ವಿಮಾ ಖಾತರಿ, ತೆರಿಗೆ ವಿನಾಯಿತಿ ಮತ್ತು ಮಾರುಕಟ್ಟೆ ಹೂಡಿಕೆ ಅವಕಾಶ. ಈ ಮೂರು ಅಂಶಗಳನ್ನು ಒಳಗೊಂಡಿರುವ ಹೂಡಿಕೆಯೆಂದರೆ ಅದು ಯುಲಿಪ್. ಯುಲಿಪ್ ನಲ್ಲಿ ಯಾರು ಹೂಡಿಕೆ ಮಾಡುವುದು ಸೂಕ್ತ, ಅದರ ವಿಶೇಷತೆಗಳೇನು, ಹೂಡಿಕೆ ಅವಧಿ ಎಷ್ಟು, ಹೀಗೆ ಯುಲಿಪ್ ಸುತ್ತ ಇರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.
ಯುಲಿಪ್ ಅಂದ್ರೆ?: ಇನ್ಶೂರೆನ್ಸ್ ಮತ್ತು ಮಾರುಕಟ್ಟೆ ಹೂಡಿಕೆ ಈ ಎರಡರ ಮಿಶ್ರಣವೇ ಯುನಿಟ್ ಆಧರಿತ ವಿಮಾ ಯೋಜನೆ ಅಥವಾ ಯುಲಿಪ್. ಈ ಯೋಜನೆಯಲ್ಲಿ ನಿಮ್ಮ ಹಣದ ಒಂದಿಷ್ಟು ಮೊತ್ತವನ್ನು ವಿವಿಧ ಹಣಕಾಸು ಮಾರುಕಟ್ಟೆಗಳಲ್ಲಿ ಹೂಡುವ ಜತೆಗೆ ವಿಮಾ ಖಾತರಿ ಒದಗಿಸಲಾಗುತ್ತದೆ. ಯುಲಿಪ್ ಹೂಡಿಕೆ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿದ್ದು 5 ವರ್ಷಗಳ ಲಾಕಿನ್ ಪೀರಿಯಡ್ ಕಡ್ಡಾಯವಾಗಿದೆ. ಯುಲಿಪ್‌ನಲ್ಲಿ ಲಾಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್-ಅಂದರೆ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳಲ್ಲಿ ಹೂಡಿಕೆಗೆ ಅವಕಾಶವಿರುತ್ತದೆ. ಹೂಡಿಕೆದಾರನಿಗೆ ಮಾರುಕಟ್ಟೆಯ ಏರಿಳಿತಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಎಷ್ಟರಮಟ್ಟಿಗಿದೆ ಎನ್ನುವುದನ್ನು ಅರಿತು ಇದರಲ್ಲಿ ಹೂಡಿಕೆ ಬಗ್ಗೆ ತೀರ್ಮಾನಿಸಬೇಕಾಗುತ್ತದೆ.
ಯುಲಿಪ್ ವರ್ಗೀಕರಣ:ಯುಲಿಪ್ ಅನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದು ಪಿಂಚಣಿ (ಪೆನ್ಶನ್) ಮತ್ತೊಂದು ಎಂಡೋಮೆಂಟ್. ಪಿಂಚಣಿ ಯುಲಿಪ್‌ಗಳಲ್ಲಿ ನಿಧಿ ಸಂಗ್ರಹ ಭಾಗವಿದೆ. ಮೆಚ್ಯೂರಿಟಿ ಮೊತ್ತವನ್ನು ಇಲ್ಲಿ ವರ್ಷಾಶನಗಳಲ್ಲಿ (ಆನ್ಯುಯಿಟಿ) ಆಧಾರದಲ್ಲಿ ತೊಡಗಿಸಬೇಕಾಗುತ್ತದೆ. ಎಂಡೋಮೆಂಟ್ ಯುಲಿಪ್ ಸಹ ನಿಧಿ ಸಂಗ್ರಹ ಭಾಗ ಹೊಂದಿದೆ. ಆದರೆ ನಿಧಿಯ ಮೌಲ್ಯವನ್ನು 5 ವರ್ಷಗಳ ನಂತರ ಪಡೆದುಕೊಳ್ಳಲು ಅವಕಾಶವಿದೆ. ಒಟ್ಟಾರೆಯಾಗಿ ಯುಲಿಪ್ನಲ್ಲಿ ಹೂಡಿಕೆಯ ಭಾಗ ಮ್ಯೂಚುವಲ್ ಫಂಡ್ ರೀತಿಯಲ್ಲೇ ಇರುತ್ತದೆ.
ಯುಲಿಪ್ ಶುಲ್ಕಗಳು: ಯುಲಿಪ್ನಲ್ಲಿ ಪ್ರಮುಖವಾಗಿ ನಾಲ್ಕು ಶುಲ್ಕಗಳಿವೆ. ಹಂಚಿಕೆ, ನಿರ್ವಹಣೆ, ಪ್ರಾಣಹಾನಿ ಮತ್ತು ಫಂಡ್ ನಿರ್ವಹಣೆ ಶುಲ್ಕಗಳು. ಫಂಡ್ ನಿರ್ವಹಣೆ ಶುಲ್ಕವನ್ನು ಶೇ. 1.35ರಷ್ಟು ಇಡಲಾಗಿದೆ. ಯುಲಿಪ್‌ಗಳನ್ನು ಎಲ್‌ಟಿಸಿಜಿ ಅಂದರೆ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯಿಂದ ಹೊರಗಿಡಲಾಗಿದೆ. ಈ ಹೂಡಿಕೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.
ಇದರಲ್ಲಿ ಹೂಡಿಕೆ ಮಾಡಬೇಕೇ?: ಯಾವ ಗುರಿ ಆಧರಿಸಿ ಯುಲಿಪ್ನಲ್ಲಿ ಹಣ ಹಾಕುತ್ತಿದ್ದೀರಿ ಎನ್ನುವುದರ ಮೇಲೆ ಯುಲಿಪ್ನ ಹೂಡಿಕೆ ಸೂಕ್ತವೇ ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಶಿಸ್ತುಬದ್ಧ ಹೂಡಿಕೆ ಮಾಡಿದರೆ ಯುಲಿಪ್‌ನಿಂದ ಅನುಕೂಲವಿದೆ. ಆದರೆ, ಐದು ವರ್ಷಗಳ ಕಡ್ಡಾಯ ಹೂಡಿಕೆ ಅವಧಿ ಮತ್ತು ಹಲವು ಮಾದರಿಯ ಶುಲ್ಕಗಳು ಕೆಲ ಹೂಡಿಕೆದಾರರನ್ನು ಯುಲಿಪ್‌ನಿಂದ ದೂರ ಉಳಿಯುವಂತೆ ಮಾಡುತ್ತವೆ. ಯುಲಿಪ್‌ಗಳನ್ನು ಸಂಪೂರ್ಣ ವಿಮಾ ಯೋಜನೆಗಳಾಗಿ ಪರಿಗಣಿಸುವುದು ತಪ್ಪಾಗುತ್ತದೆ. ಏಕೆಂದರೆ ಇದರಲ್ಲಿ ಇನ್ಶೂರೆನ್ಸ್ ಮೊತ್ತ, ಪ್ರೀಮಿಯಂನ 10ರಿಂದ 12 ಪಟ್ಟು ಮಾತ್ರ ಇರುತ್ತದೆ. ಉದಾಹರಣೆಗೆ ಯುಲಿಪ್ನಲ್ಲಿ ₹ 1 ಕೋಟಿ ಕವರೇಜ್ ಪಡೆಯಬೇಕೆಂದರೆ ಸುಮಾರು ₹ 2 ಲಕ್ಷದಿಂದ ₹ 2.5 ಲಕ್ಷದವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ, ಟರ್ಮ್ ಲೈಫ್ ಇನ್ಶೂರೆನ್ಸ್ ( ಅವಧಿ ವಿಮೆ) ಕವರೇಜ್ ತೆಗೆದುಕೊಂಡರೆ ಸುಮಾರು 30 ವರ್ಷದ ವ್ಯಕ್ತಿಗೆ ಕೇವಲ ₹ 12ರಿಂದ ₹14 ಸಾವಿರದಲ್ಲಿ ₹1 ಕೋಟಿ ಕವರೇಜ್ ಸಿಗುತ್ತದೆ. ಈ ಮೇಲಿನ ನಾನಾ ಕಾರಣಗಳಿಂದ ಹಲವರು ಯುಲಿಪ್‌ನಿಂದ ದೂರ ಉಳಿದಿದ್ದಾರೆ.
(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.