ADVERTISEMENT

ಪ್ರಶ್ನೋತ್ತರ: ಹೂಡಿಕೆ, ಆರ್ಥಿಕ ಸಮಸ್ಯೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 6 ನವೆಂಬರ್ 2024, 1:18 IST
Last Updated 6 ನವೆಂಬರ್ 2024, 1:18 IST
ಪ್ರಮೋದ ಶ್ರೀಕಾಂತ ದೈತೊಟ
ಪ್ರಮೋದ ಶ್ರೀಕಾಂತ ದೈತೊಟ   

ಪ್ರಶ್ನೆ: ನಾನು ಪ್ರೌಢ ಶಾಲಾ ಶಿಕ್ಷಕನಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಬಹುದೇ? ದಯವಿಟ್ಟು ತಿಳಿಸಿ. ಚಂದ್ರಶೇಖರಾಚಾರ್ಯ ಪುರೋಹಿತ್, ಊರು ತಿಳಿಸಿಲ್ಲ  

ಉತ್ತರ: ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಎಲ್ಲರಿಗೂ ಸಮಾನ ಹಾಗೂ ಮುಕ್ತ ಅವಕಾಶವಿದ್ದು, ಅಗತ್ಯವಿರುವ ಬ್ಯಾಂಕ್ ಖಾತೆ ಹಾಗೂ ಕೆವೈಸಿ ದಾಖಲೆಗಳನ್ನು ಸೆಬಿ ನೋಂದಾಯಿತ ಯಾವುದೇ ಬ್ರೋಕರ್‌ಗೆ ಸಲ್ಲಿಸುವ ಮೂಲಕ ಡಿಮ್ಯಾಟ್ ಖಾತೆ ತೆರೆದು ಹೂಡಿಕೆ ಆರಂಭಿಸಬಹುದು. ಪ್ರಸ್ತುತ ದಿನಗಳಲ್ಲಿ, ಸ್ವತಃ ಆನ್‌ಲೈನ್‌–ಮೊಬೈಲ್ ಮೂಲಕವೂ ಖಾತೆ ತೆರೆದು ಯಾವುದೇ ಸಂದರ್ಭದಲ್ಲಿ ವ್ಯವಹರಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಆಧಾರ್ ಒಟಿಪಿ ಮೂಲಕವೇ ನಿಮ್ಮ ದಾಖಲೆಗಳು ಪರಿಶೀಲನೆಯಾಗುತ್ತವೆ.

ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನಿಮ್ಮ ಉದ್ದೇಶ, ಆ ಉದ್ದೇಶ ಸಾಧನೆಯ ಬಗೆಗಿರುವ ನಿಮ್ಮ ಪರಿಣತಿ, ಹೂಡಿಕೆದಾರರಿಗೆ ಇರಬೇಕಾದ ಸಾವಧಾನವೇ ಗೆಲುವಿನ ಪ್ರಮುಖ ಸಾಧನ. ಇಂದು ಸಾವಿರಾರು ಕಂಪನಿಗಳಿರುವ ಕಾರಣ ಅನಗತ್ಯ ಗೊಂದಲಕ್ಕೊಳಗಾಗದೆ, ಪ್ರತಿ ಷೇರು ಆಯ್ಕೆಯಲ್ಲಿರಬೇಕಾದ ಸೂಕ್ಷ್ಮವನ್ನು ಅರಿತು, ಕಂಪನಿ ಹಾಗೂ ಆ ಉದ್ಯಮ ವಲಯದ ಸಾಧಕ ಬಾಧಕಗಳನ್ನು ತಿಳಿದು, ಮಾರುಕಟ್ಟೆಯ ಏರಿಳಿತದ ಸಂದರ್ಭಗಳಲ್ಲಿ ಸಕಾಲಿಕವಾಗಿ ವ್ಯವಹರಿಸುವುದು ಇಲ್ಲಿ ಎಲ್ಲದಕ್ಕಿಂತ ಮುಖ್ಯ ಅಂಶ.

ADVERTISEMENT

ಪ್ರಶ್ನೆ: ನಾನು ಉದ್ಯೋಗದಿಂದ ನಿವೃತ್ತಿ ಹೊಂದಿ ಹತ್ತು ವರ್ಷಗಳಾಗಿವೆ. ಹಿಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿ ಸ್ವಂತ ಮನೆ ಕಟ್ಟಿಸಿದೆ. ಈ ಸಂದರ್ಭದಲ್ಲಿ ನನ್ನ ಹೆಚ್ಚಿನ ಉಳಿತಾಯದ ಮೊತ್ತವನ್ನು ಮನೆಯ ನಿರ್ಮಾಣಕ್ಕೆ ಖರ್ಚು ಮಾಡಿದ್ದೆ. ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಮೊತ್ತದ ಬ್ಯಾಂಕ್ ಸಾಲದಲ್ಲಿ ಈ ಮನೆಯ ನಿರ್ಮಾಣ ಸಾಧ್ಯವಾಯಿತು. ಪ್ರಸ್ತುತ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಇಲ್ಲ. ನಾನು ಹಾಗೂ ನನ್ನ ಪತ್ನಿ, ಆಕೆಯ ಹೆಸರಲ್ಲಿರುವ ಉಳಿತಾಯದ ಮೇಲೆ ಬರುವ ಬಡ್ಡಿಯಿಂದ ಜೀವನ ನಡೆಸುತ್ತಿದ್ದೇವೆ. ನಮಗೆ ಮಕ್ಕಳಿಲ್ಲ, ಆದರೆ ಸಹೋದರ ಹಾಗೂ ಅವರ ಮಕ್ಕಳಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ನಮ್ಮ ಬದುಕಿಗೆ ಹಾಗೂ ಆರೋಗ್ಯ ವಿಚಾರದ ಸಮಸ್ಯೆಗಳಿಗೆ ಮುಂದೆ ಏನಾದರೂ ತೊಂದರೆ ಬಂದರೆ, ಯಾವುದೇ ಹೆಚ್ಚಿನ ಮೊತ್ತ ನಮ್ಮಲ್ಲಿಲ್ಲ. ಆ ಸಂದರ್ಭದಲ್ಲಿ ಸುಮಾರು ₹2 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೂ ಆರ್ಥಿಕ ಸಮಸ್ಯೆ ಎದುರಾಗದಂತೆ ಯಾವ ರೀತಿ ಬದುಕು ನಿಭಾಯಿಸಬಹುದು. ಕೆಲವೊಮ್ಮೆ ಉಳಿತಾಯ ಮಾಡಿದ್ದ ಮೊತ್ತ ಉಪಯೋಗಿಸದೆ, ಬ್ಯಾಂಕಿನಿಂದ ಅಧಿಕ ಸಾಲ ಪಡೆದು ಮನೆ ಕಟ್ಟಿಸಬಹುದಿತ್ತು ಎಂದೇ ಅನಿಸುತ್ತಿದೆ. ಈ ಬಗ್ಗೆ ಸಲಹೆಯ ಅಗತ್ಯವಿದೆ. ತಿಳಿಸಿ.

ಹೆಸರು ಬೇಡ, ಬೆಂಗಳೂರು

ಉತ್ತರ: ನಿವೃತ್ತಿ ಜೀವನದ ಬಗ್ಗೆ ನಾವು ಯೋಚಿಸುವಾಗ, ಸಾಮಾನ್ಯವಾಗಿ ನಿರಂತರ ಆದಾಯದ ಅಭಾವ ಅಥವಾ ನಮ್ಮ ಎಲ್ಲ ಉದ್ದೇಶಗಳಿಗೆ ಅಗತ್ಯವಿರುವ ಯಥೇಚ್ಛ ಹಣ ನಮ್ಮಲ್ಲಿ ಇರಬೇಕಾದುದು ಮುಖ್ಯವಾಗಿ ಕಾಳಜಿಯ ವಿಷಯವಾಗಿರುತ್ತದೆ. ವೃತ್ತಿಯಿಂದ ನಿವೃತ್ತಿಯಾದ ಬಳಿಕ ದುಡಿಮೆಯಿಂದ ನಿರಂತರ ಆದಾಯವಿಲ್ಲದಿದ್ದರೂ ಜೀವನ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಿರುವ ಹಣಕಾಸು ವ್ಯವಸ್ಥೆ ಅವಶ್ಯಕ. ಇಂತಹ ಸಂದರ್ಭದಲ್ಲಿ, ನಮ್ಮ ಉಳಿತಾಯ ಅಥವಾ ಮಕ್ಕಳ ಮೇಲಿನ ನಮ್ಮ ಅವಲಂಬನೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಆದರೆ ನಿಮ್ಮ ವಿಚಾರದಲ್ಲಿ ಇದು ಅಸಾಧ್ಯವಾದ ಕಾರಣ ಉತ್ತಮ ಮೌಲ್ಯವಿರುವ ನಿಮ್ಮ ಮನೆಯನ್ನು ಆರ್ಥಿಕ ಮೂಲವನ್ನಾಗಿ ಪರಿವರ್ತಿಸಲು ಸಹಾಯ ಮಾಡುವ ‘ರಿವರ್ಸ್ ಮಾರ್ಟ್‌ಗೇಜ್’ (Reverse Mortgage) ಮುಖ್ಯ ಸಾಧನವಾಗಬಹುದು.

ರಿವರ್ಸ್ ಮಾರ್ಟ್‌ಗೇಜ್ ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಸಾಲ ಸೌಲಭ್ಯವಾಗಿದೆ. ಇದು ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ, ಸ್ವಂತ ಮನೆ ಅಥವಾ ಆಸ್ತಿ ಹೊಂದಿರುವ ನಿವೃತ್ತ ನಾಗರಿಕರು ತಮ್ಮ ಆಸ್ತಿಯನ್ನು ಬ್ಯಾಂಕಿಗೆ ಅಡವು ಇಟ್ಟು ಪ್ರತಿ ತಿಂಗಳೂ ಕಂತಿನ ರೂಪದಲ್ಲಿ ತಮ್ಮ ಆಸ್ತಿಗೆ ಸಂಬಂಧಪಟ್ಟು ಹಣ ಪಡೆಯಬಹುದು. ಈ ರೀತಿ 15 ರಿಂದ 20 ವರ್ಷ ಮುಂದುವರಿಸಬಹುದು. ಇಲ್ಲಿ ಮರುಪಾವತಿಗೆ ಎರಡು ಅವಕಾಶಗಳನ್ನು ಕಲ್ಪಿಸಿ ಕೊಡಲಾಗಿದೆ. ಮೊದಲನೆಯದು, ಆಸ್ತಿ ಹೊಂದಿದ ಮಾಲೀಕರು ಮಾರಾಟ ಮಾಡುವ ಉದ್ದೇಶ ಹೊಂದಿದ್ದಲ್ಲಿ, ಮುಂದೆ ಮಾರಾಟವಾದಾಗ ಸಿಗುವ ಹಣಕ್ಕೆ ಅಸಲು ಹಾಗೂ ನಿಗದಿತ ಬಡ್ಡಿ ಸಮೇತ ವಜಾ ಮಾಡಿ ಉಳಿದ ಹೆಚ್ಚುವರಿ ಮೊತ್ತ ಪಡೆಯುವುದಕ್ಕೆ ಅವಕಾಶ ಮಾಡಿ ಕೊಡುತ್ತದೆ. ಎರಡನೆಯದು, ಒಂದು ವೇಳೆ, ಮೂಲ ಮಾಲೀಕರು ನಿಧನರಾದರೆ, ಅವರ ವಾರಸುದಾರರು, ಬ್ಯಾಂಕ್ ನೀಡಿದ್ದ ಅಸಲು ಮೊತ್ತ ಹಾಗೂ ಬಡ್ಡಿ ಸಮೇತ ತೀರಿಸಿ ಆಸ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬಹುದು.    

ಈ ಆರ್ಥಿಕ ವ್ಯವಹಾರದ ಒಟ್ಟಾರೆ ಸ್ವೀಕೃತಿಗೆ, ಆದಾಯ ತೆರಿಗೆಯ ಸೆಕ್ಷನ್ 10(43) ಅಡಿ ತೆರಿಗೆ ವಿನಾಯಿತಿ ಇದೆ. ಇದು ರಿವರ್ಸ್ ಮಾರ್ಟ್‌ಗೇಜ್ ಮೂಲಕ ಪಡೆಯುವ ಮೊತ್ತಕ್ಕೆ ಮಾತ್ರ ಸೀಮಿತ. ಆದರೆ, ಮುಂದೆ, ಆಸ್ತಿಯನ್ನು ಮಾರಾಟ ಮಾಡಿ ಖರೀದಿದಾರರಿಂದ ಹಣ ಪಡೆದಾಗ ಸಿಗುವ ಮೊತ್ತಕ್ಕೆ ಸಹಜವಾಗಿ ಬಂಡವಾಳ ಲಾಭದ ಮೇಲಿನ ಕ್ಯಾಪಿಟಲ್ ಗೇನ್ಸ್‌ ಅನ್ವಯಿಸುತ್ತದೆ.  

ನಿಮ್ಮ ವಿಚಾರದಲ್ಲಿ ನೀವು ಸಮೀಪದ ಯಾವುದೇ ಬ್ಯಾಂಕ್‌ನಲ್ಲಿ ಈ ಸಾಲ ಸೌಲಭ್ಯದ ಬಗ್ಗೆ ಅವಕಾಶ ಇದೆಯೇ ಎಂಬ ಬಗ್ಗೆ ವಿಚಾರಿಸಿ ನಿಮ್ಮ ಆಸ್ತಿಯ ಮೌಲ್ಯ ಮಾಪನ ಮಾಡಿಸಿ, ಸಿಗಬಹುದಾದ ಗರಿಷ್ಠ ಸಾಲ ಎಷ್ಟು ಎಂದು ತಿಳಿದುಕೊಳ್ಳಿ. ಅದೇ ರೀತಿ ಮುಂದೆ ಮಾರಾಟ ಅಥವಾ ಈ ಆಸ್ತಿಯ ಮೇಲಿರುವ ಹಕ್ಕು-ಬಾಧ್ಯತೆ ಅಥವಾ ನಿಮ್ಮಿಬ್ಬರ ಕಾಲಾನಂತರ ಅದು ಯಾರಿಗೆ ಸೇರಬೇಕೆನ್ನುವ ಬಗ್ಗೆಯೂ ಚರ್ಚಿಸಿ ನಿರ್ಧರಿಸಿ. ಒಂದು ವೇಳೆ ಬ್ಯಾಂಕ್ ನೀಡಿದ ಮೊತ್ತ ಸಾಲಗಾರರ ಮರಣಾನಂತರವೂ ಪಾವತಿಯಾಗದ ಹಂತದಲ್ಲಿದ್ದರೆ, ಬ್ಯಾಂಕ್ ಆಸ್ತಿಯನ್ನು ಮಾರಾಟ ಮಾಡಿ ಸಾಲ ವಜಾ ಮಾಡುವ ಅವಕಾಶ ಹೊಂದಿರುತ್ತದೆ.  
 
ರಿವರ್ಸ್ ಮಾರ್ಟ್‌ಗೇಜ್‌ನ ಮುಖ್ಯ ಪ್ರಯೋಜನ ಏನೆಂದರೆ, ಪ್ರತಿ ತಿಂಗಳೂ ಹಣದ ನಿರಂತರತೆ ಇರುತ್ತದೆ ಹಾಗೂ ನಿವೃತ್ತಿ ಕಾಲದ ಆರ್ಥಿಕ ಸುರಕ್ಷತೆಯ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಮಕ್ಕಳ ಮೇಲೆ ಅಥವಾ ಇತರ ಸಂಬಂಧಿಕರ ಮೇಲೆ ಆರ್ಥಿಕ ಅವಲಂಬನೆಯ ಅಗತ್ಯವಿಲ್ಲದೆ ಸ್ವತಂತ್ರ ಜೀವನ ಸಾಗಿಸಬಹುದು. ಮರಣಾನಂತರ ಸಾಲ ಪಾವತಿಸಿ ಆಸ್ತಿ ಉಳಿವಿಗೆ ಅವಕಾಶ ಇದ್ದು ಆಸ್ತಿಯನ್ನು ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸುವ ಅವಕಾಶವೂ ಕಾನೂನಿನಡಿ ಇದೆ.

ಈ ಅವಕಾಶ ಇದ್ದ ಮಾತ್ರಕ್ಕೆ ನೀವು ಅದನ್ನು ಬಳಸಿಕೊಳ್ಳಬೇಕೆಂದೇನಿಲ್ಲ. ಏನಿದ್ದರೂ ಇದು ಸಾಲವಾದ ಕಾರಣ ಕೊನೆಯ ಅವಕಾಶವಾಗಿ ಅಷ್ಟೇ ಬಳಸಿಕೊಳ್ಳಿ. ನಿಮ್ಮ ಸಹೋದರ ಹಾಗೂ ಅವರ ಮಕ್ಕಳಿರುವ ಕಾರಣ ಈ ಬಗ್ಗೆ ಚರ್ಚಿಸಿ ನಂತರವಷ್ಟೇ ನಿರ್ಧಾರ ಕೈಗೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.