ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ, ತುಟ್ಟಿಭತ್ಯೆಯಲ್ಲಿ ಹೆಚ್ಚಳ – ಇಂತಹ ಸುದ್ದಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಟಿ.ವಿ.ವಾಹಿನಿಗಳಲ್ಲಿ, ದಿನಪತ್ರಿಕೆಗಳ ಮುಖಪುಟಗಳಲ್ಲಿ ನೋಡುತ್ತಿದ್ದೆವು. ಆದರೆ, ಈ ಬಾರಿ ಕೇಂದ್ರ ಸರ್ಕಾರದ 50 ಲಕ್ಷ ನೌಕರರು ಮತ್ತು 61ಲಕ್ಷ ಪಿಂಚಣಿದಾರರು ನಿರಾಶರಾಗಿದ್ದಾರೆ. ಇವರಿಗೆ ಜನವರಿ 1ರಿಂದ ಜಾರಿಯಾಗಬೇಕಾಗಿದ್ದ ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಇಷ್ಟೇ ಅಲ್ಲ, ಹೆಚ್ಚುವರಿ ತುಟ್ಟಿಭತ್ಯೆಯ ಮುಂದಿನ ಎರಡು ಅರ್ಧವಾರ್ಷಿಕ ಕಂತುಗಳ ಪಾವತಿಗೂ ಕಡಿವಾಣ ಬಿದ್ದಿದೆ. ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ತಮ್ಮ ಒಟ್ಟು ವೇತನದಲ್ಲಿ ಈಗ ಪಡೆಯುತ್ತಿರುವ ತುಟ್ಟಿಭತ್ಯೆಯನ್ನೇ 2021ರ ಜೂನ್ ಅಂತ್ಯದವರೆಗೂ ಪಡೆಯಬೇಕಾಗಿದೆ. ಹದಿನೆಂಟು ತಿಂಗಳುಗಳ ಕಾಲ ತುಟ್ಟಿಭತ್ಯೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ಹೀಗೆ ತಡೆಹಿಡಿದಿರುವ ತುಟ್ಟಿಭತ್ಯೆ ಬಾಕಿಯನ್ನು ಮುಂದೊಮ್ಮೆ ಪಾವತಿ ಮಾಡಲಾಗುವುದಿಲ್ಲವೆಂದೂ ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಜನವರಿ 2020ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಪ್ರಕಟಿಸಿತ್ತು. ಕರೋನಾ ಹಾವಳಿಯು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದರಿಂದ ತುಟ್ಟಿಭತ್ಯೆ ಸ್ಥಗಿತದಂತಹ ಕಠಿಣ ನಿರ್ಧಾರ ಕೈಗೊಳುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಇದೇ ಮಾದರಿಯನ್ನು ಅನುಸರಿಸಿದ ಕರ್ನಾಟಕ ಸರ್ಕಾರ ಸಹಾ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ತಡೆಹಿಡಿದಿವೆ.
ಹಣದುಬ್ಬರವೇ ತಳಹದಿ
ತುಟ್ಟಿಭತ್ಯೆಗೂ ಹಣದುಬ್ಬರ ಅಥವಾ ಬೆಲೆ ಏರಿಕೆಗೂ ನೇರವಾದ ನಂಟು ಇದೆ. ಸರ್ಕಾರಿ ನೌಕರರ ಒಟ್ಟು ವೇತನದಲ್ಲಿ ಮೂಲವೇತನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆ ಮುಂತಾದವುಗಳ ಜೊತೆಗೇ ತುಟ್ಟಿಭತ್ಯೆಯೂ ಸೇರಿರುತ್ತದೆ. ತುಟ್ಟಿಭತ್ಯೆ ಹೊರತುಪಡಿಸಿದ ಇತರ ಭತ್ಯೆಗಳು ನಿರ್ದಿಷ್ಟ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಿದ್ದು ಅವುಗಳನ್ನು ಮೂಲವೇತನದ ಒಂದು ನಿಗದಿತ ಶೇಕಡಾ ಭಾಗ ಅಥವಾ ನಿರ್ದಿಷ್ಟ ಮೊತ್ತದ ರೂಪದಲ್ಲಿ ನೀಡಲಾಗುತ್ತದೆ. ಇಂತಹ ಭತ್ಯೆಗಳು ಪದೇ ಪದೇ ಹೆಚ್ಚಳವಾಗುವುದಿಲ್ಲ. ವ್ಯಕ್ತಿಯ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿ ತುಟ್ಟಿಭತ್ಯೆಯನ್ನು ಬೆಲೆ ಸೂಚ್ಯಂಕ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಅಂದರೆ ಜನವರಿ ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಉದಾಹರಣೆಗೆ ಜನವರಿ 2020ರಿಂದ ಪಾವತಿಸಬೇಕಾಗುವ ಹೆಚ್ಚುವರಿ ತುಟ್ಟಿಭತ್ಯೆಯ ಪ್ರಮಾಣವನ್ನು ಅದರ ಹಿಂದಿನ ಆರು ತಿಂಗಳುಗಳ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಏರಿಳಿತಗಳನ್ನಾಧರಿಸಿ ನಿಗದಿಪಡಿಸಲಾಗುತ್ತದೆ. ಬ್ಯಾಂಕು ಮುಂತಾದ ಕೆಲವು ಕೇಂದ್ರೋದ್ಯಮಗಳಲ್ಲಿ ತುಟ್ಟಿಭತ್ಯೆಯನ್ನು ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.
ತುಟ್ಟಿಭತ್ಯೆಯ ಪರಿಕಲ್ಪನೆ ಜಾರಿಗೆ ಬಂದದ್ದು ಎರಡನೆಯ ಮಹಾಯುದ್ಧದ ಕಾಲದಲ್ಲಿ ಎಂದು ಹೇಳಲಾಗಿದೆ. ಆಗ ಆಹಾರ ಪದಾರ್ಥಗಳ ಬೆಲೆಗಳು ತೀವ್ರ ತುಟ್ಟಿಯಾದ ಕಾರಣ, ಕಾರ್ಮಿಕರು ಭರಿಸಬೇಕಾಗಿ ಬಂದ ಹೆಚ್ಚುವರಿ ಆಹಾರ ವೆಚ್ಚಕ್ಕೆ ಪರಿಹಾರ ರೂಪದಲ್ಲಿ ಮೂಲವೇತನಕ್ಕೆ ‘ತುಟ್ಟಿ ಆಹಾರ ಭತ್ಯೆ’ಯನ್ನೂ ಸೇರಿಸಿ ನೀಡಲಾಯಿತು. ಕ್ರಮೇಣ ಆಹಾರ ಪದಾರ್ಥಗಳು ಮಾತ್ರವಲ್ಲದೆ ಇನ್ನಿತರ ಹಲವು ಪದಾರ್ಥಗಳ ಬೆಲೆ ಚಲನೆಯನ್ನೂ ಆಧರಿಸಿ ವೆಚ್ಚ ಪರಿಹಾರ ನೀಡುವ ಪದ್ಧತಿ ಅರಂಭವಾಗಿ ಅದನ್ನು ‘ತುಟ್ಟಿಭತ್ಯೆ’ ಎಂದು ಕರೆಯಲಾಯಿತು.
ಗ್ರಾಹಕ ಬೆಲೆ ಸೂಚ್ಯಂಕವು ಜನಸಾಮಾನ್ಯರ ದಿನಬಳಕೆ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿನ ಚಲನೆ ಆಧರಿಸಿರುತ್ತದೆ. ದೇಶದಲ್ಲಿನ ಆಯ್ದ 1,181 ಗ್ರಾಮೀಣ ಮತ್ತು 1,114 ನಗರ ಮಾರುಕಟ್ಟೆಗಳಿಗೆ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಪ್ರತಿನಿಧಿಗಳು ಪ್ರತಿ ತಿಂಗಳೂ ಭೇಟಿ ನೀಡಿ ಆಹಾರ ಮತ್ತು ಪಾನೀಯ, ಹಾಲಿನ ಉತ್ಪನ್ನ, ತರಕಾರಿ, ಸಿಹಿತಿಂಡಿ, ಮೀನು, ಮಾಂಸ, ಕೊಬ್ಬು, ತೈಲ, ಇಂಧನ, ವಿದ್ಯುತ್, ಬಟ್ಟೆ. ಸಾರಿಗೆ ಮತ್ತು ಸಂವಹನ, ಶಿಕ್ಷಣ, ಗೃಹನಿರ್ಮಾಣ ಮುಂತಾದ ಹಲವು ಬಗೆಯ ದಿನಬಳಕೆ ವಸ್ತುಗಳು ಮತ್ತು ಸೇವೆಗಳ ಚಾಲ್ತಿ ಬೆಲೆಗಳ ಸಮೀಕ್ಷೆ ನಡೆಸುತ್ತಾರೆ. ಇದನ್ನು ಆಧರಿಸಿ ಕೇಂದ್ರೀಯ ಸಾಂಖ್ಯಿಕ ಇಲಾಖೆಯು ಪ್ರತಿ ತಿಂಗಳೂ ಗ್ರಾಹಕ ಬೆಲೆ ಸೂಚ್ಯಂಕ ಪ್ರಕಟಿಸುತ್ತದೆ.
ನಿಗದಿತ ಆಧಾರ ವರ್ಷದ ಬೆಲೆಯನ್ನು (ಉದಾ:2001=100) ಮೂಲವಾಗಿರಿಸಿಕೊಂಡು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಮೂಲವೇತನದ ಇಂತಿಷ್ಟು ಶೇಕಡಾ ಭಾಗ ತುಟ್ಟಿಭತ್ಯೆ ನೀಡಬೇಕೆಂದು ತೀರ್ಮಾನಿಸಲಾಗಿರುತ್ತದೆ. ಪ್ರಸಕ್ತ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ಏಳನೇ ವೇತನ ಆಯೋಗದ ಶಿಫಾರಸಿನನ್ವಯ ತಮ್ಮ ಮೂಲವೇತನದ ಶೇ 17ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಆದಾಯ ತೆರಿಗೆ ಪರಿಗಣನೆಯಲ್ಲಿ ವೇತನದ ಜೊತೆಗೆ ತುಟ್ಟಿಭತ್ಯೆಯನ್ನೂ ಸೇರಿಸಬೇಕಾಗುತ್ತದೆ.
ಬೆಲೆ ಏರಿಕೆ ತಡೆಯಲು ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಹಣದುಬ್ಬರಕ್ಕೆ ಅನುಗುಣವಾಗಿ ಗ್ರಾಹಕ ಬೆಲೆ ಸೂಚ್ಯಂಕ ಸಾಮಾನ್ಯವಾಗಿ ಏರುಗತಿಯಲ್ಲಿಯೇ ಇರುತ್ತದೆ. ಹಾಗಾಗಿ ತುಟ್ಟಿಭತ್ಯೆ ಮೊತ್ತವೂ ಏರುಗತಿಯಲ್ಲಿರುತ್ತದೆ. ಬೆಲೆ ಸೂಚ್ಯಂಕದಲ್ಲಿ ಇಳಿಕೆಯಾದಲ್ಲಿ ತುಟ್ಟಿಭತ್ಯೆ ಪ್ರಮಾಣವೂ ಇಳಿದು ಒಟ್ಟು ಮಾಸಿಕ ವೇತನವೂ ಕಡಿಮೆಯಾಗುತ್ತದೆ. ಹೀಗಾಗುವುದು ಬಹಳ ಅಪರೂಪ.
ತುಟ್ಟಿಭತ್ಯೆಯೇ ಇಲ್ಲದಿದ್ದರೆ
ಒಂದುವೇಳೆ ತುಟ್ಟಿಭತ್ಯೆಯ ಪರಿಕಲ್ಪನೆಯೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ. ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ವೇತನ ಮತ್ತು ಪಿಂಚಣಿ ಪರಿಷ್ಕರಣೆಯಾಗುತ್ತದೆ. ಒಂದು ವೇಳೆ ತುಟ್ಟಿಭತ್ಯೆ ಇಲ್ಲದಿದ್ದಲ್ಲಿ ಮುಂದಿನ ವೇತನ ಪರಿಷ್ಕರಣೆಯವರೆಗೆ ಹತ್ತು ವರ್ಷಗಳ ಕಾಲ ವಾರ್ಷಿಕ ವೇತನ ಬಡ್ತಿ ಹೊರತಾಗಿ ಸಂಬಳ ಅಥವಾ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ. ಜೀವನಾವಶ್ಯಕ ಸಾಮಗ್ರಿಗಳ ಬೆಲೆಗಳು ಹತ್ತು ವರ್ಷಕಾಲ ಸಮಸ್ಥಿತಿಯಲ್ಲಿರದೆ ಕನಿಷ್ಟ ಎರಡು ಮೂರು ಪಟ್ಟು ಹೆಚ್ಚಳವಾಗುವುದು ಸಹಜ. ಹೀಗಿರುವಾಗ ಓರ್ವ ವ್ಯಕ್ತಿಯು ಹತ್ತು ವರ್ಷ ಕಾಲ ಪ್ರತಿ ತಿಂಗಳೂ ಒಂದೇ ಮೊತ್ತದ ಸಂಬಳ ಅಥವಾ ಪಿಂಚಣಿ ಪಡೆದಲ್ಲಿ ಅದು ಹತ್ತೇ ದಿನಗಳಲ್ಲಿ ಖಾಲಿಯಾಗಿ ಉಳಿದ ಇಪ್ಪತ್ತು ದಿನಗಳನ್ನು ದುಡ್ಡೇ ಇಲ್ಲದೆ ಕಳೆಯುವ ಅಪಾಯವಿರುತ್ತದೆ. ನೌಕರನ ಕೊಳ್ಳುವ ಶಕ್ತಿ ಕಡಿಮೆಯಾಗುವುದರಿಂದ ದೇಶದಲ್ಲಿ ಹಣದ ಚಲಾವಣೆಯೂ ಕಡಿಮೆಯಾಗಿ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಸಂಬಳದಾರನು ಹಳ್ಳಿಯಿಂದ ಮಹಾನಗರಕ್ಕೆ ವರ್ಗಾವಣೆಯಾದಲ್ಲಿ ಆತನ ಜೀವನ ನಿರ್ವಹಣೆ ಇನ್ನಷ್ಟು ಆತಂಕಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನಾಧರಿಸಿ ಕಾಲಕಾಲಕ್ಕೆ ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗುತ್ತಿದೆ.
ಈ ಹಿಂದೆ ಯುದ್ಧ ಮುಂತಾದ ಸಂದರ್ಭಗಳಲ್ಲಿ ಸರ್ಕಾರದ ಆರ್ಥಿಕ ಸಂಪನ್ಮೂಲದಲ್ಲಿ ಕೊರತೆಯುಂಟಾದಾಗ ಆದಾಯ ತೆರಿಗೆಗೊಳಪಡುವ ಉದ್ಯೋಗಸ್ಥರು ತಮ್ಮ ವೇತನದ ಸ್ವಲ್ಪ ಭಾಗವನ್ನು ಕಡ್ಡಾಯ ಠೇವಣಿ ಯೋಜನೆಯಲ್ಲಿ ತೊಡಗಿಸಬೇಕೆಂದು ಆದೇಶಿಸಲಾಗಿತ್ತು. ನಿಗದಿತ ಅವಧಿಯ ನಂತರ ಠೇವಣಿ ಮೊತ್ತವನ್ನು ಬಡ್ಡಿಸಹಿತ ಮರಳಿ ಪಡೆಯಲು ಅವಕಾಶವಿತ್ತು. ಆದರೆ ಈ ಬಾರಿ ಸರ್ಕಾರಿ ನೌಕರರ ಆದಾಯ ಪರಿಗಣಿಸದೆ ಎಲ್ಲ ವರ್ಗದ ನೌಕರರ ತುಟ್ಟಿಭತ್ಯೆ ಪಾವತಿಯನ್ನು ಹದಿನೆಂಟು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಬೆಲೆ ಸೂಚ್ಯಂಕದಲ್ಲಿ ಏರಿಕೆಯಾದಲ್ಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಅದು ಭರ್ತಿಯಾಗಲಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.