ಶಂಭುಲಿಂಗ ಶಾಸ್ತ್ರಿ, ಮೈಸೂರು
ಪ್ರಶ್ನೆ: ನನ್ನ ವಯಸ್ಸು 66 ವರ್ಷ. ನಿವೃತ್ತನಾಗಿದ್ದೇನೆ. ಪಿಂಚಣಿ ₹ 28 ಸಾವಿರ. ಇತ್ತೀಚಿನ ದಿನಗಳಲ್ಲಿ ಠೇವಣಿ ಮೇಲಿನ ಬಡ್ಡಿ ಬಹಳ ಕಡಿಮೆ ಆಗುತ್ತಿದೆ. ಯಾವ ಠೇವಣಿಗಳಿಂದ ಬರುವ ಬಡ್ಡಿ ವರಮಾನಕ್ಕೆ ತೆರಿಗೆ ವಿನಾಯಿತಿ ಇದೆ ಹಾಗೂ ಯಾವ ಸಾಲಗಳ ಮೇಲಿನ ಬಡ್ಡಿಯಿಂದ ತೆರಿಗೆ ವಿನಾಯಿತಿ ಪಡೆಯಬಹುದು? ನನ್ನ ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಾರೆ. ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.
ಉತ್ತರ: ಸೆಕ್ಷನ್ 10 (II) ಪ್ರಕಾರ ಪಿ.ಎಫ್., ಪಿಪಿಎಫ್ ಠೇವಣಿಗಳ ಮೇಲೆ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಉಳಿದ ಠೇವಣಿಗಳ ಮೇಲಿನ ಬಡ್ಡಿ ವರಮಾನಕ್ಕೆ ಈ ವಿನಾಯಿತಿ ಇರುವುದಿಲ್ಲ. ವ್ಯಕ್ತಿಯ ಬಡ್ಡಿ ವರಮಾನವೂ ಸೇರಿ ವಾರ್ಷಿಕ ಆದಾಯ ₹ 5 ಲಕ್ಷದ ಒಳಗಿದ್ದಲ್ಲಿ ಹಾಗೂ ಹಿರಿಯ ನಾಗರಿಕನ ಬಡ್ಡಿ ವರಮಾನ ಸೇರಿ ವಾರ್ಷಿಕ ಆದಾಯ ₹ 5.5 ಲಕ್ಷದೊಳಗೆ ಇದ್ದಲ್ಲಿ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಸೆಕ್ಷನ್ 80ಸಿ ಆಧಾರದಲ್ಲಿ ಗೃಹ ಸಾಲದ ಕಂತು ಗರಿಷ್ಠ ₹ 1.50 ಲಕ್ಷ, ಗೃಹ ಸಾಲದ ಬಡ್ಡಿ ಸೆಕ್ಷನ್ 24 (ಬಿ) ಆಧಾರದಲ್ಲಿ ಗರಿಷ್ಠ ₹ 2 ಲಕ್ಷ, ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್ 80ಇ ಆಧಾರದ ಮೇಲೆ ಯಾವ ಮಿತಿ ಇಲ್ಲದೇ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
ನಿಮ್ಮ ಮಕ್ಕಳ ತೆರಿಗೆ ಉಳಿಸಲು ಸೆಕ್ಷನ್ 80ಸಿ ಆಧಾರದ ಮೇಲೆ ಪಿಪಿಎಫ್, ವಿಮಾ ಕಂತು, 5 ವರ್ಷಗಳ ಬ್ಯಾಂಕ್ ಠೇವಣಿಗಳಲ್ಲಿ ಹಣ ಹೂಡಿದರೆ ವಾರ್ಷಿಕ ₹ 1.50 ಲಕ್ಷದ ತನಕ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇದೇ ವೇಳೆ ಸೆಕ್ಷನ್ 80ಸಿ ಹೊರತುಪಡಿಸಿ, ₹ 50 ಸಾವಿರ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹಣ ಇಟ್ಟರೆ ಈ ಮೊತ್ತವನ್ನು ಕೂಡ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
*********
ಚಂದ್ರಶೇಖರಯ್ಯ, ವಿಜಯನಗರ
ಪ್ರಶ್ನೆ: ನನ್ನ ವಯಸ್ಸು 80 ವರ್ಷ. ನನಗೆ ವಿಜಯನಗರದಲ್ಲಿ ಸ್ವಂತ ಮನೆ ಇದೆ. ಈ ಮನೆ ಮಾರಾಟ ಮಾಡಬೇಕೆಂದಿದ್ದೇನೆ. ಇದರಿಂದ ಸುಮಾರು ₹ 1 ಕೋಟಿಯಷ್ಟು ಸಿಗಬಹುದು. ಇದರಲ್ಲಿ ಅರ್ಧಭಾಗ ನಾನಿಟ್ಟುಕೊಂಡು ಉಳಿದ ಭಾಗವನ್ನು ನನ್ನ ಮಕ್ಕಳಿಗೆ ದಾನರೂಪದಲ್ಲಿ ಕೊಡಲು ಬಯಸಿದ್ದೇನೆ. ಎನ್‌ಎಚ್‌ಎಐ/ಆರ್‌ಇಸಿ (NHAI/REC) ಬಾಂಡ್‌ಗಳ ವಿಚಾರ ತಿಳಿಸಿ. ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.
ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡಿ ಬಂದ ಹಣದಲ್ಲಿ ನೀವು ಆರಂಭದಲ್ಲಿ ನಿವೇಶನಕ್ಕೆ ಕೊಟ್ಟ ಹಣ, ನಂತರ ಮನೆ ಕಟ್ಟಿಸಲು ಮಾಡಿದ ಖರ್ಚು ಹಾಗೂ ಅಂದಿನಿಂದ ಮಾರಾಟ ಮಾಡುವ ತನಕದ ಅವಧಿಯಲ್ಲಿ ಈ ಆಸ್ತಿಯ ಕಾಸ್ಟ್ ಆಫ್ ಇನ್‌ಫ್ಲೇಷನ್ ಮೊತ್ತವನ್ನು ಕಳೆದು ಉಳಿದ ಮೊತ್ತಕ್ಕೆ ಬಂಡವಾಳ ವೃದ್ಧಿ ತೆರಿಗೆ ಕೊಡಬಹುದು. ತೆರಿಗೆಯಲ್ಲಿ ವಿನಾಯಿತಿ ಪಡೆಯಲು, ಮಾರಾಟ ಮಾಡಿ ಬಂದ ಮೊತ್ತದಲ್ಲಿ ಗರಿಷ್ಠ ₹ 50 ಲಕ್ಷ ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಬಹುದು. ಉಳಿದ ಹಣದಿಂದ ನಿವೇಶನ ಕೊಂಡು ಮನೆ ಕಟ್ಟಿಸಬಹುದು. ಈ ಮಾರ್ಗದ ಹೊರತಾಗಿ ಮಾರಾಟ ಮಾಡಿ ಬಂದ ಹಣವನ್ನು ನೀವಾಗಲಿ, ನಿಮ್ಮ ಮಕ್ಕಳಾಗಲಿ ತೆರಿಗೆ ಕೊಡದೇ ಅನುಭವಿಸುವಂತಿಲ್ಲ. ಎನ್‌ಎಚ್‌ಎಐ/ಆರ್‌ಇಸಿ ಬಾಂಡ್ ಅವಧಿ 5 ವರ್ಷ. ಅವಧಿಗೆ ಮುನ್ನ ಹಣ ಪಡೆಯುವಂತಿಲ್ಲ. ಬಡ್ಡಿದರ ಶೇಕಡ 5ರಷ್ಟು. ಇನ್ನೂ ಹೆಚ್ಚಿನ ಮಾಹಿತಿಗೆ ನನಗೆ ಕರೆ ಮಾಡಿ.
*****
ಚೌಡಮ್ಮ, ಚನ್ನಪಟ್ಟಣ
ಪ್ರಶ್ನೆ: ನನ್ನ ವಯಸ್ಸು 68 ವರ್ಷ. ನಾನು ಗೃಹಿಣಿ. ನನ್ನ ಪತಿ ನಿವೃತ್ತ ಸರ್ಕಾರಿ ನೌಕರ. ನಮಗೆ ಒಬ್ಬಳು ಮಗಳು, ಒಬ್ಬ ಮಗ. ನನ್ನ ತಂದೆಯವರು ‘40X60’ ಅಡಿ ಅಳತೆಯ ನಿವೇಶನವನ್ನು ದಾನರೂಪದಲ್ಲಿ ಪತ್ರಮುಖೇನ ಕೊಟ್ಟಿರುತ್ತಾರೆ. ನನ್ನ ಮಗಳಿಗೆ ನಗರಸಭೆ ವ್ಯಾಪ್ತಿಯಲ್ಲಿ ಒಂದು ನಿವೇಶನ ಇದೆ. ನಾನು ನನ್ನ ನಿವೇಶನ ಮಾರಾಟ ಮಾಡಿ ಬರುವ ಹಣದಿಂದ ಮಗಳ ನಿವೇಶನದಲ್ಲಿ ಎರಡು ಮಹಡಿಗಳ ಮನೆ ಕಟ್ಟಿಸಿ, ಮಗಳಿಗೂ, ಮಗನಿಗೂ ದಾನಪತ್ರ ಮಾಡಿಕೊಡಬೇಕೆಂದಿದ್ದೇನೆ. ಆದಾಯ ತೆರಿಗೆ ಬರಬಹುದೇ? ಬೇರೆ ದಾರಿ ಇದ್ದರೆ ತಿಳಿಸಿ.
ಉತ್ತರ: ಒಬ್ಬ ವ್ಯಕ್ತಿ ತಾನು ಮಾರಾಟ ಮಾಡಿದ ಸ್ಥಿರ ಆಸ್ತಿಯಿಂದ ಬರುವ ಹಣದಿಂದ ಸ್ವಂತ ಮಕ್ಕಳ ಹೆಸರಿನಲ್ಲಿ ಆಗಲಿ, ಬೇರೆಯವರ ಹೆಸರಿನಲ್ಲಿ ಆಗಲಿ ಇನ್ನೊಂದು ನಿವೇಶನ–ಮನೆ ಮಾಡಿದರೆ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. ಸೆಕ್ಷನ್ 54ಇಸಿ ಆಧಾರದ ಮೇಲೆ ಗರಿಷ್ಠ ₹ 50 ಲಕ್ಷ ಎನ್‌ಎಚ್‌ಎಐ/ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಿ. ಅಷ್ಟರಮಟ್ಟಿಗೆ ಮಾತ್ರ ತೆರಿಗೆ ವಿನಾಯಿತಿ ಪಡೆಯಬಹುದು. ತಂದೆಯಿಂದ ದಾನವಾಗಿ ಪಡೆದಿರುವ ನಿವೇಶನ ಮಾರಾಟ ಮಾಡಿ, ಮಗಳ ನಿವೇಶನದಲ್ಲಿ ಎರಡು ಅಂತಸ್ಥಿನ ಮನೆ ಮಾಡುವ ವಿಚಾರ ಕಾನೂನು ಬದ್ಧವಲ್ಲ. ಮಗಳ ನಿವೇಶನದಲ್ಲಿ ಮನೆ ಕಟ್ಟಿಸಿದಾಗ ಹಾಗೆ ಕಟ್ಟಿಸಿದ ಮನೆ ಮಗಳಿಗೇ ಸಲ್ಲುತ್ತದೆ. ನಿಮ್ಮ ಉದ್ದೇಶ ಒಳ್ಳೆಯದಾರರೂ ಹಾಗೆ ಕಟ್ಟಿಸಿದ ಮನೆಯನ್ನು ಕಾನೂನಿನ ಪ್ರಕಾರ ಮಗನಿಗಾಗಲಿ, ಬೇರೆಯವರಿಗಾಗಲಿ ದಾನಪತ್ರ ಮೂಲಕ ವರ್ಗಾಯಿಸುವಂತಿಲ್ಲ. ನಿವೇಶನ ಮಾರಾಟ ಮಾಡಿದಾಗ ₹ 50 ಲಕ್ಷಕ್ಕೂ ಹೆಚ್ಚಿನ ಮೊತ್ತ ಬರಲಾರದು ಎನ್ನುವುದು ನನ್ನ ಅಭಿಪ್ರಾಯ. ₹ 50 ಲಕ್ಷ ಬಂದರೆ ₹ 25 ಲಕ್ಷದಂತೆ ವಿಂಗಡಿಸಿ, ಪ್ರತ್ಯೇಕವಾಗಿ ಬಾಂಡ್ ಇರಿಸಿ. ಮಗಳು ಹಾಗೂ ಮಗನಿಗೆ ನಾಮನಿರ್ದೇಶನ ಮಾಡಿ. ಐದು ವರ್ಷಗಳ ನಂತರ ಬಾಂಡ್ ಅವಧಿ ಮುಗಿದಾಗ ಇಚ್ಛಿಸಿದಲ್ಲಿ ಮಕ್ಕಳಿಗೆ ಸಮನಾಗಿ ಹಂಚಿ.
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್: businessdesk@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.