ADVERTISEMENT

CIBIL Score–CIBIL Report ನಡುವಿನ ವ್ಯತ್ಯಾಸವೇನು? ಇಲ್ಲಿದೆ ಪೂರ್ಣ ಮಾಹಿತಿ...

ಪಿಟಿಐ
Published 7 ನವೆಂಬರ್ 2023, 11:35 IST
Last Updated 7 ನವೆಂಬರ್ 2023, 11:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕ್ರೆಡಿಟ್‌ ಕಾರ್ಡ್‌, ಮನೆ ಸಾಲ, ವಾಹನ ಸಾಲ ಹೀಗೆ ಆರ್ಥಿಕ ನೆರವು ನೀಡುವ ಯಾವುದೇ ಹಣಕಾಸು ಸಂಸ್ಥೆಯು ವ್ಯಕ್ತಿಯ ಸಾಲ ಭರಿಸುವ ಸಾಮರ್ಥ್ಯ ನೋಡುವುದು ಸಾಮಾನ್ಯ. ಹಾಗಿದ್ದರೆ ಸಿಬಿಲ್ ಸ್ಕೋರ್‌ ಅಥವಾ ಸಿಬಿಲ್ ವರದಿ... ಈ ಎರಡರಲ್ಲಿ ಯಾವುದನ್ನು ಪರಿಗಣಿಸಲಾಗುವುದು ಎಂಬ ಗೊಂದಲ ಇದ್ದೇ ಇದೆ.

ಸಿಬಿಲ್ ಜೊತೆಗೆ ಇರುವ ಈ ಎರಡು ಪದಗಳು ಸದಾ ನಮ್ಮಲ್ಲಿ ಗೊಂದಲ ಉಂಟು ಮಾಡುತ್ತವೆ. ಹಲವರು ಈ ಎರಡನ್ನೂ ಒಂದೊಕ್ಕೊಂದು ಪರಸ್ಪರ ತಪ್ಪಾಗಿ ಅರ್ಥೈಸಿಕೊಂಡ ಉದಾಹರಣೆಗಳೂ ಇವೆ. ಆದರೆ ವ್ಯಕ್ತಿಯ ಹಣಕಾಸಿನ ಪಯಣದಲ್ಲಿ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ವರದಿ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ.

ADVERTISEMENT

ಸಿಬಿಲ್ ಸ್ಕೋರ್:

ಸಾಲ ಮರುಪಾವತಿಯ ಸಾಂಖಿಕ ಪ್ರಾತಿನಿಧಿತ್ವವೇ ಸಿಬಿಲ್ ಸ್ಕೋರ್‌. ಇದು 300ರಿಂದ 900ರವರೆಗೂ ಇದ್ದು, ಸಾಲ ಪಡೆಯುವ ಸಾಮರ್ಥ್ಯವನ್ನು ತಿಳಿಸುತ್ತವೆ. ಸಾಲ ಪಡೆದ ಹಾಗೂ ಸಾಲ ಮರು ಪಾವತಿಸಿದ ಈ ಹಿಂದಿನ ವರದಿಗಳನ್ನು ಆಧರಿಸಿ ಈ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲಾ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎಂಬುದನ್ನು ಇದು ಪರಿಗಣಿಸಿ ಸಿಬಿಲ್ ಸ್ಕೋರ್‌ ದಾಖಲಾಗುತ್ತದೆ. ಸಾಲ ಕೊಡುವ ಹಣಕಾಸು ಸಂಸ್ಥೆಯು ಈ ಸಂಖ್ಯೆಯನ್ನೇ ಅವಲಂಬಿಸಿ ಸಾಲ ನೀಡುತ್ತದೆ.

ಅಂದರೆ, ವ್ಯಕ್ತಿಯ ಸಿಬಿಲ್ ಸ್ಕೋರ್‌ ಹೆಚ್ಚಿದ್ದಷ್ಟೂ, ಹಣಕಾಸು ಸಂಸ್ಥೆಗೆ ಸಾಲ ಮರಳಿ ಬರುವ ಚಿಂತೆ ಕಡಿಮೆ ಎಂದರ್ಥ. ಇಂಥವರು ಹಣಕಾಸು ಸಂಸ್ಥೆಗೆ ಅಚ್ಚುಮೆಚ್ಚು. ಸಿಬಿಲ್ ಸ್ಕೋರ್‌ ಉಚಿತವಾಗಿ ನೀಡುವ ಬಹಳಷ್ಟು ಅಂತರ್ಜಾಲ ತಾಣಗಳು ಇವೆ. ಇದರ ಮೂಲಕ ಸಿಬಿಲ್ ವರದಿಯನ್ನು ಪಡೆಯಲು ಸಾಧ್ಯ.

ಸಿಬಿಲ್ ರಿಪೋರ್ಟ್‌:

ಸಾಲ ಪಡೆದ ಹಾಗೂ ಅದನ್ನು ಮರು ಪಾವತಿಸಿದ ವಿವರವಾದ ವರದಿಯೇ ಸಿಬಿಲ್ ರಿಪೋರ್ಟ್‌. ಇದರಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಾಲ ಹಾಗೂ ಹಿಂದೆ ಪಡೆದು, ತೀರಿಸಿದ ಅಥವಾ ತೀರಿಸಲಾಗದ ಸಾಲ ಸೇರಿದಂತೆ ಎಲ್ಲಾ ವರದಿಗಳೂ ಇರಲಿವೆ. ಹೀಗಾಗಿ ಸಿಬಿಲ್ ವರದಿಯು ವ್ಯಕ್ತಿಯ ಸಾಲ ಪಡೆಯುವ ಕ್ರಮ, ಅದನ್ನು ತೀರಿಸಿದ ರೀತಿ ಕುರಿತ ಸಮಗ್ರ ವರದಿಯನ್ನು ಒಳಗೊಂಡಿರುತ್ತದೆ. ಇದರೊಂದಿಗೆ ವೈಯಕ್ತಿಕ ಮಾಹಿತಿಯಾದ ಹೆಸರು, ವಿಳಾಸ, ಪಾನ್‌ ವಿವರಗಳೂ ಇರಲಿವೆ.

ಸಿಬಿಲ್ ಸ್ಕೋರ್ ಎನ್ನುವುದು ಅ ತಕ್ಷಣಕ್ಕೆ ವ್ಯಕ್ತಿಯ ಸಾಲ ಮರುಪಾವತಿಯ ಸಾಮರ್ಥ್ಯ ನೋಡಲು ಪಡೆಯಬಹುದಾದ ಅಂಕಿಅಂಶ. ಆದರೆ ಸಾಲ ನೀಡುವ ಮೊದಲು ಹಣಕಾಸು ಸಂಸ್ಥೆಯೊಂದು ಅರ್ಜಿದಾರರ ಕುರಿತು ಸಂಪೂರ್ಣ ದಾಖಲಾತಿ ಪರಿಶೀಲಿಸುವ ಸಂದರ್ಭದಲ್ಲಿ ಸಿಬಿಲ್ ವರದಿಯನ್ನು ನೋಡುತ್ತದೆ. ಅದನ್ನು ಆಧರಿಸಿ ಸಾಲದ ಮೊತ್ತ ಹಾಗೂ ಮಿತಿ ನಿರ್ಧಾರವಾಗಲಿದೆ. 

ಹೀಗಾಗಿ ಆರ್ಥಿಕವಾಗಿ ಸದೃಢರಾಗಿರಬೇಕೆಂದರೆ ವ್ಯಕ್ತಿಯ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ವರದಿ ಎರಡೂ ಉತ್ತಮವಾಗಿರಬೇಕು. ಜತೆಗೆ ಸಿಬಿಲ್ ವರದಿ ಮೂಲಕ ನಮ್ಮ ಹಣಕಾಸಿನ ವ್ಯವಹಾರವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ. ಆ ಮೂಲಕ ಸಿಬಿಲ್ ಸ್ಕೋರ್‌ ಹೆಚ್ಚಿಸಿಕೊಳ್ಳಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.