ಚೈತ್ರಾ, ಹುಬ್ಬಳ್ಳಿ
l ಪ್ರಶ್ನೆ: ನಾನು ಗೃಹಿಣಿ. ವಯಸ್ಸು 36 ವರ್ಷ. ನನಗೆ ಇಬ್ಬರು ಹೆಣ್ಣು ಮಕ್ಕಳು. ಅವರು ವಯಸ್ಸು 8 ಮತ್ತು 6 ವರ್ಷವಿದ್ದು, ಇಬ್ಬರೂ ಮುಂದೆ ಉತ್ತಮ ಶಿಕ್ಷಣ ಪಡೆಯಲು, ಮದುವೆಯಾಗಲು, ನಿಮ್ಮ ಸಲಹೆಯಂತೆ ಆರ್.ಡಿ. ಮಾಡುತ್ತಿದ್ದೇನೆ. ವರ್ಷಾಂತ್ಯಕ್ಕೆ ಆರ್.ಡಿ.ಯಿಂದ ಬಂದ ಹಣಕ್ಕೆ ಸ್ವಲ್ಪ ಹಣ ಸೇರಿಸಿ ಬಂಗಾರದ ನಾಣ್ಯ ಕೊಳ್ಳುತ್ತಿದ್ದೇನೆ. ಕಳೆದ ಐದು ವರ್ಷಗಳಿಂದ ನಿಮ್ಮ ಅಂಕಣದಿಂದ ಪ್ರಭಾವಿತಳಾಗಿದ್ದೇನೆ. ಈ ಬಗ್ಗೆ ತಮಗೆ ಧನ್ಯವಾದ ತಿಳಿಸಬೇಕೆಂಬುದೇ ಈ ಪತ್ರದ ಮುಖ್ಯ ಉದ್ದೇಶ. ಇಬ್ಬರು ಹೆಣ್ಣು ಮಕ್ಕಳಿಗಾಗಿ ಇನ್ನೂ ಉತ್ತಮ ಯೋಜನೆಗಳಿದ್ದರೆ ತಿಳಿಸಿ.
ಉತ್ತರ: ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮಂತಹ ತಿಳಿವಳಿಕೆಯುಳ್ಳ ಗೃಹಿಣಿಯರು ನಿಜವಾಗಿಯೂ ಸಮಾಜಕ್ಕೆ ಒಂದು ದೊಡ್ಡ ಆಸ್ತಿ. ನಿಮ್ಮನ್ನು ಮಾದರಿಯಾಗಿಟ್ಟುಕೊಂಡು ಪ್ರತಿ ಗೃಹಿಣಿಯೂ ಉತ್ತಮ ಉಳಿತಾಯ, ಹೂಡಿಕೆ ಮಾಡಲಿ ಎಂದು ಆಶಿಸುತ್ತೇನೆ. ಬಂಗಾರದ ದರ ಸ್ವಲ್ಪ ಏರುತ್ತಿರುವುದು ಸಹಜ. ಆದರೆ ನಿಮ್ಮ ಪ್ರವೃತ್ತಿ ಮಕ್ಕಳ ಮದುವೆ ತನಕವೂ ನಿರಂತರವಾಗಿ ಸಾಗಲಿ ಎಂದು ಆಶಿಸುತ್ತೇನೆ. ಬಂಗಾರದ ನಾಣ್ಯಗಳನ್ನು ಬ್ಯಾಂಕ್‌ನ ಭದ್ರತಾ ಕವಾಟಿನಲ್ಲಿ (Safe Deposit Locker) ಇರಿಸಿ ನಿಶ್ಚಿಂತರಾಗಿರಿ. ಸಾಧ್ಯವಾದರೆ ಇಬ್ಬರೂ ಹೆಣ್ಣು ಮಕ್ಕಳ ಹೆಸರಿನಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯಲ್ಲಿ ಎಷ್ಟಾದರಷ್ಟು ತೊಡಗಿಸುತ್ತಾ ಬನ್ನಿ. ಇದು ಕೂಡಾ ಹೆಣ್ಣು ಮಕ್ಕಳಿಗೆ ಉತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಮಗೂ, ನಿಮ್ಮ ಮಕ್ಕಳಿಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ. ಅವಶ್ಯವಿರುವಲ್ಲಿ ನನಗೆ ದೂರವಾಣಿ ಕರೆ ಮಾಡಿ.
***
ಹೆಸರು ಬೇಡ, ಬೆಂಗಳೂರು
l ಪ್ರಶ್ನೆ: ಒಂದು ಮನೆ ಅಥವಾ ನಿವೇಶನ ಮಾರಾಟ ಮಾಡಿ ಬರುವ ಲಾಭದಿಂದ ಬಂಡವಾಳವೃದ್ಧಿ ತೆರಿಗೆ ಉಳಿಸಲು ಸರ್ಕಾರಿ ಬಾಂಡ್‌ಗಳಲ್ಲಿ ಗರಿಷ್ಠ ಇರಿಸುವ ಮೊತ್ತ ₹ 50 ಲಕ್ಷ. ಅಂತಹ ಆಸ್ತಿಯ ಹಕ್ಕುದಾರರು ಒಬ್ಬರಿಗಿಂತ ಹೆಚ್ಚು ಜನ ಇದ್ದಲ್ಲಿ ತೆರಿಗೆ ಉಳಿಸಲು ಏನಾದರೂ ಉಪಾಯಗಳಿವೆಯೇ? ಅದೇ ರೀತಿ ಬಂಡವಾಳ ವೃದ್ಧಿ ಲಾಭದಿಂದ ಮತ್ತೊಂದು ಮನೆಕೊಂಡು ಉಳಿದ ಹಣದ ಮೇಲೆ ತೆರಿಗೆ ಉಳಿಸಲು ಇರುವ ಮಾರ್ಗಗಳಿದ್ದರೆ ತಿಳಿಸಿ. ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಆಸ್ತಿ ಖರೀದಿ, ಮಾರಾಟದ ಭರಾಟೆ ಹೆಚ್ಚುತ್ತಿದ್ದು ನಿಮ್ಮ ಅಂಕಣ ಬಹು ಉಪಯುಕ್ತವಾಗಿದೆ.
ಉತ್ತರ: ಮಾರಾಟ ಮಾಡಿದ ಸ್ಥಿರ ಆಸ್ತಿಯಿಂದ ಬರುವ ಲಾಭದಲ್ಲಿ ಗರಿಷ್ಠ ₹ 50 ಲಕ್ಷ ಆರ್‌ಇಸಿ ಅಥವಾ ಎನ್‌ಎಚ್‌ಎಐ ಬಾಂಡ್‌ಗಳಲ್ಲಿ ಇರಿಸಬಹುದು. ಇದೇ ವೇಳೆ, ಆಸ್ತಿಯ ಹಕ್ಕುದಾರರು ಒಬ್ಬರಿಗಿಂತ ಹೆಚ್ಚಿನ ಜನ ಇದ್ದಲ್ಲಿ, ಪ್ರತಿಯೋರ್ವರೂ ಪ್ರತ್ಯೇಕವಾಗಿ ಗರಿಷ್ಠ ₹ 50 ಲಕ್ಷ ಬಾಂಡ್‌ಗಳಲ್ಲಿ ತೊಡಗಿಸಿ, ಅವರವರಿಗೆ ಬರುವ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದು. ಇದರಿಂದ ಎಲ್ಲರೂ ವಿನಾಯಿತಿ ಪಡೆದಂತಾಗುತ್ತದೆ. ನಿಮ್ಮ ಎರಡನೇ ಪ್ರಶ್ನೆ: ಇಲ್ಲಿ ಆಸ್ತಿ ಮಾರಾಟ ಮಾಡಿ ಮನೆ ಕೊಂಡ ನಂತರ ಉಳಿದ ಹಣದಿಂದ ಸೆಕ್ಷನ್ 54ಎಫ್ ಆಧಾರದ ಮೇಲೆ ಮತ್ತೊಂದು ಮನೆ ಕೊಳ್ಳುವ ಅವಕಾಶವಿದೆ. ಸರ್ಕಾರಿ ಬಾಂಡ್‌ಗಳಲ್ಲಿಯೂ ಇರಿಸಬಹುದು. ನೀವು ಕೇಳಿರುವ ಎರಡೂ ಪ್ರಶ್ನೆಗಳೂ ಬಹುಜನರಿಗೆ ಉಪಯುಕ್ತವಾಗಿದ್ದು, ಪ್ರಶ್ನೆ ಕೇಳಿದ ನಿಮಗೆ ಅಭಿನಂದಿಸುತ್ತೇನೆ. ಬಂಡವಾಳ ವೃದ್ಧಿ ತೆರಿಗೆ (Capital Gain Tax) ವಿಚಾರದಲ್ಲಿ ಜನರು ಗಾಬರಿ ಪಡುವ ಅವಶ್ಯವಿಲ್ಲ. ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡಿದರೆ ಕಾನೂನಿನಂತೆ ವಿನಾಯಿತಿ ಪಡೆಯಬಹುದು. ನೆಮ್ಮದಿಯಾಗಿ ಬಾಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.