ADVERTISEMENT

ಪ್ರಶ್ನೋತ್ತರ ಅಂಕಣ: ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ
Published 2 ಏಪ್ರಿಲ್ 2024, 20:37 IST
Last Updated 2 ಏಪ್ರಿಲ್ 2024, 20:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸದಾಶಿವ ಕುಮಾರ್, ಆರ್.ಆರ್. ನಗರ, ಬೆಂಗಳೂರು.

ನಾನು ಬೆಂಗಳೂರು ನಿವಾಸಿಯಾಗಿದ್ದು, ನಾವು 2021-22ನೇ ಆರ್ಥಿಕ ವರ್ಷದಲ್ಲಿ ಸ್ವಂತ ಮನೆ (ಫ್ಲ್ಯಾಟ್) ಖರೀದಿಸಿ ವಾಸಿಸುತ್ತಿದ್ದೇವೆ. ನನ್ನ ಸೇವಾವಧಿಯ ಹೆಚ್ಚಿನ ಉಳಿತಾಯದ ಮೊತ್ತವನ್ನು ಮನೆ ನಿರ್ಮಾಣಕ್ಕೆ ಉಪಯೋಗಿಸಿದ ಕಾರಣ ಬ್ಯಾಂಕಿನಿಂದ ಸುಮಾರು ₹40 ಲಕ್ಷವನ್ನು ಸಾಲವಾಗಿ ಪಡೆದಿದ್ದೆ. ಮನೆಯು ಎರಡು ಕೊಠಡಿಗಳನ್ನು ಹೊಂದಿದ್ದು, ಸುಮಾರು 900 ಚದರ ಅಡಿ ಇದೆ. ಇದರ ಬಡ್ಡಿ ಮೇಲೆ ನಾನು ತೆರಿಗೆ ರಿಯಾಯಿತಿ ಪಡೆಯುತ್ತಿದ್ದೇನೆ.

ADVERTISEMENT

ಪ್ರಸ್ತುತ ₹3 ಲಕ್ಷಕ್ಕೂ ಹೆಚ್ಚು ಬಡ್ಡಿ ಪಾವತಿಸುತ್ತಿದ್ದೇನೆ. ಆದರೆ, ಬಡ್ಡಿ ರಿಯಾಯಿತಿ ಕೇವಲ ₹2 ಲಕ್ಷ ಮಾತ್ರ ಸಿಗುತ್ತಿದೆ. ಇತ್ತೀಚೆಗೆ ನನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡಿದಾಗ ಮೊದಲ ಮನೆಗೆ ಸಾಲ ಪಡೆದಿದ್ದರೆ, ₹2 ಲಕ್ಷಕ್ಕಿಂತ ಅಧಿಕ ಮೊತ್ತದ ಬಡ್ಡಿಯ ಮೇಲೂ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ ಎಂದು ಹೇಳಿರುತ್ತಾರೆ. ನನ್ನ ಪ್ರಶ್ನೆ ಏನೆಂದರೆ ನಾನು ಈ ಹಿಂದಿನ ವರ್ಷಗಳಲ್ಲಿ ಈಗಾಗಲೇ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆಯನ್ನು ಅನಗತ್ಯವಾಗಿ ಪಾವತಿಸಿದ್ದೇನೆ? ಇನ್ನು ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಬಡ್ಡಿ ಪಡೆಯಬಹುದೇ? ಈ ಬಗ್ಗೆ ತುಸು ಸ್ಪಷ್ಟತೆ ನೀಡಿ.  

ನೀವು ನೀಡಿರುವ ಮಾಹಿತಿಯಿಂದ ಆದ್ಯವಾಗಿ ಗಮನಕ್ಕೆ ಬರುವ ವಿಚಾರವೆಂದರೆ ಮೊದಲ ಬಾರಿಗೆ ಹೊಸ ಮನೆಯನ್ನು ಹೊಂದುತ್ತಿದ್ದೀರಿ ಎಂಬುದು. 2019ರ ಏಪ್ರಿಲ್ 1ರಿಂದ 2021ರ ಮಾರ್ಚ್ 31ರ ಅವಧಿಯಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವ ತೆರಿಗೆದಾರರಿಗೆ ಮಂಜೂರಾದ ಸಾಲಗಳಿಗೆ ಕೆಲವು ಷರತ್ತುಬದ್ಧ ವಿಶೇಷ ತೆರಿಗೆ ರಿಯಾಯಿತಿಗಳನ್ನು ನೀಡಲಾಗಿದೆ. ಮೊದಲನೆಯದಾಗಿ ಖರೀದಿಸಿದ ಆಸ್ತಿ ಮೌಲ್ಯ ₹45 ಲಕ್ಷದೊಳಗಿರಬೇಕು. ಎರಡನೆಯದಾಗಿ ಮನೆಯ ಒಟ್ಟಾರೆ ವಿಸ್ತಾರ 968 ಚದರ ಅಡಿಯ ಒಳಗಿರಬೇಕು. ಮೆಟ್ರೊ ನಗರಗಳಲ್ಲಿ ಈ ಅಳತೆ 645 ಚದರ ಅಡಿಗೆ ಸೀಮಿತವಾಗಿರಬೇಕು. ಸಾಲದ ಮಂಜೂರಾತಿ ಮೇಲೆ ತಿಳಿಸಿರುವ ಅವಧಿಯಲ್ಲಿ ಆಗಿರಬೇಕು. ಇಲ್ಲಿ ಸಾಲದ ಮೊತ್ತಕ್ಕೆ ಮಿತಿ ಹೇರಿಲ್ಲದಿದ್ದರೂ ಆಸ್ತಿ ಮೌಲ್ಯಕ್ಕೆ ಮಿತಿ ಹೇರಲಾಗಿದೆ.

ನೀವು ನೀಡಿದ ಮಾಹಿತಿಯಿಂದ ನಿಮ್ಮ ಮನೆಯ ಒಟ್ಟಾರೆ ಮೌಲ್ಯ ₹45 ಲಕ್ಷಕ್ಕೂ ಮೀರಿರಬಹುದು. ಮಾತ್ರವಲ್ಲ ನಿಮ್ಮ ಮನೆ ಬೆಂಗಳೂರಿನಲ್ಲಿರುವ ಕಾರಣ ಮೆಟ್ರೊ ವಿಭಾಗದಲ್ಲಿ ಬರುತ್ತದೆ. ಇದು ಮೆಟ್ರೊ ವ್ಯಾಪ್ತಿಗೆ ನಿಗದಿಪಡಿಸಿದ ವಿಸ್ತಾರಕ್ಕಿಂತ ಹೆಚ್ಚಾಗಿದೆ. ಈ ಕಾರಣಕ್ಕೆ ನಿಮ್ಮ ಗಮನಕ್ಕೆ ಬಂದ ಮಾಹಿತಿಯಂತೆ ಸೆಕ್ಷನ್ 80ಇಇಎ ಅಡಿ ಹೆಚ್ಚುವರಿ ₹1.50 ಲಕ್ಷದ ರಿಯಾಯಿತಿ ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ, ಹಿಂದಿನ ವರ್ಷಗಳಲ್ಲೂ ತೆರಿಗೆ ಪಾವತಿಸಿ ನಷ್ಟ ಮಾಡಿಕೊಂಡೆ ಎಂಬ ಆತಂಕ ಬೇಡ. ಈಗಾಗಲೇ ಪಡೆದಿರುವ ರಿಯಾಯಿತಿ ಸರಿಯಾಗಿದೆ ಹಾಗೂ ಮುಂದುವರಿಸಿ.

ರಾಘವೇಂದ್ರ ರಾವ್, ಉಡುಪಿ. 

ನಾನು ವ್ಯಾಪಾರಸ್ಥನಾಗಿದ್ದು, ಕಳೆದ ಕೆಲವು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದೇನೆ. ನಮ್ಮ ಊರಿನ ಅನೇಕ ಸಂಘ–ಸಂಸ್ಥೆಗಳು ಅಭಿವೃದ್ಧಿಯ ಉದ್ದೇಶದಿಂದ ದೇಣಿಗೆ ಕೋರಿಕೊಂಡು ಪ್ರತಿವರ್ಷ ನಮ್ಮಲ್ಲಿಗೆ ಬರುವುದುಂಟು. ಈ ಸಂದರ್ಭದಲ್ಲಿ ಸಾಕಷ್ಟು ದೇಣಿಗೆ ನೀಡಿರುವುದುಂಟು ಹಾಗೂ ಅದೇ ಸಂಪ್ರದಾಯ ಮುಂದೆಯೂ ಮುಂದುವರಿಯಲಿದೆ.

ಕೆಲವು ಸಂದರ್ಭದಲ್ಲಿ ನಗದು ರೂಪದಲ್ಲೂ ದೇಣಿಗೆ ನೀಡಿದ್ದೇನೆ. ಇಂತಹ ಸಂದರ್ಭದಲ್ಲಿ ನಾವು ಈ ಪಾವತಿಗೆ ಆದಾಯ ತೆರಿಗೆ ರಿಯಾಯಿತಿ ಪಡೆಯಬಹುದೇ. ಈ ತನಕ ನಾವು ಈ ರೀತಿಯ ದೇಣಿಗೆಗಳನ್ನು ರಿಯಾಯಿತಿ, ವೆಚ್ಚ ಎಂದು ಪರಿಗಣಿಸಿರಲಿಲ್ಲ. ಒಂದು ವೇಳೆ ಸಿಗುವುದಿದ್ದರೆ ಅದು ಯಾವ ಮಿತಿಯೊಳಗೆ ಬರುತ್ತದೆ. ಈ ಬಗ್ಗೆ ಮಾಹಿತಿ ನೀಡಿ.

ವುದೇ ಸಂಘ– ಸಂಸ್ಥೆಗಳಿಗೆ ದೇಣಿಗೆ ಕೊಟ್ಟ ಮೊತ್ತಕ್ಕೆ ಶೇಕಡ ನೂರಕ್ಕೆ ನೂರರಷ್ಟು ತೆರಿಗೆ ರಿಯಾಯಿತಿ ಸಿಗುತ್ತದೆ ಎನ್ನುವುದು ನಮ್ಮ ಊಹೆ. ಆದರೆ, ವಾಸ್ತವದಲ್ಲಿ ಇಂತಹ ದೇಣಿಗೆಗೆ ಆದಾಯ ತೆರಿಗೆ ನಿಯಮದಡಿ ರಿಯಾಯಿತಿ ಪಡೆಯುವಂತಾಗಲು ಅಂತಹ ಸಂಘ– ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಯಲ್ಲಿ  ಸೆಕ್ಷನ್ 80ಜಿ ಅಡಿ ದೇಣಿಗೆ ಪಡೆಯಲು ಮತ್ತು ಸೇವಾ ಸಂಸ್ಥೆಯಾಗಿ ಮುಂದುವರಿಯಲು ಮಾನ್ಯತೆ ಹೊಂದಿರಬೇಕಾಗುತ್ತದೆ.

ಒಂದು ವೇಳೆ ಮಾನ್ಯತೆ ಇರದ ಸೇವಾ–ಸಂಸ್ಥೆಗಳಿಗೆ ದೇಣಿಗೆ ಕೊಟ್ಟರೆ ಅದು ತಪ್ಪೇನಲ್ಲ. ಆದರೆ, ತೆರಿಗೆಗೆ ಸಂಬಂಧಿಸಿ ಯಾವುದೇ ರಿಯಾಯಿತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ. ಹೀಗಾಗಿ, ಕೆಲವೊಮ್ಮೆ ಕೇವಲ ಆರ್ಥಿಕ ನೆರವಿನ ದೃಷ್ಟಿಯಿಂದ ಮಾಡುವ ದೇಣಿಗೆ, ವ್ಯವಹಾರದ ಹಿನ್ನೆಲೆಯಲ್ಲಿ ಪ್ರಯೋಜನಕಾರಿಯಾಗಲಾರದು.

ನಿಮ್ಮ ವಿಚಾರದಲ್ಲಿ ಮೊದಲ ಹಂತದಲ್ಲಿ ಇಂತಹ ಸಂಘ– ಸಂಸ್ಥೆಗಳು ಯಾವ ರೀತಿಯವು ಎಂದು ತಿಳಿದುಕೊಳ್ಳಿ. ಬಹಳಷ್ಟು ಬಾರಿ ಅವು ಕೇವಲ ನಿಗದಿತ ಉದ್ದೇಶಕ್ಕೆ ಮಾತ್ರ ಸೀಮಿತ ಆಗಿದ್ದು ಅದು ಪೂರ್ಣವಾದ ಕೂಡಲೇ ಆ ಸಮಿತಿ ಬರ್ಖಾಸ್ತುಗೊಳ್ಳುತ್ತದೆ ಅಥವಾ ಅಂತಹ ಸೇವಾ ಸಂಸ್ಥೆಗಳ ಮೂಲ ಉದ್ದೇಶ ಕೆಲವು ಸೀಮಿತ ಸಮುದಾಯಕ್ಕೆ ನೆರವು ನೀಡಿರುವುದಾಗಿರುತ್ತದೆ. ಅವು ಸಾರ್ವಜನಿಕ ಸೇವಾ ಸಂಸ್ಥೆಗಳಾಗಿರುವುದಿಲ್ಲ ಹಾಗೂ ತೆರಿಗೆ ಇಲಾಖೆಯಿಂದ ಮಾನ್ಯತೆ ಪಡೆಯುವ ವ್ಯಾಪ್ತಿಗೆ ಬಂದಿರುವುದಿಲ್ಲ.  

ಆದಾಯ ತೆರಿಗೆಯ ಸೆಕ್ಷನ್ 80ಜಿ ಎಲ್ಲರೂ ತಿಳಿದಿರುವ ದೇಣಿಗೆಗೆ ಸಂಬಂಧಪಟ್ಟು ಸಿಗುವ ಆದಾಯ ತೆರಿಗೆ ರಿಯಾಯಿತಿಯ ಸೆಕ್ಷನ್ ಆಗಿದೆ. ಆದರೆ, ಇದರಡಿ ಮಾನ್ಯತೆ ಪಡೆದ ಸಂಸ್ಥೆಗಳು ದೇಣಿಗೆ ಪಡೆದರೂ, ಮುಖ್ಯವಾಗಿ ನಾಲ್ಕು ಪ್ರತ್ಯೇಕ ವಿಧದ ದೇಣಿಗೆಗಳಿವೆ. 1. ಕೊಟ್ಟ ದೇಣಿಗೆಗೆ ಸಿಗುವ ಸಂಪೂರ್ಣ ತೆರಿಗೆ ರಿಯಾಯಿತಿ. 2. ಕೊಟ್ಟ ದೇಣಿಗೆಗೆ ಸಿಗುವ ಶೇ 50ರಷ್ಟು ತೆರಿಗೆ ರಿಯಾಯಿತಿ. 3. ಆದಾಯದ ಶೇ 10ಕ್ಕೆ ನಿರ್ಬಂಧಿತವಾಗಿ ಕೊಟ್ಟ ದೇಣಿಗೆಗೆ ಸಿಗುವ ಸಂಪೂರ್ಣ ತೆರಿಗೆ ರಿಯಾಯಿತಿ. 4. ಆದಾಯದ ಶೇ 10ಕ್ಕೆ ನಿರ್ಬಂಧಿತವಾಗಿ ಕೊಟ್ಟ ದೇಣಿಗೆಗೆ ಸಿಗುವ ಶೇ 50ರಷ್ಟು ತೆರಿಗೆ ರಿಯಾಯಿತಿ.

ನೀವು ದೇಣಿಗೆ ಕೊಟ್ಟಾಗ ಕಡ್ಡಾಯವಾಗಿ ರಸೀದಿ ಪಡೆಯುವುದು ಹಾಗೂ ನಿಮ್ಮ ಪ್ಯಾನ್ ಸಂಖ್ಯೆಯನ್ನು ಸರಿಯಾಗಿ ದಾಖಲಿಸಿದ್ದಾರೆಯೇ ಎನ್ನುವುದನ್ನೂ ಪರಿಶೀಲಿಸಿ. ಮಾತ್ರವಲ್ಲ ₹2 ಸಾವಿರಕ್ಕೂ ಹೆಚ್ಚು ಮೊತ್ತದ ದೇಣಿಗೆಯನ್ನು ನಗದು ರೂಪದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಗೆ ನೀಡಿದರೂ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂಬುದು ಗಮನಾರ್ಹ ವಿಚಾರ. ಹೀಗಾಗಿ ದೇಣಿಗೆ ನೀಡುವ ಸಂದರ್ಭದಲ್ಲಿ ಚೆಕ್, ಡಿಡಿ, ನೆಫ್ಟ್ ಇತ್ಯಾದಿ ರೂಪದಲ್ಲಿ ಪಾವತಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.