲ್ಲಿರುವ ನೂರಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಯ ಪೈಕಿ ಅತ್ಯಂತ ಜನಪ್ರಿಯ ಮತ್ತು ಮುಂಚೂಣಿಯಲ್ಲಿ ಇರುವುದು ಬಿಟ್‌ಕಾಯಿನ್.

ಇದೊಂದು ಕರೆನ್ಸಿ ನೋಟು ಇದ್ದ ಹಾಗೆ. ಆದರೆ, ಕಾಗದದಲ್ಲಿ ಇರೋದಿಲ್ಲ. ಬದಲಿಗೆ, ಕಂಪ್ಯೂಟರಿನಲ್ಲಿರುತ್ತದೆ. ಯಾರು, ಎಲ್ಲಿ, ಎಷ್ಟನ್ನು ಬೇಕಾದರೂ ಖರೀದಿ, ಮಾರಾಟ ಮಾಡಬಹುದು. ಇದನ್ನು ನಿಯಂತ್ರಿಸುವವರಿಲ್ಲದ್ದರಿಂದ, ಅಕ್ರಮಕ್ಕೂ ಬಳಕೆಯಾಗಬಹುದು, ಸಕ್ರಮಕ್ಕೂ ಬಳಕೆಯಾಗಬಹುದು. ಭಾರತದಲ್ಲಿ, ಇದು ಅಕ್ರಮವೂ ಅಲ್ಲ, ಸಕ್ರಮವೂ ಅಲ್ಲ. ಆರ್‌ಬಿಐ ಇದನ್ನು ಸಕ್ರಮ ಎಂದು ಘೋಷಿಸಿಲ್ಲ. ಆದರೆ, ಅಕ್ರಮ ಎಂದೂ ಹೇಳಿಲ್ಲ. ಹೀಗಾಗಿ, ಖರೀದಿ ಮಾಡುವವರು ಸೂಕ್ತ ತೆರಿಗೆ ಕಟ್ಟಿ ಇದನ್ನು ಖರೀದಿ ಮಾಡಬಹುದು. ಇದರಿಂದ ಆಗುವ ಎಲ್ಲ ನಷ್ಟ, ಲಾಭಕ್ಕೆ ಖರೀದಿಸಿದವರೇ ಹೊಣೆ.

ಸಾಮಾನ್ಯವಾಗಿ ಕರೆನ್ಸಿಯನ್ನು ಆಯಾ ದೇಶ ನಿಯಂತ್ರಿಸುತ್ತದೆ. ಆದರೆ, ಇದು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಆಧರಿಸಿರುವುದರಿಂದ ಇದನ್ನು ನಿಯಂತ್ರಿಸುವ ಪ್ರಾಧಿಕಾರ ಎಂಬುದಿಲ್ಲ. ಹೀಗಾಗಿ, ಇದರ ಮೌಲ್ಯ ಏರಿಳಿತ ಹೆಚ್ಚು.‌

ADVERTISEMENT

ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ ಕ್ರಿಪ್ಟೋಕರೆನ್ಸಿಗೆ ನಾಲ್ಕು ಮುಖ್ಯ ಕೀ ಇರುತ್ತದೆ. ಒಂದು ಹ್ಯಾಶ್‌ ಕೀ. ಉದಾಹರಣೆಗೆ SHA256, ಪ್ರೈವೇಟ್ ಕೀ, ಪಬ್ಲಿಕ್ ಕೀ ಹಾಗೂ ಹಿಂದಿನ ವಹಿವಾಟಿನ ವಿವರ ಇರುವ ಹ್ಯಾಶ್ ಕೀ. ಇವೆಲ್ಲವೂ ಬ್ಲಾಕ್‌ಚೈನ್‌ ನೆಟ್‌ವರ್ಕ್‌ನ ಒಂದೊಂದು ಬ್ಲಾಕ್‌ನಲ್ಲಿ ಸಂಗ್ರಹವಾಗಿರುತ್ತದೆ. ಈ ಎಲ್ಲ ಕೀಗಳೂ ಪ್ರತಿ ವಹಿವಾಟಿಗೂ ಹೋಲಿಕೆಯಾಗಬೇಕಿರುತ್ತದೆ. ಆಗ ಮಾತ್ರ ಅದು ವರ್ಗಾವಣೆಯಾಗುತ್ತದೆ. ಒಂದು ವೇಳೆ ಯಾವುದೇ ಒಂದು ಕೀ ಹೋಲಿಕೆಯಾಗದಿದ್ದರೂ ಅದು ಅಮಾನ್ಯವಾಗುತ್ತದೆ. ಒಂದು ಬಿಟ್‌ಕಾಯಿನ್ ಅನ್ನೋ ಅಥವಾ ಯಾವುದೇ ಕ್ರಿಪ್ಟೋಕರೆನ್ಸಿಯನ್ನೂ ಹ್ಯಾಕ್ ಮಾಡಬೇಕು ಎಂದಾದರೆ ಜಗತ್ತಿನಲ್ಲಿರುವ ಕೋಟ್ಯಂತರ ಕಂಪ್ಯೂಟರ್‌ಗಳಲ್ಲಿರುವ ಕೀಗಳನ್ನು ಬದಲಿಸಬೇಕಾಗುತ್ತದೆ. ಹೀಗಾಗಿ, ಇದನ್ನು ಹ್ಯಾಕ್ ಮಾಡುವುದು ಸಾಧ್ಯವೇ ಇಲ್ಲ.

ಅಪಾಯವೂ ಇದೆ!

ಆದರೆ, ಈಗಿನ ಹ್ಯಾಕರ್‌ಗಳು ಸಾಮಾನ್ಯವಾಗಿ ಮಾಡುತ್ತಿರುವುದೇನೆಂದರೆ, ಕ್ರಿಪ್ಟೋಕರೆನ್ಸಿ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ನೀಡಿದ ಪೋರ್ಟಲ್‌ನ ಪಾಸ್‌ವರ್ಡ್ ಕದಿಯುವುದು. ಕ್ರಿಪ್ಟೋಕರೆನ್ಸಿ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ವಾಲೆಟ್ ನೀಡಿರುತ್ತವೆ. ಅಲ್ಲಿ, ಅವರು ಖರೀದಿಸಿದ ಕರೆನ್ಸಿ ಇರುತ್ತವೆ. ಹ್ಯಾಕರ್‌ಗಳು ಈ ಡಿಜಿಟಲ್ ವಾಲೆಟ್‌ನ ಪಾಸ್‌ವರ್ಡ್‌ ಕದ್ದು, ಅಲ್ಲಿಂದ ಕ್ರಿಪ್ಟೋಕರೆನ್ಸಿಯನ್ನು ತಮ್ಮ ವಾಲೆಟ್‌ಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.

ಎಷ್ಟು ಸುರಕ್ಷಿತ?

ಕ್ರಿಪ್ಟೋಕರೆನ್ಸಿಯಲ್ಲಿ ಹಲವು ರೀತಿಯ ಹೂಡಿಕೆ ಮಾಡುವವರು ಹಾಗೂ ವಹಿವಾಟು ನಡೆಸುವವರಿದ್ದಾರೆ. ಕಪ್ಪುಹಣವನ್ನು ಹೂಡಿಕೆ ಮಾಡುವವರದ್ದೇ ಒಂದು ಕಥೆಯಾದರೆ, ನಿಜವಾದ ಹೂಡಿಕೆ ಉದ್ದೇಶಕ್ಕೆ ತೆರಿಗೆ ಪಾವತಿ ಮಾಡಿ ಗಳಿಸಿದ ಹಣವನ್ನು ಹೂಡಿಕೆ ಮಾಡುವವರೂ ಇದ್ದಾರೆ. ಇವೆಲ್ಲದರ ಜೊತೆಗೆ, ಇದು ವಿಕೇಂದ್ರೀಕೃತ ಕರೆನ್ಸಿಯಾಗಿರುವುದರಿಂದ ಮಾದಕದ್ರವ್ಯ ವಹಿವಾಟಿಗಂತೂ ಡಾರ್ಕ್‌ ನೆಟ್‌ನಲ್ಲಿ ಇದರ ವಹಿವಾಟು ಜೋರಾಗಿ ನಡೆಯುತ್ತಿದೆ.

2009ರಲ್ಲಿ ಕ್ರಿಪ್ಟೋಕರೆನ್ಸಿ ಆರಂಭವಾಯಿತು. ಆಗ, ಒಂದು ಬಿಟ್‌ಕಾಯಿನ್ ಬೆಲೆ 8 ಸೆಂಟ್‌ಗಳಿದ್ದವು. ಅಂದರೆ, 17 ಪೈಸೆ. ಈ 13 ವರ್ಷಗಳಲ್ಲಿ ಬಿಟ್‌ಕಾಯಿನ್ ದರ ಸುಮಾರು ₹50 ಲಕ್ಷ ಆಗಿದೆ. ಬಿಟ್‌ಕಾಯಿನ್ ಜನಪ್ರಿಯವಾಗುತ್ತಿದ್ದಂತೆಯೇ ನೂರಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿ ಇವೆ. ಹೊಸ ಹೊಸ ಕರೆನ್ಸಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಕ್ರಿಪ್ಟೋಕರೆನ್ಸಿ ಹೆಸರಲ್ಲಿ ಹಲವು ರೀತಿಯ ಮೋಸಗಳೂ ನಡೆಯುತ್ತಿವೆ. ಇದು ಅನಿಯಂತ್ರಿತವಾದ್ದರಿಂದ, ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಖರೀದಿ ಮಾಡುತ್ತಿರುವ ಕ್ರಿಪ್ಟೋಕರೆನ್ಸಿ ಎಷ್ಟು ಸುರಕ್ಷಿತ ಎಂದು ತಿಳಿದುಕೊಳ್ಳುವುದು ಸುಲಭವಲ್ಲ. ರಾತ್ರೋರಾತ್ರಿ ಕ್ರಿಪ್ಟೋಕರೆನ್ಸಿ ಸಿಸ್ಟಮ್ ಅನ್ನೇ ಅದನ್ನು ಶುರು ಮಾಡಿದವರು ಮುಚ್ಚಿಹಾಕಬಹುದು. ಒಂದು ವೇಳೆ, ಖರೀದಿ ಮಾಡಿದ ನಂತರವೂ ವಾಲೆಟ್‌ ಅನ್ನು ಹ್ಯಾಕ್ ಮಾಡಿ ಅದನ್ನು ಕದ್ದೊಯ್ಯುವ ಹ್ಯಾಕರ್‌ಗಳಿಂದ ರಕ್ಷಣೆ ಪಡೆದುಕೊಳ್ಳುವುದು ಅವರದ್ದೇ ಜವಾಬ್ದಾರಿ. ಒಂದು ಮೂಲಗಳ ಪ್ರಕಾರ ಜಗತ್ತಿನಲ್ಲಿ ಈಗ ಇರುವ ಶೇ. 30ರಷ್ಟು ಬಿಟ್‌ಕಾಯಿನ್‌ಗಳನ್ನು ಕಳ್ಳತನ ಮಾಡಲಾಗಿದೆ!

ಬ್ಯಾಂಕ್‌ನಲ್ಲಿಟ್ಟ ಹಣಕ್ಕೆ ಒಂದು ಮಿತಿಯವರೆಗೆ ವಿಮೆ ಇರುತ್ತದೆ. ಬ್ಯಾಂಕ್‌ನಲ್ಲಿಟ್ಟ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಜವಾಬ್ದಾರನಾಗುತ್ತದೆ. ಬ್ಯಾಂಕ್‌ ಮುಳುಗಿ ಹೋದರೆ, ಒಂದು ಹಂತದವರೆಗೆ ವಿಮೆ ನಮ್ಮನ್ನು ರಕ್ಷಿಸುತ್ತದೆ ಮತ್ತು ಆರ್‌ಬಿಐನಂತಹ ನಿಯಂತ್ರಕ ಸಂಸ್ಥೆಗಳನ್ನು ರಕ್ಷಣೆಗೆ ಇರುತ್ತವೆ. ಆದರೆ, ಕ್ರಿಪ್ಟೋಕರೆನ್ಸಿ ವಿಕೇಂದ್ರಿತ ವ್ಯವಸ್ಥೆ. ಇಲ್ಲಿ ಯಾರೂ ಯಾರನ್ನೂ ನಿಯಂತ್ರಿಸುವುದಿಲ್ಲ. ಬಲಿಷ್ಠನಾಗಿದ್ದವನು ಬದುಕಿಕೊಳ್ಳುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.