ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 7 ಮೇ 2024, 23:49 IST
Last Updated 7 ಮೇ 2024, 23:49 IST
   

-ವೆಂಕಟಾಚಲ ಮೂರ್ತಿ, ಹಾಸನ

ನಾನು ಕಳೆದ ಕೆಲವು ವರ್ಷಗಳಿಂದ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಪಾವತಿ ಮಾಡುತ್ತಿದ್ದೇನೆ. ಇದು ಆರೋಗ್ಯ ವಿಮೆಗೆ ಸಂಬಂಧಿಸಿದ್ದಾಗಿದ್ದು ಪ್ರಸ್ತುತ ನಾನು ಇನ್ಶೂರೆನ್ಸ್ ಮಾಡಿಸಿರುವ ಕಂಪನಿ ಮುಂದಿನ ಮೂರು ವರ್ಷದ ಮುಂಗಡ ಪ್ರೀಮಿಯಂ ಪಾವತಿಗೆ ಹೆಚ್ಚುವರಿ ರಿಯಾಯಿತಿ ಕೊಡುವುದಾಗಿ ಹೇಳುತ್ತಿದೆ. ನಾನು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದೇ? ಪ್ರತಿ ವರ್ಷ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ನಾನು ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವುದರಿಂದ ತೆರಿಗೆ ರಿಯಾಯಿತಿ ಪಡೆಯುವುದು ಹೇಗೆ? ಪಾವತಿ ಕೇವಲ ಮೊದಲ ವರ್ಷದಲ್ಲಿ ಆಗುತ್ತಿರುವ ಕಾರಣ ಮುಂದಿನ ವರ್ಷಗಳಲ್ಲಿ ಮುಂಗಡ ಪಾವತಿ ಪ್ರಯೋಜನ ಸಿಗುತ್ತದೆಯೇ?

ಉತ್ತರ: ಆದಾಯ ತೆರಿಗೆಯ ಸೆಕ್ಷನ್ 80ಡಿ ಇದರಡಿ ಯಾವುದೇ ವೈದ್ಯಕೀಯ ವೆಚ್ಚ ನಿರ್ವಹಣೆಗೆ ಸಂಬಂಬಂಧಿಸಿ ಪಾವತಿಸುವ ವಿಮಾ ಕಂತುಗಳಿಗೆ ತೆರಿಗೆ ರಿಯಾಯಿತಿ ಸಿಗುತ್ತದೆ. ಆದರೆ ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಈ ರಿಯಾಯಿತಿಯ ವಿಮರ್ಶೆ ಪ್ರಸ್ತುತವಲ್ಲ. ಕಾರಣ, ಈ ತೆರಿಗೆ ಪದ್ಧತಿಯಡಿ ವಿಮೆಗೆ ಸಂಬಂಧಿಸಿ ಯಾವುದೇ ರಿಯಾಯಿತಿ ಸಿಗುವುದಿಲ್ಲ. ಆದರೆ, ಹಳೆಯ ತೆರಿಗೆ ಪದ್ಧತಿ ಅನುಸರಿಸುವವರಿಗೆ ಈ ವಿಚಾರವಾಗಿ ನಿರ್ಧರಿಸುವುದು ಅನಿವಾರ್ಯ.

ADVERTISEMENT

ತೆರಿಗೆ ಕಾಯಿದೆಯಡಿ ಮೇಲೆ ತಿಳಿಸಿರುವ ಸೆಕ್ಷನ್ ಪ್ರಕಾರ ವೈದ್ಯಕೀಯ ವೆಚ್ಚಕ್ಕಾಗಿ ಪಾವತಿ ಮಾಡುವ ಮುಂಗಡ ಮೊತ್ತಕ್ಕೂ ತೆರಿಗೆ ಲಾಭ ಇದೆ. ಕೆಲವೊಮ್ಮೆ ವಿಮಾ ಕಂಪನಿಗಳು ಪಾಲಿಸಿದಾರರಿಗೆ ರಿಯಾಯಿತಿ ನೀಡಿ ಮುಂಗಡ ಹಣ ಪಡೆದು ವಿಮಾ ಸೌಲಭ್ಯ ನೀಡುತ್ತವೆ. ನೀವು ಮುಂಗಡ ಹಣ ಪಾವತಿಸುತ್ತಿರುವ ಕಾರಣ ಅಂತಹ ತೆರಿಗೆ ರಿಯಾಯಿತಿ ನಿಮಗೂ ಸಿಗುತ್ತದೆ. ಇನ್ನು ರಿಯಾಯಿತಿ ನೀಡುತ್ತಿರುವ ಬಗ್ಗೆ ಹೇಳುವುದಾದರೆ, ನಿಮ್ಮ ಮೂಲ ಪಾಲಿಸಿಯ ಸೌಲಭ್ಯಗಳಲ್ಲಿ ಯಾವುದೇ ಕಡಿತ ಆಗಿಲ್ಲ ಎಂಬುದನ್ನು ಮೊದಲು ಖಚಿತ ಮಾಡಿಕೊಂಡು ಮುಂದುವರಿಯಬಹುದು.  

ಸೆಕ್ಷನ್ 80ಡಿ (4ಎ) ಪ್ರಕಾರ, ಮುಂಗಡವಾಗಿ ಪಾವತಿಸುವ ಇನ್ಶೂರೆನ್ಸ್ ಮೊತ್ತಕ್ಕೆ ಆಯಾ ವರ್ಷಕ್ಕೆ ಸಂಬಂಧಿಸಿದ ಮೊತ್ತ ತೆರಿಗೆ ವಿನಾಯಿತಿ ಪಡೆಯಲು ಪರಿಗಣಿಸಲಾಗುತ್ತದೆ. ಈ ಸಂಬಂಧ ಅಗತ್ಯ ದಾಖಲೆಗಳನ್ನು ವಿಮಾ ಕಂಪನಿಗಳಿಂದ ಸಂಗ್ರಹಿಸಿಟ್ಟುಕೊಳ್ಳಿ. ಪ್ರತಿ ವರ್ಷ ರಿಟರ್ನ್ಸ್ ಸಲ್ಲಿಸುವ ಸಂದರ್ಭದಲ್ಲಿ ಅಗತ್ಯ ಮಾಹಿತಿ ಭರ್ತಿಮಾಡಿ.

-ನಾಗಾನಂದ, ಬೆಂಗಳೂರು

ನಾನು ಈ ಬಾರಿಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೆಂದಿದ್ದೇನೆ. ಇದಕ್ಕೆ ಪ್ರತಿ ವರ್ಷ ಸಮಯಾವಧಿ ಜುಲೈ 31 ಎಂಬುದಾಗಿ ತಿಳಿದುಕೊಂಡಿದ್ದೇನೆ. ಈ ಹಿಂದಿನ ವರ್ಷಗಳಲ್ಲಿ ನನ್ನ ಆದಾಯ ಕೇವಲ ವೇತನ ಹಾಗೂ ಬ್ಯಾಂಕ್ ಬಡ್ಡಿಯ ಮೂಲಗಳಿಂದ ಇತ್ತು. ಆದರೆ ಈ ವರ್ಷ ನನ್ನ ಆದಾಯಕ್ಕೆ ಮನೆ ಬಾಡಿಗೆ ಆದಾಯ ಹಾಗೂ ಕೆಲವು ಷೇರು ವ್ಯವಹಾರದ ಲಾಭಾಂಶ ಕೂಡಾ ಹೆಚ್ಚುವರಿಯಾಗಿ ಸೇರ್ಪಡೆ ಆಗಿವೆ. ಮನೆಗೆ ಸಂಬಂಧಿಸಿ ಸಾಲವೂ ಇದೆ. ಈ ಹಿಂದೆ ನಾನು ರಿಟರ್ನ್ಸ್ ಸ್ವಂತ ಸಲ್ಲಿಕೆ ಮಾಡುತ್ತಿದ್ದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚುವರಿ ಆದಾಯ ಹಾಗೂ ಅದಕ್ಕೆ ಸಂಬಂಧಿಸಿದ ರಿಯಾಯಿತಿ ಇರುವುದರಿಂದ, ಕಾನೂನಿನ ಮಾಹಿತಿ ಹಾಗೂ ನಿರ್ದಿಷ್ಟ ಅರಿವು ಬೇಕಾಗಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ನೆರವಾಗುವ ಜಾಲತಾಣಗಳಿಗೆ ಆನ್‌ಲೈನ್‌ ಮೂಲಕ ನಮ್ಮ ಆದಾಯದ ವಿವರ ನೀಡಿ ರಿಟರ್ನ್ಸ್ ಸಲ್ಲಿಸುವುದು ಸೂಕ್ತವೇ ಅಥವಾ ಯಾವುದಾದರೂ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತವೇ?

ನೀವು ತಿಳಿದಿರುವಂತೆ ಜುಲೈ 31, ಪ್ರತಿ ವರ್ಷವೂ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ತಮ್ಮ ರಿಟರ್ನ್ಸ್ ಸಲ್ಲಿಸಲು ಇರುವ ಗಡುವು. ಯಾವುದೇ ವ್ಯಾಪಾರ ವ್ಯವಹಾರ ಅಥವಾ ಸ್ವ ಉದ್ಯೋಗ ಇದ್ದು ಲೆಕ್ಕಪರಿಶೋಧನೆಗೆ ಒಳಪಟ್ಟ ಸಂದರ್ಭಗಳಲ್ಲಿ ಮಾತ್ರ ಹೆಚ್ಚಿನ ಕಾಲಾವಕಾಶ ಸಿಗುತ್ತದೆ.

ನಿಮ್ಮ ವಿಚಾರದಲ್ಲಿ ಪ್ರಸ್ತುತ ಹೆಚ್ಚುವರಿ ಆದಾಯ ಇದ್ದು, ಸರಿಯಾದ ರಿಟರ್ನ್ಸ್ ಸಲ್ಲಿಕೆಗೆ ಪೂರಕ ಮಾಹಿತಿಯೂ ಅಗತ್ಯವಾಗಿ ಬೇಕಾಗಬಹುದು. ನಿಮ್ಮ ಮನೆಯ ನಿರ್ಮಾಣಕ್ಕೆ ಸಾಲ ಪಡೆದಿರುವುದಾಗಿ ತಿಳಿಸಿರುತ್ತೀರಿ. ಬಾಡಿಗೆ ಆದಾಯವೂ ಇರುವುದರಿಂದ ನಿಮಗೆ ₹2 ಲಕ್ಷದ ಮಿತಿ ಇರದೆ ವಾಸ್ತವ ಬಡ್ಡಿಯ ಮೇಲೆ ವಿನಾಯಿತಿ ಸಿಗುತ್ತದೆ. ಈ ಆದಾಯಕ್ಕೆ ನಿಮಗೆ ವೈಯಕ್ತಿಕ ತೆರಿಗೆ ದರ ಅನ್ವಯಿಸುತ್ತದೆ. ಷೇರುಗಳ ವಿಚಾರದಲ್ಲಿ ನಿಮ್ಮ ವ್ಯವಹಾರವನ್ನು ದೀರ್ಘಾವಧಿ ಹಾಗೂ ಅಲ್ಪಾವಧಿ ಎಂಬ ವರ್ಗದಲ್ಲಿ ವಿಂಗಡಿಸಬೇಕಾ ಗುತ್ತದೆ. ದೀರ್ಘಾವಧಿ ಬಂಡವಾಳ ಲಾಭಕ್ಕೆ, ₹1 ಲಕ್ಷ ಲಾಭದ ತನಕ ತೆರಿಗೆ ಇರುವುದಿಲ್ಲ. ಇದಕ್ಕೂ ಹೆಚ್ಚಿನ ಮೊತ್ತಕ್ಕೆ ಶೇ 10ರ ತೆರಿಗೆ ಹಾಗೂ ಅಲ್ಪಾವಧಿ ಬಂಡವಾಳ ಲಾಭಕ್ಕೆ ಶೇ 15ರ ತೆರಿಗೆ ಇರುತ್ತದೆ.  

ನೀವು ಸ್ವತಃ ರಿಟರ್ನ್ಸ್ ಸಲ್ಲಿಸುವುದಿದ್ದರೆ ಅನೇಕ ಮಾಹಿತಿ ಹೊಂದಿರಬೇಕಾಗುತ್ತದೆ. ಅನೇಕ ವಿಚಾರಗಳಿಗೆ ಸಂಬಂಧಿಸಿ ಸಮರ್ಪಕ ಮಾಹಿತಿ ಹಾಗೂ ದಾಖಲೆಗಳು ಅಗತ್ಯ. ಇಂದು ಅನೇಕ ವೆಬ್‌ಸೈಟ್‌ಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ನೆರವಾಗುತ್ತಿವೆ. ಇವುಗಳನ್ನು ನೇರ ಮಾಹಿತಿ ಇದ್ದಾಗ ಬಳಸುವುದು ತುಂಬಾ ಸುಲಭ. ಆದರೆ, ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಮಾಹಿತಿ ಹಾಗೂ ಕಾನೂನಿನ ನಿಷ್ಕರ್ಷೆ ಅಗತ್ಯ ವಿರುತ್ತದೆ. ಈ ಅವಕಾಶ ಮುಖಾಮುಖಿ ಸಮಾಲೋಚನೆಯಲ್ಲಷ್ಟೇ ಸಾಧ್ಯ. ಹೀಗಾಗಿ ನಿಮ್ಮ ತೆರಿಗೆ ರಿಟರ್ನ್ಸ್ ಸಮೀಪದ ತೆರಿಗೆ ಸಲಹೆಗಾರರ ನೆರವಿನಿಂದ ಸಲ್ಲಿಸುವುದು ಹೆಚ್ಚು ಸೂಕ್ತ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.