50 ವರ್ಷ ವಯಸ್ಸಿನ ಖಾಸಗಿ ಕಂಪನಿ ನೌಕರ. ಪತ್ನಿ 40 ವರ್ಷದ ಸರ್ಕಾರಿ ಉದ್ಯೋಗಿ. ಮದುವೆಯಾಗಿ 15 ವರ್ಷಗಳಾಗಿವೆ. ಮೂವರು ಮಕ್ಕಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಗಳಗಳಾಗುತ್ತಿವೆ. ದೈಹಿಕ ಸಂಬಂಧವೂ ಅಷ್ಟಕ್ಕಷ್ಟೇ. ‘ನೀವು ಸುಂದರವಾಗಿಲ್ಲ. ನನಗೂ ಸುಂದರವಾಗಿರುವವರು ಬೇಕೆನಿಸುತ್ತದೆ’ ಎನ್ನುತ್ತಾಳೆ. ಹೊರಗಡೆ ಹೋಗುವಾಗ ಸುಂದರ ಹುಡುಗರನ್ನು ನನ್ನೆದುರಿಗೇ ಆಕರ್ಷಿಸುತ್ತಾಳೆ. ಬಾಡಿಗೆಗೆ ಬಂದಿರುವ ಮೇಲಿನ ಮನೆಯ ಹುಡುಗನನ್ನು ನೋಡುತ್ತಾ ನಿಲ್ಲುತ್ತಾಳೆ. ‘ಬೇಕಿದ್ದರೆ ವಿಚ್ಛೇದನ ಕೊಡಲು ಸಿದ್ಧನಿದ್ದೇನೆ, ಮಕ್ಕಳನ್ನು ಸಾಕುತ್ತೇನೆ’ ಎಂದು ಹೇಳಿದರೆ ‘ನೀವು ಅನಗತ್ಯವಾಗಿ ನನ್ನ ಮೇಲೆ ಆಪಾದನೆ ಮಾಡುತ್ತಿದ್ದೀರಿ’ ಎನ್ನುತ್ತಾಳೆ. ಇದರಿಂದ ಮಾನಸಿಕವಾಗಿ ನೊಂದು ನನ್ನಿಂದೇನಾದರೂ ಅನಾಹುತ ಸಂಭವಿಸಬಹುದೇ ಎಂದು ಭಯವಾಗುತ್ತಿದೆ. ದಯವಿಟ್ಟು ಶೀಘ್ರ ಪರಿಹಾರ ಸೂಚಿಸಿ ಜೀವನಕ್ಕೆ ಆಸರೆಯಾಗಿ.
ಹೆಸರು, ಊರು ಇಲ್ಲ.
ವಿವಾಹವಾಗಿ 15 ವರ್ಷಗಳ ನಂತರ ಪತ್ನಿ ಪರ ಪುರುಷರತ್ತ ಆಕರ್ಷಿತಳಾಗುತ್ತಿರಬಹುದೇ ಎನ್ನುವ ಅನುಮಾನ ಮಾನಸಿಕ ನೋವುಂಟು ಮಾಡುವುದು ಸಹಜ. ಪತ್ನಿಯ ವರ್ತನೆ ನಿಮ್ಮ ಅನುಮಾನವನ್ನು ಹೆಚ್ಚಿಸುತ್ತಿದೆ. ಈ ನೋವು, ಅವಮಾನ, ಅಸಹಾಯಕತೆಗಳು ಸಿಟ್ಟಾಗಿ ಬದಲಾಗುತ್ತಿರುವುದರಿಂದ ನಿಮ್ಮಲ್ಲಿ ಕೆಟ್ಟ ಯೋಚನೆಗಳು ಬರುತ್ತಿವೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೆಲವು ವಿಚಾರಗಳ ಬಗ್ಗೆ ಯೋಚಿಸಿ.
ನೀವು ಸುಂದರವಾಗಿಲ್ಲ ಎನ್ನುವುದು ಪತ್ನಿಯ ಮನಸ್ಸಿನಲ್ಲಿದ್ದರೆ ಇಷ್ಟೆಲ್ಲಾ ವರ್ಷ ನಿಮ್ಮೊಂದಿಗೆ ಬದುಕಿ ಮೂವರು ಮಕ್ಕಳಾಗುವುದು ಹೇಗೆ ಸಾಧ್ಯವಾಯಿತು?
ಪತ್ನಿ ಲೈಂಗಿಕವಾಗಿ ಅತೃಪ್ತಳಾಗಿರಬಹುದು. ಆದರೆ ವಿವಾಹಬಾಹಿರ ಸಂಬಂಧಗಳಿಗೆ ಇದೊಂದೇ ಕಾರಣವಾಗುವುದಿಲ್ಲ. ನಿಮ್ಮಿಬ್ಬರ ನಡುವೆ ಸ್ನೇಹ, ಆತ್ಮೀಯತೆಯ ಕೊರತೆಯಿರಬಹುದೇ? ಸ್ನೇಹ, ಸಾಂಗತ್ಯಗಳು ದಾಂಪತ್ಯದಲ್ಲಿ ಸಿಗದಿದ್ದಾಗ ಪತ್ನಿ ಅವುಗಳನ್ನು ಹೊರಗಡೆ ಅರಸುತ್ತಿರಬಹುದೇ?
‘ನಾನು ಸುಂದರವಾಗಿಲ್ಲ, ಖಾಸಗಿ ನೌಕರ. ಆದರೆ ಪತ್ನಿ ಸುಂದರಿ ಮತ್ತು ಸರ್ಕಾರಿ ಉದ್ಯೋಗಿ’ ಎನ್ನುವ ನಿಮ್ಮೊಳಗಿನ ಹಿಂಜರಿಕೆ ಆತ್ಮೀಯತೆಗೆ ಅಡ್ಡಿಯಾಗುತ್ತಿರಬಹುದೇ?
ಮನೆ, ಮಕ್ಕಳು, ಹಣಕಾಸು, ದೇಹಸಂಬಂಧ ಮುಂತಾದವುಗಳನ್ನು ಹೊರತಾಗಿಸಿ ನಿಮ್ಮಿಬ್ಬರ ಮಧ್ಯೆ ಮಾತುಕತೆ, ಒಡನಾಟ ಇದೆಯೇ? ಸ್ನೇಹ ಒಡನಾಟಗಳಿಲ್ಲದಿದ್ದಾಗ ಹೊರಸಂಬಂಧಗಳು ಆಕರ್ಷಕವಾಗಿ ಕಾಣುತ್ತವೆ. ಇಂತಹ ಸ್ನೇಹ, ಆತ್ಮೀಯತೆಯನ್ನು ಇಬ್ಬರೂ ಚರ್ಚಿಸಿ ಮೂಡಿಸಿಕೊಳ್ಳುವುದು ಸಾಧ್ಯವೇ?
ಈ ಉತ್ತರವನ್ನು ಪತ್ನಿಗೆ ತೋರಿಸಿ. ಕೇವಲ ನೈತಿಕತೆ, ಸರಿತಪ್ಪುಗಳ ದೃಷ್ಟಿಯಿಂದ ಯೋಚಿಸದೆ, ಆಪಾದನೆಗಳನ್ನು ಹೊರಿಸದೆ ಇಬ್ಬರೂ ನಿಧಾನವಾಗಿ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ. ತಜ್ಞ ದಾಂಪತ್ಯ ಚಿಕಿತ್ಸಕರು ನಿಮಗೆ ಸಹಾಯ ಮಾಡಬಲ್ಲರು.
23 ವರ್ಷದ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ಪದವಿ ಓದುತ್ತಿದ್ದಾಗಿನಿಂದ ನೀಲಿಚಿತ್ರಗಳ ವೀಕ್ಷಣೆ ಮತ್ತು ಹಸ್ತಮೈಥುನ ಪ್ರಾರಂಭಿಸಿದೆ. ಆಗಲೇ ನಾನು ದೊಡ್ಡ ತಪ್ಪು ಮಾಡಿರುವುದರ ಅರಿವಾಯಿತು. ನನ್ನ ಮುಗ್ಧತೆ, ಏಕಾಗ್ರತೆ, ನಗು, ನಡತೆ, ಸೃಜನಶೀಲತೆ ಕಳೆದುಕೊಂಡೆ. ನಾನು ಓದಿನಲ್ಲಿ ಮುಂದಿದ್ದವನು ಎಲ್ಲವನ್ನೂ ಕಳೆದುಕೊಂಡೆ. ಸ್ನೇಹಿತರ ಮತ್ತು ಕುಟುಂಬದವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಾಧ್ಯವಾಗುತ್ತಿಲ್ಲ. ಲೈಂಗಿಕ ಭಾವನೆಗಳನ್ನು ಕಳೆದುಕೊಂಡ ಭಯವಾಗುತ್ತಿದೆ. ಆಗಾಗ ಸ್ವಪ್ನಸ್ಖಲನವಾಗುತ್ತದೆ. ನನಗೆ ಭವಿಷ್ಯ, ಬದುಕು ಇದೆಯೇ?
ಹೆಸರು, ಊರು ಇಲ್ಲ.
ಕಳೆದುಕೊಂಡಿರುವುದರ ಉದ್ದ ಪಟ್ಟಿಯನ್ನು ನೀಡಿದ್ದೀರಿ. ನೀವು ಮನಶ್ಶಾಂತಿ ಕಳೆದುಕೊಂಡಿರುವುದಂತೂ ಎದ್ದು ಕಾಣುತ್ತದೆ. ಅದಕ್ಕೆ ಕಾರಣ ಹಸ್ತಮೈಥುನದ ಬಗ್ಗೆ ನಿಮ್ಮಲ್ಲಿ ಇರುವ ತಪ್ಪು ತಿಳಿವಳಿಕೆಗಳು. ಪ್ರಕೃತಿಯ ದೃಷ್ಟಿಯಿಂದ ಗಂಡು– ಹೆಣ್ಣು ಸುಮಾರು 13-17 ವರ್ಷಗಳಾದಾಗ ಸಂತಾನಾಭಿವೃದ್ಧಿಗೆ ಸಿದ್ಧರಾಗುತ್ತಾರೆ. ನೂರಾರು ವರ್ಷಗಳ ಹಿಂದೆ ಅದೇ ವಯಸ್ಸಿಗೆ ಮದುವೆ ಮಾಡುತ್ತಿದ್ದರು. ಇವತ್ತಿನ ಸಾಮಾಜಿಕ ಅಗತ್ಯಗಳು ಬೇರೆಯಾಗಿರುವುದರಿಂದ ಅಷ್ಟು ಬೇಗ ಮದುವೆಯಾಗಲು ಸಾಧ್ಯವಿಲ್ಲ. ಆದರೆ ಪ್ರಕೃತಿಯ ಒತ್ತಡವನ್ನು ಹೇಗೆ ತಡೆಯಲು ಸಾಧ್ಯ? ಹಾಗಾಗಿ ನಿಮ್ಮ ಕಾಮಾಸಕ್ತಿ ಸಂಪೂರ್ಣ ಆರೋಗ್ಯಕರವಾದದ್ದು. ಇದನ್ನು ಹಸ್ತಮೈಥುನದ ಮೂಲಕ ಪಡೆದುಕೊಳ್ಳುವುದು ಸ್ತ್ರೀ– ಪುರುಷರಿಬ್ಬರಿಗೂ ಉತ್ತಮ ಮಾರ್ಗ ಎಂದು ವಿಜ್ಞಾನ ಹೇಳುತ್ತದೆ. ಆದರೆ ನಕಲಿ ವೈದ್ಯರು ನೀಡುವ ಮತ್ತು ಅಂತರ್ಜಾಲದಲ್ಲಿ ಸಿಗುವ ಅವೈಜ್ಞಾನಿಕ ಮಾಹಿತಿಗಳಿಂದಾಗಿ ನೀವು ತಪ್ಪು ಕಲ್ಪನೆಗಳನ್ನು ತುಂಬಿಕೊಂಡಿದ್ದೀರಿ. ಸ್ವಪ್ನಸ್ಖಲನ ಕೂಡ ಸಂಪೂರ್ಣ ಸಹಜವಾದದ್ದು. ನೈರ್ಮಲ್ಯ ಮತ್ತು ಖಾಸಗಿತನವನ್ನು ಕಾಪಾಡಿಕೊಂಡು ವಿವಾಹವಾಗುವವರೆಗೆ ಹಸ್ತಮೈಥುನದ ಮೂಲಕ ಕಾಮತೃಪ್ತಿ ಪಡೆಯವುದರಿಂದ ಮುಂದೆ ಸಂಗಾತಿಯೊಡನೆ ಸುಖವಾಗಿರಲು ಯಾವುದೇ ತೊಂದರೆಯಾಗುವುದಿಲ್ಲ. ಹಾಗಾಗಿ ತಪ್ಪು ಕಲ್ಪನೆಗಳಿಂದ ಹೊರಬಂದು ನಿಮ್ಮ ಓದಿನಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಿ.
ಸಂಗಾತಿಯೊಡನೆ ಸುಖಪಡುವ ಕಲ್ಪನೆಗಳೇ ಹಸ್ತಮೈಥುನಕ್ಕೆ ಪ್ರೇರಕಶಕ್ತಿ. ಇಂತಹ ಕಲ್ಪನೆಗಳಿಗಾಗಿ ನೀವು ಹದಿವಯಸ್ಸಿನಲ್ಲಿ ನೀಲಿಚಿತ್ರಗಳ ಮೊರೆಹೋಗಿದ್ದಿರಿ. ಈಗ ಅದನ್ನು ಬಿಡಲಾರದೆ ಪಾಪಪ್ರಜ್ಞೆಯಿಂದ ನರಳುತ್ತಿದ್ದೀರಿ. ಚಿತ್ರಗಳನ್ನು ನೋಡುವಾಗ ಅಲ್ಲಿನ ಕೃತಕ ಸನ್ನಿವೇಶಗಳು, ನಟ, ನಟಿಯರ ಬಲವಂತದ ಹಾವಭಾವಗಳು, ತೋರಿಕೆಯ ಸಂತೋಷಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ. ಹಣಕ್ಕಾಗಿ ಶೋಷಣೆಗೆ ಒಳಗಾಗಿರುವ ನಟ, ನಟಿಯರನ್ನು ನೆನಪು ಮಾಡಿಕೊಳ್ಳಿ. ನಿಮ್ಮನ್ನು ಪ್ರೀತಿಸುವ ಸಂಗಾತಿಯ ಸಹವಾಸ ಹೇಗಿರಬಹುದು ಎಂದು ಕಲ್ಪನೆಯನ್ನು ಮಾಡಿಕೊಳ್ಳಿ. ನೀಲಿಚಿತ್ರಗಳ ಸೆಳೆತ ಉಂಟಾದಾಗ ಕೆಲವು ನಿಮಿಷ ನಿಧಾನಿಸಿ ಮೇಲಿನ ಅಂಶಗಳನ್ನು ಮತ್ತೆಮತ್ತೆ ನೆನಪಿಸಿಕೊಳ್ಳಿ. ನೀಲಿಚಿತ್ರಗಳು ತಮ್ಮಿಂದ ತಾವೇ ಆಕರ್ಷಣೆಯನ್ನು ಕಳೆದುಕೊಳ್ಳುತ್ತವೆ.
(ಅಂಕಣಕಾರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.