ಇಂದುಮತಿ, ಮಲ್ಲೇಶ್ವರಂ, ಬೆಂಗಳೂರು.
ನಾನು ಕಳೆದ ಇಪ್ಪತ್ತು ವರ್ಷದಿಂದ ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಮನೆ ಪಾಠ ನಡೆಸಿ ಬದುಕು ಸಾಗಿಸುತ್ತಿದ್ದೇನೆ. ಮನೆ ಸಮೀಪವೇ ನನ್ನ ಹೆಸರಿನಲ್ಲಿ ನನ್ನ ಪತಿ, ಒಂದು ಸಣ್ಣ ರಿಟೇಲ್ ಅಂಗಡಿ ಇರಿಸಿಕೊಂಡು ವ್ಯವಹರಿಸುತ್ತಿದ್ದಾರೆ. ದಿನವಹಿ ಸುಮಾರು ₹25 ಸಾವಿರದಿಂದ ₹30 ಸಾವಿರ ವ್ಯಾಪಾರವಾಗುತ್ತಿದೆ. ಇದರಲ್ಲಿ ಅರ್ಧ ಭಾಗ ನಗದು ವ್ಯವಹಾರ ಆಗುತ್ತಿದೆ.
ಅದೇ ರೀತಿ ನನ್ನ ಪಾಠದಿಂದಲೂ ನನಗೆ ಪ್ರತಿ ತಿಂಗಳು ನಗದು ರೂಪದಲ್ಲಿ ಸುಮಾರು ₹25 ಸಾವಿರ ಆದಾಯ ಬರುತ್ತಿದೆ. ಅಲ್ಲದೆ, ಆನ್‌ಲೈನ್ ಮೂಲಕ ಪಾವತಿಸುವ ವಿದ್ಯಾರ್ಥಿಗಳೂ ಇದ್ದಾರೆ. ಅವರ ಪಾವತಿಯೂ ಹೆಚ್ಚು ಕಮ್ಮಿ ಅಷ್ಟೇ ಮೊತ್ತವಿದೆ. ನನ್ನ ಸಂದೇಹವೇನೆಂದರೆ ನಾನು ಮನೆ ಪಾಠದಿಂದ ಗಳಿಸುವ ಆದಾಯ ಹಾಗೂ ನನ್ನ ಹೆಸರಲ್ಲಿರುವ ವ್ಯವಹಾರಕ್ಕೆ ತೆರಿಗೆ ಹೇಗೆ ಅನ್ವಯವಾಗುತ್ತದೆಯೇ? ನಾನು ಈ ತನಕ ರಿಟರ್ನ್ಸ್ ಸಲ್ಲಿಸಿಲ್ಲ. ಈ ಬಗ್ಗೆ ಯೋಜನೆಯ ಅಗತ್ಯವಿದೆಯೇ? ತೆರಿಗೆ ಉಳಿಸಬೇಕಾದರೆ ಏನು ಮಾಡಬೇಕು.
ನೀವು ನೀಡಿರುವ ಮಾಹಿತಿ ಪ್ರಕಾರ ನೀವು ಎರಡು ಮೂಲಗಳಿಂದ ಆದಾಯ ಗಳಿಸುತ್ತಿದ್ದೀರಿ. ಒಂದು ನಿಮ್ಮ ಶಿಕ್ಷಣ ವೃತ್ತಿ ಹಾಗೂ ಎರಡನೆಯದು ನಿಮ್ಮ ವ್ಯಾಪಾರ. ಪ್ರಶ್ನೆಯಲ್ಲಿ ಉಲ್ಲೇಖಿಸಿರುವಂತೆ ವಾರ್ಷಿಕವಾಗಿ ನಿಮ್ಮ ಶಿಕ್ಷಣ ವೃತ್ತಿಯ ಆದಾಯ ₹6 ಲಕ್ಷ ಹಾಗೂ ವ್ಯಾಪಾರದಿಂದ ಬರುವ ವಹಿವಾಟು ಆದಾಯ ಸುಮಾರು ₹1 ಕೋಟಿ ಎಂದು ಊಹಿಸಲಾಗಿದೆ.
ನಿಮಗೆ ಆದಾಯ ತೆರಿಗೆಯ ಸೆಕ್ಷನ್ 44 ಎಡಿ ಪ್ರಕಾರ ರಿಟರ್ನ್ಸ್ ಸಲ್ಲಿಸುವುದಕ್ಕೆ ಸರಳ ಅವಕಾಶವಿದೆ. ನಿಮ್ಮ ಆದಾಯ ಅರ್ಧಕ್ಕರ್ಧ ನಗದು ರೂಪದಲ್ಲೂ ಇರುವ ಕಾರಣ ಹಾಗೂ ₹2 ಕೋಟಿ ವ್ಯವಹಾರ ಮೀರಿರದ ಕಾರಣ ನಿಮಗೆ ನಿಮ್ಮ ವ್ಯವಹಾರದ ಮೇಲೆ ಶೇ 8ರ ದರದಲ್ಲಿ ಲಾಭ ಇದೆ ಎಂದು ಘೋಷಿಸುವುದಕ್ಕೆ ಅವಕಾಶವಿದೆ. ಡಿಜಿಟಲ್ ಪಾವತಿ ಆಗಿದ್ದರೆ ಅಷ್ಟು ವಹಿವಾಟಿಗೆ ಶೇ 6ರ ಲಾಭ ಬಂದಿದೆ ಎಂದು ಊಹಿಸಿ ಒಟ್ಟು ಆದಾಯಕ್ಕೆ ತೆರಿಗೆ ಕಟ್ಟಬೇಕು. ನಿಮ್ಮ ವಿಚಾರದಲ್ಲಿ ಗರಿಷ್ಠವೆಂದರೆ ₹8 ಲಕ್ಷ ವ್ಯಾಪಾರದಿಂದಲೂ, ₹6 ಲಕ್ಷ ನಿಮ್ಮ ಶಿಕ್ಷಣ ವೃತ್ತಿಯಿಂದಲೂ ಗಳಿಕೆ ಇದೆ ಎಂದು ಊಹಿಸಬಹುದು. ಶಿಕ್ಷಣ ಆದಾಯಕ್ಕೆ ಸಂಬಂಧಿತ ವೆಚ್ಚವನ್ನು ಕಳೆದುಕೊಳ್ಳಬಹುದು.
ನೀವು ಆದಾಯ ಗಳಿಸುತ್ತಿರುವ ಕಾರಣ ನೀವು ರಿಟರ್ನ್ಸ್ ಸಲ್ಲಿಸಿ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿ ಜಿಎಸ್‌ಟಿ ನೋಂದಣಿಯೂ ನಿಮ್ಮಲ್ಲಿರಬಹುದು. ಹೀಗಾಗಿ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಆಗದಿದ್ದರೆ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಷ್ಟದ ಕೆಲಸವಲ್ಲ. ಅಲ್ಲದೆ, ಯಾವುದೇ ಬ್ಯಾಂಕಿನ ವ್ಯಾಪಾರ ಸಾಲಗಳಿಗೂ ರಿಟರ್ನ್ಸ್ ಅತ್ಯಗತ್ಯ ಎಂಬುದು ಗಮನದಲ್ಲಿ ಇರಲಿ.
ಈ ಬಗ್ಗೆ ತೆರಿಗೆ ಸಲಹೆಗಾರರ ನೆರವು ಪಡೆದು ರಿಟರ್ನ್ಸ್ ಸಲ್ಲಿಸಿ. ಕಳೆದ ವರ್ಷದ ಆದಾಯಕ್ಕೆ (2023-24) ಸಂಬಂಧಿಸಿ ಹೆಚ್ಚುವರಿ ಶುಲ್ಕ ಪಾವತಿಸಿ. ಇನ್ನೂ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಅವಕಾಶ ಇದೆ. ತೆರಿಗೆ ಉಳಿಸಲು ನಿಮ್ಮ ಪತಿಯವರ ಹೆಸರಲ್ಲಿ ಈ ವ್ಯವಹಾರವನ್ನು ವರ್ಗಾಯಿಸಿ ಹಾಗೂ ಅಗತ್ಯ ಪರವಾನಗಿ ಪಡೆದು ಮುನ್ನಡೆಸಬಹುದು. ಆಗ ಅದೇ ಆದಾಯಕ್ಕೆ ನೀವಿಬ್ಬರೂ ವೈಯಕ್ತಿಕವಾಗಿ ತೆರಿಗೆ ಅನ್ವಯವಾದರಷ್ಟೇ ಪಾವತಿಸಬೇಕಾಗುತ್ತದೆ.
ಅನನ್ಯಾ ಭಟ್, ಆರ್.ಟಿ. ನಗರ, ಬೆಂಗಳೂರು.
ನಾನು ಕಾಲೇಜು ಉಪನ್ಯಾಸಕಿ. ಚಿನ್ನದಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿದ್ದೇನೆ. ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಚಿನ್ನ, ಚಿನ್ನದ ಇಟಿಎಫ್, ಚಿನ್ನದ ಮ್ಯೂಚುವಲ್ ಫಂಡ್ ಮತ್ತು ಸ್ವರ್ಣ ಬಾಂಡ್ ಸರಣಿಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೇ? ಈ ವರ್ಗದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದರಿಂದ ಇವುಗಳಲ್ಲಿ ಯಾವುದು ಉತ್ತಮ. ಇವು ಈಕ್ವಿಟಿ ಫಂಡ್‌ಗಳಂತೆ ಅಲ್ಲ ಎಂಬುದನ್ನು ತಿಳಿದಿದ್ದೇನೆ. ಈ ಬಗ್ಗೆ ಮಾಹಿತಿ ಕೊಡಿ.
ಉತ್ತರ: ಹೂಡಿಕೆ ವಿಚಾರಕ್ಕೆ ಬಂದಾಗ ಯಾವುದೇ ಹೂಡಿಕೆ ಉತ್ಪನ್ನವಾಗಿರಲಿ, ಉದಾಹರಣೆಗೆ ಷೇರು, ಮ್ಯೂಚುವಲ್ ಫಂಡ್, ಚಿನ್ನ ಅಥವಾ ಬಾಂಡ್, ಇಟಿಎಫ್ ಅಥವಾ ಸ್ಥಿರ ಆಸ್ತಿ ಇತ್ಯಾದಿ ಏನೇ ಇರಲಿ ಇವೆಲ್ಲ ಪ್ರತ್ಯೇಕವಾದ ಹೂಡಿಕೆ ಉತ್ಪನ್ನಗಳಾಗಿವೆ. ತಮ್ಮ ತಮ್ಮ ರಿಸ್ಕ್ ಸಾಮರ್ಥ್ಯಕ್ಕೆ ತಕ್ಕ ಹಾಗೆ ಹಾಗೂ ಹೂಡಿಕೆ ಅವಧಿಗೆ ಸರಿ ಹೋಗುವ ಹೂಡಿಕೆಗಳನ್ನು ಆಯ್ಕೆ ಮಾಡಿ ತಮ್ಮ ಹೆಚ್ಚುವರಿ ಮೊತ್ತವನ್ನು ನಿರ್ದಿಷ್ಟ ಲಾಭವನ್ನು ಗುರಿಯಾಗಿಸಿ ಹೂಡಿಕೆ ಮಾಡಲಾಗುತ್ತದೆ.
ಎಲ್ಲ ಹೂಡಿಕೆಗಳು ಎಲ್ಲ ಕಾಲದಲ್ಲೂ ಉತ್ತಮ ಲಾಭ ಅಥವಾ ಸದಾ ಕಾಲ ನಷ್ಟದ ಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬುದು ಹೂಡಿಕೆ ಪ್ರಪಂಚದಲ್ಲಿ ಗಮನಿಸಬೇಕಾದ ಅಂಶ. ಅದೊಂದು ಲಾಭ-ನಷ್ಟದ ತಿರುಗುವ ಚಕ್ರ. ಹೀಗಾಗಿ, ಈ ಚಕ್ರದ ಏರುಗತಿ ಅರಿತು ಹೂಡಿಕೆ ಮಾಡುವವರಿಗೆ ಲಾಭವೂ, ತದ್ವಿರುದ್ಧವಾಗಿ ವ್ಯವಹರಿಸುವವರಿಗೆ ನಷ್ಟವಾಗುವುದು ಸಹಜ.
ಸಾಮಾನ್ಯ ನಿಯಮದಂತೆ ಮೇಲೆ ಹೇಳಿರುವ ವಿವಿಧ ವರ್ಗದ ಉತ್ಪನ್ನಗಳಲ್ಲಿ ಹಂಚಿಕೆ ಮಾಡಿ ಹೂಡಿಕೆ ಮಾಡುವುದು ಸೂಕ್ತ. ಆದರೆ, ಕೇವಲ ಚಿನ್ನದ ಮೌಲ್ಯ ಆಧರಿಸಿ ನಿರ್ಧರಿಸಲ್ಪಡುವ ಒಂದೇ ವರ್ಗದ ಬೇರೆ ಬೇರೆ ಉತ್ಪನ್ನಗಳಲ್ಲಿ ಹೂಡಿಕೆಗೆ ಆಸಕ್ತಿ ಇರುವ ಬಗ್ಗೆ ತಿಳಿಸಿದ್ದೀರಿ. ಬಹುತೇಕವಾಗಿ ಈ ಎಲ್ಲಾ ಉತ್ಪನ್ನಗಳು ಚಿನ್ನದ ಮೂಲ ಬೆಲೆಗೆ ಅನುಗುಣವಾಗಿ ಮೌಲ್ಯ ಪಡೆಯುತ್ತವೆ. ಆದರೆ, ಹೂಡಿಕೆ ಅವಧಿ, ರಿಸ್ಕ್, ತೆರಿಗೆ ಇತ್ಯಾದಿ ವ್ಯತ್ಯಸ್ಥವಾಗಿದೆ.
ಚಿನ್ನದ ಬಾಂಡ್ 8 ವರ್ಷಗಳ ಬಂಡವಾಳ ಹೂಡಿಕೆಯ ಉತ್ಪನ್ನವಾಗಿದೆ. ಕೊನೆಯ ತನಕ ಹೊಂದಿದ್ದಲ್ಲಿ ಲಾಭದ ಮೇಲೆ ತೆರಿಗೆ ಸಂಪೂರ್ಣ ವಿನಾಯಿತಿ ಇದೆ. ಇದಕ್ಕೆ ವಾರ್ಷಿಕವಾಗಿ ಶೇ 2.5ರಷ್ಟು ಬಡ್ಡಿ ಸಿಗುತ್ತದೆ.
ಇನ್ನು ವಸ್ತು ರೂಪದಲ್ಲಿರುವ ಹೂಡಿಕೆಯ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಯಾವತ್ತೂ ಅಪಾಯಕಾರಿ. ಇದನ್ನು ಬ್ಯಾಂಕ್ ಲಾಕರ್ ಇತ್ಯಾದಿಗಳಲ್ಲಿ ಇಡಲು ಪ್ರತ್ಯೇಕ ವೆಚ್ಚ ಪಾವತಿಸಬೇಕಿದೆ. ಖರೀದಿಯ ವೇಳೆ ಶೇ 3ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ.
ಇನ್ನು ಚಿನ್ನದ ಇಟಿಎಫ್‌ಗಳು ಷೇರು ಖರೀದಿಸಿದಂತೆ. ಮಾರುಕಟ್ಟೆ ಅವಧಿಯಲ್ಲಿ ಪ್ರತಿ ಕ್ಷಣ ಬೆಲೆ ಬದಲಾಗುತ್ತಿರುತ್ತದೆ. ಹೀಗಾಗಿ, ಇದು ಚಿನ್ನದ ಮ್ಯೂಚುವಲ್ ಫಂಡ್‌ಗಳಿಗೆ ಅನ್ವಯಿಸುವ ದಿನಕ್ಕೊಂದು ಬೆಲೆಯಂತೆ ಕಾರ್ಯ ನಿರ್ವಹಿಸುವುದಿಲ್ಲ. ಇದಕ್ಕೆ ಡಿಮ್ಯಾಟ್ ಖಾತೆ ಅಗತ್ಯ. ಚಿನ್ನದ ಮ್ಯೂಚುವಲ್ ಫಂಡ್ ಯಾವುದೇ ಫಂಡ್ ಹೌಸ್‌ಗಳಲ್ಲಿ ನಿಮ್ಮ ಕೆವೈಸಿ ಸ್ವತಃ ಆನ್‌ಲೈನ್ ಮೂಲಕ ದಾಖಲಿಸಿ ತೆರೆಯಬಹುದು. ಏಕ ಕಂತು ಅಥವಾ ಮಾಸಿಕ ಕಂತುಗಳಲ್ಲಿ ಪಾವತಿಗೆ ಇದು ಉತ್ತಮ ಅವಕಾಶ ನೀಡುತ್ತದೆ.
ನೀವು ಉಲ್ಲೇಖಿಸಿರುವ ಈ ಎಲ್ಲ ಉತ್ಪನ್ನಗಳೂ ಪ್ರತ್ಯೇಕ ರೀತಿಯಲ್ಲಿ ತೆರಿಗೆಗೊಳಪಡುತ್ತವೆ. ಇದು ಹೂಡಿಕೆಯ ಅವಧಿ ಹಾಗೂ ಅವುಗಳಿಗೆ ಅನ್ವಯಿಸುವ ತೆರಿಗೆ ದರವನ್ನು ಆಧರಿಸಿದೆ. ಹೀಗಾಗಿ, ಈ ಬಗ್ಗೆ ಪ್ರತ್ಯೇಕವಾದ ತೆರಿಗೆ ಸಲಹೆ ಪಡೆದುಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.