ADVERTISEMENT

ಪ್ರಶ್ನೋತ್ತರ: ಏನು ಮಾಡಿದರೂ ಹಣ ಉಳಿಸಲು ಆಗುತ್ತಿಲ್ಲ. ಸಲಹೆ ನೀಡಿ

ಯು.ಪಿ.ಪುರಾಣಿಕ್
Published 21 ಸೆಪ್ಟೆಂಬರ್ 2021, 18:20 IST
Last Updated 21 ಸೆಪ್ಟೆಂಬರ್ 2021, 18:20 IST
ಪುರಾಣಿಕ್
ಪುರಾಣಿಕ್   

ಪ್ರಶ್ನೆ: ನಾವಿಬ್ಬರೂ ಅಣ್ಣ ತಮ್ಮಂದಿರುಹೈಸ್ಕೂಲ್‌ನಲ್ಲಿ ಓದುತ್ತಿದ್ದೇವೆ. ನೀವು ಪ್ರತಿಬುಧವಾರ ಬರೆಯುವ ಆರ್ಥಿಕ ಸಲಹೆ ಬಗ್ಗೆ ಹಾಗೂ ನಿಮ್ಮ ಬಗ್ಗೆನಮ್ಮ ತಂದೆ ರಾಮ ದೇವಾಡಿಗ ತಿಳಿಸುತ್ತಿರುತ್ತಾರೆ. ನಾವು ಹೆತ್ತವರು ಕೊಡುವ ಹಣ ಉಳಿಸಿ ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದೇವೆ. ಈಗ ಅದರಲ್ಲಿನ ಮೊತ್ತ ₹ 1,000 ಆಗಿದೆ. ವಿದ್ಯಾರ್ಥಿಗಳಿಗೂ ಹಣ ಉಳಿಸಲು ಸಲಹೆ ನೀಡಿ.
-ರಾಜ್‌ ದೇವಾಡಿಗ–ವಿವೇಕ್ ದೇವಾಡಿಗ, ಬಿಜೂರು, ಬೈಂದೂರು

ಉತ್ತರ: ಉಳಿತಾಯದ ಬಗ್ಗೆ ನಿಮಗಿರುವ ಆಸಕ್ತಿ ನೋಡಿ ಸಂತೋಷ ಆಯಿತು. ದುಡ್ಡಿನ ಹಾಗೂ ದುಡಿಮೆಯ ಬೆಲೆ ತಿಳಿಯಬೇಕಾದರೆ ಹಣ ಉಳಿಸುವ ಅಭ್ಯಾಸವನ್ನು ಹೆತ್ತವರು ಮಕ್ಕಳಿಗೆ ಆರಂಭದಿಂದಲೇ ತಿಳಿಸಿ ಹೇಳಬೇಕು. ಹಣ ಉಳಿಸುವುದು ಒಂದು ಕಲೆ. ಪ್ರತಿ ವಿದ್ಯಾರ್ಥಿಯೂ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದು, ತನಗೆ ಖರ್ಚಿಗೆ ಕೊಟ್ಟ ಹಣದಲ್ಲಿ ಎಷ್ಟಾದರಷ್ಟನ್ನು ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹನಿ ಹನಿ ಕೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳ ಎನ್ನುವ ಗಾದೆ ಮಾತು ಇಲ್ಲಿ ಸ್ಮರಿಸಬಹುದು. ಮಕ್ಕಳು ಬೆಳೆದ ನಂತರ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಸುಖವಾಗಿ ಜೀವಿಸಲು ಉಳಿತಾಯ ಪ್ರವೃತ್ತಿಯು ನೆರವಿಗೆ ಬರುತ್ತದೆ.

ಪ್ರಶ್ನೆ: ನನ್ನ ವಯಸ್ಸು 52 ವರ್ಷ. ಒಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದೇನೆ. ಅಂಗಡಿಯಲ್ಲಿ ನಾನು, ನನ್ನ ಪತ್ನಿ ಇಬ್ಬರೂ ದುಡಿಯುತ್ತೇವೆ. ಮಕ್ಕಳು ಓದುತ್ತಿದ್ದಾರೆ. ನನ್ನ ತಿಂಗಳ ಆದಾಯ ₹ 25 ಸಾವಿರ. ಪ್ರಯತ್ನಪಟ್ಟರೆ ₹ 10,000 ಉಳಿಸಬಹುದು. ಆದರೆ ಏನು ಮಾಡಿದರೂ ಹಣ ಉಳಿಸಲು ಆಗುತ್ತಿಲ್ಲ. ನಮ್ಮ ಆದಾಯಕ್ಕೆ ತೆರಿಗೆ ಇದೆಯೇ? ನಮ್ಮ ಕುಟುಂಬಕ್ಕೆ ಉತ್ತಮ ಉಳಿತಾಯ ಯೋಜನೆ ತಿಳಿಸಿರಿ.
-ರಾಮಚಂದ್ರ ಭಂಡಾರಿ, ಊರುಬೇಡ

ADVERTISEMENT

ಉತ್ತರ: ಹಣ ಗಳಿಸುವುದರಂತೆಯೇ ಉಳಿಸುವುದು ಕೂಡ ಒಂದು ಕಲೆ. ಉಳಿತಾಯ ಮಾಡಲು ದೃಢ ಸಂಕಲ್ಪ ಹಾಗೂ ತ್ವರಿತ ತೀರ್ಮಾನದ ಅಗತ್ಯ ಇದೆ. ನೀವು ಪ್ರತಿ ದಿನದ ವ್ಯಾಪಾರದಿಂದ ಬರುವ ಹಣವನ್ನು ಮಾರನೇ ದಿನವೇ ಬ್ಯಾಂಕ್‌ನಲ್ಲಿ ಜಮಾ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ತಿಂಗಳ ಅಂತ್ಯಕ್ಕೆ ಹಣ ಕೊಡಬೇಕಾದವರಿಗೆ ಕೊಟ್ಟು, ನಿಮ್ಮ ಖರ್ಚು ಕಳೆದು, ನೀವು ಪ್ರಶ್ನೆಯಲ್ಲಿ ತಿಳಿಸಿದಂತೆ ಉಳಿಸಬಹುದಾದ ₹ 10,000 ಹಣವನ್ನು ಐದು ವರ್ಷಗಳ ಅವಧಿಯ ಆರ್.ಡಿ. ಮಾಡಿ. ಐದು ವರ್ಷಗಳ ನಂತರ ಶೇಕಡ 5ರ ಬಡ್ಡಿದರದಲ್ಲಿ ₹ 6,82,460 ಪಡೆಯುವಿರಿ. ತೆರಿಗೆ ಉಳಿಸಲು ನಿಯಮಗಳ ಅನುಸಾರ ಹಲವು ದಾರಿಗಳಿವೆ. ತೆರಿಗೆ ಭಯದಿಂದ ಉಳಿತಾಯ ಮಾಡದಿರುವುದು ಜಾಣತನವಲ್ಲ. ನಿಮಗೆ ಉಳಿತಾಯ ಹಾಗೂ ತೆರಿಗೆ ವಿಚಾರದಲ್ಲಿ ಏನಾದರೂ ಸಂಶಯ ಬಂದಲ್ಲಿ ನನಗೆ ಕರೆ ಮಾಡಿ.

ಪ್ರಶ್ನೆ: ನಾನು ಕುಂದಾಪುರದವನು. 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಕರಿ ಪ್ರಾರಂಭಿಸಿದೆ. ನನ್ನ ವಯಸ್ಸು 46 ವರ್ಷ. ನನ್ನ ಹೆಂಡತಿ ನನಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಾಳೆ. ನಮಗೆ 18 ವರ್ಷ ವಯಸ್ಸಿನ ಮಗಳಿದ್ದಾಳೆ. ಬಹಳ ವರ್ಷಗಳಿಂದ ನಿಮ್ಮ ಅಂಕಣ ಓದುತ್ತಿದ್ದೇನೆ. ನಿಮ್ಮ ಸಲಹೆಯಂತೆ ಕಳೆದ 10 ವರ್ಷಗಳಿಂದ ಒಂದು ವರ್ಷದ ಆರ್‌.ಡಿ. ಮಾಡುತ್ತಾ ಮಗಳಿಗೆ ಬಂಗಾರದ ನಾಣ್ಯ ಪ್ರತಿ ವರ್ಷ ಕೊಂಡುಕೊಂಡಿದ್ದೇನೆ ಹಾಗೂ ಕಳೆದ ಐದು ವರ್ಷಗಳಿಂದ ₹10,000 ಆರ್‌.ಡಿ ಮಾಡಿ ಈ ಹಣದಿಂದ ಒಂದು ಮನೆ ಭೋಗ್ಯಕ್ಕೆ ಹಾಕಿಸಿಕೊಂಡಿದ್ದೇವೆ. ಇದರಿಂದಾಗಿ ಪ್ರತಿ ತಿಂಗಳೂ ಬಾಡಿಗೆ ಕಟ್ಟುವ ರಗಳೆ ಪರಿಹಾರ ಆಗಿದೆ. ನಮ್ಮ ಭವಿಷ್ಯಕ್ಕೆ ದಾರಿ ತೋರಿಸಿ.
-ಹರಿಪ್ರಸಾದ್‌, ಕೋಣನಕುಂಟೆ, ಬೆಂಗಳೂರು

ಉತ್ತರ: ನಿಮ್ಮ ಅಭಿಮಾನಕ್ಕೆ ಧನ್ಯವಾದ. ಬಂಗಾರದ ನಾಣ್ಯ ಕೊಳ್ಳುವುದನ್ನು ಮಗಳ ಮದುವೆ ತನಕವಾದರೂ ಮುಂದುವರಿಸಿ. ನಿಮಗೆ ಮನೆ ಬಾಡಿಗೆ ಇಲ್ಲದೇ ಇರುವುದರಿಂದ ₹ 15,000 ಆರ್‌.ಡಿ. ಐದು ವರ್ಷಗಳ ಅವಧಿಗೆ ಮಾಡಿ. ಶೇಕಡ 5ರ ಬಡ್ಡಿದರದಲ್ಲಿ ಈ ಆರ್‌.ಡಿ.ಯಿಂದ ₹ 10,23,690 ಪಡೆಯುವಿರಿ. ಈ ಹಣ ಬಳಸಿ ಹಾಗೂ ತುಸು ಸಾಲಮಾಡಿ ನಿವೇಶನ ಕೊಳ್ಳಿರಿ. ಕಾಲಕ್ರಮೇಣ ಮನೆ ಕಟ್ಟಿಸಿಕೊಳ್ಳಿ. ಹಣ ಉಳಿಸಲು ಸ್ವಲ್ಪ ಮಟ್ಟಿನ ತ್ಯಾಗದ ಮನೋಭಾವ ಬೇಕು. ನೀವು ಅನುಸರಿಸಿದ ಮಾರ್ಗವು ಉಳಿದವರೂ ಅನುಸರಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.