ಚಿಕ್ಕಣ್ಣ, ಚಿಕ್ಕಮಗಳೂರು
l ಪ್ರಶ್ನೆ: ಸಹಕಾರಿ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಘಗಳಲ್ಲಿ ಅವಧಿ ಠೇವಣಿ ಇರಿಸಿದರೆ ಬಡ್ಡಿ ವರಮಾನದಲ್ಲಿ ತೆರಿಗೆ ಮುರಿಯುವುದಿಲ್ಲ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ. ಅಲ್ಲಿ ಇರಿಸಿದ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಭದ್ರತೆ ಇದೆಯೇ? ಇದ್ದರೆ ಎಷ್ಟು ಮೊತ್ತದ ತನಕ?
ಉತ್ತರ: ಸಹಕಾರಿ ಬ್ಯಾಂಕ್‌ಗಳಲ್ಲಿ ಬಹಳ ಹಿಂದೆ ಠೇವಣಿ ಮೇಲೆ ಎಷ್ಟೇ ಬಡ್ಡಿ ಬಂದರೂ ಮೂಲದಲ್ಲಿ ತೆರಿಗೆ ಮುರಿಯುತ್ತಿರಲಿಲ್ಲ. ಆದರೆ ಈಗ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಂತೆ ಇಲ್ಲಿಯೂ ತೆರಿಗೆ ಕಡಿತ ಮಾಡುತ್ತಾರೆ. ಈ ಕಾನೂನು ಸಹಕಾರಿ ಸಂಘಗಳಿಗೆ ಅನ್ವಯಿಸುವುದಿಲ್ಲ. ಇಲ್ಲಿ ಠೇವಣಿಯ ಮೇಲೆ ಎಷ್ಟೇ ಬಡ್ಡಿ ಬಂದರೂ ಮೂಲದಲ್ಲಿ ತೆರಿಗೆ (ಟಿಡಿಎಸ್) ಮುರಿಯುವುದಿಲ್ಲ. ಸಹಕಾರಿ ಬ್ಯಾಂಕ್‌ಗಳು ತಾವು ಸ್ವೀಕರಿಸಿದ ಠೇವಣಿಯ ಮೇಲೆ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದಲ್ಲಿ (DICGC) ವಿಮೆ ಮಾಡಿಸಿದ್ದಲ್ಲಿ, ಅಂತಹ ಸಹಕಾರಿ ಬ್ಯಾಂಕ್ ದಿವಾಳಿ ಆದರೆ ₹ 5 ಲಕ್ಷದವರೆಗೆ ‘ಡಿಐಸಿಜಿಸಿ’ನಲ್ಲಿ ಹಣ ವಾಪಸ್ ಪಡೆಯಬಹುದು. ಸಹಕಾರಿ ಸಂಘಗಳಿಗೆ ‘ಡಿಐಸಿಜಿಸಿ’ನಲ್ಲಿ ವಿಮೆ ಮಾಡಲು ಬರುವುದಿಲ್ಲ. ನೀವು ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಮುನ್ನ, ಆ ಬ್ಯಾಂಕ್ ತನ್ನ ಠೇವಣಿದಾರರ ಹೂಡಿಕೆಗೆ ವಿಮೆ ಮಾಡಿಸಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಗೋಪಾಲಕೃಷ್ಣ, ಮೂಡುಬಿದಿರೆ
l ಪ್ರಶ್ನೆ: ನನಗೆ ಮೂವರು ಮಕ್ಕಳು. ಎಲ್ಲರೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದುತ್ತಾರೆ. ಶಾಲಾ ಶುಲ್ಕ, ಪುಸ್ತಕ, ವಾಹನ ಶುಲ್ಕ ಹಾಗೂ ವಾರ್ಷಿಕ ಇತರ ಖರ್ಚುಗಳನ್ನು ಸೆಕ್ಷನ್ 80ಸಿ ಆಧಾರದ ಮೇಲೆ ಕಳೆದು ತೆರಿಗೆ ಸಲ್ಲಿಸಬಹುದೇ? ಕೆಲವರು, ಇಂಗ್ಲಿಷ್ ಮಾಧ್ಯಮ ಶಾಲೆಯ ಶುಲ್ಕಕ್ಕೆ ವಿನಾಯಿತಿ ಪಡೆಯುವಂತಿಲ್ಲ ಎನ್ನುತ್ತಾರೆ. ದಯಾಮಾಡಿ ತಿಳಿಸಿರಿ.
ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಇಬ್ಬರು ಮಕ್ಕಳ ಶಾಲಾ ಶುಲ್ಕ ಮಾತ್ರ ವಿನಾಯಿತಿಗೆ ಒಳಗಾಗುತ್ತದೆ. ಇಂಗ್ಲಿಷ್ ಅಥವಾ ಯಾವುದೇ ಮಾಧ್ಯಮದಲ್ಲಿ ಓದುತ್ತಿದ್ದರೂ ವಿನಾಯಿತಿ ಪಡೆಯಬಹುದು. 80ಸಿ ಅಡಿ ವಿನಾಯಿತಿ ಪಡೆಯಲು ಇರುವ ಗರಿಷ್ಠ ಮಿತಿ ₹ 1.50 ಲಕ್ಷ ಮಾತ್ರ. ಇಬ್ಬರು ಮಕ್ಕಳ ವಾರ್ಷಿಕ ಶಾಲಾ ಶುಲ್ಕ ₹ 1.50 ಲಕ್ಷದೊಳಗೆ ಇದ್ದಲ್ಲಿ ಉಳಿದ ಹಣ ಪಿಎಫ್, ಪಿಪಿಎಫ್ ಅಥವಾ 5 ವರ್ಷಗಳ ಬ್ಯಾಂಕ್–ಅಂಚೆ ಕಚೇರಿ ಠೇವಣಿಯಲ್ಲಿ ಇರಿಸಿ ವಿನಾಯಿತಿ ಪಡೆಯಬಹುದು. ಒಟ್ಟಿನಲ್ಲಿ ಇಬ್ಬರು ಮಕ್ಕಳ ಶಾಲಾ ಶುಲ್ಕ ಹೊರತುಪಡಿಸಿ, ಪುಸ್ತಕ–ವ್ಯಾನ್–ಸಮವಸ್ತ್ರ ಅಥವಾ ಇನ್ನಿತರ ಮಕ್ಕಳ ಖರ್ಚುಗಳು ವಿನಾಯಿತಿಗೆ ಒಳಗಾಗುವುದಿಲ್ಲ.
ರಾಮಚಂದ್ರಯ್ಯ, ಹೊಸಕೋಟೆ
l ಪ್ರಶ್ನೆ: ನನ್ನ ವಯಸ್ಸು 72 ವರ್ಷ. ನನ್ನ ಹೆಂಡತಿಯ ವಯಸ್ಸು 65 ವರ್ಷ. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಮಗೆ 30X40 ಅಳತೆಯ 4 ನಿವೇಶನ ಹಾಗೂ ಬಾಡಿಗೆ ಬರುವ ಮೂರು ಮನೆಗಳಿವೆ. ನಮ್ಮ ವಾಸಕ್ಕೆಂದು ಒಂದು ಮನೆ ಇದೆ. ನಮಗೆ ಪಿಂಚಣಿ ಅಥವಾ ಬೇರೆ ಆದಾಯ ಇಲ್ಲ. ಬಾಡಿಗೆಯಿಂದಲೇ ಜೀವನ. ಮಕ್ಕಳು ಮದುವೆಯಾಗಿ ಬೇರೆ ಬೇರೆ ಕಡೆ ಜೀವನ ನಡೆಸುತ್ತಿದ್ದಾರೆ. ಮನೆ ಮಾತ್ರ ಇಟ್ಟುಕೊಂಡು 4 ನಿವೇಶನ ಮಾರಾಟ ಮಾಡಬೇಕೆಂದಿದ್ದೇನೆ. ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬಗ್ಗೆ ತಿಳಿಸಿ.
ಉತ್ತರ: ನಾಲ್ವರು ಮಕ್ಕಳಿಗೆ ಸರಿಯಾಗಿ ನಾಲ್ಕು ನಿವೇಶನ, 4 ಮನೆ ಇರುವುದನ್ನು ನೋಡಿದರೆ ನೀವು ನಿಜವಾಗಿಯೂ ಭಾಗ್ಯವಂತರು. ನೀವು ಮತ್ತು ನಿಮ್ಮ ಹೆಂಡತಿ ಜೀವನಕ್ಕೆ ಮೂರು ಮನೆಯಿಂದ ಬರುವ ಬಾಡಿಗೆ ಸಾಕಾಗುವುದಾದರೆ ನಿವೇಶನಗಳನ್ನು ಎಂದಿಗೂ ಮಾರಾಟ ಮಾಡಬೇಡಿ. ನಿಮ್ಮ ಮಕ್ಕಳಿಗೆ ಯಾವುದೇ ಉದ್ಯೋಗ, ನೌಕರಿ ಇದ್ದರೂ ಅವು ಸ್ಥಿರವಲ್ಲ. ನೀವು ಬಿಟ್ಟು ಹೋಗುವ ನಿವೇಶನ ಮತ್ತು ಮನೆ ಮಾತ್ರ ಸ್ಥಿರ. ನಿವೇಶನಗಳಿಗೆ ಈಗ ಸಿಗುವ ಬೆಲೆ ಚೆನ್ನಾಗಿದೆ ಎಂದುಕೊಂಡರೂ ಈಗ ಮಾರಾಟ ಮಾಡಿ ಬರುವ ಹಣ, ಹಣದ ಬಡ್ಡಿಯಿಂದ ಮುಂದೆ ನೀವಾಗಲಿ ನಿಮ್ಮ ಮಕ್ಕಳಾಗಲಿ ನಿವೇಶನ ಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ನಿವೇಶನ ಕೊಂಡ ಮೊತ್ತಕ್ಕೆ ನಿವೇಶವನ್ನು ಖರೀದಿಸಿದ ಅವಧಿಯಿಂದ ಮಾರಾಟ ಮಾಡುವ ಅವಧಿಯವರೆಗೆ ಬರುವ ಹಣದುಬ್ಬರದ ಅಂಶಕ್ಕೆ ತೆರಿಗೆ ಇರುವುದಿಲ್ಲ. ಉಳಿದ ಮೊತ್ತಕ್ಕೆ ಶೇಕಡ 20ರಷ್ಟು ತೆರಿಗೆ ಕೊಡಬೇಕಾಗುತ್ತದೆ. ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ಕೂಡ ಮಾರಾಟ ಮಾಡಿ ಬಂದ ಹಣವನ್ನು ಇರಿಸಬಹುದು. ಆದರೆ ಗರಿಷ್ಠ ಮಿತಿ ₹ 50 ಲಕ್ಷ. ಆಸ್ತಿ ಮಾರಾಟ ಮಾಡುವುದನ್ನು ಮರೆತು ನಾಲ್ಕು ಜನ ಮಕ್ಕಳಿಗೆ ನಿಮ್ಮ ಕಾಲಾನಂತರ ಅನುಕೂಲ ಆಗುವಂತೆ ಉಯಿಲು ಬರೆಯಿರಿ. ಏನಾದರೂ ಗೊಂದಲ ಇದ್ದರೆ ಕರೆ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.