ADVERTISEMENT

ಸಾಲ: ಜಾಮೀನು ನೀಡುವ ಮುನ್ನ...

ಪ್ರಮೋದ್
Published 2 ಮೇ 2021, 20:01 IST
Last Updated 2 ಮೇ 2021, 20:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಲ ಕೊಡುವವರು, ಸಾಲ ತೆಗೆದುಕೊಳ್ಳುವವರ ನಡುವೆ ಸೇತುವೆಯಂತೆ ಇರುವವ ಜಾಮೀನುದಾರ ಅಥವಾ ಖಾತರಿದಾರ. ನೀವು ಯಾರಾದರೂ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರ ಸಾಲಕ್ಕೆ ಖಾತರಿದಾರ ಆಗುವ ಮುನ್ನ ಅಳೆದು–ತೂಗಿ ನಿರ್ಧಾರಕ್ಕೆ ಬರಬೇಕು. ಸಾಲಕ್ಕೆ ಖಾತರಿದಾರ ಆಗುವುದೆಂದರೆ ಬೇರೆಯವರ ಹಣಕಾಸಿನ ಹೊರೆ ಹೊರುವ ದೊಡ್ಡ ಜವಾಬ್ದಾರಿ ವಹಿಸಿಕೊಂಡಂತೆ. ಪೂರ್ವಾಪರ ಯೋಚಿಸದೆ ಬೇರೆಯವರ ಸಾಲದ ಜಾಮೀನು ಕರಾರಿಗೆ ಸಹಿ ಹಾಕಿದರೆ, ಸಾಲದ ಬಲೆಯಲ್ಲಿ ನೀವೇ ಸಿಲುಕಿ ಪರದಾಡುವ ಪರಿಸ್ಥಿತಿಯೂ ಬರಬಹುದು.

ಬ್ಯಾಂಕ್‌ಗಳು ಖಾತರಿದಾರರನ್ನು ಕೇಳುವುದು ಯಾವಾಗ?: ಸಾಲ ಪಡೆಯುವ ವ್ಯಕ್ತಿಗೆ ಸಾಲ ಮರುಪಾವತಿ ಸಾಮರ್ಥ್ಯ ಕಡಿಮೆ ಇದೆ ಅನಿಸಿದರೆ ಅಥವಾ ಸಾಲ ಪಡೆಯಲು ನಿರ್ದಿಷ್ಟ ವ್ಯಕ್ತಿಗೆ ಅಗತ್ಯ ಅರ್ಹತೆ ಇಲ್ಲ ಎನ್ನುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಖಾತರಿದಾರನನ್ನು (Guarantor) ಕೇಳುತ್ತವೆ. ಬ್ಯಾಂಕ್‌ಗಳು ಅಡಮಾನ ಸಾಲ ಅಥವಾ ಅಡಮಾನ ರಹಿತ ಸಾಲಗಳಿಗೂ ಖಾತರಿದಾರರನ್ನು ಕೇಳಬಹುದು.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗ, ಸಾಲದ ಮೊತ್ತ ಜಾಸ್ತಿ ಇದ್ದಾಗ, ಸಾಲ ಪಡೆಯುವ ವ್ಯಕ್ತಿಗೆ ಹೆಚ್ಚು ವಯಸ್ಸಾಗಿದ್ದರೆ ಕೂಡ ಬ್ಯಾಂಕ್‌ಗಳು ಸಾಲಕ್ಕೆ ಖಾತರಿದಾರರನ್ನು ಕೇಳುತ್ತವೆ.

ADVERTISEMENT

ಜಾಮೀನುದಾರ/ಖಾತರಿದಾರ ಆಗುವುದೆಂದರೆ?: ಜಾಮೀನುದಾರ ಅಥವಾ ಖಾತರಿದಾರ ಆಗುವುದೆಂದರೆ ಸಾಲ ಪಡೆದ ವ್ಯಕ್ತಿಯು ಒಂದೊಮ್ಮೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಅದರ ಹೊಣೆಯನ್ನು ತಾನು ಹೊರುತ್ತೇನೆ ಎಂಬ ವಾಗ್ದಾನ ಮಾಡಿದಂತೆ. ಅಂದರೆ, ಸಾಲಕ್ಕೆ ಕರಾರು ಮಾಡಿರುವ ವ್ಯಕ್ತಿಯು ಬ್ಯಾಂಕ್ ಸಾಲ ಕಟ್ಟದಿದ್ದರೆ ಖಾತರಿದಾರನು ತನ್ನ ಜೇಬಿನಿಂದ ಆ ಹಣ ಕಟ್ಟಬೇಕಾಗುತ್ತದೆ.

ಖಾತರಿದಾರನ ಜವಾಬ್ದಾರಿ ಎಷ್ಟಿರುತ್ತೆ ಗೊತ್ತಾ?: ನಿಮ್ಮ ಸಂಬಂಧಿಕರು ಬ್ಯಾಂಕ್‌ನಿಂದ ₹ 2 ಲಕ್ಷ ಸಾಲ ತೆಗೆದುಕೊಂಡಿದ್ದು, ಆ ಹಣವನ್ನು ಮೂರು ವರ್ಷಗಳ ಒಳಗೆ ಬ್ಯಾಂಕಿಗೆ ಮರುಪಾವತಿ ಮಾಡದಿದ್ದರೆ ನೀವೇ ಬಡ್ಡಿ ಸಮೇತ ಆ ಹಣವನ್ನು ಕಟ್ಟುವುದಾಗಿ ಜಾಮೀನು ಕೊಟ್ಟಿರುತ್ತೀರಿ ಎಂದಿಟ್ಟುಕೊಳ್ಳಿ. ಆಗ ಬ್ಯಾಂಕ್ ನಿಮ್ಮ ಬಳಿ ಬಂದು ಬಡ್ಡಿ ಸಮೇತ ಬಾಕಿ ಹಣ ವಸೂಲಿ ಮಾಡಬಹುದು. ‘ನನ್ನನ್ನೇಕೆ ಕೇಳುತ್ತೀರಾ? ಸಾಲ ಪಡೆದವನು ಇದ್ದಾನಲ್ಲಾ, ಅವನ ಬಳಿ ಹೋಗಿ ವಸೂಲಿ ಮಾಡಿ’ ಎಂದು ಹೇಳುವಂತಿಲ್ಲ.

ಒಂದೊಮ್ಮೆ, ಸಾಲ ಪಡೆಯುವಾಗ ಬ್ಯಾಂಕಿಗೆ ಭದ್ರತೆಯಾಗಿ ಕೊಟ್ಟಿರುವ ಸ್ಥಿರಾಸ್ತಿ ಹಾಗೂ ಚರಾಸ್ಥಿ ಹರಾಜು ಮಾಡಿದ ಬಳಿಕವೂ ಬ್ಯಾಂಕಿನ ಸಾಲ ತೀರದೇಹೋದರೆ ಉಳಿದ ಹಣ ಕಟ್ಟುವಂತೆಯೂ ಬ್ಯಾಂಕಿನವರು ನಿಮ್ಮನ್ನು ಕೇಳಬಹುದು.

ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ: ನೀವು ಬೇರೆಯವರು ಪಡೆದಿರುವ ಸಾಲಕ್ಕೆ ಖಾತರಿದಾರರಾಗಿದ್ದು ಸಾಲ ಪಡೆದವರು ಮರುಪಾವತಿ ಮಾಡದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಸಾಲಕ್ಕೆ ಖಾತರಿ ನೀಡುತ್ತಿರುವವರು ಆಗಾಗ ಕ್ರೆಡಿಟ್ ಸ್ಕೋರ್ ಪರೀಕ್ಷಿಸಿಕೊಳ್ಳಬೇಕು. ಸಾಲ ಪಡೆದಿರುವ ವ್ಯಕ್ತಿ ಕಂತುಗಳನ್ನು ಸರಿಯಾಗಿ ಪಾವತಿ ಮಾಡುತ್ತಿದ್ದಾನೆಯೇ ಎನ್ನುವುದನ್ನು ಗಮನಿಸಿಕೊಳ್ಳಬೇಕು.

ಒಮ್ಮೆ ಖಾತರಿದಾರ ಆದರೆ ಹೊರಬರುವುದು ಕಷ್ಟ: ಒಮ್ಮೆ ನೀವು ಸಾಲಕ್ಕೆ ಖಾತರಿದಾರ ಆದರೆ ಆ ಜವಾಬ್ದಾರಿಯಿಂದ ಹೊರಬರುವುದು ಕಷ್ಟ. ಬ್ಯಾಂಕಿನವರು ಮತ್ತು ಸಾಲ ಪಡೆದಿರುವವರು ಸೇರಿ ಪರ್ಯಾಯ ಖಾತರಿದಾರರನ್ನು ಹುಡುಕಿದಲ್ಲಿ ಮಾತ್ರ ಖಾತರಿದಾರನ ಹೊಣೆಗಾರಿಕೆಯಿಂದ ಹೊರಬರಬಹುದು. ಆದರೆ ಈ ರೀತಿ ಬೇರೆಯವರನ್ನು ಹುಡುಕಿಕೊಳ್ಳುವುದು ವಾಸ್ತವದಲ್ಲಿ ಕಷ್ಟ. ಹಾಗಾಗಿ ಸಾಲಕ್ಕೆ ಖಾತರಿದಾರರಾಗುವ ಮುನ್ನ ಆಲೋಚಿಸಿ ಮುನ್ನಡೆಯುವುದು ಒಳಿತು.

ಅನಿಶ್ಚಿತತೆಯ ನಡುವೆ ಎದ್ದುನಿಂತ ಸೂಚ್ಯಂಕಗಳು

ಏಪ್ರಿಲ್ ತಿಂಗಳಲ್ಲಿ ಷೇರುಪೇಟೆ ಸೂಚ್ಯಂಕಗಳು ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲೇ ಇದ್ದವು. ಕಳೆದ ವಾರದ ವಹಿವಾಟಿನ ವಿಚಾರಕ್ಕೆ ಬರುವುದಾದರೆ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ. 48,782 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.88ರಷ್ಟು ಜಿಗಿತ ಕಂಡಿದೆ. 14,631
ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2ರಷ್ಟು ಏರಿಕೆಯಾಗಿದೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಮತ್ತು ಸ್ಮಾಲ್
ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 1.8 ಮತ್ತು ಶೇ 3ರಷ್ಟು ಹೆಚ್ಚಳ ದಾಖಲಿಸಿವೆ.

ಟಿವಿಎಸ್, ಬಜಾಜ್ ಆಟೊ, ಹಿಂದೂಸ್ಥಾನ್ ಯುನಿಲಿವರ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಸೇರಿ ಇನ್ನೂ ಕೆಲವು ಮುಂಚೂಣಿ ಕಂಪನಿಗಳು ಮಾರ್ಚ್‌ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿರುವುದು ಮತ್ತು ಜಾಗತಿಕ ವಿದ್ಯಮಾನಗಳು ದೇಶಿ ಮಾರುಕಟ್ಟೆಗೆ ಪೂರಕವಾಗಿರುವುದು ಷೇರುಪೇಟೆಯ ಉತ್ಸಾಹಕ್ಕೆ ಕಾರಣವಾಗಿವೆ. ಆದರೆ ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳು, ಲಾಕ್‌ಡೌನ್ ವಿಸ್ತರಣೆ, ವೈದ್ಯಕೀಯ ಆಮ್ಲಜನಕದ ಕೊರತೆ, ಲಸಿಕೆ ಕೊರತೆ ಸೇರಿ ಕೆಲವು ಅಂಶಗಳು ಹೂಡಿಕೆದಾರರನ್ನು ಚಿಂತೆಗೆ ದೂಡಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 9ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.5ರಷ್ಟು, ಮೂಲಸೌಕರ್ಯ ಶೇ 3ರಷ್ಟು ಮತ್ತು ಐ.ಟಿ. ವಲಯ ಶೇ 1ರಷ್ಟು ಗಳಿಕೆ ದಾಖಲಿಸಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,456 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 3,399.17 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್ ಶೇ 16.80ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 12.98ರಷ್ಟು, ಟಾಟಾ ಸ್ಟೀಲ್ ಶೇ 11.71ರಷ್ಟು, ಬಜಾಜ್ ಫಿನ್‌ಸರ್ವ್ ಶೇ 1.80ರಷ್ಟು ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 9.99ರಷ್ಟು ಗಳಿಕೆ ಕಂಡಿವೆ.

ಎಚ್‌ಸಿಎಲ್ ಟೆಕ್ ಶೇ 5.93ರಷ್ಟು, ಬ್ರಿಟಾನಿಯಾ ಶೇ 5.51ರಷ್ಟು, ಮಾರುತಿ ಸುಜುಕಿ ಶೇ 3.30ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.26ರಷ್ಟು, ಎಚ್‌ಡಿಎಫ್‌ಸಿ ಶೇ 3.09ರಷ್ಟು ಕುಸಿದಿವೆ.

ಮುನ್ನೋಟ: ಈವಾರ ಎಸ್‌ಬಿಐ ಲೈಫ್, ಥೈರೋಕೇರ್, ಡಾಬರ್, ಎಚ್‌ಡಿಎಎಫ್‌ಸಿ, ಸಿಟಾಡೆಲ್, ಎಂಆರ್‌ಪಿಎಲ್, ಕ್ರಾಫ್ಟ್ಸ್‌ಮೆನ್ ಆಟೋಮೇಷನ್, ಬ್ಲೂಡಾರ್ಟ್, ಅದಾನಿ ಪೋರ್ಟ್ಸ್, ಹೋಮ್ ಫಸ್ಟ್ ಫೈನಾನ್ಸ್, ಜಿಲೆಟ್, ಸಿಯೆಟ್, ಅದಾನಿ ಪವರ್, ಟಾಟಾ ಸ್ಟೀಲ್, ಅದಾನಿ ಟ್ರಾನ್ಸ್‌ಮಿಷನ್, ರೇಮಂಡ್, ಟಾಟಾ ಕೆಮಿಕಲ್ಸ್, ಐಐಎಫ್‌ಎಲ್, ಪವರ್ ಇಂಡಿಯಾ, ಹೀರೊ ಮೋಟೊ, ಆರ್‌ಬಿಎಲ್ ಬ್ಯಾಂಕ್, ಏಂಜಲ್ ಬ್ರೋಕಿಂಗ್ ಸೇರಿ ಕೆಲವು ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಕೋವಿಡ್ ಪ್ರಕರಣಗಳ ನಿಯಂತ್ರಣ ಮತ್ತು ಲಸಿಕೆ ಕಾರ್ಯಕ್ರಮಕ್ಕೆ ಎಷ್ಟರಮಟ್ಟಿಗೆ ವೇಗ ಸಿಗಲಿದೆ ಎನ್ನುವುದರ ಮೇಲೆ ಷೇರು ಮಾರುಕಟ್ಟೆ ಸೂಚ್ಯಂಕಗಳ ದಿಕ್ಕು ನಿರ್ಧಾರವಾಗಲಿದೆ. ಅಂತರರಾಷ್ಟ್ರೀಯ ವಿದ್ಯಮಾನಗಳೂ ಪರಿಣಾಮ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.