ಭವಿಷ್ಯದ ದಿನಗಳಲ್ಲಿನ ಹಣಕಾಸು ಅಗತ್ಯಗಳನ್ನು ಈಡೇರಿಸಿಕೊಳ್ಳಲು ಹಣ ಹೂಡಿಕೆ ಮಾಡಿ ಸಂಪತ್ತು ಸೃಷ್ಟಿಸುವ ನಿಟ್ಟಿನಲ್ಲಿ ಸಾಗುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ, ಶಿಸ್ತಿನಿಂದ ಪಾಲಿಸುವುದನ್ನು ರೂಢಿಸಿಕೊಳ್ಳುವ ಅಗತ್ಯ ಇದೆ.
ಹಣ ಹೂಡಿಕೆಯ ವಿಷಯದಲ್ಲಿ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಅಪೇಕ್ಷಣೀಯ ಮತ್ತು ಅನಿವಾರ್ಯವೂ ಹೌದು. ಸಂಪತ್ತು ಸೃಷ್ಟಿಸುವ ನಿಟ್ಟಿನಲ್ಲಿ ಸಾಗುವಾಗ ಈ ನಿಯಮಗಳನ್ನು ಶಿಸ್ತಿನಿಂದ ಪಾಲಿಸುವುದನ್ನು ರೂಢಿಸಿಕೊಳ್ಳಬೇಕು. ಬಹುತೇಕ ಹೂಡಿಕೆದಾರರಿಂದ ಈ ವಿಷಯದಲ್ಲಿ ಶಿಸ್ತು ಪಾಲಿಸುವುದು ಸಾಧ್ಯವಾಗುವುದಿಲ್ಲ. ಒಂದೆಡೆ ವೈಯಕ್ತಿಕ ಅಗತ್ಯಗಳು ಮತ್ತು ಬೇಡಿಕೆಗಳು ಹೆಚ್ಚುತ್ತಿರುತ್ತವೆ. ಇದಕ್ಕೆ ಅನುಗುಣವಾಗಿ ಆದಾಯ ಹೆಚ್ಚಳಗೊಳ್ಳುವುದಿಲ್ಲ. ಇನ್ನೊಂದೆಡೆ ಮಾರುಕಟ್ಟೆ ಪರಿಸ್ಥಿತಿ ಏರಿಳಿತ ಕಾಣುತ್ತಿರುತ್ತದೆ. ಯಾರೇ ಆಗಲಿ ಶಿಸ್ತಿನ ಹೂಡಿಕೆದಾರ ಎನಿಸಿಕೊಳ್ಳಲು ಯಶಸ್ವಿ ಹೂಡಿಕೆದಾರರಿಂದ ಪಾಠ ಕಲಿಯಬೇಕು. ಮುಂಬರುವ ವರ್ಷಗಳಲ್ಲಿಯೂ ಅನುಸರಿಸಬಹುದಾದ ಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕು ಎನ್ನುವುದನ್ನು ಮರೆಯಬಾರದು.
ಸಂಪತ್ತು ಸೃಷ್ಟಿಸುವ ಹಾದಿಯಲ್ಲಿ ಅನುಸರಿಸಬಹುದಾದ ಆರು ಪ್ರಮುಖ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.
1. ಕಿರಿಯ ವಯಸ್ಸಿನಲ್ಲಿಯೇ ಹೂಡಿಕೆ ಆರಂಭಿಸಿ
ಉದ್ಯೋಗಕ್ಕೆ ಸೇರಿ ದುಡಿಮೆ ಆರಂಭಿಸಿದ ಹೊಸದರಲ್ಲಿಯೇ ಹಣ ಹೂಡಿಕೆ ಮಾಡುವುದಕ್ಕೆ ಆರಂಭಿಸುವುದರಿಂದ ಹೆಚ್ಚು ಪ್ರಯೋಜನಗಳಿವೆ. ಹೂಡಿಕೆ ಮಾಡಿದ ಮೊತ್ತ ಗಮನಾರ್ಹವಾಗಿ ಹೆಚ್ಚಳಗೊಳ್ಳಲು ಮತ್ತು ನಿಮ್ಮ ಹಣಕಾಸು ಗುರಿಗಳನ್ನು ತಲುಪಲು ಸಾಕಷ್ಟು ಕಾಲಾವಕಾಶ ದೊರೆಯಲಿದೆ. ಹೂಡಿಕೆಯ ಶಿಸ್ತಿನ ಸಿಪಾಯಿಗಳು ಮುಂಚಿತವಾಗಿಯೇ ಹಣ ತೊಡಗಿಸುತ್ತಾರೆ. ಅದನ್ನು ಪುನರಾವರ್ತಿಸುತ್ತಲೂ ಇರುತ್ತಾರೆ. ಒಂದು ವರ್ಷ ದೊಡ್ಡ ಮೊತ್ತ ಹೂಡಿಕೆ ಮಾಡುವುದು ಆನಂತರದ ವರ್ಷಗಳಲ್ಲಿ ಹೂಡಿಕೆಯನ್ನೇ ಮಾಡದಿರುವ ಸ್ವಭಾವ ಅವರದ್ದಾಗಿರುವುದಿಲ್ಲ.
ಪ್ರತಿ ತಿಂಗಳು ಮತ್ತು ಪ್ರತಿ ವರ್ಷವೂ ಅವರು ವಿವೇಚನೆಯಿಂದ ಹಣ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಹೂಡಿದ ಹಣ ವೃದ್ಧಿಯಾಗುವುದರ ಮೇಲೆ ನಿರಂತರವಾಗಿ ನಿಗಾ ಇರಿಸಿರುತ್ತಾರೆ. ಹಣಕಾಸಿನ ವಿವಿಧ ಉತ್ಪನ್ನಗಳಲ್ಲಿ ಮುಂಚಿತವಾಗಿಯೇ ಹಣ ತೊಡಗಿಸಿದವರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಯೋಜನಗಳು ಲಭಿಸುತ್ತವೆ.
2. ಹೂಡಿಕೆ ನಿಯಮಿತವಾಗಿರಲಿ
ಹೂಡಿಕೆ ವಿಷಯದಲ್ಲಿ ಶಿಸ್ತು ಕಾಯ್ದುಕೊಳ್ಳುವುದರ ಜತೆಗೆ, ನಿಯಮಿತ ಅಂತರದಲ್ಲಿ ಹೂಡಿಕೆ ಮಾಡುತ್ತಿರಬೇಕು. ಷೇರುಪೇಟೆಯಲ್ಲಿ ಒಳ್ಳೆಯ ದಿನಗಳಿಗಾಗಿ ಎದುರು ನೋಡುತ್ತ ಕೂರುವ ಬದಲಿಗೆ ನಿಯಮಿತವಾಗಿ ಹೂಡಿಕೆ ಮಾಡುತ್ತಿರಬೇಕು. ಷೇರುಪೇಟೆ ಕುಸಿದಿರುವಾಗ ಹೆಚ್ಚು ಖರೀದಿಸುವ, ಏರುಗತಿಯಲ್ಲಿ ಇದ್ದಾಗ ಕಡಿಮೆ ಷೇರುಗಳನ್ನು ಖರೀದಿಸುವ ಮೂಲಕ ಒಟ್ಟಾರೆ ಹೂಡಿಕೆಯು ಸರಾಸರಿ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಮ್ಯೂಚುವಲ್ ಫಂಡ್ಸ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ (SIP) ಹಣ ತೊಡಗಿಸುವುದರಿಂದ ಕಾಲ ಗತಿಸಿದಂತೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಹೂಡಿಕೆಯಲ್ಲಿ ಶಿಸ್ತನ ವಿಧಾನ ಅನುಸರಿಸುವುದರಿಂದ ಭಾವನೆಗಳನ್ನೂ ನಿಯಂತ್ರಿಸಬಹುದು. ಇದರಿಂದ ಷೇರುಪೇಟೆ ಕುಸಿದಾಗ ಹೂಡಿಕೆ ಮಾಡದಿರುವ, ಪೇಟೆ ಏರುಗತಿಯಲ್ಲಿ ಇರುವಾಗ ಹೆಚ್ಚೆಚ್ಚು ಹಣ ತೊಡಗಿಸುವ ಪ್ರವೃತ್ತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.
3. ಭಾವನೆಗಳನ್ನು ನಿಯಂತ್ರಿಸಿ
ಹಣವು ಭಾವನಾತ್ಮಕ ಸಂಗತಿಯಾಗಿದೆ. ಆದರೆ, ಭಾವೊದ್ರೇಕಗಳು ಹೂಡಿಕೆ ನಿರ್ಧಾರಗಳನ್ನು ನಿರ್ಧರಿಸುವಂತಿರಬಾರದು. ಹಣ ಹೂಡಿಕೆಯ ನಿರ್ಧಾರಗಳ ಜತೆ ಭಾವನೆಗಳು ಬೆರೆತಾಗ ತಪ್ಪು ಎಸಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.
ಉದಾಹರಣೆಗೆ ಹೇಳುವುದಾದರೆ, ಷೇರುಪೇಟೆ ಕುಸಿದಿರುವಾಗ ಮಾರುಕಟ್ಟೆಯ ವಹಿವಾಟಿನಿಂದ ಹೊರ ಬರುವುದು ಮತ್ತು ಪೇಟೆಯ ವಹಿವಾಟು ಗರಿಷ್ಠ ಮಟ್ಟದಲ್ಲಿ ಇರುವಾಗ ಮಾರುಕಟ್ಟೆಗೆ ಪ್ರವೇಶಿಸಿ ಷೇರುಗಳನ್ನು ಖರೀದಿಸುವುದರಿಂದ ಗಂಡಾಂತರ ಘಟಿಸುವ, ಕೈಸುಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ಹೂಡಿಕೆ ಜತೆಗೆ ಭಾವನೆಗಳನ್ನು ತಳಕು ಹಾಕದಂತೆ ಎಚ್ಚರವಹಿಸಿ. ಹೂಡಿಕೆಗಳು ಹೂಡಿಕೆದಾರನ ಜತೆ ಯಾವುದೇ ಭಾವನೆಗಳನ್ನು ಹೊಂದಿರುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
4. ಮಾರುಕಟ್ಟೆ ಏರಿಳಿತದ ಬಗ್ಗೆ ತಿಳಿದಿರಲಿ
ನಿಯಮಿತ ಹೂಡಿಕೆದಾರರು ಮಾರುಕಟ್ಟೆಯ ಏರಿಳಿತದಿಂದ ದೂರ ಸರಿದಿರುವುದಿಲ್ಲ. ಷೇರುಪೇಟೆಯ ಏರಿಳಿತ ಎನ್ನುವುದು ವಾಸ್ತವ ಸಂಗತಿ. ಒಂದು ವೇಳೆ ನೀವು ಷೇರುಪೇಟೆಗೆ ಹೊಸಬರಾಗಿದ್ದರೆ ಹಿಂದಿನ ದಶಕದಲ್ಲಿ ಅದರಲ್ಲೂ 2008ರಿಂದೀಚೆಗೆ ಪೇಟೆಯು ಯಾವ ಬಗೆಯಲ್ಲಿ ಏರಿಳಿತ ಕಾಣುತ್ತಲೇ ಏರುಗತಿಯಲ್ಲಿ ಸಾಗಿ ಬಂದಿರುವುದನ್ನು ಗಮನಿಸಿ.
ಅದಕ್ಕೂ ಹಿಂದೆ ಅಂದರೆ, ಮೂರ್ನಾಲ್ಕು ದಶಕಗಳ ಅವಧಿಯಲ್ಲಿನ ಷೇರುಪೇಟೆಯ ಏರಿಳಿತ ಗಮನಿಸಿ. ಸಾಕಷ್ಟು ಬಾರಿ ಕುಸಿತ ಕಂಡಿದ್ದರೂ ಪೇಟೆಯಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಗಮನಾರ್ಹ ಲಾಭ ತಂದು ಕೊಟ್ಟಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
5. ಹೂಡಿಕೆಯಲ್ಲಿ ಸಮತೋಲನ ಇರಲಿ
ಹೂಡಿಕೆಯ ಹಂಚುವಿಕೆಯಲ್ಲಿ ಸಮಾನತೆ ಮತ್ತು ವೈವಿಧ್ಯತೆ ಇರುವಂತೆ ನೋಡಿಕೊಳ್ಳುವುದು ಶಿಸ್ತಿನ ಹೂಡಿಕೆಯ ತಳಹದಿಯಾಗಿದೆ. ಬಳಿಯಲ್ಲಿ ಇರುವ ಸಂಪತ್ತನ್ನು ವಿವಿಧ ಹಣಕಾಸು ಉತ್ಪನ್ನಗಳಲ್ಲಿ ತೊಡಗಿಸುವುದರಿಂದ ನಷ್ಟ ಸಾಧ್ಯತೆ ಸೀಮಿತಗೊಳಿಸಿ ಗರಿಷ್ಠ ಲಾಭ ಪಡೆಯಬಹುದು.
ಕಾಲ ಗತಿಸಿದಂತೆ ವಿವಿಧ ಹಣಕಾಸು ಉತ್ಪನ್ನಗಳಲ್ಲಿನ ಹೂಡಿಕೆಯನ್ನು ಬೇರೆ ಮಾರ್ಗದತ್ತ ತಿರುಗಿಸಬೇಕು. ಒಂದು ವರ್ಷದ ನಂತರ ಕೆಲ ಷೇರುಗಳನ್ನು ಮಾರುವ ಮತ್ತು ಇನ್ನೂ ಕೆಲವನ್ನು ಹೊಸದಾಗಿ ಖರೀದಿಸಬೇಕು. ಇದರಿಂದ ಹೂಡಿಕೆಯ ಹಂಚಿಕೆಯು ಹೆಚ್ಚು ಲಾಭದಾಯಕವಾಗಿರುತ್ತದೆ. ಇದರಿಂದ ಹಣಕಾಸು ಗುರಿ ಈಡೇರಿಸಿಕೊಳ್ಳುವುದು ಸುಲಭವಾಗುತ್ತದೆ.
6. ಹಣಕಾಸು ಗುರಿ ಸಾಧಿಸಲು ಹೂಡಿಕೆ ಮಾಡಿ
ಹೂಡಿಕೆಯ ನಿರ್ಧಾರ ಕೈಗೊಳ್ಳುವಾಗ ಗುರಿ ಆಧಾರಿತ ವಿಧಾನ ಅನುಸರಿಸಬೇಕು. ಮಕ್ಕಳ ಶಿಕ್ಷಣ, ಮದುವೆ, ಪ್ರವಾಸ ಮತ್ತು ನಿವೃತ್ತಿ ನಂತರದ ವೆಚ್ಚಗಳನ್ನು ಪರಿಗಣಿಸಿ ಹೂಡಿಕೆ ನಿರ್ಧಾರ ಕೈಗೊಳ್ಳಿ.
ಗುರಿಗಳನ್ನು ಪಟ್ಟಿ ಮಾಡುತ್ತಿದ್ದಂತೆ, ನೀವು ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಗುರಿ ತಲುಪುವ ರೀತಿಯಲ್ಲಿ ಹೂಡಿಕೆ ಮಾಡಲು ಮುಂದಾಗಿ.
ಗುರಿ ಆಧಾರಿತ ಹೂಡಿಕೆ ನಿಯಮ ಅನುಸರಿಸುವುದರಿಂದ ಗುರಿ ಸಾಧನೆ ನಿಟ್ಟಿನಲ್ಲಿ ನಿಮ್ಮ ಹೂಡಿಕೆ ಹೇಗೆ ಸಾಗುತ್ತಿದೆ ಎನ್ನುವುದು ನಿಮ್ಮ ಅರಿವಿಗೆ ಬರಲಿದೆ. ಜತೆಗೆ, ಗುರಿ ಸಾಧಿಸಲು ಹೂಡಿಕೆಯಲ್ಲಿ ಮಾಡಬೇಕಾದ ಬದಲಾವಣೆಯೂ ನಿಮ್ಮ ನಿಯಂತ್ರಣದಲ್ಲಿಯೇ ಇರಲಿದೆ.
(ಲೇಖಕ: ಯೆಸ್ ಸೆಕ್ಯುರಿಟೀಸ್‌ನ ಸಿಇಒ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.