ADVERTISEMENT

ಪ್ರಶ್ನೋತ್ತರ ಅಂಕಣ: ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದೇ?

ಸರ್ಕಾರಿ ನೌಕರರು ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದೇ? ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 17 ಏಪ್ರಿಲ್ 2024, 0:25 IST
Last Updated 17 ಏಪ್ರಿಲ್ 2024, 0:25 IST
ಷೇರುಪೇಟೆ
ಷೇರುಪೇಟೆ   

ಗೌತಮ್ ಗೋಪಾಲ ಶೆಟ್ಟಿ. ಊರು ಹೆಸರಿಸಿಲ್ಲ.

ಪ್ರಶ್ನೆ: ನಾನು ಸರ್ಕಾರಿ ನೌಕರನಾಗಿದ್ದು, ನಾನು ಡಿಮ್ಯಾಟ್ ಖಾತೆ ತೆರೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ ಎನ್ನುವ ಬಗ್ಗೆ ನಿಮ್ಮಿಂದ ಮಾಹಿತಿ ಬೇಕಾಗಿದೆ.

ಉತ್ತರ: ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಎಲ್ಲಾ ವರ್ಗದ ವ್ಯಕ್ತಿಗಳು ಡಿಮ್ಯಾಟ್ ಖಾತೆ ತೆರೆಯುವ ಮೂಲಕ ಹೂಡಿಕೆ ಮಾಡಬಹುದು. ಆದರೆ, ಸರ್ಕಾರಿ ನೌಕರಿಯಲ್ಲಿ ಇರುವ ವ್ಯಕ್ತಿಗಳ ವಿಚಾರಕ್ಕೆ ಬಂದಾಗ ಕೆಲವು ನಿಯಮಗಳನ್ನು ಅವರ ನಾಗರಿಕ ಸೇವಾ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳಿಗೆ ತಮ್ಮ ವೃತ್ತಿ ನಿರ್ವಹಿಸುವಾಗ ಹಾಗೂ ಆರ್ಥಿಕವಾಗಿ ಅನೇಕ ಮಾಹಿತಿಗಳು ಸರ್ಕಾರದ ಸೇವಾವಧಿಯಲ್ಲಿ ಅವರ ಸುಪರ್ದಿಗೆ ಬರುವುದರಿಂದ ಹಾಗೂ ಅನಗತ್ಯವಾಗಿ ಹಣದ ಆಮಿಷಗಳಿಗೆ ಅವರು ಒಳಗಾಗಬಾರದೆಂಬ ಕಾರಣಕ್ಕೆ ಇಂತಹ  ಕೆಲವು ನಿರ್ಬಂಧ ಹೇರಲಾಗಿದೆ.  

ADVERTISEMENT

ಕೇಂದ್ರ ನಾಗರಿಕ ಸೇವೆಗಳ ನಡವಳಿಕೆ ನಿಯಮಾವಳಿ 1964ರಲ್ಲಿ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಅನ್ವಯಿಸುವ ನಿರ್ಬಂಧಗಳನ್ನು ಉಲ್ಲೇಖಿಸಲಾಗಿದೆ. ಇದರ ನಿಯಮ 16ರ ಅನ್ವಯ  ಯಾವುದೇ ಸರ್ಕಾರಿ ಉದ್ಯೋಗಿಗಳು ಷೇರು ಅಥವಾ ಇತರೆ ಹೂಡಿಕೆ ಉತ್ಪನ್ನದಲ್ಲಿ ಸ್ಪೆಕ್ಯುಲೇಟಿವ್ (ತ್ವರಿತ ದರ ಏರಿಳಿತ) ರೂಪದಲ್ಲಿರುವ ವ್ಯವಹಾರಗಳಲ್ಲಿ ತೊಡಗಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ, ಕಾರ್ಪೊರೇಷನ್, ಸರ್ಕಾರಿ ಕಂಪನಿ ಇತ್ಯಾದಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವ ಎಲ್ಲಾ ನೌಕರರಿಗೂ  ಅನ್ವಯಿಸುತ್ತದೆ.

ಆದರೆ, ಕೇವಲ ಹೂಡಿಕೆ ದೃಷ್ಟಿಯಿಂದ ಮಾಡುವ ವ್ಯವಹಾರ ಇದರಲ್ಲಿ ಒಳಗೊಳ್ಳುವುದಿಲ್ಲ. ಕೆಲವೊಂದು ರೀತಿಯ ಹೂಡಿಕೆಗಳಿಗೆ ರಿಯಾಯಿತಿಗಳನ್ನೂ  ನೀಡಲಾಗಿದೆ. ಉದಾಹರಣೆಗೆ, ಹಂತ ಹಂತವಾಗಿ ಷೇರುಗಳನ್ನು ದೀರ್ಘಾವಧಿಗಾಗಿ ಖರೀದಿಸಿ ಕೆಲವು ತಿಂಗಳ ಬಳಿಕ ಮಾರಾಟ ಮಾಡಿದಾಗ ಅದು ಹೂಡಿಕೆ ಎಂದೇ ಪರಿಗಣಿಸಲ್ಪಡುತ್ತದೆ. ನಿಷೇಧಿತ ಪರಿಮಿತಿಯಲ್ಲಿ ಕರೆನ್ಸಿ ಹಾಗೂ ಸರಕು ವಹಿವಾಟು, ಫ್ಯೂಚರ್ಸ್ ಮತ್ತು ಆಪ್ಶನ್ ವ್ಯವಹಾರ ಅಥವಾ ಇಂಟ್ರಾಡೇ ಟ್ರೇಡಿಂಗ್ ಇತ್ಯಾದಿಗಳೂ ಇಲ್ಲಿ ಬಹುಮುಖ್ಯವಾಗಿ ಒಳಗೊಳ್ಳುತ್ತವೆ. ಕಾರಣ ಇವೆಲ್ಲಾ ಪದೇ ಪದೇ ವ್ಯವಹರಿಸಲ್ಪಡುವ ಸ್ಪೆಕ್ಯುಲೇಟಿವ್ ಮಾರುಕಟ್ಟೆ ಉತ್ಪನ್ನಗಳಾಗಿವೆ.

ವ್ಯವಹಾರ ಹಾಗೂ ಹೂಡಿಕೆ ಎರಡೂ ಪದಗಳು ಬೇರೆ ಬೇರೆ ಉದ್ದೇಶ ಹಾಗೂ ಗುಣಲಕ್ಷಣಗಳನ್ನು ಹೊಂದಿವೆ. ನೋಂದಾಯಿತ  ಸ್ಟಾಕ್ ಬ್ರೋಕರ್‌ಗಳು ಅಥವಾ ಇತರ ನೋಂದಾಯಿತ ಸಂಸ್ಥೆಗಳ ಮೂಲಕ ಮಾಡಲಾದ ‘ಅಪರೂಪದ ವ್ಯವಹಾರ’ವನ್ನು ಹೂಡಿಕೆ ಎಂದು ಪರಿಗಣಿಸಿದ್ದಾರೆ. ಅದೇ ಒಂದು ವರ್ಷದ ಅವಧಿಯಲ್ಲಿ ಅನೇಕ ಬಾರಿ ವ್ಯವಹರಿಸಿದಾಗ ಅದು ಹೂಡಿಕೆಯ ವ್ಯಾಪ್ತಿ ಮೀರುತ್ತದೆ. ಇನ್ನು ನಿಯಮಾವಳಿಯಲ್ಲಿ ಎಷ್ಟು ಬಾರಿ ವ್ಯವಹರಿಸಬಹುದು ಎನ್ನುವ ನಿರ್ದಿಷ್ಟ ಮಾಹಿತಿ ನೀಡಿಲ್ಲದಿದ್ದರೂ, ಅದರರ್ಥ ಅನೇಕ ಬಾರಿ ಖರೀದಿ ಮಾರಾಟ ಮಾಡಬಹುದೆಂದಲ್ಲ.

ದೀರ್ಘಾವಧಿಗೆ ಷೇರುಗಳಲ್ಲದೆ ಎಸ್‌ಐಪಿ, ಗೋಲ್ಡ್ ಬಾಂಡ್‌, ಆರ್‌ಬಿಐ ಬಾಂಡ್‌ ಮತ್ತು ಅಂತಹ ಇತರೆ ಹೂಡಿಕೆಗಳನ್ನೂ ಮಾಡಬಹುದು. ಈ ಹೂಡಿಕೆಗೂ ಆರ್ಥಿಕ ಮಿತಿ ಇದ್ದು 2019ರ ತಿದ್ದುಪಡಿಯಂತೆ ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ವರ್ಗದ ನೌಕರರಾಗಿದ್ದರೂ ತಮ್ಮ ಮೂಲ ವೇತನದ 6 ಪಟ್ಟು ಮೊತ್ತವನ್ನು ಹೂಡಿಕೆ ಮಾಡಲು ಮುಕ್ತ ಅವಕಾಶವಿದೆ. ಇನ್ನೂ ಹೆಚ್ಚಿನ ಹೂಡಿಕೆ ಇದ್ದರೆ, ಅದನ್ನು ವರ್ಷಾಂತ್ಯವಾದೊಡನೆ ಸಂಬಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.

*****

ಶ್ರೀಧರ ರಾಮಮೂರ್ತಿ, ಬೆಂಗಳೂರು.

ಪ್ರಶ್ನೆ: ನನ್ನ ಹೆಸರಲ್ಲಿರುವ ಪಿಪಿಎಫ್ ಖಾತೆಯಲ್ಲಿರುವ ಮೊತ್ತ ಮುಂದಿನ ತಿಂಗಳು ಹದಿನೈದು ವರ್ಷ ಪೂರೈಸಿ ಹಿಂಪಡೆಯುವ ಹಂತಕ್ಕೆ ಬರುತ್ತಿದೆ. ಕಳೆದ ಸುಮಾರು 15 ವರ್ಷಗಳಿಂದ ಆ ಖಾತೆಗೆ ಹಣ ಜಮಾ ಮಾಡುತ್ತಿದ್ದೇನೆ. ಬಡ್ಡಿ ಇತ್ಯಾದಿ ಸೇರಿ ₹40 ಲಕ್ಷ ಸಿಗಬಹುದು.  ಈ ವಿಚಾರದಲ್ಲಿ ನನಗಿರುವ ಸಂದೇಹಗಳೆಂದರೆ ಹೆಚ್ಚುವರಿ ಗಳಿಸುವ ಬಡ್ಡಿ ಆದಾಯವನ್ನು ಒಂದೇ ಬಾರಿಗೆ ನಗದೀಕರಿಸುವ ಕಾರಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆಯೇ? ಈಗ ಸಿಗುವ ಹಣವನ್ನು ಹೇಗೆ ಹೂಡಿಕೆ ಮಾಡಬಹುದು. ನನ್ನ ಪ್ರಸ್ತುತ ವಯಸ್ಸು 65 ವರ್ಷ. ನನಗೆ ಪ್ರತಿ ತಿಂಗಳೂ ಪಿಂಚಣಿ ಆದಾಯ ಬರುತ್ತಿದೆ. ಈ ಮೊತ್ತ ವರ್ಷಕ್ಕೆ ₹7.50 ಲಕ್ಷದೊಳಗೆ ಇದೆ. ವರ್ಷಕ್ಕೆ ಬ್ಯಾಂಕಿನಿಂದ ತಿಂಗಳಿಗೆ ₹10 ಸಾವಿರ ಬಡ್ಡಿಯೂ ಬರುತ್ತಿದೆ. ಈ ಆದಾಯವಲ್ಲದೆ ಇನ್ಯಾವುದೇ ಆದಾಯ ನನಗಿಲ್ಲ.

ಉತ್ತರ: ಯಾವುದೇ ನಾಗರಿಕರು ಅಂಚೆ ಇಲಾಖೆಯ ಪಿಪಿಎಫ್ ಖಾತೆ ತೆರೆದಾಗ ಆ ಹೂಡಿಕೆಯ ಮೇಲೆ ಗಳಿಸುವ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಹೂಡಿಕೆದಾರರು ಮಾಡುವ ಹೂಡಿಕೆಗೆ ಪ್ರತಿ ವರ್ಷದ ಕೊನೆಗೆ ಬಡ್ಡಿ ಜಮಾ ಮಾಡಲಾಗುತ್ತದೆ. ಹೀಗಾಗಿಯೇ ನಿಮ್ಮ ಮೊತ್ತ ವೃದ್ದಿಸಿದೆ. ನಿಮಗೆ ಈ ಮೊತ್ತ ಒಂದೇ ಬಾರಿಗೆ ಸಿಕ್ಕಿದರೂ ಅದರ ಆದಾಯ ಪ್ರತಿ ವರ್ಷಕ್ಕೆ ಸಂಬಂಧಿಸಿದ್ದಾಗಿರುತ್ತದೆ.

ಆದಾಯ ತೆರಿಗೆಯ ಸೆಕ್ಷನ್ 10(11)ರ ಪ್ರಕಾರ ಪಿಪಿಎಫ್ ಹೂಡಿಕೆ ಮೇಲೆ ಸಿಕ್ಕಿದ ಬಡ್ಡಿಯು ತೆರಿಗೆಯಿಂದ ಮುಕ್ತವಾಗಿದೆ. ಅದೇ ರೀತಿ ಹೂಡಿಕೆ ಮಾಡಿದಾಗ, ಆ ಮೊತ್ತಕ್ಕೆ ಸೆಕ್ಷನ್ 80ಸಿ ಅಡಿ ವಿನಾಯಿತಿಯು ಹಲವರು ವರ್ಷಗಳಿಂದ ಜಾರಿಯಲ್ಲಿದೆ. ನೀವೂ ಇದರ ಲಾಭ ಪಡೆದಿರಬಹುದು. ಪಿಪಿಎಫ್ ಹೂಡಿಕೆ 15 ವರ್ಷಗಳ ತರುವಾಯ ಹಿಂಪಡೆಯುವಾಗಲೂ ಸಿಗುವ ಯಾವುದೇ ಮೊತ್ತಕ್ಕೆ ತೆರಿಗೆ ಇರುವುದಿಲ್ಲ.

ಇನ್ನು ನಿಮ್ಮ ಒಟ್ಟಾರೆ ಮೊತ್ತವನ್ನು ಮರು ಹೂಡಿಕೆ ಮಾಡುವ ವಿಚಾರವಾಗಿ ಹೇಳುವುದಾದರೆ, ಈ ಮೊತ್ತದಲ್ಲಿ ₹30 ಲಕ್ಷವನ್ನು ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಈ ಖಾತೆಯನ್ನು ಪತ್ನಿ ಹೆಸರಲ್ಲಿ ಜಂಟಿಯಾಗಿಯೂ ತೆರೆದು ವ್ಯವಹರಿಸಬಹುದು. ಉಳಿದ ಮೊತ್ತದಲ್ಲಿ ₹9 ಲಕ್ಷ ಮೊತ್ತವನ್ನು ಪ್ರತಿ ತಿಂಗಳು ಬಡ್ಡಿ ಆದಾಯ ನೀಡುವ ಎಂಐಎಸ್ ಸ್ಕೀಂನಲ್ಲೂ ಹೂಡಿಕೆ ಮಾಡಬಹುದು. ಈ ಎರಡೂ ರೀತಿಯ ಹೂಡಿಕೆಯ ಬಡ್ಡಿ ಆದಾಯಕ್ಕೆ ಪ್ರತಿವರ್ಷ ತೆರಿಗೆ ಇರುತ್ತದೆ. ನಿಮ್ಮ ಪಿಂಚಣಿ ಆದಾಯ, ಬ್ಯಾಂಕ್ ಬಡ್ಡಿ ಆದಾಯದೊಡನೆ ಮೇಲಿನ ಹೂಡಿಕೆಗಳ ಮೇಲೆ ಬರುವ ಹೆಚ್ಚುವರಿ ಬಡ್ಡಿ ಆದಾಯಕ್ಕೂ ಮುಂದೆ ನಿಮಗೆ ಅನ್ವಯಿಸಲ್ಪಡುವ ತೆರಿಗೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.