ADVERTISEMENT

ಪ್ರಶ್ನೋತ್ತರ: ಉತ್ತಮ ಹೂಡಿಕೆ ಅಥವಾ ಆಸ್ತಿ ಖರೀದಿ ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 21 ಫೆಬ್ರುವರಿ 2024, 0:46 IST
Last Updated 21 ಫೆಬ್ರುವರಿ 2024, 0:46 IST
<div class="paragraphs"><p> ಹೂಡಿಕೆ </p></div>

ಹೂಡಿಕೆ

   

ಪ್ರಶ್ನೆ: ಒಬ್ಬ ವ್ಯಕ್ತಿ ₹20 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಬ್ಯಾಂಕಿನಿಂದ ನಗದು ಮಾಡಿದರೆ ಶೇ 2ರ ದರದಲ್ಲಿ ಆದಾಯ ತೆರಿಗೆ ಕಡಿತ ಮಾಡುತ್ತಾರೆ. ಈ ಬಗ್ಗೆ ತೆರಿಗೆ ಇಲಾಖೆಯವರು ನಮ್ಮ ಖರ್ಚಿನ ವಿವರ ಕೇಳಬಹುದು ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಕೇಳಿದ್ದೇನೆ. ಈಗ ನಾನು ಸಾಲ ಪಡೆದು ಮನೆ ಕಟ್ಟಲು ಆರಂಭಿಸಿದ್ದೇನೆ. ಈ ಹಣದಿಂದ ಮನೆ ಕಟ್ಟಲು ಕೂಲಿಗಾಗಿ ಪಾವತಿ, ಕಾಮಗಾರಿ ಸಾಮಗ್ರಿ, ನನ್ನ ತಾಯಿಯ ಆರೋಗ್ಯ ವೆಚ್ಚ, ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ ಪರವಾನಗಿ ವೆಚ್ಚ ಇತ್ಯಾದಿ ಪಾವತಿ ಮಾಡಬೇಕಾಗಿರುತ್ತದೆ. ಹೀಗೆ ಪಾವತಿಸುವ ನಗದು ಮೊತ್ತಕ್ಕೆ ಸಂಬಂಧಿಸಿ ಏನಾದರೂ ಸಮಸ್ಯೆ ಇದೆಯೇ.

–ಸಿ.ಪಿ. ರಾಮಶೇಷಪ್ಪ, ಮೈಸೂರು.

ADVERTISEMENT

ಉತ್ತರ: ಬ್ಯಾಂಕ್ ಖಾತೆಯಿಂದ ಹಣ ನಗದೀಕರಿಸುವಾಗ ಕೆಲವೆಲ್ಲ ಆದಾಯ ತೆರಿಗೆ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಸಾಮಾನ್ಯವಾಗಿ ವಾರ್ಷಿಕ ₹1 ಕೋಟಿಗೂ ಅಧಿಕ ಮೊತ್ತವನ್ನು ನಗದೀಕರಿಸಿದಾಗ ತೆರಿಗೆ ಕಟಾಯಿಸಲಾಗುತ್ತದೆ. ಆದರೆ, ಯಾವುದೇ ವ್ಯಕ್ತಿ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದಿದ್ದರೆ, ಈ ಮಿತಿಯನ್ನು ₹20 ಲಕ್ಷದಿಂದಲೇ ತೆರಿಗೆ ಕಟಾವಿಗೆ ಪರಿಗಣಿಸಲಾಗುತ್ತದೆ. ಅಂದರೆ ₹1 ಕೋಟಿಯೊಳಗಿನ ಮೊತ್ತಕ್ಕೆ ಶೇ 2ರ ದರದಲ್ಲಿ ತೆರಿಗೆ ಕಡಿತ ಮಾಡಲಾಗುತ್ತದೆ. ತೆರಿಗೆ ಕಡಿತದ ಜವಾಬ್ದಾರಿ, ಹಣ ಪಡೆಯುವ ಗ್ರಾಹಕರಿಗಿಂತ ಬ್ಯಾಂಕ್‌ಗಳಿಗೆ ಇದೆ. ಹೀಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ ವಿವರವನ್ನು ಬ್ಯಾಂಕಿಗೂ ಮಾಹಿತಿಗಾಗಿ ನೀಡಬೇಕು. ಒಂದು ವೇಳೆ ಇದು ಅಸಾಧ್ಯವಾದರೆ, ಕಟಾವಾದ ತೆರಿಗೆಯನ್ನು ಯಾವುದೇ ತೆರಿಗೆಗೊಳಪಡುವ ಆದಾಯವಿಲ್ಲದಿದ್ದರೆ ಸಂಪೂರ್ಣ ಹಿಂಪಡೆಯುವ ಅವಕಾಶ ಇದೆ. ಇದಕ್ಕಾಗಿ ಮುಂದಿನ ವರ್ಷಗಳಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸಿ.

ವ್ಯಾಪಾರ ಸಂಬಂಧಿ ನಗದು ವ್ಯವಹಾರಗಳಿಗಿದ್ದಂತೆ, ವೈಯಕ್ತಿಕ ವ್ಯವಹಾರಗಳಿಗೆ ಸಂಬಂಧಿಸಿ ಕೆಲವು ಸೀಮಿತ ನಿಯಮಗಳಿವೆ. ಆದರೆ, ಯಾವುದೇ ಮೊತ್ತ ಪಾವತಿಸುವುದಾದರೂ ಪ್ರತಿ ಸನ್ನಿವೇಶಕ್ಕೆ ಸಂಬಂಧಿಸಿ, ಪ್ರತಿ ದಿನ ಅಥವಾ ಪ್ರತಿ ಬಿಲ್ಲು ಸಂದಾಯವಾಗುವ ಸಂದರ್ಭದಲ್ಲಿ ₹2 ಲಕ್ಷಕ್ಕೂ ಮೀರಿದ ನಗದು ಮೊತ್ತ ಪಡೆಯುವಂತಿಲ್ಲ ಎಂಬುದು ಸೆಕ್ಷನ್ 269ಎಸ್‌ಟಿ ಹೇಳುತ್ತದೆ. ಇದು ವ್ಯವಹಾರದಲ್ಲಿರುವ, ಆದರೆ ನಮ್ಮಿಂದ ಹಣ ಪಡೆಯುವ ವ್ಯಕ್ತಿಗಳನ್ನು ಉದ್ದೇಶಿಸಿ ಈ ಕಾನೂನು ನಿರ್ಬಂಧ ಹೇರಲಾಗಿದ್ದರೂ, ಪಾವತಿಸುವವರಿಗಿಗೂ ಅದರ ಅರಿವು ಇರಬೇಕು. ಅದಕ್ಕೆ ಸಂಬಂಧಿತ ಸಮಾನ ಮೊತ್ತದ ದಂಡ, ಹಣ ಸ್ವೀಕರಿಸುವವರಿಗೆ ಹೇರುವ ಅವಕಾಶ ಕಾನೂನಿನಡಿ ಇದೆ. 

ಪ್ರಶ್ನೆ: ನಾನು ಶಿಕ್ಷಣ ಕ್ಷೇತ್ರದಲ್ಲಿದ್ದು ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿ ಅನೇಕ ರೀತಿಯ ವೆಚ್ಚಗಳಿದ್ದು ಅದನ್ನು ಸಕಾಲದಲ್ಲಿ ನಿಭಾಯಿಸುವ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಇದರಲ್ಲಿ ಮಕ್ಕಳ ಶಿಕ್ಷಣ ವೆಚ್ಚ, ಆರೋಗ್ಯ, ಇನ್ಶೂರೆನ್ಸ್, ಉಳಿತಾಯ, ಮ್ಯೂಚುವಲ್ ಫಂಡ್ ಹೂಡಿಕೆ, ತಿಂಗಳ ಖರ್ಚು, ವಾಹನ ಖರ್ಚು ಇತ್ಯಾದಿ ಇರುತ್ತದೆ. ಈ ಖರ್ಚುಗಳಲ್ಲದೆ, ಇನ್ನೂ ಅನೇಕ ಆಕಸ್ಮಿಕ ವೆಚ್ಚಗಳೂ ಕೆಲವೊಮ್ಮೆ ಬರುತ್ತವೆ. ಈ ಬಗ್ಗೆ ಲೆಕ್ಕ ಬರೆದಿಡುವ ಅಭ್ಯಾಸವನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದೇನೆ. ಆದರೆ, ಈ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಹೊಂದಿ ನಾನು ಮುಂದೆ ಉತ್ತಮ ಹೂಡಿಕೆ ಅಥವಾ ಆಸ್ತಿ ಖರೀದಿ ಇತ್ಯಾದಿ ಮಾಡಬಹುದೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿದರೂ ಅದರ ಮರುಪಾವತಿಗೆ ಸಾಧ್ಯವೇ ಅಥವಾ ಎಷ್ಟು ವರ್ಷದ ಸಾಲ ಪಡೆದು ಭೂಮಿ- ಮನೆ ಇತ್ಯಾದಿ ಖರೀದಿಸಬಹುದು ಎನ್ನುವುದನ್ನು ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಹಾಗೂ ಗೊಂದಲ ನಿವಾರಿಸಲು ನೆರವಾಗುವ ಮಾಹಿತಿ ನೀಡಿ.

–ಸರೋಜವಲ್ಲಿ ಎಸ್., ಹಾಸನ.   

ಉತ್ತರ: ನಿಮ್ಮ ಸಮಸ್ಯೆ ಬಹುತೇಕರಿಗಿರುವ ಸಮಸ್ಯೆಯಾಗಿದೆ. ಆರ್ಥಿಕ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವುದು ಸಾಕಷ್ಟು ಆರ್ಥಿಕ ಸಂಪನ್ಮೂಲ ಇದ್ದಾಗ ಬಹಳ ಸುಲಭ. ಆದರೆ, ಮಧ್ಯಮ ವರ್ಗದ ಅಥವಾ ಅದಕ್ಕಿಂತ ಕಡಿಮೆ ಆದಾಯ ವರ್ಗದಲ್ಲಿ ನಾವಿದ್ದಾಗ, ಸಮರ್ಪಕ ಆರ್ಥಿಕ ಚೌಕಟ್ಟು ಹಾಕಿಕೊಂಡು ನಮ್ಮದೇ ಕಟ್ಟುಪಾಡುಗಳ ಪರಿಧಿಯಲ್ಲಿ ವ್ಯವಹರಿಸಬೇಕಾಗುತ್ತದೆ. ಇದಕ್ಕಾಗಿ ಒಂದಷ್ಟು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

1. ನೀವು ಈಗಾಗಲೇ ದಿನವಹಿ ವೆಚ್ಚ ದಾಖಲಿಸುತ್ತಿರುವುದರ ಬಗ್ಗೆ ತಿಳಿಸಿದ್ದೀರಿ. ಇದು ಉತ್ತಮ ವಿಚಾರ. ಈ ರೀತಿ ದಾಖಲಿಸಿದ ಮಾಹಿತಿಯನ್ನು ಪ್ರತ್ಯೇಕ ಖರ್ಚುಗಳಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವ ಬಗ್ಗೆಯೂ ಪ್ರತಿ ತಿಂಗಳ ಮಾಹಿತಿ ಹೊಂದಿ  (ಉದಾ: ವಿದ್ಯುತ್, ಶಿಕ್ಷಣ, ವೈದ್ಯಕೀಯ, ಆಹಾರ ಸಾಮಗ್ರಿ ಇತ್ಯಾದಿ). ಇಲ್ಲದಿದ್ದರೆ ಇಂತಹ ಮಾಹಿತಿ ಕೇವಲ ನೆನಪಿಗಾಗಿ ಇರುವ ಮಾಹಿತಿಯಾಗುತ್ತದೆಯೆ ವಿನಾ ಆರ್ಥಿಕ ನಿರ್ಣಯಕ್ಕೆ ನೆರವಾಗದು. ಇಂದು ಅನೇಕ ಮೊಬೈಲ್ ಆ್ಯಪ್‌ಗಳು ಕೂಡ ಇವೆ. ಇವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ.

2. ನೀವು ಖರ್ಚು ಮಾಡುವ ವಿಚಾರವನ್ನು ನಿಷ್ಠೆಯಿಂದ ಹೇಗೆ ಬರೆದಿಡುತ್ತೀರೋ, ಅಷ್ಟೇ ಮುಖ್ಯ ನಿಮ್ಮ ವಾರ್ಷಿಕ ಆರ್ಥಿಕ ಯೋಜನೆಯೂ ಆಗಿದೆ. ಇವನ್ನು ಮೊದಲ ಹಂತದಲ್ಲಿ ಉದ್ದೇಶಕ್ಕೆ ಅನುಗುಣವಾಗಿ ಬರೆದಿಟ್ಟುಕೊಳ್ಳಿ. ಅದಕ್ಕೆ ತಕ್ಕಂತೆ ಪ್ರಸ್ತುತ ನಿಮ್ಮ ಖರ್ಚು ಇದೆಯೇ ಎಂಬ ಬಗ್ಗೆ ಯೋಜನೆ ಮಾಡಿ. ಅಗತ್ಯವಿರುವ ಕಡೆ ನಿಯಂತ್ರಣವೂ ಅನಿವಾರ್ಯವಾದೀತು. ಈ ಬಗ್ಗೆ ಸಮಯೋಚಿತ ನಿರ್ಧಾರ ಕೈಗೊಳ್ಳಿ.
 
3. ಯಾವುದೇ ವೆಚ್ಚ ಮಾಡುವ ಮೊದಲು ವೆಚ್ಚ ವರ್ಗಗಳಾದ ಅತ್ಯಗತ್ಯ, ಅನಗತ್ಯ ಹಾಗೂ ಇವೆರಡರ ಮಧ್ಯೆ ಇರುವ ವೆಚ್ಚಗಳ ಬಗ್ಗೆ ಖಚಿತ ಅಭಿಪ್ರಾಯ ಹೊಂದಿಬೇಕಿದೆ. ತೀರಾ ಅನಿವಾರ್ಯವಲ್ಲದ ಹಾಗೂ ಅನಗತ್ಯ ವೆಚ್ಚ ನಿಯಂತ್ರಣದ ಪರಿಣಾಮವು ಮುಂದಿನ ಯೋಜನೆ ರೂಪಿಸಲು ಸಾಧ್ಯವಾಗಲಿದೆ.

4. ಮೇಲಿನ ನಿರ್ಣಯಗಳ ಆಧಾರದ ಮೇಲೆ ಉಳಿತಾಯವಾಗಬಹುದಾದ ಮೊತ್ತವನ್ನು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಹೂಡಿಕೆಗೆ ನಿರ್ಣಯ ಮಾಡಿ. ದೊಡ್ಡ ಮೊತ್ತದ ಹೂಡಿಕೆಯಾದ ಭೂಮಿ ಖರೀದಿ, ಗೃಹ ನಿರ್ಮಾಣದಂತಹ ಯೋಜನೆಗೆ ಸಾಲದ ಅಗತ್ಯ ಇರುವುದರಿಂದ ನಿಮ್ಮ ಆದಾಯಕ್ಕೆ ಸರಿದೂಗಿ ಎಷ್ಟು ಉಳಿತಾಯಕ್ಕೆ ಹಣ ಲಭ್ಯವಿರುತ್ತದೆ ಎನ್ನುವುದರ ಆಧಾರದಲ್ಲಿ ಹೂಡಿಕೆ ಹಾಗೂ ಸಾಲದ ಮೊತ್ತ ನಿರ್ಧರಿಸಿ. ಆದಾಯಕ್ಕೆ ಸಂಬಂಧಿಸಿ ಸಿಗಬಹುದಾದ ಸಾಲದ ಮಾಹಿತಿಗಾಗಿ ಮೇಲಿನ ಅಂದಾಜು ಮಾಹಿತಿ ಬಗ್ಗೆಯೂ ನಿಮಗೆ ಅರಿವಿದ್ದರೆ ಉತ್ತಮ.

*********

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.