ADVERTISEMENT

ವೈಯಕ್ತಿಕ ಹಣಕಾಸಿನ ಪಂಚ ಪಾಂಡವರು

ನರಸಿಂಹ ಬಿ
Published 29 ಮಾರ್ಚ್ 2021, 19:30 IST
Last Updated 29 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಮ್ಮಲ್ಲಿ ಹೆಚ್ಚಿನವರಿಗೆ ಸ್ವಂತ ಮನೆ ಮಾಡಬೇಕು, ಸೈಟ್ ಖರೀದಿಸಬೇಕು, ಚಿನ್ನಾಭರಣ ಬೇಕು ಮುಂತಾದ ದುಬಾರಿ ಹಾಗೂ ದೀರ್ಘಕಾಲೀನ ಗುರಿಗಳು ಇರುತ್ತವೆ. ಇವೆಲ್ಲ ನಮ್ಮ ಜೀವನದ ಮುಖ್ಯ ಗುರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಇವುಗಳನ್ನು ಈಡೇರಿಸಿಕೊಳ್ಳುವಲ್ಲಿ ಸಾಮಾನ್ಯವಾಗಿ ನಾವು ಇಡೀ ಜೀವನ ಸವೆಸಿ ಆಗಿರುತ್ತದೆ. ಅಂದಹಾಗೆ, ಇವು ನಮ್ಮ ಮೊದಲ ಆದ್ಯತೆಗಳಾಗಬೇಕೋ ಅಥವಾ ಬೇರೆ ಯಾವುದಾದರೂ ಮಧ್ಯಂತರ ಗುರಿಗಳನ್ನು ಹೊಂದುವುದು ಉತ್ತಮವೋ?

ಜೀವನವು ಅನಿಶ್ಚಿತತೆಗಳ ಆಗರ ಎಂಬುದು ಗೊತ್ತಿದ್ದರೂ ನಾವು ಹತ್ತು ಹಲವು ಆಸೆಗಳನ್ನು ಬೆಳೆಸಿಕೊಳ್ಳುತ್ತೇವೆ. ಈ ಆಸೆಗಳೇ ನಮ್ಮನ್ನು ಒಳ್ಳೆಯ ಕೆಲಸ ಮಾಡಲು ಉತ್ತೇಜಿಸುತ್ತವೆ ಕೂಡ. ಈ ಆಸೆಗಳನ್ನು ಹೊಂದುವುದರ ಜೊತೆಗೆ ಸ್ವಲ್ಪ ಪ್ರಾಯೋಗಿಕವಾಗಿ ವಿಚಾರಮಾಡಿ, ಅನಿಶ್ಚಿತತೆಗಳನ್ನು ತರ್ಕಬದ್ಧವಾಗಿ ನಿಭಾಯಿಸಲು ಯೋಜನೆ ರೂಪಿಸುವುದು ಜಾಣ ನಡೆ.

ಸಾಮಾನ್ಯವಾಗಿ ಎದುರಾಗುವ ಐದು ಅನಿಶ್ಚಿತ ಸಂದರ್ಭಗಳು ಹಾಗೂ ಅವನ್ನು ಎದುರಿಸಲು ಯಾವ ಯೋಜನೆ ಹೊಂದಿರಬೇಕು ಎನ್ನುವುದರ ಬಗ್ಗೆ ಗಮನಹರಿಸೋಣ.‌

ADVERTISEMENT

1. ಸಾವು ಹಾಗೂ ಅವಧಿ ವಿಮೆ: ಮನೆಯ ಯಜಮಾನ ಕಷ್ಟಪಟ್ಟು ದುಡಿಯುವುದು ಹಾಗೂ ಉಳಿತಾಯ ಮಾಡಿ, ಹೂಡಿಕೆ ಮಾಡುವುದು ತಾನು ಹಾಗೂ ತನ್ನನ್ನು ನಂಬಿದವರು ಸುಖವಾಗಿ, ನೆಮ್ಮದಿಯಿಂದ ಇರಲಿ ಎಂದು. ಆದರೆ ಮನೆ ಯಜಮಾನ ಸಾವನ್ನಪ್ಪಿದರೆ ಅದರಿಂದ ಆಗುವ ಅನಾಹುತ ವರ್ಣಿಸಲು ಅಸಾಧ್ಯ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮನೆಯವರನ್ನು ಕಾಪಾಡುವುದು ಆರ್ಥಿಕ ಸುಭದ್ರತೆ. ಈ ಆರ್ಥಿಕ ಸುಭದ್ರತೆಯನ್ನು ತಂದುಕೊಡುವುದೇ ಟರ್ಮ್ ಇನ್ಸುರನ್ಸ್ ಅರ್ಥಾತ್ ಅವಧಿ ವಿಮೆ. ಜವಾಬ್ದಾರಿಯುತ ವ್ಯಕ್ತಿಗಳೆಲ್ಲ ಹೊಂದಿರಲೇಬೇಕಾದ ಹಣಕಾಸಿನ ಉತ್ಪನ್ನ ಇದು.

2. ಆರೋಗ್ಯ ಹಾಗೂ ಆರೋಗ್ಯ ವಿಮೆ: ಬದಲಾದ ಜೀವನ ಶೈಲಿ, ಕಲುಷಿತ ವಾತಾವರಣ ಮತ್ತು ಆಹಾರ ಮುಂತಾದ ಕಾರಣಗಳಿಂದ ಆರೋಗ್ಯ ಎಂಬುದು ಈಚಿನ ವರ್ಷಗಳಲ್ಲಿ ತುಸು ದುಬಾರಿ ಆಗಿದೆ. ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರಿದಾಗ ಜನಸಾಮಾನ್ಯರಿಗೆ ಎದುರಾಗುವ ಆರ್ಥಿಕ ಆಘಾತ ಅಷ್ಟಿಷ್ಟಲ್ಲ. ಜೀವಮಾನವೆಲ್ಲ ದುಡಿದು ಕೂಡಿಟ್ಟ ಹಣ ಮಂಜಿನಂತೆ ಕರಗಿ, ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಕೋವಿಡ್‌ಗೆ ತುತ್ತಾಗಿ, ಆರೋಗ್ಯ ವಿಮೆ ಇಲ್ಲದೆ, ಆಸ್ಪತ್ರೆ ಖರ್ಚು ನಿಭಾಯಿಸುವಲ್ಲಿ ಹಣ ಕಳೆದುಕೊಂಡ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಪರಿಸ್ಥಿತಿಗಳಲ್ಲಿ ನಮ್ಮ ಕೈ ಹಿಡಿಯುವುದು ಆರೋಗ್ಯ ವಿಮೆ.

3. ದುರ್ಘಟನೆ ಹಾಗೂ ವೈಯಕ್ತಿಕ ಅಪಘಾತ ಪಾಲಿಸಿ: ನಮ್ಮ ಯಾಂತ್ರಿಕ ಜೀವನದಲ್ಲಿ ವಾಹನಗಳು ಹಾಗೂ ಇತರ ಯಂತ್ರಗಳ ಮೇಲೆ ಅತಿಯಾದ ಅವಲಂಬನೆ ಅನಿವಾರ್ಯ ಆಗಿವೆ. ವಾಹನ, ಯಂತ್ರಗಳ ಜೊತೆ ಒಡನಾಡುವಾಗ ದುರ್ಘಟನೆಗಳು ತೀರಾ ಸಹಜ ಎನ್ನುವ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಇಂತಹ ದುರ್ಘಟನೆಗಳಿಗೆ ತುತ್ತಾಗಿ ಎಷ್ಟೋ ಜನ ತಿಂಗಳಾನುಗಟ್ಟಲೆ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿರಬಹುದು. ಇನ್ನು ಕೆಲವರು ಅಂಗಾಂಗಗಳನ್ನು ಕಳೆದುಕೊಂಡಿರಬಹುದು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕೈಹಿಡಿಯುವುದು ವೈಯಕ್ತಿಕ ಅಪಘಾತ ವಿಮೆ.

4. ನಿವೃತ್ತಿ ಯೋಜನೆ: ವಯಸ್ಸಾದಂತೆ ದೇಹದ ಶಕ್ತಿ ಕ್ಷೀಣಿಸುವುದು ಸಹಜ. 60 ವರ್ಷ ಅಥವಾ 70 ವರ್ಷ ಕಳೆದ ನಂತರ ದುಡಿಮೆ ಮಾಡಿ ಜೀವನ ಸಾಗಿಸುವುದು ಸುಲಭದ ಮಾತಲ್ಲ. ‘ಆತ್ಮನಿರ್ಭರ’ರಾಗಿ ಜೀವನ ಸಾಗಿಸಲು, ನಿವೃತ್ತಿಯ ನಂತರದ ಬದುಕಿನ ಬಗ್ಗೆ ಯೋಜನೆ ರೂಪಿಸುವುದು ಅತಿ ಅಗತ್ಯ. ಪಿ.ಎಫ್., ಪಿಪಿಎಫ್, ಮ್ಯೂಚುವಲ್ ಫಂಡ್, ಷೇರುಗಳು, ಎಫ್.ಡಿ. ಮುಂತಾದವುಗಳಲ್ಲಿ ನಿಗದಿತವಾಗಿ ಹೂಡಿಕೆ ಮಾಡಿ ನಮ್ಮ ನಿವೃತ್ತ ಜೀವನಕ್ಕೆ ಬೇಕಾಗುವ ಹಣವನ್ನು ಒಗ್ಗೂಡಿಸಿಕೊಳ್ಳಬೇಕು. ಇದು ಇಂದಿನ ಜೀವನ ಶೈಲಿಯ ದೃಷ್ಟಿಯಿಂದ ಅನಿವಾರ್ಯ. ನಿವೃತ್ತಿ ನಂತರದ ಬದುಕಿಗೆ ಅಗತ್ಯವಾದ ಯೋಜನೆಗಳ ಬಗ್ಗೆ ಕೆಲಸ ಶುರು ಮಾಡಿದ ದಿನದಿಂದಲೇ ಆಲೋಚಿಸಬೇಕು.

5. ಆಪದ್ಧನ: ಕೊರೊನಾ ಬಿಕ್ಕಟ್ಟು ನಮಗೆ ಅನಿಶ್ಚಿತತೆ ಎಂದರೆ ಏನು ಎಂಬುದರ ಪಾಠ ಕಲಿಸಿಕೊಟ್ಟಿದೆ. ಜನ ಕೆಲಸ ಕಳೆದುಕೊಂಡರು, ಆದಾಯದಲ್ಲಿ ಕಡಿತವನ್ನು ಅನುಭವಿಸಿದರು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಬಳಿ ಆರು ತಿಂಗಳು ಅಥವಾ ಒಂದು ವರ್ಷದ ಖರ್ಚುಗಳಿಗೆ ಸಾಕಾಗುವಷ್ಟು ಹಣ ಇದ್ದರೆ ಅದರಿಂದ ಸಿಗುವ ಆತ್ಮವಿಶ್ವಾಸ ಹಾಗೂ ಸಮಸ್ಯೆಯನ್ನು ಎದುರಿಸಲು ಸಿಗುವ ಧೈರ್ಯ ಅಗಾಧ.

ಸಾರಾಂಶ- ದೊಡ್ಡ ಆರ್ಥಿಕ ಗುರಿಗಳನ್ನು ಈಡೇರಿಸಿಕೊಳ್ಳುವ ಮುನ್ನ ಈ ಐದು ವಿಚಾರಗಳ ಬಗ್ಗೆ ಗಮನಹರಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ವೈಯಕ್ತಿಕ ಹಣಕಾಸಿನ ವಿಚಾರದಲ್ಲಿ ಆತ್ಮನಿರ್ಭರರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.