ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿಸಲು ಹೂಡಿಕೆ ಹಾಗೂ ಪಿಂಚಣಿ ಯೋಜನೆ ವಿಚಾರವಾಗಿ ತಿಳಿಸಿ

ಯು.ಪಿ.ಪುರಾಣಿಕ್
Published 5 ಮಾರ್ಚ್ 2021, 12:15 IST
Last Updated 5 ಮಾರ್ಚ್ 2021, 12:15 IST
ಯು.ಪಿ. ಪುರಾಣಿಕ್
ಯು.ಪಿ. ಪುರಾಣಿಕ್   

ರಾಮಚಂದ್ರ ಶಾಸ್ತ್ರಿ, ಪುಣೆ

* ಪ್ರಶ್ನೆ: ನಾನು ಕನ್ನಡಿಗ. ಬಹಳ ವರ್ಷಗಳಿಂದ ನಿಮ್ಮ ಸಲಹೆಯಂತೆ ಹೂಡಿಕೆ ಮಾಡಿ ನಿವೇಶನ ಕೊಂಡಿದ್ದೇನೆ. ನನ್ನ ತಿಂಗಳ ವರಮಾನ ₹ 1.20 ಲಕ್ಷ. ಕಡಿತದ ನಂತರ ಕೈಗೆ ₹ 98,000 ಬರುತ್ತದೆ. ನಾನು ವಿವಾಹಿತ. ಒಂದು ವರ್ಷದ ಹೆಣ್ಣು ಮಗು ಇದೆ. ಹೆಂಡತಿ ಗೃಹಿಣಿ. ಬಂಗಾರದ ಹೂಡಿಕೆ, ತೆರಿಗೆ ಉಳಿಸಲು ಹೂಡಿಕೆ ಹಾಗೂ ಪಿಂಚಣಿ ಯೋಜನೆ ವಿಚಾರವಾಗಿ ತಿಳಿಸಿ.

ಉತ್ತರ: ನೀವು ತೆರಿಗೆ ಉಳಿಸಲು ಪಿಪಿಎಫ್‌ ಹಾಗೂ 5 ವರ್ಷಗಳ ಬ್ಯಾಂಕ್‌ ಠೇವಣಿ ಮಾಡಿ. ಇಲ್ಲಿ ಗರಿಷ್ಠ ವಾರ್ಷಿಕ ₹1.50 ಲಕ್ಷ ಹೂಡಿಕೆ ಮಾಡಿ. 80ಸಿ ಆಧಾರದ ಮೇಲೆ ತೆರಿಗೆ ವಿನಾಯಿತಿ ಪಡೆಯಿರಿ. ಹೆಚ್ಚಿನ ಸಂಬಳ ಪಡೆಯುವ ನೀವು ಸಾಮಾನ್ಯ ವಿಮೆಗಿಂತ ಅವಧಿ ವಿಮೆ (ಟರ್ಮ್‌ ಇನ್ಶುರೆನ್ಸ್‌) ಮಾಡಿ. ಇಲ್ಲಿ ದೊಡ್ಡ ಮೊತ್ತದ ವಿಮೆಗೆ ಕಡಿಮೆ ಪ್ರೀಮಿಯಂ ಇರುತ್ತದೆ. ಆದರೆ ಕಟ್ಟಿದ ಹಣ ವಾಪಾಸು ಬರುವುದಿಲ್ಲ. ಪಿಪಿಎಫ್‌ 15 ವರ್ಷಗಳ ಅವಧಿಗೆ ಮಾಡಿ. ಇದು ನಿಮ್ಮ ಜೀವನದ ಸಂಜೆಯಲ್ಲಿ ನೆರವಾಗುತ್ತದೆ. ಜೊತೆಗೆ ಇಲ್ಲಿ ಬರುವ ಬಡ್ಡಿ ಸೆಕ್ಷನ್‌ 10 (II) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಹೊಂದಿದೆ. ಹೆಣ್ಣು ಮಗುವಿನ ಸಲುವಾಗಿ ವಾರ್ಷಿಕ ₹ 1.50 ಲಕ್ಷ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿ. ಈ ಹೂಡಿಕೆ ಬ್ಯಾಂಕ್‌ನಲ್ಲಿಯೂ ಮಾಡಬಹುದು. ಪಿಂಚಣಿ ಸಲುವಾಗಿ ಎನ್‌ಪಿಎಸ್‌ನಲ್ಲಿ ಹಣ ತೊಡಗಿಸಿ. ಇಲ್ಲಿ ಗರಿಷ್ಠ ₹ 50 ಸಾವಿರ ತನಕ ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ತೆರಿಗೆ ವಿನಾಯಿತಿ ಸವಲತ್ತು ಇದೆ. ಬಂಗಾರದ ಸಲುವಾಗಿ ಬಂಗಾರದ ನಾಣ್ಯ ಅಥವಾ ಚಿನ್ನದ ಇಟಿಎಫ್‌ (Go*d ETF) ನಲ್ಲಿ ಹಣ ಹೂಡಿರಿ.

ADVERTISEMENT

***

ರಮಾದೇವಿ, ಊರುಬೇಡ

* ಪ್ರಶ್ನೆ: ನಾನು ವೃತ್ತಿಯಲ್ಲಿ ಕಾಮರ್ಸ್‌ ಕಾಲೇಜು ಉಪನ್ಯಾಸಕಿ. ನನ್ನ ಒಟ್ಟು ಸಂಬಳ ₹ 70,255. ಕಡಿತದ ನಂತರ ₹ 60,200 ಬರುತ್ತದೆ. ಪಿಂಚಣಿ ಸವಲತ್ತು ಇಲ್ಲ. ಮಗಳಿಗೆ 8 ವರ್ಷ, ಮಗನಿಗೆ 6 ವರ್ಷ ವಯಸ್ಸು. ನನ್ನ ವಯಸ್ಸು 42 ವರ್ಷ. ನನ್ನ ಪತಿ ವ್ಯಾಪಾರೋದ್ಯಮದಲ್ಲಿದ್ದಾರೆ. ಮನೆ ಖರ್ಚು ಅವರೇ ನೋಡಿಕೊಳ್ಳುತ್ತಾರೆ. ನಾನು ಮಗಳು ಹುಟ್ಟಿದ ವರ್ಷದಿಂದ ಪ್ರತಿ ವರ್ಷ 15 ಗ್ರಾಂ ಚಿನ್ನದ ನಾಣ್ಯ ಕೊಳ್ಳುತ್ತಿದ್ದೇನೆ. ಬಂಗಾರದ ಒಡವೆ, ಬಂಗಾರದ ಮ್ಯೂಚುವಲ್‌ ಫಂಡ್‌ ಹೂಡಿಕೆ ವಿಚಾರದಲ್ಲಿ ತಿಳಿಸಿ. ನನ್ನ ಎರಡೂ ಮಕ್ಕಳ ಸಲುವಾಗಿ ದೀರ್ಘಾವಧಿ ಕಂಟಕ ರಹಿತ ಹೂಡಿಕೆ ತಿಳಿಸಿ.

ಉತ್ತರ: ನೀವು ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಂತೆ ಕಾಣುತ್ತದೆ. ನಿಮ್ಮ ಅಥವಾ ನಿಮ್ಮ ಪತಿಯವರ ಈವರೆಗಿನ ಉಳಿತಾಯದ ವಿಚಾರ ತಿಳಿಸಿಲ್ಲ. ನೀವು ತೆರಿಗೆಗೆ ಒಳಗಾಗುವುದರಿಂದ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ಎಸ್‌ಬಿಐನಲ್ಲಿ ಕನಿಷ್ಠ ₹ 50 ಸಾವಿರ ವಾರ್ಷಿಕವಾಗಿ ಹೂಡಿಕೆ ಮಾಡಿ. ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಿ. ಇದೇ ವೇಳೆ 80ಸಿಸಿಡಿ (1ಬಿ) ಹೊರತಾಗಿ ಜೀವ ವಿಮೆ ಅಥವಾ ಪಿಪಿಎಫ್‌ ಮುಖಾಂತರ ಸೆಕ್ಷನ್‌ 80ಸಿ ಆಧಾರದ ಮೇಲೆ ಕನಿಷ್ಠ ₹ 1.50 ಲಕ್ಷ ಹಣ ಇರಿಸಿ. ಈ ಎರಡೂ ಸೆಕ್ಷನ್‌ಗಳಿಂದ ₹ 2 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಕೊಡಬಹುದು. ನಿಮ್ಮ ಪತಿ ಕೂಡಾ ಆದಾಯ ತೆರಿಗೆಗೆ ಒಳಗಾದಲ್ಲಿ ಅವರು ಮಗಳ ಹೆಸರಿನಲ್ಲಿ ವಾರ್ಷಿಕ ಗರಿಷ್ಠ ₹ 1.50 ಲಕ್ಷ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿ ತೆರಿಗೆ ವಿನಾಯಿತಿ ಪಡೆಯಲಿ. ನಿಮ್ಮ ಮಗನ ಸಲುವಾಗಿ ಎಲ್‌ಐಸಿಯವರ ‘ಚಿಲ್ಡ್ರನ್‌ ಮನಿಬ್ಯಾಕ್‌ ಪಾಲಿಸಿ’ ಮಾಡಿಸಿ ವಾರ್ಷಿಕವಾಗಿ ₹ 25 ಸಾವಿರ ತುಂಬಿ. ನೀವಿಬ್ಬರೂ ಪಿಪಿಎಫ್‌ ಪ್ರಾರಂಭಿಸಿ. ಈ ಹೂಡಿಕೆ ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿಯೂ ಮಾಡಬಹುದು. ವಾರ್ಷಿಕ ಗರಿಷ್ಠ ಮಿತಿ ₹ 1.50 ಲಕ್ಷ. ನೀವಿಬ್ಬರೂ ಸೇರಿ ಎರಡು ಖಾತೆಗಳಿಂದ ಗರಿಷ್ಠ ₹ 3 ಲಕ್ಷ ಉಳಿಸಿರಿ. ಈ ಯೋಜನೆಯಲ್ಲಿ ಬರುವ ಬಡ್ಡಿಗೆ ಆದಾಯ ತೆರಿಗೆ ಸೆಕ್ಷನ್‌ 10 (II) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ. ಮಗಳ ಮದುವೆಗೆ ಇನ್ನೂ ಕೆಲವು ವರ್ಷಗಳು ಇರುವುದರಿಂದ ಒಡವೆ ಮಾಡಿಸಿ ಇಡುವುದು ಸೂಕ್ತವಲ್ಲ. ಮುಂದೆ ಫ್ಯಾಷನ್‌ ಬದಲಾದಲ್ಲಿ ಒಡವೆ ಮುರಿಸುವಾಗ ಸವಕಳಿಯಿಂದ ನಷ್ಟವಾಗುತ್ತದೆ. ಬಂಗಾರದ ಮ್ಯೂಚುವಲ್‌ ಫಂಡ್ ಹೂಡಿಕೆ ಕೂಡಾ ಉತ್ತಮ ಹೂಡಿಕೆಯೇ ಆಗಿದೆ. ಇಲ್ಲಿ ಒಂದು ಗ್ರಾಂ ಒಂದು ಯುನಿಟ್ ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆ ಬೆಲೆಯಂತೆ ಯಾವಾಗ ಬೇಕಾದರೂ ಮಾರಾಟ ಮಾಡಬಹುದು. ನೀವು ಇದುವರೆಗೆ ಬಂಗಾರದ ನಾಣ್ಯ ಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಎಂದಿಗೂ ನಿಲ್ಲಿಸಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.