ADVERTISEMENT

ಶರತ್ ಎಂ.ಎಸ್ ಅವರ ಷೇರು ಮಾತು: ಬೀಳುವ ಮಾರುಕಟ್ಟೆಯಲ್ಲಿ ನೀವು ಬೀಳದಿರಿ

ಶರತ್ ಎಂ.ಎಸ್.
Published 7 ಮಾರ್ಚ್ 2022, 20:28 IST
Last Updated 7 ಮಾರ್ಚ್ 2022, 20:28 IST
   

ನನ್ನ ಸ್ನೇಹಿತನೊಬ್ಬ ಇತ್ತೀಚೆಗಷ್ಟೇ ಷೇರು ಮಾರುಕಟ್ಟೆ ಪ್ರವೇಶಿಸಿ ಒಂದಷ್ಟು ಲಾಭ ಕಂಡಿದ್ದ. ಅದೇ ಜೋಶ್‌ನಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವ ಅಂದಾಜಿನಲ್ಲಿದ್ದ. ಆದರೆ ರಷ್ಯಾ-ಉಕ್ರೇನ್ ಯುದ್ಧ ಘೋಷಣೆಯಾದ ದಿನ ಅವನಿಂದ ಒಂದು ಕರೆ ಬಂತು. ‘ಸೂಚ್ಯಂಕಗಳು ಬೀಳುತ್ತಿವೆ, ಕೂಡಲೇ ಎಲ್ಲಾ ಷೇರುಗಳನ್ನು ಮಾರಾಟ ಮಾಡದಿದ್ರೆ ಮತ್ತಷ್ಟು ನಷ್ಟವಾಗುವುದಲ್ಲವೇ’ ಎಂದು ಕೇಳಿದ. ‘ತಲೆಹೋಗುವ ಪರಿಸ್ಥಿತಿ ಬಂದಿಲ್ಲ. ಸ್ವಲ್ಪ ಸಮಾಧಾನವಾಗಿ ಇರಪ್ಪ’ ಅಂತ ಹೇಳಿದೆ.

‘ಅಯ್ಯೋ, ಏನ್ ಮಾತಾಡ್ತಿದ್ದೀಯಾ ನೀನು? ಇರೋ ಅಲ್ಪಸ್ವಲ್ಪ ಹಣನೂ ಕರಗೋದ್ರೆ ಏನ್ ಮಾಡೋದು’ ಅಂದ. ‘ಸುಮ್ಮನಿರಪ್ಪ. ಮಾರುಕಟ್ಟೆಯಲ್ಲಿ ಏಳೋದು, ಬೀಳೋದು ಸಹಜ’ ಅಂದೆ. ಮಾರನೆಯ ದಿನ ಅವನೇ ಫೋನ್ ಮಾಡಿ, ‘ಷೇರುಪೇಟೆ ಸೂಚ್ಯಂಕಗಳು ಸುಧಾರಿಸಿವೆ, ನಿನ್ನೆ ಮಾರಾಟ ಮಾಡಿದ್ರೆ ಎಷ್ಟೊಂದು ನಷ್ಟ ಆಗ್ತಿತ್ತಲ್ವಾ’ ಅಂದ. ಇದು ನನ್ನ ಸ್ನೇಹಿತನೊಬ್ಬನ ಸಮಸ್ಯೆಯಲ್ಲ. ಷೇರು ಮಾರುಕಟ್ಟೆಯನ್ನು ಮೊದಲ ಬಾರಿಗೆ ಪ್ರವೇಶ ಮಾಡಿರುವ ಬಹುತೇಕರ ಮನಸ್ಥಿತಿ ಇದು. ಏರಿಳಿತದ ಮಾರುಕಟ್ಟೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ಗಮನಿಸೋಣ.

1. ಏರಿಳಿತಗಳು ಸಹಜ: 1992ರಲ್ಲಿ ಹರ್ಷದ್ ಮೆಹ್ತಾ ಹಗರಣದ ಕಾರಣದಿಂದಾಗಿ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿತ್ತು. 1999ರಲ್ಲಿ ಡಾಟ್ ಕಾಂ ಬಬಲ್‌ನಿಂದಾಗಿ ಸೂಚ್ಯಂಕಗಳು ಕೆಳಮುಖವಾಗಿದ್ದವು. 2008ರಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲೂ ಷೇರುಪೇಟೆ ಇಳಿಕೆ ದಾಖಲಿಸಿತ್ತು. 2020ರಲ್ಲಿ ಕೊರೊನಾ ಕಾರಣಕ್ಕೆ ಸೂಚ್ಯಂಕಗಳು ಗಣನೀಯವಾಗಿ ತಗ್ಗಿದ್ದವು. 1991ರಲ್ಲಿ ಸೆನ್ಸೆಕ್ಸ್ 5,000 ಅಂಶಗಳಿಗಿಂತ ಕೆಳಗಿತ್ತು. ಇವತ್ತು ಸೆನ್ಸೆಕ್ಸ್ 52,000 ಅಂಶಗಳ ಗಡಿಯಲ್ಲಿದೆ.

ADVERTISEMENT

ಏರಿಳಿತಗಳೆಲ್ಲ ತಾತ್ಕಾಲಿಕ, ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನೇ ತಂದುಕೊಟ್ಟಿರುವುದು ಮೇಲಿನ ಉದಾಹರಣೆಗಳಿಂದ ಮನದಟ್ಟಾಗುತ್ತದೆ.

2. ಕುಸಿಯುವುದು ಸಹಜ: ಷೇರುಪೇಟೆ ಸೂಚ್ಯಂಕಗಳು ಶೇ 10ರಿಂದ ಶೇ 20ರವರೆಗೆ ಕುಸಿತ ಕಾಣುವುದು ಸಾಮಾನ್ಯ. ಆದರೆ ನಿರ್ದಿಷ್ಟ ಷೇರುಗಳ ವಿಚಾರಕ್ಕೆ ಬಂದಾಗ ಕುಸಿತ ಮತ್ತಷ್ಟು ತೀವ್ರವಾಗಿದ್ದರೂ ಆಶ್ಚರ್ಯಪಡಬೇಕಿಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಇಷ್ಟು ಕುಸಿತ ಎದುರಿಸಲು ನಾವು ಮಾನಸಿಕವಾಗಿ ಸಿದ್ಧರಾಗಿರಲೇಬೇಕು. ಹೆಚ್ಚು ಲಾಭ ತಂದುಕೊಟ್ಟಿರುವ ದೈತ್ಯ ಕಂಪನಿಗಳ ಷೇರು ಬೆಲೆ ಕೂಡ ಆಗಾಗ ಶೇ 30ಕ್ಕೂ ಹೆಚ್ಚು ಕುಸಿತ ಕಂಡಿದೆ ಎನ್ನುವುದನ್ನು ಅರಿಯಬೇಕು.

3. ಯಾವ ಕಂಪನಿಯ ಮೇಲೆ ಹೂಡಿಕೆ ಎಂಬುದು ಮುಖ್ಯ: ಭಾರತದ ಷೇರು ಮಾರುಕಟ್ಟೆಯಲ್ಲಿ ಸದ್ಯ 7,400ಕ್ಕೂ ಹೆಚ್ಚು ಕಂಪನಿಗಳಿವೆ. ಆದರೆ, ನೆನಪಿರಲಿ 1990ರಿಂದ 2018ರವರೆಗೆ ಷೇರು ಮಾರುಕಟ್ಟೆಯಲ್ಲಿ ಶೇ 1ರಷ್ಟು ಕಂಪನಿಗಳು ಮಾತ್ರ ಹೂಡಿಕೆದಾರರಿಗೆ ಶೇ 83ರಷ್ಟು ಸಂಪತ್ತು ಸೃಷ್ಟಿಸಿಕೊಟ್ಟಿವೆ. ಹೂಡಿಕೆಗೂ ಮೂನ್ನ ಸರಿಯಾದ ಕಂಪನಿ ಆಯ್ಕೆ ಮಾಡಿಕೊಂಡು, ಪೂರ್ವಾಪರ ಅಧ್ಯಯನ ಮಾಡಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು. ಭದ್ರ ಬುನಾದಿ ಇಲ್ಲದ ಕಂಪನಿಯಲ್ಲಿ ಹೂಡಿಕೆ ಮಾಡಿದಾಗ ಮೂಲ ಬಂಡವಾಳವೇ ಇಲ್ಲವಾಗುವ ಸಾಧ್ಯತೆ ಇರುತ್ತದೆ. ಒಳ್ಳೆಯ ಕಂಪನಿ ಆಯ್ಕೆ ಮಾಡಿ ಹೂಡಿಕೆ ಮಾಡಿದಾಗ ಮಾರುಕಟ್ಟೆಯ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.

4. ವೈವಿಧ್ಯತೆ ಕಾಯ್ದುಕೊಳ್ಳಿ: ಬೀಳುವ ಮಾರುಕಟ್ಟೆಯಲ್ಲಿ ನೀವು ಜಾರಿ ಬೀಳದಿರಲು ಮಾಡಬೇಕಿರುವ ಮೊದಲ ಕೆಲಸ ಹೂಡಿಕೆಯಲ್ಲಿ ವೈವಿಧ್ಯತೆ ಸಾಧಿಸುವುದು. ಅಂಚೆ ಕಚೇರಿ ಹೂಡಿಕೆಗಳು, ಬಾಂಡ್‌ಗಳು, ಪಿಪಿಎಫ್, ಎನ್‌ಪಿಎಸ್, ಇಪಿಎಫ್, ಚಿನ್ನದ ಮೇಲೆ ಹೂಡಿಕೆ ಹೀಗೆ ಎಲ್ಲ ರೀತಿಯ ಹೂಡಿಕೆಗಳಲ್ಲಿ ಹಣ ತೊಡಗಿಸಿದಾಗ ಮಾರುಕಟ್ಟೆಯ ಏರಿಳಿತದ ಅಲೆಯಲ್ಲಿ ಹೂಡಿಕೆದಾರ ಈಜಿ ದಡ ಸೇರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.