ADVERTISEMENT

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ

ಪ್ರಮೋದ ಶ್ರೀಕಾಂತ ದೈತೋಟ
Published 7 ಮಾರ್ಚ್ 2023, 19:45 IST
Last Updated 7 ಮಾರ್ಚ್ 2023, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಿಯಪ್ಪ, ಊರು ಬೇಡ
ಪ್ರಶ್ನೆ:
ನಾನು ನಿವೃತ್ತ ನೌಕರ, ವಯಸ್ಸು 69 ವರ್ಷ. 2015ರಲ್ಲಿ ಮನೆ ಅಡಮಾನ ಇರಿಸಿಕೊಂಡು ₹ 8 ಲಕ್ಷ ಸಾಲವನ್ನು ಸುಮಾರು ಶೇಕಡ 36ರ ಬಡ್ಡಿಗೆ ಮಂಜೂರು ಮಾಡಿದ್ದಾರೆ. ಅಡಮಾನ ಆದಮೇಲೆ ಸಾಲದ ಮಾಹಿತಿ ಹಾಗೂ ಮಂಜೂರಾದ ಸಾಲದ ಚೆಕ್ ಕೊಟ್ಟಿದ್ದಾರೆ. ಸಾಲದ ಮೊತ್ತದಲ್ಲಿ ಈ ಕೆಳಗಿನ ಬಾಬ್ತನ್ನು ನನ್ನಿಂದ ಪಡೆದಿದ್ದಾರೆ. ಅದರಲ್ಲಿ ಬ್ಯಾಂಕಿಗೆ, ಸಾಲ ಮಂಜೂರು ಮಾಡುವವರಿಗೆ, ಬ್ಯಾಂಕಿನ ವಕೀಲರಿಗೆ, ಅಡಮಾನಕ್ಕೆ, ಸಾಲದ ಮೇಲೆ ಶೇ 4ರಂತೆ ಮಧ್ಯವರ್ತಿಗೆ, ತಾಂತ್ರಿಕ ಪ್ರಕ್ರಿಯೆಗೆ, ಪ್ರಮಾಣಪತ್ರ ಶುಲ್ಕ, ಸಾಲಕ್ಕೆ ವಿಮೆ ಎಂದು ಒಟ್ಟು ಖರ್ಚು ₹ 92,607 ನನ್ನಿಂದ ಪಡೆದಿದ್ದಾರೆ. ಒಟ್ಟು ಮಂಜೂರಾದ ಸಾಲ ₹ 8 ಲಕ್ಷ. 2015ರ ಡಿಸೆಂಬರ್‌ನಿಂದ 2022ರ ಅಕ್ಟೋಬರ್‌ವರೆಗೆ ಎಲ್ಲ ಕಂತುಗಳನ್ನು ಕಟ್ಟಿದ್ದೇನೆ. ಯಾವುದಾದರೂ ಕಂತು ಕಟ್ಟದಿದ್ದರೆ ₹ 18,000 ವಸೂಲಿ ಮಾಡುತ್ತಾರೆ. ಈ ತನಕ ಒಟ್ಟು ₹ 13 ಲಕ್ಷವನ್ನು ಬಡ್ಡಿಸಹಿತ ಕಟ್ಟಿದ್ದೇನೆ. ಬಡ್ಡಿ ಕಡಿಮೆ ಮಾಡಿ ಅಸಲನ್ನು ಕಟ್ಟಲು ಯಾವ ರೀತಿ ಕಾನೂನು ಮಾರ್ಗದಲ್ಲಿ ಮುಂದುವರಿಯಬಹುದು?

ಉತ್ತರ: ನಿಮಗೆ ಸಾಲ ಕೊಟ್ಟವರು, ಅಧಿಕ ಬಡ್ಡಿ ಹಾಗೂ ಇತರ ಸಾಲ ಮಂಜೂರಾತಿ ಮೊತ್ತವನ್ನು ನಿಮ್ಮಿಂದ ವಸೂಲಿ ಮಾಡಿರುವುದನ್ನು ಹೇಳಿರುತ್ತೀರಿ. ಸಾಲ ನೀಡುವ ಕೆಲಸವನ್ನು ಆರ್‌ಬಿಐ ಪರವಾನಗಿ ಇರುವ ಬ್ಯಾಂಕ್, ಬ್ಯಾಂಕೇತರ ಹಣಕಾಸು ಸಂಸ್ಥೆ ಅಥವಾ ಇತರ ಯಾವುದೇ ಕಾನೂನಿನ ಅಡಿ ಪರವಾನಗಿ ಇರುವ ಸಂಸ್ಥೆ ಮಾತ್ರವೇ ಮಾಡಬಹುದು. ನಿಮಗೆ ಸಾಲ ಕೊಟ್ಟ ಸಂಸ್ಥೆ ಯಾವ ವರ್ಗದಲ್ಲಿ ಬರುತ್ತದೆ ಎಂಬ ಮಾಹಿತಿ ಪ್ರಶ್ನೆಯಲ್ಲಿ ಇಲ್ಲ. ನೋಂದಾಯಿತ ಬ್ಯಾಂಕ್, ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಅಗತ್ಯ ಮಾಹಿತಿ ನೀಡಿ ವ್ಯವಹರಿಸುವುದು ಹಾಗೂ ಎಲ್ಲವನ್ನೂ ಮೊದಲೇ ಲಿಖಿತ ರೂಪದಲ್ಲಿ ನೀಡಿ ಸಾಲ ಕೊಡುವುದು ಸಹಜ ಪ್ರಕ್ರಿಯೆ. ನೀವು ಹೇಳಿರುವಂತೆ ವರ್ಷಕ್ಕೆ ಶೇ 36ರ ಬಡ್ಡಿ ದರದಲ್ಲಿ ಯಾವುದೇ ಗ್ರಾಹಕರಿಂದ ಸಾಲ ವಸೂಲಿ ಮಾಡುವುದು ಪರವಾನಗಿ ರಹಿತ ಸಂಸ್ಥೆ ಅಥವಾ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬುದು ನನ್ನ ಊಹೆ. ಒಂದು ವಿಚಾರ ತಿಳಿದಿರಲಿ. ನಿಮ್ಮ ₹ 8 ಲಕ್ಷದ ಸಾಲಕ್ಕೆ ನೀವು ತಿಳಿಸಿರುವ ಇಎಂಐ ಮೊತ್ತ ಹಾಗೂ ಪಾವತಿಸಿರುವ ಅವಧಿಗೆ (7 ವರ್ಷ) ಸರಿಯಾಗಿ ಅಂದಾಜು ಶೇ 12ರ ವಾರ್ಷಿಕ ಬಡ್ಡಿಯಷ್ಟೇ ಆಗುತ್ತದೆ. ಇಂತಹ ಸಾಲಗಳಿಗೆ ಈ ಬಡ್ಡಿ ಸಹಜ. ಸಾಲದ ಮರುಪಾವತಿ ಅವಧಿ ದೀರ್ಘವಾದಂತೆ ಕಟ್ಟುವ ಬಡ್ಡಿಯೂ ಹೆಚ್ಚಾಗುತ್ತಾ ಹೋಗುವುದು ಸಹಜ.

ನೀವು ಉಲ್ಲೇಖಿಸಿರುವ ಶೇ 36ರ ಬಡ್ಡಿ ದರ ಹೇಗೆ ಬಂದಿದೆ ಎಂಬುದನ್ನು ಮೊದಲು ದಾಖಲೆಗಳ ಮೂಲಕ ಹಾಗೂ ಲೆಕ್ಕಾಚಾರದ ಮೂಲಕ ನೋಡಿ. ಸಾಲ ನೀಡಿದ ಸಂಸ್ಥೆಯಿಂದ ನಿಮ್ಮ ಎಲ್ಲಾ ಇಎಂಐ ಮಾಹಿತಿ ಹಾಗೂ ಸಾಲ ಖಾತೆಗೆ ತಾಳೆ ಮಾಡಿ ನೋಡಿ. ನಿಮ್ಮ ಸಂದೇಹ ಬಗೆಹರಿಯದಿದ್ದರೆ, ಮೊದಲು ಅಲ್ಲಿನ ಉನ್ನತ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ನೀವು ಕಂಡಿರುವ ವ್ಯತ್ಯಾಸಕ್ಕೆ ಮಾಹಿತಿ ಕೇಳಿ. ನೀವು ಸಾಲಕ್ಕೆ ತಗಲುವ ಒಟ್ಟಾರೆ ಬಡ್ಡಿ-ಶುಲ್ಕ ವಿವರವನ್ನು ಮೊದಲ ಹಂತದಲ್ಲೇ ಬಗೆಹರಿಸಿಕೊಂಡಿದ್ದರೆ ವ್ಯವಹಾರದ ಹಾಗೂ ಕಾನೂನಿನ ದೃಷ್ಟಿಯಲ್ಲಿ ಸೂಕ್ತವಾಗುತ್ತಿತ್ತು. ಮೇಲಿನ ಯಾವುದೇ ಹಂತದಲ್ಲಿ ಸಂದೇಹ ಬಗೆಹರಿಯದಿದ್ದರೆ ಹಾಗೂ ಅಗತ್ಯವಿದ್ದರಷ್ಟೇ ನ್ಯಾಯೋಚಿತ ಕ್ರಮವನ್ನು ಕಾನೂನು ಸಲಹೆಗಾರರ ಮೇರೆಗೆ ಪಡೆದುಕೊಳ್ಳಬಹುದು. ನಿಮ್ಮಲ್ಲಿ ಈಗಾಗಲೇ ಸಾಲಕ್ಕೆ ಸಂಬಂಧಿತ ದಾಖಲೆಗಳಿದ್ದರೆ ಅವನ್ನೂ ಜೋಪಾನವಾಗಿಡಿ, ಕಾನೂನು ಕ್ರಮಕ್ಕೆ ನೆರವಾದೀತು.

ADVERTISEMENT

**

ಶಾಂತಾರಾಮ್ ಕೆ.ಆರ್., ಪದ್ಮನಾಭನಗರ, ಬೆಂಗಳೂರು
ಪ್ರಶ್ನೆ: ನನ್ನ ಸಂಬಂಧಿಯ ವಯಸ್ಸು 82 ವರ್ಷ. ಆಕೆಗೆ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ಹಣದಿಂದ ಮಾತ್ರ ಆದಾಯವಿದೆ. ಬಡ್ಡಿಯಿಂದ ಆಕೆಯ ವಾರ್ಷಿಕ ಆದಾಯ ₹ 6.4 ಲಕ್ಷ. ತೆರಿಗೆ ಉಳಿಸಲು ಸೆಕ್ಷನ್ 80 ಸಿ ಅಡಿ ₹ 1.5 ಲಕ್ಷದ ಬಾಂಡ್ ತೆಗೆದುಕೊಳ್ಳಬೇಕೆಂದುಕೊಂಡಿದ್ದಾರೆ. ಆಕೆ ಈ ಉಳಿತಾಯ ಮಾಡದೆ ತೆರಿಗೆ ಶೂನ್ಯ ಆಗುವ ಸಾಧ್ಯತೆ ಇಲ್ಲವೇ? ಹೊಸ ತೆರಿಗೆ ಪದ್ದತಿಯಂತೆ, ಈ ಆದಾಯಕ್ಕೆ ತೆರಿಗೆ ಶೂನ್ಯವಾಗುವ ಸಾಧ್ಯತೆ ಇದೆಯೇ? ಅವರಿಗೆ ವೈದ್ಯಕೀಯ ವಿಮೆ ಅಥವಾ ಬೇರೆ ಯಾವುದೇ ರಿಬೇಟ್ ಇಲ್ಲ. ಯಾವುದೇ ಉಳಿತಾಯ ಮಾಡದಿದ್ದರೆ, ಆದಾಯ ತೆರಿಗೆಯನ್ನು ಹೊಸ ಹಾಗೂ ಹಳೆ ಪದ್ಧತಿಯ ಪ್ರಕಾರ ಎಷ್ಟು ಕಟ್ಟಬೇಕಾಗುತ್ತದೆ?

ಉತ್ತರ: ನಿಮ್ಮ ಪ್ರಶ್ನೆಯನ್ನು ಆರ್ಥಿಕ ವರ್ಷ 2022-23ಕ್ಕೆ ಸಂಬಂಧಿಸಿದಂತೆ ಉತ್ತರಿಸಲಾಗಿದೆ. ನಿಮ್ಮ ಸಂಬಂಧಿಯ ಆದಾಯ ₹ 6.40 ಲಕ್ಷ. ಹೊಸ ಪದ್ಧತಿಯಡಿ ಅವರಿಗೆ ಯಾವುದೇ ತೆರಿಗೆ ವಿನಾಯಿತಿ, ಮೂಲ ತೆರಿಗೆ ವಿನಾಯಿತಿ ಹಾಗೂ ರಿಬೇಟ್ ಆಗಲಿ ಲಭ್ಯವಿರುವುದಿಲ್ಲ. ಹೀಗಾಗಿ ಇದರ ಅಡಿ ಬರುವ ತೆರಿಗೆ ₹ 27,560 ಆಗಿರುತ್ತದೆ. ಆದರೆ ಹಳೆಯ ತೆರಿಗೆ ಪದ್ಧತಿಯಡಿ ನೀವು ಉಲ್ಲೇಖಿಸಿರುವ ಆದಾಯಕ್ಕೆ 80 ವರ್ಷ ಮೀರಿರುವ ತೆರಿಗೆದಾರರಿಗೆ ಮೂಲ ತೆರಿಗೆ ವಿನಾಯಿತಿಯ ಆದಾಯ ಮಿತಿ ₹ 5 ಲಕ್ಷ. ಸೆಕ್ಷನ್ 80 ಟಿಟಿಬಿ ಅಡಿ ಬ್ಯಾಂಕ್‌ಗಳು, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಇರಿಸಿರುವ ಠೇವಣಿಗಳಿಂದ ಗಳಿಸಿದ ಬಡ್ಡಿಯ ಮೇಲೆ ಹಿರಿಯ ನಾಗರಿಕರಿಗೆ ₹ 50,000ವರೆಗಿನ ಬಡ್ಡಿ ಆದಾಯಕ್ಕೆ ಕಡಿತವನ್ನು ಅನುಮತಿಸಲಾಗಿದೆ. ಮುಂದೆ ₹ 5 ಲಕ್ಷ ಮೀರಿದ ಆದಾಯಕ್ಕೆ ಶೇ 20ರ ದರದಲ್ಲಿ ತೆರಿಗೆ ಇದೆ. ಇದರ ಮೇಲೆ ಶೇ 4ರಷ್ಟು ಸೆಸ್ ಸೇರಿಸಿ ಬರುವ ತೆರಿಗೆ ₹ 18,720. ಅವರು ₹ 90 ಸಾವಿರಕ್ಕೂ ಮೇಲ್ಪಟ್ಟು ಹೂಡಿಕೆ ಮಾಡಿದಾಗ ಒಟ್ಟಾರೆ ತೆರಿಗೆ ಶೂನ್ಯವಾಗುತ್ತದೆ.

ಒಟ್ಟಿನಲ್ಲಿ ಅವರು ಉಳಿತಾಯ ಮಾಡುವ ನಿರ್ಧಾರ ಕೈಗೊಂಡರೆ ಹಳೆಯ ತೆರಿಗೆ ಪದ್ಧತಿ ಅನುಸರಿಸಿ ಸಂಪೂರ್ಣ ತೆರಿಗೆ ಉಳಿಸಬಹುದು. ಒಂದು ವೇಳೆ ಉಳಿತಾಯದ ನಿರ್ಧಾರ ಕೈಬಿಟ್ಟರೂ ಹಳೆಯ ತೆರಿಗೆ ಪದ್ದತಿಯಡಿ ತೆರಿಗೆ ಕಡಿಮೆ ಬರುತ್ತದೆ. ಇದೇ ಆದಾಯಕ್ಕೆ 2023-24ನೇ ಆರ್ಥಿಕ ವರ್ಷದಿಂದ, ₹ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗುವ ಕಾರಣ ಯಾವುದೇ ಹೂಡಿಕೆ ಇಲ್ಲದೆ ಹೊಸ ತೆರಿಗೆ ಪದ್ಧತಿ ಅನುಸರಿಸಿ ತೆರಿಗೆಯಿಂದ ಪೂರ್ಣ ವಿನಾಯಿತಿ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.