ADVERTISEMENT

ನಿವೃತ್ತ ಜೀವನ ಸುಖವಾಗಿರಲು ಮಾರ್ಗದರ್ಶನ ನೀಡಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST
ಪುರಾಣಿಕ್
ಪುರಾಣಿಕ್   

ನಾನು ಇತ್ತೀಚೆಗೆ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿರುವೆ. ನನ್ನ ಹತ್ತಿರ 10 ಎಕರೆ ಖುಷ್ಕಿ ಜಮೀನಿದ್ದು, ಅದರಲ್ಲಿ ಮಾವಿನ ಗಿಡಗಳನ್ನು ಬೆಳೆಸಿದ್ದೇನೆ. ನನ್ನೊಡನೆ ಈಆಗಲೇ ₹ 45 ಲಕ್ಷ ನಗದು ಇದೆ. ನಿವೃತ್ತಿಯಿಂದ ಸುಮಾರು ₹ 25 ಲಕ್ಷ ಬರಬಹುದು. ನಾನು ಮನೆ ಕಟ್ಟಬೇಕೆಂದಿದ್ದೇನೆ. ಹಣದ ನಿರ್ವಹಣೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿರಿ.

ಊರು, ಹೆಸರು ಬೇಡ

ಉತ್ತರ: ನೀವು ಸ್ವಂತ ಮನೆ ಹೊಂದದಿರುವಲ್ಲಿ ಒಂದು ಮನೆ ಕಟ್ಟಿಸಿಕೊಳ್ಳಿ. ನಿಮ್ಮೊಡನಿರುವ₹ 70 ಲಕ್ಷದಲ್ಲಿ ಗರಿಷ್ಠ 40 ಲಕ್ಷದೊಳಗೆ ಮನೆ ಕಟ್ಟಿಸಿಕೊಳ್ಳಿ. ಉಳಿದ₹ 30 ಲಕ್ಷ ಒಮ್ಮೆಲೇ ಬಡ್ಡಿ ಬರುವ (Reinvestment Deposit) ಬ್ಯಾಂಕ್ ಠೇವಣಿಯಲ್ಲಿ ಇರಿಸಿ, ನಿಶ್ಚಿಂತೆಯಿಂದ ಬಾಳಿರಿ. ಈ ಯೋಜನೆಯಲ್ಲಿ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತಿರುತ್ತದೆ. ವಾರ್ಷಿಕವಾಗಿ ಬರುವ ಕೃಷಿ ಆದಾಯ ಹಾಗೂ ಪಿಂಚಣಿಯಲ್ಲಿ ಜೀವನ ಸಾಗಿಸಿರಿ.

ADVERTISEMENT

ನಾನು ನಿಮ್ಮ ಅಂಕಣದಿಂದ ಪ್ರೇರಿತನಾಗಿ ಉತ್ತಮ ಜೀವನ ಶೈಲಿಗೆ ಕಾಲಿಟ್ಟ ಓರ್ವ ವ್ಯಕ್ತಿ. ನನ್ನ ವಯಸ್ಸು 43. ಒಟ್ಟು ಸಂಬಳ₹ 82,014. ಎಲ್ಲಾ ಕಡಿತದ ನಂತರ₹ 46,550 ಕೈಗೆ ಬರುತ್ತದೆ. ನಿಮ್ಮ ಸಲಹೆಯಂತೆ ಆರ್.ಡಿ. ಉಳಿತಾಯ ಹಾಗೂ ಗೃಹಸಾಲದಿಂದ ಮನೆಕಟ್ಟಿಸಿಕೊಂಡೆ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ನನಗೆ 15 ಹಾಗೂ 12 ವರ್ಷದ ಇಬ್ಬರು ಮಕ್ಕಳಿದ್ದಾರೆ. ನನ್ನ ನಿವೃತ್ತ ಜೀವನ ಸುಖಮಯವಾಗಲು ಸರಿಯಾದ ಮಾರ್ಗದರ್ಶನ ಮಾಡಿರಿ.

ಸಿ. ಆಂಜನೇಯ, ಚಿತ್ರದುರ್ಗ

ಉತ್ತರ: ನೀವು ನಿಜವಾಗಿ ಭಾಗ್ಯವಂತರು. ನಾನು ಪ್ರತೀ ವಾರ ಕೊಡುವ ಸಲಹೆ ಬಹಳ ಜನರಿಗೆ ಉತ್ತರವಾಗುವುದು ಸಹಜ. ಆದರೆ, ಎಷ್ಟು ಜನ ನಿಮ್ಮಂತಹ ವ್ಯಕ್ತಿಗಳು ಪರಿವರ್ತನೆಯಾಗಿ ಆದರ್ಶ ವ್ಯಕ್ತಿಯಾಗುತ್ತಾರೆ ಎನ್ನುವುದು ಮುಖ್ಯ. ನಿಮ್ಮ ಇಬ್ಬರು ಗಂಡುಮಕ್ಕಳ ಸಲುವಾಗಿ ತಲಾ₹ 10,000 ಗಳನ್ನು 10 ವರ್ಷಗಳ ಆರ್.ಡಿ. ಮಾಡಿರಿ. 10 ವರ್ಷಗಳಲ್ಲಿ ಶೇ 7 ಬಡ್ಡಿ ದರದಲ್ಲಿ ಉತ್ತಮ ಮೊತ್ತ ಪಡೆಯುವಿರಿ. ನಿಮಗೂ ನಿಮ್ಮ ಕುಟುಂಬಕ್ಕೂ ಉತ್ತಮ ಭವಿಷ್ಯ ಹಾರೈಸುತ್ತೇನೆ.

ನಾನು ನಿಮ್ಮ ಅಂಕಣದಿಂದ ಪ್ರೇರಿತನಾಗಿ ಮದುವೆಗೆ ಮೊದಲು ಆರ್.ಡಿ. ಮಾಡಿ ಮದುವೆಯಾಗಿ ಆರಾಮವಾಗಿದ್ದೇನೆ. ನನ್ನ ಸಂಬಳ₹ 36,631. ಕಡಿತ₹ 12,245. ನಾನು ಇಲ್ಲಿ 30X40 ನಿವೇಶನ ಹೊಂದಿದ್ದು, ಈ ನಿವೇಶನದಲ್ಲಿ ಮನೆಕಟ್ಟಲು ಬ್ಯಾಂಕ್ ಸಾಲ ಅಥವಾ PMAY ಅಡಿ ನಿಮ್ಮ ಸಲಹೆ ಬೇಕಾಗಿದೆ.

ಬಸವರಾಜು ಜಿ. ಕುಷ್ಟಗಿ

ಉತ್ತರ: ಸಂಬಳ ಪಡೆಯುವ ಬ್ಯಾಂಕಿನಲ್ಲಿ PMAY ಯೋಜನೆಯಲ್ಲಿ ನೀವು ಬ್ಯಾಂಕಿನಿಂದ ಪಡೆಯುವ ಗೃಹಸಾಲದಲ್ಲಿ₹ 9 ಲಕ್ಷಗಳ ತನಕ ಶೇ 4 ಅನುದಾನಿತ ಬಡ್ಡಿ ಸೌಲತ್ತು ಇದೆ. ಮನೆಯ ಗಾತ್ರ 90 ಚದರ ಮೀಟರ್ ಒಳಗಿರಬೇಕು. ಸಾಲ ಮರುಪಾವತಿಗೆ ಗರಿಷ್ಠ ಅವಧಿ 20 ವರ್ಷ. ಇದರಿಂದ EMI ಗಣನೀಯವಾಗಿ ಕಡಿಮೆಯಾಗುತ್ತದೆ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.