ADVERTISEMENT

ಪ್ರಶ್ನೋತ್ತರ: ಸರ್ಕಾರಿ ನೌಕರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ?

ಪ್ರಮೋದ ಶ್ರೀಕಾಂತ ದೈತೋಟ
Published 5 ಜೂನ್ 2024, 23:56 IST
Last Updated 5 ಜೂನ್ 2024, 23:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಶ್ನೆ: ಕಳೆದ 10 ವರ್ಷಗಳಿಂದ ನಾನು ಸರ್ಕಾರಿ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ ಮೂರು ತಿಂಗಳಿನಿಂದ ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ನಾನು ಸರ್ಕಾರಿ ನೌಕರನಾಗಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ? ಅಥವಾ ನನಗೆ ಹಣ ಹೂಡಲು ನಿರ್ಬಂಧ ಇದೆಯೇ? ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕೇ? ಈ ಬಗ್ಗೆ ಮಾಹಿತಿ ನೀಡಲು ಮನವಿ. – ಅಂಬರೀಶ್‌ ಕುಂಬಾರಿ, ಊರು ತಿಳಿಸಿಲ್ಲ.

ಉತ್ತರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎಲ್ಲಾ ವರ್ಗದ ವ್ಯಕ್ತಿಗಳಿಗೆ ಮುಕ್ತ ಅವಕಾಶ ಇದ್ದರೂ ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳ ವಿಚಾರಕ್ಕೆ ಬಂದಾಗ ಕೆಲವು ನಿಯಮಗಳನ್ನು ಅವರ ನಾಗರಿಕ ಸೇವಾ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ನಾಗರಿಕ ಸೇವಾ ನಿಯಮಾವಳಿ 1964ರಲ್ಲಿ ಈ ಕುರಿತು ಸ್ಪಷ್ಟವಾಗಿ ನಮೂದಿಸಲಾಗಿದೆ.

ADVERTISEMENT

ನಿಯಮ 16ರ ಅನ್ವಯ ಯಾವುದೇ ಸರ್ಕಾರಿ ಉದ್ಯೋಗಿಗಳು ಷೇರು ಅಥವಾ ಇತರೆ ಹೂಡಿಕೆ ಉತ್ಪನ್ನದಲ್ಲಿ ತ್ವರಿತ ದರ ಏರಿಳಿತ (ಸ್ಪೆಕ್ಯುಲೇಟಿವ್) ರೂಪದಲ್ಲಿರುವ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ, ಕಾರ್ಪೊರೇಷನ್, ಸರ್ಕಾರಿ ಕಂಪನಿಗಳು ಇತ್ಯಾದಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವ ಎಲ್ಲಾ ನೌಕರರಿಗೂ ಅನ್ವಯಿಸುತ್ತದೆ.

ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳಿಗೆ ತಮ್ಮ ವೃತ್ತಿ ನಿರ್ವಹಿಸುವಾಗ ಅನೇಕ ಮಾಹಿತಿಗಳು ಸರ್ಕಾರದ ಸೇವಾವಧಿಯಲ್ಲಿ ಅವರ ನಿಯಂತ್ರಣ ಹಾಗೂ ನಿರ್ವಹಣೆಗೆ ಬರುತ್ತವೆ. ಹಾಗಾಗಿ, ಅವರು ಅನಗತ್ಯವಾಗಿ ಆರ್ಥಿಕ ಆಮಿಷಗಳಿಗೆ ಒಳಗಾಗಬಾರದೆಂಬ ಕಾರಣಕ್ಕೆ ಇಂತಹ ಕೆಲವು ನಿರ್ಬಂಧ ವಿಧಿಸಲಾಗಿದೆ.  

ಆದರೆ, ಕೇವಲ ಹೂಡಿಕೆ ದೃಷ್ಟಿಯಿಂದ ಮಾಡುವ ವ್ಯವಹಾರ ಇದರಲ್ಲಿ ಒಳಗೊಳ್ಳುವುದಿಲ್ಲ. ಕೆಲವೊಂದು ರೀತಿಯ ಹೂಡಿಕೆಗಳಿಗೆ ರಿಯಾಯಿತಿಯನ್ನೂ ನೀಡಲಾಗಿದೆ.

ಉದಾಹರಣೆಗೆ ಹಂತ ಹಂತವಾಗಿ ಷೇರುಗಳನ್ನು ದೀರ್ಘಾವಧಿಗೆ ಖರೀದಿಸಿ ಕೆಲವು ತಿಂಗಳ ಬಳಿಕ ಮಾರಾಟ ಮಾಡಿದಾಗ ಅದು ಹೂಡಿಕೆ ಎಂದೇ ಪರಿಗಣಿಸಲ್ಪಡುತ್ತದೆ. ನಿಷೇಧಿತ ಪರಿಮಿತಿಯಲ್ಲಿ ಕರೆನ್ಸಿ ಹಾಗೂ ಕಮೋಡಿಟಿ ವಹಿವಾಟು, ಫ್ಯೂಚರ್ಸ್ ಮತ್ತು ಆಪ್ಶನ್ ವ್ಯವಹಾರ ಅಥವಾ ಇಂಟ್ರಾಡೇ ಟ್ರೇಡಿಂಗ್ ಇತ್ಯಾದಿಗಳೂ ಇಲ್ಲಿ ಬಹುಮುಖ್ಯವಾಗಿ ಒಳಗೊಳ್ಳುತ್ತವೆ. ಕಾರಣ ಇವೆಲ್ಲಾ ಪದೇ ಪದೇ ವ್ಯವಹರಿಸಲ್ಪಡುವ ಸ್ಪೆಕ್ಯುಲೇಟಿವ್ ಮಾರುಕಟ್ಟೆಯ ಉತ್ಪನ್ನಗಳಾಗಿವೆ.

ವ್ಯವಹಾರ ಹಾಗೂ ಹೂಡಿಕೆ ಎರಡೂ ಪದಗಳು ಬೇರೆ ಬೇರೆ ಉದ್ದೇಶ ಹಾಗೂ ಗುಣಲಕ್ಷಣ ಹೊಂದಿವೆ. ನೋಂದಾಯಿತ ಸ್ಟಾಕ್ ಬ್ರೋಕರ್‌ಗಳು ಅಥವಾ ಇತರೆ ನೋಂದಾಯಿತ ಸಂಸ್ಥೆಗಳ ಮೂಲಕ ಮಾಡಲಾದ ‘ಅಪರೂಪದ ವ್ಯವಹಾರ’ವನ್ನು ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

ಅದೇ ಒಂದು ವರ್ಷದ ಅವಧಿಯಲ್ಲಿ ಅನೇಕ ಬಾರಿ ವ್ಯವಹರಿಸಿದಾಗ ಅದು ಹೂಡಿಕೆಯ ವ್ಯಾಪ್ತಿಯನ್ನು ಮೀರುತ್ತದೆ. ಇನ್ನು ನಿಯಮಾವಳಿಯಲ್ಲಿ ಎಷ್ಟು ಬಾರಿ ವ್ಯವಹರಿಸಬಹುದು ಎನ್ನುವ ನಿರ್ದಿಷ್ಟ ಮಾಹಿತಿ ನೀಡಿಲ್ಲದಿದ್ದರೂ, ಅದರರ್ಥ ಅನೇಕ ಬಾರಿ ಖರೀದಿ, ಮಾರಾಟ ಮಾಡಬಹುದೆಂದಲ್ಲ. ದೀರ್ಘಾವಧಿಗೆ ಷೇರುಗಳಲ್ಲದೆ ಎಸ್‌ಐಪಿ, ಗೋಲ್ಡ್ ಬಾಂಡ್‌, ಆರ್‌ಬಿಐ ಬಾಂಡ್‌ ಮತ್ತು ಅಂತಹ ಇತರೆ ಹೂಡಿಕೆಗಳನ್ನೂ ಮಾಡಬಹುದು.

ಈ ಹೂಡಿಕೆಗೂ ಆರ್ಥಿಕ ಮಿತಿ ಇದ್ದು 2019ರ ತಿದ್ದುಪಡಿಯಂತೆ ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ವರ್ಗದ ನೌಕರರಾಗಿದ್ದರೂ ತಮ್ಮ ಮೂಲ ವೇತನದ 6 ಪಟ್ಟು ಮೊತ್ತ ಹೂಡಿಕೆಗೆ ಮುಕ್ತ ಅವಕಾಶವಿದೆ. ಇನ್ನೂ ಹೆಚ್ಚಿನ ಹೂಡಿಕೆ ಇದ್ದರೆ ಅದನ್ನು ವರ್ಷಾಂತ್ಯವಾದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿದೆ. 

ಪ್ರಶ್ನೆ: ನಾನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಈಕ್ವಿಟಿ ಹಾಗೂ ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ಹೊಂದಿದ್ದೇನೆ. ನಾನು ಹೆಚ್ಚಿನ ಲಾಭಕ್ಕಾಗಿ ಇತರೆ ವರ್ಗದ ಫಂಡ್‌ಗಳಲ್ಲೂ ಹೂಡಿಕೆ ಮಾಡಲು ಇತ್ತೀಚೆಗೆ ಡಿವಿಡೆಂಡ್ ಫಂಡ್‌ಗಳ ಬಗ್ಗೆ ಕೇಳಿದ್ದೆ. ಇಂತಹ ಫಂಡ್‌ಗಳಲ್ಲಿ ಹೂಡಿದರೆ ನಮಗೆ ನಿಗದಿತ ಡಿವಿಡೆಂಡ್ ಖಾತರಿ ಇದೆಯೇ? ಸಾಮಾನ್ಯವಾಗಿ ಫಂಡ್ ಮ್ಯಾನೇಜರ್‌ಗಳು ಉತ್ತಮ ಡಿವಿಡೆಂಡ್ ಬರುವ ಕಂಪನಿಗಳಲ್ಲೇ ಹೂಡಿಕೆ ಮಾಡುವ ಕಾರಣ ನಮಗೆ ನಷ್ಟ ಆಗುವ ಸಂಭವ ಕಡಿಮೆಯಲ್ಲವೇ. ಇದರ ತೆರಿಗೆ ಬಗ್ಗೆಯೂ ತಿಳಿಸಿಕೊಡಿ. – ಮೋಹನ್ ರಾಜ್, ವಿ.ವಿ ಪುರಂ, ಬೆಂಗಳೂರು.

ಉತ್ತರ: ಡಿವಿಡೆಂಡ್ ಮ್ಯೂಚುಯಲ್ ಫಂಡ್‌ಗಳು ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಒಂದು ವರ್ಗವಾಗಿದ್ದು, ಅದು ಹೆಚ್ಚಿನ ಲಾಭಾಂಶ ಪಾವತಿಸುವ ಕಂಪನಿಗಳ ಷೇರುಗಳಲ್ಲಿ ನಿರ್ದಿಷ್ಟವಾಗಿ ಹೂಡಿಕೆ ಮಾಡುತ್ತವೆ. ಈ ಫಂಡ್‌ಗಳು ಸರಾಸರಿ ಮಾರುಕಟ್ಟೆ ಮಟ್ಟಕ್ಕೆ ಹೋಲಿಸಿದರೆ ಹೆಚ್ಚಿನ ಲಾಭಾಂಶ ಒದಗಿಸಿ ಕೊಡುವ ಷೇರುಗಳ ಮೇಲೆ ಹೂಡಿಕೆ ಮಾಡುವತ್ತ ಕೇಂದ್ರೀಕರಿಸುತ್ತವೆ.

ಸೆಬಿ ನಿಯಮದ ಪ್ರಕಾರ ಉತ್ತಮ ಡಿವಿಡೆಂಡ್ ನೀಡುವ ಹೂಡಿಕೆ ಉತ್ಪನ್ನಗಳಲ್ಲಿ ತಮ್ಮ ಒಟ್ಟಾರೆ ಪೋರ್ಟ್‌ಫೋಲಿಯೊದ ಶೇ 65ಕ್ಕಿಂತ ಅಧಿಕ ಮೊತ್ತವನ್ನು ಫಂಡ್ ಹೌಸ್‌ಗಳು ಹೂಡಿಕೆ ಮಾಡಿದಾಗ ಅದು ಡಿವಿಡೆಂಡ್ ಮ್ಯೂಚುಯಲ್ ಫಂಡ್‌ಗಳೆಂದು ಕರೆಯಲ್ಪಡುತ್ತದೆ. ಇದು ಈಕ್ವಿಟಿಯ ಭಾಗವೇ ಆಗಿರುವುದರಿಂದ, ಹೂಡಿಕೆದಾರರಿಗೆ ಯಾವುದೇ ಆರ್ಥಿಕ ಅಪಾಯ ಇಲ್ಲವೆಂದಲ್ಲ.  

ಹೂಡಿಕೆ ಮಾಡಿದ ಕಂಪನಿಗಳಿಂದ ಬಂದ ಡಿವಿಡೆಂಡ್ ಲಾಭವನ್ನು ಈ ಕಂಪನಿಗಳು ಷೇರು ಮೌಲ್ಯ ವೃದ್ಧಿಯ ಹೊರತಾಗಿ ಪಡೆಯುತ್ತವೆ. ಹೂಡಿಕೆದಾರರು ಆಯ್ಕೆ ಮಾಡಿದ ಸ್ಕೀಂ ಆಧಾರದಲ್ಲಿ ತಾವು ಫಂಡ್ ನಿರ್ವಹಣೆಯ ಭಾಗವಾಗಿ ಹೂಡಿಕೆದಾರರಿಗೆ ಪಾವತಿಸಲಾಗುತ್ತದೆ ಅಥವಾ ಆ ಮೊತ್ತವನ್ನು ಮರು ಹೂಡಿಕೆ ಮಾಡಲಾಗುತ್ತದೆ.  

ಡಿವಿಡೆಂಡ್ ಲಾಭ ಪಡೆಯುವ ಉದ್ದೇಶಕ್ಕೆ ಹೂಡಿಕೆ ಮಾಡಿದ ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯಲ್ಲಿ ಸಾಮಾನ್ಯವಾಗಿ ಇತರೆ ರೀತಿಯ ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳಿಗಿಂತ ಕಡಿಮೆ ಅಪಾಯ ಹೊಂದಿರುತ್ತವೆ. ಏಕೆಂದರೆ ಅವರು ಲಾಭಾಂಶವನ್ನು ನಿಯಮಿತವಾಗಿ ಪಾವತಿಸುವ ಮತ್ತು ಸುಸ್ಥಿರವಾದ ದಾಖಲೆ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.

ಇನ್ನು ತೆರಿಗೆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಹೂಡಿಕೆಗಳು ಡಿವಿಡೆಂಡ್ ಪಾವತಿಯದ್ದಾಗಿದ್ದರೆ ನಿಮಗೆ ಅನ್ವಯಿಸುವ ವೈಯಕ್ತಿಕ ತೆರಿಗೆ ದರದಲ್ಲಿ ತೆರಿಗೆ ಪಾವತಿಸಬೇಕು. ಡಿವಿಡೆಂಡ್ ಮರುಹೂಡಿಕೆ ಆಯ್ಕೆ ಮಾಡಿದ್ದರೆ ಹೂಡಿಕೆದಾರರ ಮೂಲ ಹೂಡಿಕೆಗೆ ಇದನ್ನು ಸೇರ್ಪಡೆಗೊಳಿಸಲಾಗುತ್ತದೆ.

ಇನ್ನು ಹೂಡಿಕೆಗಳ ಮಾರಾಟದ ಸಂದರ್ಭದಲ್ಲಿ ಸಿಗುವ ಅಲ್ಪಾವಧಿ ಬಂಡವಾಳ ಲಾಭಕ್ಕೆ (12 ತಿಂಗಳೊಳಗಿನ ಹೂಡಿಕೆ ಅವಧಿ) ಶೇ 15ರ ದರದಲ್ಲಿ ತೆರಿಗೆ ಇರುತ್ತದೆ. ಒಂದು ವೇಳೆ ಇದು 12 ತಿಂಗಳ ಅವಧಿಗಿಂತ ದೀರ್ಘಾವಧಿ ಹೂಡಿಕೆ ಆಗಿದ್ದರೆ ಶೇ 10ರ ದರದಲ್ಲಿ ತೆರಿಗೆ ಇರುತ್ತದೆ. ಆದರೆ, ಮೊದಲ ₹1 ಲಕ್ಷ ಲಾಭಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.