ಪ್ರಶ್ನೆ: ನಾನು ಹಿರಿಯ ನಾಗರಿಕ. ನನ್ನ ಎಲ್‌ಐಸಿ ಎಂಡೋಮೆಂಟ್ 20 ವರ್ಷ ಮುಗಿದು ಹಣ ಬರುತ್ತಿದೆ. ಇದು ₹ 5 ಲಕ್ಷದ ಪಾಲಿಸಿ. ನನಗೆ ಎಷ್ಟು ಹಣ ಬರಬಹುದು ಹಾಗೂ ಭದ್ರವಾದ ಹೆಚ್ಚಿನ ವರಮಾನ ತರುವ ಯೋಜನೆ ಬಗ್ಗೆ ತಿಳಿಸಿ.
-ಶಂಕರಾನಂದ ಸ್ವಾಮಿ, ಮೈಸೂರು
ಉತ್ತರ: ಪಾಲಿಸಿ ಅವಧಿ 20 ವರ್ಷ ಆಗಿರುವುದರಿಂದ ಬೋನಸ್ ಸೇರಿಸಿ ₹ 10 ಲಕ್ಷ ಬರಬಹುದು. ಭದ್ರವಾದ, ಹೆಚ್ಚಿನ ವರಮಾನ ತರುವ ಎರಡು ಠೇವಣಿಗಳೆಂದರೆ ಅಂಚೆ ಕಚೇರಿಯ ಹಿರಿಯ ನಾಗರಿಕರ ಠೇವಣಿ ಮತ್ತು ಎಲ್‌ಐಸಿಯವರ ವಯೋವಂದನಾ ಯೋಜನೆ. ಎರಡರಲ್ಲಿಯೂ ಬಡ್ಡಿದರ ಶೇಕಡ 7.4ರಷ್ಟು ಇದೆ. ಅಂಚೆ ಕಚೇರಿಯಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಬರುತ್ತದೆ. ಎಲ್‌ಐಸಿಯಲ್ಲಿ ಪ್ರತೀ ತಿಂಗಳು ಬಡ್ಡಿ ಕೊಡುತ್ತಾರೆ. ನೀವು 10 ವರ್ಷ ಕಾಯುವಂತಿದ್ದರೆ ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ₹ 10 ಲಕ್ಷ ತೊಡಗಿಸಿ. ಮುಂದೆ ಈ ಯೋಜನೆಯ ಬಡ್ಡಿದರ ಕಡಿಮೆ ಆದರೂ ಈಗಿನ ಬಡ್ಡಿದರ ಶೇ 7.4ರಷ್ಟನ್ನು 10 ವರ್ಷಗಳ ಅವಧಿ ತನಕ ಯಾವ ಕಡಿತವಿಲ್ಲದೇ ಪಡೆಯಬಹುದು. ಭದ್ರತೆ ವಿಚಾರದಲ್ಲಿ ಧೈರ್ಯವಾಗಿ ಇಲ್ಲಿ ಹಣ ಹೂಡಬಹುದು.
*
ಪ್ರಶ್ನೆ: ನಾನು ಹಳ್ಳಿಯಲ್ಲಿ ಬೆಳೆದವನು. ನನಗೆ ಬ್ಯಾಂಕ್ ವ್ಯವಹಾರ ಅಥವಾ ಇನ್ನಿತರ ಹಣದ ವ್ಯವಹಾರಗಳಲ್ಲಿ ಅನುಭವ ಇಲ್ಲ. ನಾನು ಕೃಷಿಕ. ನನಗೆ ಪ್ಯಾನ್ ಕಾರ್ಡ್ ಅವಶ್ಯಕತೆ ಇದೆಯೇ? ಇದರಿಂದ ಏನು ಉಪಯೋಗ? ಪ್ಯಾನ್ ಕಾರ್ಡ್ ಪಡೆದರೆ ತೆರಿಗೆ ಕೊಡಬೇಕಾಗುತ್ತದೆ ಎಂದು ಹಳ್ಳಿಯಲ್ಲಿ ಮಾತಾಡಿಕೊಳ್ಳುತ್ತಾರೆ.
-ಸೋಮಣ್ಣ, ಊರುಬೇಡ
ಉತ್ತರ: ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸ ಅಥವಾ ವ್ಯವಹಾರ ಇರುವುದು ಸಹಜ. ನೀವು ಹಳ್ಳಿಯವರೆಂದ ತಕ್ಷಣ ಹಣದ ವ್ಯವಹಾರ ಇಲ್ಲದಿರಲು ಸಾಧ್ಯವಿಲ್ಲ. ನಿಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಿ ಬರುವ ಹಣವನ್ನು ಮನೆಯಲ್ಲಿ ಇಡುವುದು ಸರಿಯಲ್ಲ. ಹೀಗೆ ಬಂದ ಹಣವನ್ನು ಬ್ಯಾಂಕ್‌ನ ಉಳಿತಾಯ ಖಾತೆ ಅಥವಾ ಅವಧಿ ಠೇವಣಿಯಲ್ಲಿ ಇಡಿ. ಹಣ ಬಂದಾಗ ಬ್ಯಾಂಕ್‌ಗೆ ಜಮಾ ಮಾಡಬೇಕು ಹಾಗೂ ಖರ್ಚಿಗೆ ಬೇಕಾದಾಗ ಖಾತೆಯಿಂದ ಹಣ ತೆಗೆಯಬೇಕು. ಇದು ಆರ್ಥಿಕ ಶಿಸ್ತು. ಆರ್ಥಿಕ ಶಿಸ್ತು ಪಾಲಿಸಿದರೆ ನಿಮ್ಮ ಜೀವನ ಸುಖಮಯವಾಗಿರುತ್ತದೆ. ಒಟ್ಟಿನಲ್ಲಿ ನೀವು ಬ್ಯಾಂಕ್ ಖಾತೆ ತೆರೆಯಲೇಬೇಕು. ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ನಕಲು ಪ್ರತಿ ಸಲ್ಲಿಸಬೇಕು. ಓರ್ವ ವ್ಯಕ್ತಿ ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದಯಾವುದೇ ವ್ಯವಹಾರ ಮಾಡುವಾಗ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಲೇಬೇಕು. ಹಳ್ಳಿಯಲ್ಲಿ ಮಾತ್ರವಲ್ಲ ಪಟ್ಟಣ ವಾಸಿಗಳಲ್ಲಿಯೂ ಪ್ಯಾನ್ ಕಾರ್ಡ್ ಬಗ್ಗೆ ಭಯಪಡುವವರು ಇದ್ದಾರೆ. ಪ್ಯಾನ್ ಕಾರ್ಡ್ ಹೊಂದಿದ ಮಾತ್ರಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎನ್ನುವುದು ತಪ್ಪು. ಪ್ಯಾನ್ ಕಾರ್ಡ್ ಮಾಡಿಸಿ, ಬ್ಯಾಂಕ್ ಖಾತೆ ತೆರೆದು ಹಣ ಠೇವಣಿ ಮಾಡಿ. ಕೃಷಿ ಆದಾಯ ಎಷ್ಟು ಇದ್ದರೂ ತೆರಿಗೆ ಇಲ್ಲ.
*
ಪ್ರಶ್ನೆ: ನನ್ನ ಮಗ ಕಂಪ್ಯೂಟರ್ ಡಿಪ್ಲೊಮಾ ಮಾಡಲು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ನಿಮ್ಮ ಸಲಹೆ ಬೇಕಾಗಿದೆ. ನಾನು ಕೃಷಿಕ. ಭತ್ತ ಮತ್ತು ತರಕಾರಿ ಬೆಳೆಯುತ್ತೇನೆ. ವಾರ್ಷಿಕ ಒಟ್ಟು ಆದಾಯ ₹ 3 ಲಕ್ಷದಿಂದ ₹ 4 ಲಕ್ಷ. ಶಿಕ್ಷಣ ಸಾಲದ ಬಡ್ಡಿ ದರ, ಸಾಲ ತೀರಿಸುವ ಅವಧಿ, ಜಾಮೀನು, ಸಾಲಕ್ಕೆ ಕೊಡಬೇಕಾದ ಆಧಾರ ಎಲ್ಲವನ್ನೂ ವಿವರವಾಗಿ ತಿಳಿಸಿ.
-ಶಿವಪ್ಪ ಶೆಟ್ಟಿ, ಉಡುಪಿ
ಉತ್ತರ: ನಿಮ್ಮ ವಾರ್ಷಿಕ ಆದಾಯ ಪರಿಗಣಿಸಿದಾಗ ನಿಮ್ಮ ಮಗ ಕಂಪ್ಯೂಟರ್ ಡಿಪ್ಲೊಮಾ ಓದಲು ₹ 4.50 ಲಕ್ಷದ ತನಕ ಯಾವುದೇ ಆಧಾರ, ಜಾಮೀನು ಇಲ್ಲದೇ ಬಡ್ಡಿ ಅನುದಾನಿತ ಸಾಲ (ಅಂದರೆ ಬಡ್ಡಿ ರಹಿತ ಶಿಕ್ಷಣ ಸಾಲ) ಪಡೆಯಬಹುದು. ಕೋರ್ಸ್‌ನ ಅವಧಿ ಮುಗಿದು ಕೆಲಸ ಸಿಕ್ಕಿದ ಕೂಡಲೇ ಸಾಲಕ್ಕೆ ಬಡ್ಡಿ ಕೊಡಬೇಕಾಗುತ್ತದೆ. ಬಡ್ಡಿ ಅನುದಾನಿತ ಶಿಕ್ಷಣ ಸಾಲ ಯೋಜನೆಯನ್ನು ಕೇಂದ್ರ ಸರ್ಕಾರ 2009ರ ಏಪ್ರಿಲ್ 1ರಿಂದ ಜಾರಿಗೆ ತಂದಿದೆ. ಈ ಸಾಲವು ಹೆತ್ತವರ ವಾರ್ಷಿಕ ಆದಾಯ ₹ 4.5 ಲಕ್ಷದೊಳಗೆ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ. ತಹಶೀಲ್ದಾರರಿಂದ ಈ ವಿಚಾರದಲ್ಲಿ ಪ್ರಮಾಣಪತ್ರ ಪಡೆಯಬೇಕು. ವಿದ್ಯಾಭ್ಯಾಸವು ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್ ಆಗಿರಬೇಕು. ಕಾಲೇಜು ಶುಲ್ಕ, ಪುಸ್ತಕ, ವಿದ್ಯಾರ್ಥಿ ನಿಲಯದ ಶುಲ್ಕ ಹಾಗೂ ಸಂಬಂಧಿತ ಉಪಕರಣ ಕೊಳ್ಳಲು ಬ್ಯಾಂಕ್‌ಗಳು ನೇರವಾಗಿ ಹಣ ನೀಡುತ್ತವೆ. ಶಿಕ್ಷಣದ ಅವಧಿ ಮುಗಿದು ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳ ಒಳಗಾಗಿ ಮರುಪಾವತಿಯನ್ನು ಬಡ್ಡಿಯೊಂದಿಗೆಪ್ರಾರಂಭಿಸಬೇಕು.
*
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್: businessdesk@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.