ಗೃಹ ಸಾಲದ ಕುರಿತು ಮಾತು ಬಂದಾಗಲೆಲ್ಲ, ‘ಸಾಲದ ಹೊರೆ ಇಳಿಸುವುದು ಹೇಗೆ? ಬ್ಯಾಂಕಿನವರು ಬಡ್ಡಿ ಜಾಸ್ತಿ ಮಾಡಿದ್ದಾರೆ, ಏನು ಮಾಡುವುದು?’ ಎಂಬ ಪ್ರಶ್ನೆಗಳು ಬಹುತೇಕ ಗ್ರಾಹಕರಲ್ಲಿ ಮೂಡುತ್ತವೆ. ಈ ಎರಡೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.
ಅವಧಿಗೆ ಮುನ್ನ ಮರುಪಾವತಿ ಮಾಡಿ, ಸಾಲದ ಹೊರೆ ಇಳಿಸಿ: ಅವಧಿಗೆ ಮುನ್ನವೇ ಸಾಲವನ್ನು ಮರುಪಾವತಿ ಮಾಡುವುದರಿಂದ ನಿಜಕ್ಕೂ ಲಾಭವಿದೆಯೇ ಎಂದು ಅನೇಕರು ಲೆಕ್ಕಾಚಾರ ಮಾಡುತ್ತಿರುತ್ತಾರೆ. ವಾಸ್ತವದಲ್ಲಿ, ಹೆಚ್ಚುವರಿ ಹಣ ಸಿಕ್ಕಾಗಲೆಲ್ಲ ಗೃಹ ಸಾಲದ ಅಸಲು ಮೊತ್ತವನ್ನು ಪಾವತಿ ಮಾಡುತ್ತಾ ಬಂದರೆ ಬಡ್ಡಿ ಹೊರೆ ತಗ್ಗಿಸಿಕೊಳ್ಳಲು ಸಾಧ್ಯವಿದೆ. ನವೀನ್ (ಹೆಸರು ಬದಲಾಯಿಸಲಾಗಿದೆ) ಎನ್ನುವವರು ವರ್ಷದ ಹಿಂದೆ ಒಂದು ಬ್ಯಾಂಕಿನಿಂದಶೇ 8.45ರ ಬಡ್ಡಿ ದರದಲ್ಲಿ ₹ 35 ಲಕ್ಷ ಗೃಹ ಸಾಲ ಪಡೆದುಕೊಂಡಿದ್ದರು. 17 ವರ್ಷಗಳ ಅವಧಿಗೆ ಸಾಲ ಪಡೆದಿದ್ದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ₹ 32,384ನ್ನು ಇಎಂಐ ರೂಪದಲ್ಲಿ ಪಾವತಿ ಮಾಡುತ್ತಿದ್ದರು.
ವರ್ಷದ ಬಳಿಕ ನವೀನ್ ಅವರಿಗೆ ಎಲ್ಐಸಿ ಪಾಲಿಸಿಯೊಂದರಿಂದ ಸುಮಾರು ₹ 2.5 ಲಕ್ಷ ಸಿಕ್ಕಿತು. ಹಣ ಸಿಕ್ಕಿದ ತಕ್ಷಣ ಅವರು ಗೃಹ ಸಾಲದ ಒಂದಿಷ್ಟು ಭಾಗವನ್ನು ಮರುಪಾವತಿ ಮಾಡುವ ಬಗ್ಗೆ ಯೋಚಿಸಿದರು. ಬ್ಯಾಂಕಿನಲ್ಲಿ ವಿಚಾರಿಸಿದಾಗ ₹ 34,15,074 ಗೃಹ ಸಾಲ ಬಾಕಿ ಇರುವುದಾಗಿ ತಿಳಿದುಬಂತು. ಅಲ್ಲದೆ ಬ್ಯಾಂಕಿನ ಅಧಿಕಾರಿಗಳು, ‘ಇನ್ನು 193 ಕಂತುಗಳ ಪಾವತಿ (ಒಂದು ಕಂತಿನ ಇಎಂಐ ₹ 32,384 ) ಬಾಕಿ ಇದೆ. ₹ 2.5 ಲಕ್ಷ ಪಾವತಿಸಿದರೆ ಕಂತುಗಳ ಸಂಖ್ಯೆ 169ಕ್ಕೆ ಇಳಿಯುತ್ತದೆ’ ಎಂದು ತಿಳಿಸಿದರು.
ನವೀನ್ ಪ್ರತಿ ತಿಂಗಳು ₹ 32,384ರ ಇಎಂಐ ಆಧಾರದಲ್ಲೇ 17 ವರ್ಷ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದರೆ ಬಡ್ಡಿ ಹೊರೆ ಹೆಚ್ಚುವ ಜತೆಗೆ ಸಾಲ ಮರುಪಾವತಿ ಅವಧಿಯೂ ಹೆಚ್ಚಾಗುತ್ತಿತ್ತು. ನವೀನ್ ತಮಗೆ ಸಿಕ್ಕಿದ ₹ 2.5 ಲಕ್ಷವನ್ನು ಸಾಲ ಮರುಪಾವತಿಗೆ ಬಳಸಿದ್ದರಿಂದ ಮಾಸಿಕ ಕಂತುಗಳ ಸಂಖ್ಯೆ 193ರಿಂದ ಒಂದೇ ಬಾರಿ 169ಕ್ಕೆ ಬಂತು. ಅಂದರೆ ಸಾಲದ ಹೆಚ್ಚುವರಿ ಕಂತುಗಳನ್ನು ಅವಧಿಗೂ ಮುನ್ನವೇ ಪಾವತಿ ಮಾಡಿದ ಪರಿಣಾಮ ನವೀನ್‌ಗೆ ಬರೋಬ್ಬರಿ ₹ 5,27,216 ಲಕ್ಷ ಬಡ್ಡಿ ಉಳಿತಾಯವಾಯಿತು.
(ಸ್ಪಷ್ಟತೆಗೆ ಪಟ್ಟಿ ಗಮನಿಸಿ)
ಬಡ್ಡಿ ಹೆಚ್ಚಿಸಿದರೆ ಬಳಸಿ ವರ್ಗಾವಣೆ ಅಸ್ತ್ರ: ನೀವು ಗೃಹ ಸಾಲ ಪಡೆದಿರುವ ಬ್ಯಾಂಕಿನಲ್ಲಿ ಬಡ್ಡಿ ದರ ಹೆಚ್ಚಿದ್ದು, ಮತ್ತೊಂದು ಬ್ಯಾಂಕಿನಲ್ಲಿ ಬಡ್ಡಿ ದರ ಕಡಿಮೆ ಇದ್ದರೆ ಆ ಬ್ಯಾಂಕಿಗೆ ಒಂದಿಷ್ಟು ಶುಲ್ಕ ನೀಡುವ ಮೂಲಕ ನೀವು ಗೃಹ ಸಾಲವನ್ನು ವರ್ಗಾಯಿಸಬಹುದು. ಇದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ, ಹೋಂ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಎಂದು ಕರೆಯುತ್ತಾರೆ. ಖಾಸಗಿ ಬ್ಯಾಂಕಿನಲ್ಲಿನ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿಗೆ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿನ ಸಾಲವನ್ನು ಖಾಸಗಿ ಬ್ಯಾಂಕಿಗೆ ವರ್ಗಾಯಿಸುವುದು ಕೂಡ ಇದರಲ್ಲಿ ಸಾಧ್ಯವಿದೆ.
ಉದಾಹರಣೆ: ಒಬ್ಬ ವ್ಯಕ್ತಿ ಬ್ಯಾಂಕ್ ಒಂದರಿಂದ ₹ 40 ಲಕ್ಷ ಗೃಹ ಸಾಲ ಪಡೆದುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಬ್ಯಾಂಕ್ ಆತನಿಗೆ ಶೇಕಡ 9.8ರ ವಾರ್ಷಿಕ ಬಡ್ಡಿ ದರ ವಿಧಿಸಿದರೆ, 20 ವರ್ಷಗಳ ಕಾಲಾವಧಿಯ ಈ ಸಾಲದ ಮಾಸಿಕ ಕಂತು (ಇಎಂಐ) ₹ 38,072 ಆಗಿರುತ್ತದೆ. ಆದರೆ, ಮತ್ತೊಂದು ಬ್ಯಾಂಕ್ ಇಷ್ಟೇ ಮೊತ್ತದ ಸಾಲವನ್ನು ಶೇ 8.3ರ ಬಡ್ಡಿದರದಲ್ಲಿ ನೀಡಿದರೆ, ಮಾಸಿಕ ಕಂತು ₹ 34,208 ಆಗುತ್ತದೆ. ಅಂದರೆ ಈ ಲೆಕ್ಕಾಚಾರದಂತೆ ತಿಂಗಳಿಗೆ₹ 3,864 ಉಳಿತಾಯವಾಗುತ್ತದೆ. ಒಂದು ವರ್ಷಕ್ಕೆ ಬರೋಬ್ಬರಿ ₹ 46,368 ಬಡ್ಡಿ ಹಣ ಉಳಿತಾಯವಾಗುತ್ತದೆ.
ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡುವಾಗ ಸಾಕಷ್ಟು ಮಾಹಿತಿ ಕಲೆ ಹಾಕಬೇಕು. ಬಡ್ಡಿ ದರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಿದ್ದರೆ ಗೃಹ ಸಾಲ ವರ್ಗಾವಣೆ ಲಾಭದಾಯಕ ಆಗುವುದಿಲ್ಲ. ಇನ್ನು, ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸಿದ್ದರೆ ಮಾತ್ರ ಸಾಲ ವರ್ಗಾವಣೆ ಸಾಧ್ಯವಾಗುತ್ತದೆ.
(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)
ಬಡ್ಡಿದರ ಹೆಚ್ಚಳದ ಆತಂಕಕ್ಕೆ ಕುಸಿದ ಪೇಟೆ
ಸತತ ನಾಲ್ಕು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಜನವರಿ 21ರಂದು ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. 59,037 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 3.57ರಷ್ಟು ಕುಸಿದಿದೆ. 17,617 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 3.49ರಷ್ಟು ಇಳಿಕೆಯಾಗಿದೆ.
ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿ ದರ ಹೆಚ್ಚಳ ಮಾಡುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಷೇರುಪೇಟೆ ಸೂಚ್ಯಂಕಗಳು ಗಣನೀಯ ಕುಸಿತ ಕಂಡಿವೆ.
ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 12,643.61 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,804 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ವಲಯವಾರು ಪ್ರಗತಿಯಲ್ಲಿ, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 6.5ರಷ್ಟು, ಟೆಲಿಕಾಂ ಸೂಚ್ಯಂಕ ಶೇ 5.8ರಷ್ಟು, ಫಾರ್ಮಾ ಸೂಚ್ಯಂಕ ಶೇ 5.2ರಷ್ಟು ಕುಸಿದಿವೆ. ಬಿಎಸ್ಇ ಪವರ್ ಸೂಚ್ಯಂಕ ಶೇ 2.6ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 3.3ರಷ್ಟು ಕುಸಿದಿದ್ದು ಎಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫಿನ್‌ಸರ್ವ್, ಲಾರ್ಸನ್ ಆ್ಯಂಡ್ ಟ್ಯೂಬ್ರೋ ಇನ್ಫೊಟೆಕ್, ಡಿವೀಸ್ ಲ್ಯಾಬ್ಸ್, ಅಂಬುಜಾ ಸಿಮೆಂಟ್ ಇಳಿಕೆ ಕಂಡಿವೆ. ಅದಾನಿ ಗ್ರೀನ್ ಎನರ್ಜಿ, ಹೀರೊ ಮೋಟೊಕಾರ್ಪ್, ಪವರ್ ಗ್ರಿಡ್, ಅದಾನಿ ಟ್ರಾನ್ಸ್‌ಮಿಷನ್ ಕಂಪನಿಗಳು ಗಳಿಕೆ ದಾಖಲಿಸಿವೆ.
ಮುನ್ನೋಟ: ಈ ವಾರ ಎಕ್ಸಿಸ್ ಬ್ಯಾಂಕ್, ಸೆರಾ, ಬರ್ಗರ್ ಕಿಂಗ್, ಇಂಡಿಯಾ ಮಾರ್ಟ್, ಕ್ರಾಫ್ಟ್ಸ್‌ಮೆನ್, ಎಸ್‌ಬಿಐ ಕಾರ್ಡ್ಸ್ಆ್ಯಂ ಡ್ ಪೇಮೆಂಟ್ಸ್, ಸಿಪ್ಲಾ, ಫೆಡರಲ್ ಬ್ಯಾಂಕ್, ಮಾರುತಿ, ಪಿಡಿಲೈಟ್ ಇಂಡಸ್ಟ್ರೀಸ್, ಬಿಎಚ್‌ಇಎಲ್, ಕೆಇಐ ಇಂಡಸ್ಟ್ರೀಸ್, ಆರ್‌ಬಿಎಲ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಬಜೆಟ್ ಬೆಳವಣಿಗೆಗಳು ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.