ADVERTISEMENT

ಫೇಸ್‌ಲೆಸ್‌: ಕರ ನಿರ್ಣಯದ ಹೊಸ ರೂಪ!

ಡಿಪಿಶ್ರೀ ದೈತೋಟ
Published 27 ಆಗಸ್ಟ್ 2020, 20:01 IST
Last Updated 27 ಆಗಸ್ಟ್ 2020, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆಯ ತೆರಿಗೆ ಪರಿಶೀಲನಾ ಪ್ರಕ್ರಿಯೆಯಲ್ಲಿ ‘ಅಮೌಖಿಕ ಕರ ನಿರ್ಣಯ ಪದ್ಧತಿ’ (faceless tax assessment) ಅನುಷ್ಠಾನಗೊಳಿಸುವ ಮಹತ್ವದ ನಿರ್ಣಯ ಕೈಗೊಂಡಿದೆ. ಇಲ್ಲಿ ತಂತ್ರಜ್ಞಾನದ ನೆರವನ್ನು ಶತ ಪ್ರತಿಶತ ಬಳಸಿಕೊಳ್ಳಲಾಗಿದೆ. ತೆರಿಗೆಗೆ ಸಂಬಧಿಸಿದ ಅಮೌಖಿಕ ಮೇಲ್ಮನವಿ ಸಲ್ಲಿಕೆ ಸೇವೆಗಳು ಸೆಪ್ಟೆಂಬರ್25ರಿಂದ ಲಭ್ಯವಿರುತ್ತವೆ. ಇದು ದೇಶದ ನೇರ ತೆರಿಗೆ ಪದ್ಧತಿಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರವುದಾಗಿ ನಿರೀಕ್ಷಿಸಲಾಗಿದೆ.

ಏನಿದು ಫೇಸ್‌ಲೆಸ್ ಕರ ನಿರ್ಣಯ?

ತೆರಿಗೆದಾರ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾ ರಿಗಳ ನಡುವಿನ ಮುಖಾಮುಖಿ ಸಂಪರ್ಕ ತೆಗೆದುಹಾಕುವ ಮೂಲ ಉದ್ದೇಶದಿಂದ ಬಂದಿರುವ ಯೋಜನೆಯೇ ‘ಫೇಸ್‌ಲೆಸ್ ಅಸೆಸ್‌ಮೆಂಟ್’. ತೆರಿಗೆ ನಿರ್ಣಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ತಾವಿರುವ ಸ್ಥಳದಿಂದಲೇ ಉತ್ತರಿಸುವ ಅಥವಾ ಮರುಪ್ರಶ್ನಿಸುವ ಅವಕಾಶಗಳನ್ನು ಇದು ತೆರಿಗೆದಾರನಿಗೂ - ತೆರಿಗೆ ಇಲಾಖೆಗೂ ಕೊಡುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ, ತೆರಿಗೆದಾರರ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಾಂಶದ ಮೂಲಕ ಕರ ನಿರ್ಣಯ ನಡೆಯುತ್ತದೆ. ತೆರಿಗೆ ಮೌಲ್ಯಮಾಪನ, ದಾಖಲೆಗಳ ಪರಿಶೀಲನೆ ಮತ್ತು ಅಂತಿಮಗೊಳಿಸುವಿಕೆಯು ವಿವಿಧ ನಗರಗಳಲ್ಲಿ ನಡೆಯುತ್ತವೆ. ಹೀಗಾಗಿ ಈಗಿರುವಂತೆ ಪ್ರಾದೇಶಿಕ ನ್ಯಾಯವ್ಯಾಪ್ತಿಗೆ ಮುಂದಿನ ದಿನಗಳಲ್ಲಿ ಮಹತ್ವ ಇರುವುದಿಲ್ಲ. ಪ್ರಕರಣಗಳನ್ನು ಯಾದೃಚ್ಛಿಕವಾಗಿ (random) ತಂತ್ರಾಂಶದ ನೆರವಿನೊಂದಿಗೆ ಹಂಚಲಾಗುತ್ತದೆ. ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡುವ ಅಥವಾ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ನೀಡುವ ರಿವಾಜು ಇನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ತೊಲಗಲಿದೆ.

ADVERTISEMENT

ಬದಲಾವಣೆಗಳೇನೇನು?

‘ಇತ್ತೀಚಿನ ಕೆಲವು ವರ್ಷಗಳಿಂದ ‘ಇ-ಅಸೆಸ್‌ಮೆಂಟ್’ ಇರಲಿಲ್ಲವೆ, ಇದರಲ್ಲೇನಿದೆ ಹೊಸದು’ ಎಂಬುದು ಅನೇಕರ ಪ್ರಶ್ನೆಯಾಗಿರಬಹುದು. ಆದರೆ ಅದು ಕಾರ್ಯ ನಿರ್ವಹಿಸುತ್ತಿದ್ದ ರೀತಿ ಹಾಗೂ ಅದರ ವ್ಯಾಪ್ತಿ-ಸ್ವರೂಪ ತುಂಬಾ ಸಂಕುಚಿತವಾದುದು. ಈ ಹಿಂದೆ ಯಾವುದೇ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ಆನ್‌ಲೈನ್‌ನಲ್ಲೇ ನೋಟಿಸ್ ಜಾರಿ ಮಾಡಿದ್ದರೂ, ಅದಕ್ಕೆ ಸಂಬಂಧಿಸಿದ ಪ್ರಕರಣ ಇತ್ಯರ್ಥಗೊಳಿಸಲು ತೆರಿಗೆದಾರರ ವಿಳಾಸ ಇರುವ ವ್ಯಾಪ್ತಿಯ ಆದಾಯ ತೆರಿಗೆ ಕಚೇರಿಗೆ ಆನ್ಲೈನ್‍ ಮೂಲಕ ಅಥವಾ ಒಂದು ಹಂತದಿಂದ ಖುದ್ದು ಭೇಟಿಯಾಗಿ ಪರಿಹರಿಸಿಕೊಳ್ಳಬೇಕಾಗಿತ್ತು. ದಾಖಲೆ ಸಲ್ಲಿಸುವ, ನೋಟಿಸ್ ಇತ್ಯಾದಿಗಳನ್ನು ನೀಡುವ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆದರೂ ನಿರ್ಣಾಯಕ ತೀರ್ಮಾನದ ಹಂತದಲ್ಲಿ ತೆರಿಗೆದಾರರು ಅಥವಾ ತೆರಿಗೆ ಇಲಾಖೆಯ ಅಧಿಕಾರಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾಧ್ಯತೆಗಳಿದ್ದವು. ಇದಕ್ಕೆ ಪ್ರಮುಖ ಕಾರಣ, ಕಳೆದ ಅರವತ್ತು ವರ್ಷಗಳಿಂದ ಪ್ರತಿ ತೆರಿಗೆದಾರನನ್ನು ಆತನ ವಿಳಾಸವಿರುವ ಸ್ಥಳೀಯ ಭೌಗೋಳಿಕ ನ್ಯಾಯ ವ್ಯಾಪ್ತಿಗೆ ಒಳಪಡಿಸಿದುದು.

ಉದಾಹರಣೆಗೆ, ನಿಮ್ಮ ರಿಟರ್ನ್ಸ್‌ನಲ್ಲಿ ಬೆಂಗಳೂರಿನ ವಿಳಾಸವಿದ್ದರೆ, ನಿಮ್ಮ ತೆರಿಗೆ ನಿರ್ಣಯ ಪ್ರಕ್ರಿಯೆಗಳು ಬೆಂಗಳೂರಿನ ನಿರ್ದಿಷ್ಟ ಆದಾಯ ತೆರಿಗೆ ಕಚೇರಿಯಲ್ಲೇ ವರ್ಷಾನುಗಟ್ಟಲೆ ಮುಂದುವರಿಯುತ್ತಿದ್ದವು. ಆದರೆ, ಇನ್ನು ಮುಂದೆ ವಿಳಾಸ ಯಾವುದಿದ್ದರೂ ನಿರ್ದಿಷ್ಟ ತೆರಿಗೆದಾರನಿಗೆ ನಿರ್ದಿಷ್ಟ ಆದಾಯ ತೆರಿಗೆ ಕಚೇರಿಯ ವ್ಯಾಪ್ತಿ ಎಂಬ ಪೂರ್ವನಿಗದಿತ ಹಂಚಿಕೆ ಇರುವುದಿಲ್ಲ. ಆದು ‘ಬದಲಾಗುತ್ತಿರುವ ನ್ಯಾಯವ್ಯಾಪ್ತಿ’ಗೆ ಒಳಪಡಲಿದೆ. ಒಂದು ವೇಳೆ ನಿಮ್ಮ ದಾಖಲೆ ಆಯ್ಕೆಯಾಯಿತೆಂದಿಟ್ಟುಕೊಳ್ಳಿ,ಅಧಿಕಾರಿಗಳ ಲಭ್ಯತೆಯ ಆಧಾರದ ಮೇಲೆ ಪ್ರತಿ ವರ್ಷ ದೇಶದ ಯಾವುದೋ ಒಂದು ಕಡೆಯಿಂದ ನಿಮ್ಮ ತೆರಿಗೆ ದಾಖಲೆಗಳನ್ನು ಪರಿಶೀಲನೆಗೊಳಪಡಿಸಬಹುದು. ಇದರಿಂದ ಜನಸಂಪರ್ಕಕ್ಕೆ ಕಡಿವಾಣ ಬಿದ್ದಂತಾಗಿ-ಪಾರದರ್ಶಕತೆಗೆ ಮಹತ್ವ ಬಂದಂತಾಗುತ್ತದೆ.

ಪ್ರಯೋಜನಗಳು

ಈ ಯೋಜನೆಯಡಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ, ತೆರಿಗೆ ಪಾವತಿದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುವ ‘ತೆರಿಗೆದಾರರ ಸನ್ನದು’ ಅಳವಡಿಸಿಕೊಳ್ಳಲಾಗಿದೆ.

ಸರ್ಕಾರಕ್ಕೇನಿದೆ ಲಾಭ?

1. ದೇಶದ ಯಾವುದೇ ಮೂಲೆಯ ಉತ್ತಮ ಹಾಗೂ ದಕ್ಷ ಅಧಿಕಾರಿಗಳ ಅನುಭವ ಬಳಸಿ ತೆರಿಗೆ ತಪಾಸಣೆ ಮಾಡಿಸಬಹುದು.

2. ತಂತ್ರಜ್ಞಾನದ ನೆರವಿನೊಂದಿಗೆ ಪಾರದರ್ಶಕ ತೆರಿಗೆ ವ್ಯವಸ್ಥೆ ತರುವ ಸರ್ಕಾರದ ಪ್ರತಿಪಾದನೆಯನ್ನು ಇನ್ನು ಮುಂದೆ ಕಾರ್ಯರೂಪದಲ್ಲಿ ಕಾಣಬಹುದು. ಇದಕ್ಕಾಗಿಯೇ ವಿಕೇಂದ್ರೀಕೃತ ತೆರಿಗೆ ತಪಾಸಣಾ ಪದ್ಧತಿ ಜಾರಿಗೊಳಿಸುತ್ತಿರುವುದು. ಇದರಿಂದ ತೆರಿಗೆದಾರರ ಹಾಗೂ ತೆರಿಗೆ ಅಧಿಕಾರಿಗಳ ನಡುವಿನ ಬಂಧ ಕಡಿತಗೊಂಡು ವೈಯಕ್ತಿಕ ಆಮಿಷಗಳಿಗೆ ಅವಕಾಶ ಇರುವುದಿಲ್ಲ. ಮಾತ್ರವಲ್ಲ, ತನ್ನ ವಿವರಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಯ ಮಾಹಿತಿ ತೆರಿಗೆದಾರನಿಗೆ ಕೂಡ ಗೊತ್ತಾಗುವುದಿಲ್ಲ.

3. ಯಾವುದೇ ಭೌಗೋಳಿಕ ವಲಯದ ಬಾಧ್ಯತೆಯಿಂದ ಹೊರತಾದ ತೆರಿಗೆ ತಪಾಸಣೆ ನಡೆಯುವುದರಿಂದ, ವಿವಿಧ ತಂಡಗಳಿಂದ ಪ್ರತ್ಯೇಕ ಪರಿಶೀಲನೆಗೊಳಪಟ್ಟ ನಂತರ ನೀಡುವ ತೆರಿಗೆ ತೀರ್ಮಾನ ವ್ಯವಸ್ಥೆ ಇದು. ಹಾಗಾಗಿಯೇ ಇದು ಅತ್ಯಂತ ನಿಖರ ತೆರಿಗೆ ನಿರ್ಣಯವೂ ಆಗಿರುತ್ತದೆ.

4. ದೇಶದ ಎಲ್ಲ ಅಧಿಕಾರಿಗಳನ್ನು ಸಮರ್ಪಕವಾಗಿ ಸೇವೆಯಲ್ಲಿ ಬಳಸಿಕೊಳ್ಳುವ ಅವಕಾಶ ತೆರಿಗೆ ಇಲಾಖೆಗೆ ಸಿಗಲಿದೆ.

5. ಅಧಿಕಾರಿಗಳ ವೈಯಕ್ತಿಕ ಸಮಸ್ಯೆಗಳು, ದಿರ್ಘಾವಧಿ ರಜೆಗಳು, ಕಚೇರಿ ಸಮಯದಲ್ಲಿ ಅಧಿಕಾರಿಗಳು ಅಲಭ್ಯ ಇರುವ ಸನ್ನಿವೇಶದಿಂದ ತೆರಿಗೆದಾರರಿಗಾಗುತ್ತಿದ್ದ ಸಮಸ್ಯೆಗೆ ಪರಿಹಾರ ಕೊಟ್ಟಂತಾಗುತ್ತದೆ.

ಯಾವುದೆಲ್ಲವನ್ನು ಹೊರಗಿಡಲಾಗಿದೆ?

ಫೇಸ್‌ಲೆಸ್ ತೆರಿಗೆ ನಿರ್ಣಯವನ್ನು ಎಲ್ಲ ರೀತಿಯ ತೆರಿಗೆ ಪ್ರಕ್ರಿಯೆಗಳಿಗೆ ಅನ್ವಯಿಸಲಾಗುವುದಿಲ್ಲ. ಗಂಭೀರ ತೆರಿಗೆ ವಂಚನೆಯಂತಹ ಪ್ರಕರಣಗಲ್ಲಿ, ತೆರಿಗೆದಾರರ ಆಸ್ತಿ-ಸ್ವತ್ತು ಜಪ್ತಿಗೊಳಪಟ್ಟ ಸಂದರ್ಭಗಳಲ್ಲಿ, ಅಂತರರಾಷ್ಟ್ರೀಯ ತೆರಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ, ಕಪ್ಪುಹಣ ಕಾಯ್ದೆ ಮತ್ತು ಬೇನಾಮಿ ಆಸ್ತಿಗೆ ಸಂಬಂಧಿಸಿದ ವಿಚಾರಣೆ ಫೇಸ್‌ಲೆಸ್ ತೆರಿಗೆ ನಿರ್ಣಯದ ವ್ಯಾಪ್ತಿಗೆ ಬರುವುದಿಲ್ಲ.

ಕಾರ್ಯ ನಿರ್ವಹಣೆ ಹೇಗೆ?

1. ತೆರಿಗೆದಾರರ ಆಯ್ಕೆ ಪ್ರಕ್ರಿಯೆಯು ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ವ್ಯವಸ್ಥೆಯ ಮೂಲಕವಷ್ಟೇ ನಡೆಯುತ್ತದೆ.

2. ಆದಾಯ ತೆರಿಗೆ ಇಲಾಖೆ ನೀಡುವ ನೋಟಿಸ್‍ಗಳಿಗೆ ಒಂದು ಪ್ರತ್ಯೇಕವಾದ ಗುರುತಿನ ಸಂಖ್ಯೆಯನ್ನು ಕಂಪ್ಯೂಟರ್ ಮುಖಾಂತರ ನೀಡಲಾಗುತ್ತದೆ. ಇದರ ಹೊರತಾದ ಯಾವುದೇ ನೋಟಿಸ್‍ಗಳು ಅಸಿಂಧು ಎಂದೇ ತಿಳಿಯಬೇಕು. ನೋಟಿಸ್ ಯಾರಿಗೆಲ್ಲ ಜಾರಿಗೊಳಿಸಬೇಕೆನ್ನುವುದನ್ನು ಹಲವಾರು ಮಾನದಂಡಗಳನ್ನು ಪರಿಗಣಿಸಿ ನಿರ್ಧರಿಸಲಾಗುತ್ತದೆ.

3. ಭೌಗೋಳಿಕ ಚೌಕಟ್ಟು ಇಲ್ಲದೆ, ನಿಗದಿಪಡಿಸಿದ ತೆರಿಗೆ ಅಧಿಕಾರಿಗಳು ಯಾವುದೇ ಸ್ಥಳದಿಂದ ತೆರಿಗೆದಾರರ ರಿಟರ್ನ್ಸ್ ಪರಿಶೀಲಿಸಬಹುದು. ಈ ಹಂಚಿಕೆ ಪ್ರಕ್ರಿಯೆಯೂ ಕಂಪ್ಯೂಟರ್ ಮುಖಾಂತರವೇ ನಡೆಯುತ್ತದೆ.

4. ನೋಟಿಸ್‍ಗೆ ಸಂಬಂಧಿಸಿದ ಎಲ್ಲ ಪರಿಶೀಲನೆಗಳನ್ನು ನಿಗದಿಪಡಿಸಿದ ತೆರಿಗೆ ಅಧಿಕಾರಿಗಳ ತಂಡ ನಡೆಸುತ್ತದೆ. ಈ ರೀತಿ ಒಂದು ತಂಡ ತಯಾರಿಸಿದ ಕರಡು ನಿರ್ಣಯಗಳನ್ನು ದೇಶದ ಇನ್ನೊಂದು ನಗರದ ಉನ್ನತ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಪರಿಶೀಲಿಸುತ್ತದೆ. ಕೊನೆಯದಾಗಿ ಇನ್ಯಾವುದೋ ನಗರದ ತೆರಿಗೆ ಅಧಿಕಾರಿಗಳ ತಂಡ ಅಂತಿಮ ನಿರ್ಣಯವನ್ನು ತೆರಿಗೆದಾರರಿಗೆ ರವಾನಿಸುತ್ತದೆ.

5. ಒಟ್ಟು ತೆರಿಗೆ ಪರಿಶೀಲನಾ ಪ್ರಕ್ರಿಯೆಯನ್ನು ರಾಷ್ಟ್ರೀಯ ಇ-ಮೌಲ್ಯಮಾಪನ ಕೇಂದ್ರ ನಿರ್ವಹಿಸುತ್ತದೆ. ಇದರ ಅಡಿ ಪ್ರಾದೇಶಿಕ ಇ-ಮೌಲ್ಯಮಾಪನ ಕೇಂದ್ರಗಳಿರುತ್ತವೆ. ವಿವಿಧ ಹಂತಗಳಲ್ಲಿ ತೆರಿಗೆ ತಪಾಸಣಾ ಘಟಕ, ಮೌಲ್ಯಮಾಪನಾ ಘಟಕ, ವಿಮರ್ಶಾ ಘಟಕ, ಪರಿಶೀಲನಾ ಘಟಕಗಳು ಕಾರ್ಯ ನಿರ್ವಹಿಸುತ್ತವೆ ಹಾಗೂ ಮಾಹಿತಿಯ ರವಾನೆಯಲ್ಲಿ ಸಹಕರಿಸುತ್ತವೆ.

6. ಕೆಲವು ಸಂದರ್ಭಗಳಲ್ಲಿ ತೆರಿಗೆದಾರನಿಗೆ ಕರಡು ನಿರ್ಣಯಗಳಿಗೆ ಉತ್ತರಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಇಂತಹ ಸಂದರ್ಭದಲ್ಲಿ, ವಿಡಿಯೊ ಕಾನ್ಪರೆನ್ಸಿಂಗ್ ಮೂಲಕ ಅಗತ್ಯವಿರುವ ಮಾಹಿತಿಯನ್ನು ಇಲಾಖೆಗೆ ನೀಡಬಹುದು. ಇದಕ್ಕಾಗಿ ತೆರಿಗೆ ಇಲಾಖೆ ಪ್ರತ್ಯೇಕವಾದ ತಂತ್ರಾಂಶವನ್ನು ನಿಗದಿಪಡಿಸಲಿದೆ.

ಸರ್ಕಾರಕ್ಕೆ ಬರುವ ಯಾವುದೇ ತೆರಿಗೆ ಆದಾಯ ಒಂದುವೇಳೆ ಮಿತವಾಗಿದ್ದರೂ, ಇರುವ ವ್ಯವಸ್ಥೆಯನ್ನು ಪಾರದರ್ಶಕ ಹಾಗೂ ವಿಶ್ವಸನೀಯವಾಗಿ ಮುನ್ನಡೆಸಿದಾಗ ಅದರ ನಿಜವಾದ ಫಲ ದುಪ್ಪಟ್ಟಾಗುತ್ತದೆ. ಕಳೆದ ಕೆಲವು ದಶಕಗಳ ಮಂದಗತಿಯ ನಿರ್ಣಯಗಳು, ಅಧಿಕಾರಶಾಹಿ ಪ್ರವೃತ್ತಿ ಇತ್ಯಾದಿಗಳು ಪ್ರಮುಖ ತೆರಿಗೆ ಇಲಾಖೆಗಳ ದಕ್ಷತೆಯನ್ನು ಬಲಿ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇದೇ ತೆರನಾದ ಬದಲಾವಣೆಗಳು ದೇಶದ ಎಲ್ಲ ತೆರಿಗೆ ಇಲಾಖೆಗಳಲ್ಲಿ ಬರಬೇಕು. ಆಗಲೇ ನಾವು ಕೊಟ್ಟ ತೆರಿಗೆ ದೇಶದ ಪ್ರಗತಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.