ADVERTISEMENT

ಠೇವಣಿಯಾಗಿಟ್ಟರೆ ಆದಾಯ ತೆರಿಗೆ ಕಟ್ಟಬೇಕೇ?

ಯು.ಪಿ.ಪುರಾಣಿಕ್
Published 3 ಜುಲೈ 2018, 13:02 IST
Last Updated 3 ಜುಲೈ 2018, 13:02 IST
   

* ಹೆಸರು ಬೇಡ, ಬೆಂಗಳೂರು
ನಾನು ವ್ಯವಸಾಯ ಕುಟುಂಬದಿಂದ ಬಂದಿರುವ ಗೃಹಿಣಿ. ನಮಗೆ ಅರ್ಧ ಎಕರೆ ಜಮೀನಿದ್ದು (ಭೂಪರಿವರ್ತನೆ ಆಗದ ಸ್ಥಳ– ವ್ಯವಸಾಯದ ಜಮೀನು) ಅದನ್ನು ಆಗಸ್ಟ್ 2017ರಲ್ಲಿ ₹ 24.75 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಆಗ ಬಿಲ್ಡರುಗಳು₹ 50,000 TDS ಅಂತ ಹಣ ಪಡೆದಿದ್ದರು. ಮದುವೆ ಖರ್ಚು–ಬಂಗಾರ ಮನೆ ದುರಸ್ತಿ ಅಂತ ಎಲ್ಲಾ ಹಣ ಖರ್ಚಾಗಿದೆ. ನನ್ನ ಖಾತೆಯಲ್ಲಿ ಯಾವುದೇ ಹಣವಿಲ್ಲ. ಅರ್ಧ ಎಕರೆ ಜಮೀನು ನನ್ನ ತಂದೆ ತಾಯಿಯಿಂದ ಬಳುವಳಿಯಾಗಿ ಬಂದಿರುತ್ತದೆ. ಈಗ ನನ್ನ ಪ್ರಶ್ನೆ ಏನೆಂದರೆ, ತಂದೆ ತಾಯಿಯಿಂದ ಪಡೆದ ಜಮೀನು ಹಾಗೂ ಜಮೀನು ಮಾರಾಟ ಮಾಡಿರುವ ವಿಚಾರಗಳಲ್ಲಿ ನನಗೆ ತೆರಿಗೆ ಅನ್ವಯವಾಗುತ್ತದೆಯೇ.

ಉತ್ತರ: ನೀವು ಬೆಂಗಳೂರಿನಲ್ಲಿ ವಾಸವಾಗಿದ್ದರೂ ನಿಮ್ಮ ಜಮೀನು ದೂರದ ಹಳ್ಳಿಯಲ್ಲಿರಬೇಕು ಎಂದು ಭಾವಿಸುತ್ತೇನೆ. Capital Gain U/S 48 ಆಧಾರದ ಮೇಲೆ ನಿಮ್ಮ ಕೃಷಿ ಜಮೀನು ಪಟ್ಟಣಕ್ಕೆ ಸಮೀಪವಿಲ್ಲದಿರುವಲ್ಲಿ ಇಂತಹ ಜಮೀನು ಮಾರಾಟ ಮಾಡಿದಾಗ ಪಡೆಯುವ ಮೊತ್ತ ಅಥವಾ ಲಾಭಕ್ಕೆ ಬಂಡವಾಳ ವೃದ್ಧಿ ಅಥವಾ ಆದಾಯ ತೆರಿಗೆ ಇರುವುದಿಲ್ಲ. ಇದೇ ವೇಳೆ ನೀವು ನಿಮ್ಮ ಹೆತ್ತವರಿಂದ ಬಳುವಳಿಯಾಗಿ ಪಡೆದ ಜಮೀನಿಗೂ ಆದಾಯ ತೆರಿಗೆ ಇರುವುದಿಲ್ಲ. Gift Tax ಕೂಡಾ ಬರುವುದಿಲ್ಲ.

***

ADVERTISEMENT

* ಜಯದೇವ, ಮಂಗಳೂರು
ನಾನು ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ 31.3.18 ರಂದು ನಿವೃತ್ತನಾದೆ. ನನಗೆ EPS ಪಿಂಚಣಿ₹ 2,614 ಬರುತ್ತದೆ. ನಿವೃತ್ತಿಯಿಂದ₹ 35 ಲಕ್ಷ ಬರುತ್ತದೆ. ನಾನು ಯಾವ ರೀತಿಯಲ್ಲಿ ಈ ಹಣ ವಿನಿಯೋಗಿಸಲಿ ತಿಳಿಸಿರಿ. ನಾನು ಮಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದು, ಅದನ್ನು ಮಾರಾಟ ಮಾಡಿ ದಾವಣಗೆರೆಯಲ್ಲಿ ವಾಸ ಮಾಡಬೇಕು ಎಂದು ಕೊಂಡಿದ್ದೇನೆ. ಮನೆ ಮಾರಾಟದಿಂದ ₹ 35 ಲಕ್ಷ ಬರಬಹುದು. ಈ ಹಣ ಠೇವಣಿಯಾಗಿಟ್ಟರೆ ಆದಾಯ ತೆರಿಗೆ ಕಟ್ಟಬೇಕೇ. ಒಂದು ಆಸ್ತಿ ಮಾರಾಟ ಮಾಡಿ ಎಷ್ಟು ಸಮಯದೊಳಗೆ ಊರಿನಲ್ಲಿ ಆಸ್ತಿ ಖರೀದಿಸಿದರೆ ತೆರಿಗೆ ಬರುವುದಿಲ್ಲ.

ಉತ್ತರ: ನೀವು ನಿವೃತ್ತಿಯಿಂದ ಪಡೆದ₹ 35 ಲಕ್ಷ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಠೇವಣಿ ಮಾಡಿರಿ ಅಥವಾ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ಇರಿಸಿರಿ. ಇಲ್ಲಿ ಗರಿಷ್ಠ ಮಿತಿ₹ 15 ಲಕ್ಷ. ನೀವು ಮಂಗಳೂರಿನಲ್ಲಿರುವ ಮನೆ ಮಾರಾಟ ಮಾಡುವುದಾದರೆ,Capital GainTax ಉಳಿಸಲು NHAI-REC ಬಾಂಡುಗಳಲ್ಲಿ ತೊಡಗಿಸಬಹುದು. ಇಲ್ಲಿ ಕನಿಷ್ಠ ಅವಧಿ (Lock in Period) 5 ವರ್ಷಗಳು. ಇದೇ ವೇಳೆ ಬಂದಿರುವ ಹಣCapital Gain 1988 ಖಾತೆಯಲ್ಲಿ ಬ್ಯಾಂಕುಗಳಲ್ಲಿ ಇರಿಸಿ, ಮೂರು ವರ್ಷಗಳ ಒಳಗೆ ಇನ್ನೊಂದು ಮನೆ ಖರೀದಿಸುವಲ್ಲಿ ಅಥವಾ ಕಟ್ಟಿಸುವಲ್ಲಿ ಕೂಡಾ ತೆರಿಗೆ ಬರುವುದಿಲ್ಲ. ಆದರೆ ನಿವೇಶನ ಕೊಂಡಲ್ಲಿ ತೆರಿಗೆ ವಿನಾಯಿತಿ ಇರುವುದಿಲ್ಲ. ಒಮ್ಮೆಲೇ ತೆರಿಗೆ ಕೊಡುವುದಾದರೆ ಬರುವ ಲಾಭಕ್ಕೆ ಶೇ 20 ಇರುತ್ತದೆ.

***

* ವಾಣಿಶ್ರೀ ಮಧ್ಯಸ್ಥ, ಹುಬ್ಬಳ್ಳಿ
ನಾನು SBI ಹುಬ್ಬಳ್ಳಿಯಲ್ಲಿ₹ 3.50 ಲಕ್ಷ FD ಇರಿಸಿದ್ದೇನೆ. ನಾನು 15G ಕೊಡಲು ಹೋದಾಗ FD Clerk ಇದು ಅವಶ್ಯವಿಲ್ಲ ಎಂದರು. ಮೊದಲು ₹ 10,000ಕ್ಕಿಂತ ಹೆಚ್ಚಿನ ಬಡ್ಡಿ ಬಂದರೆ TDS ಮಾಡದಿರಲು 15 G ಬೇಕಾಗಿತ್ತು. ದಯಮಾಡಿ ಕಾನೂನು ಬದಲಾವಣೆ ಇದ್ದರೆ ತಿಳಿಸಿ.

ಉತ್ತರ: 1–4–2018 ರಿಂದ ಹಿರಿಯ ನಾಗರಿಕರಿಗೆ ಅವರು ವಾರ್ಷಿಕವಾಗಿ₹ 50,000 ಬಡ್ಡಿ ಪಡೆಯುವ ತನಕ 15 H ಕೊಡುವ ಅವಶ್ಯವಿಲ್ಲ. ಈ ಆರ್ಥಿಕ ವರ್ಷದಿಂದ ಸೆಕ್ಷನ್ 80TTB ಆಧಾರದ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಠೇವಣಿ ಬಡ್ಡಿಯಲ್ಲಿ₹ 50,000 ತನಕ ತೆರಿಗೆ ವಿನಾಯ್ತಿ ಇದೆ. ಹಿರಿಯ ನಾಗರಿಕರಿಗೆ ಮಾತ್ರ ಸೌಲತ್ತು ಇದೆ. ನೀವು15G ವಿಚಾರ ಬರೆದಿರುವುದರಿಂದ ನೀವು ಹಿರಿಯ ನಾಗರಿಕರಾಗಿರಲಿಕ್ಕಿಲ್ಲ.15G ಕೊಡದಿರುವಲ್ಲಿTDS ಆಗುತ್ತದೆ. ಮುಂದೆ ಈ ಹಣ ಪಡೆಯಲು ITR ತುಂಬಬೇಕಾಗುತ್ತದೆ. ಗ್ರಾಹಕರಲ್ಲಿ ನನ್ನ ಮನವಿ ಏನೆಂದರೆ, ಬ್ಯಾಂಕ್ ಕೌಂಟರಿನಲ್ಲಿ ನೀವು ಪಡೆಯುವ ಸಲಹೆಯಲ್ಲಿ ಏನಾದರೂ ಸಂಶಯವಿದ್ದಲ್ಲಿ ಬ್ಯಾಂಕ್ ಮ್ಯಾನೇಜರ್‌ ಅವರನ್ನು ಸ್ವತಹ ಭೇಟಿಯಾಗಿ ಬಗೆಹರಿಸಿಕೊಳ್ಳುವುದು ಸೂಕ್ತ.

***

* ಅಮರೇಶ್, ನಾಗಲಾಪುರ
ನಾನು 28–2–2018 ರಂದು ರಕ್ಷಣಾ ಇಲಾಖೆ ಅಕೌಂಟ್ಸ್ ಡಿಪಾರ್ಟ್‌ಮೆಂಟ್‌ನಿಂದ ನಿವೃತ್ತನಾದೆ. ನನ್ನ ತಿಂಗಳ ಪಿಂಚಣಿ₹ 30,000. ನನಗೆ ನಿವೃತ್ತಿಯಿಂದ₹ 30 ಲಕ್ಷ ಬಂದಿದೆ. ನನ್ನ ಕುಟುಂಬವೆಂದರೆ ನಾನು ಹಾಗೂ ನನ್ನ ತಾಯಿ (90 ವರ್ಷ)₹ 6000 ಬಾಡಿಗೆ ಕೊಡುತ್ತೇನೆ. ಒಬ್ಬಳು ಮಗಳು ಮದುವೆಯಾಗಿದೆ. ಸದ್ಯ₹ 30,000 ಅಲ್ಪಾವಧಿ ಬ್ಯಾಂಕ್ ಠೇವಣಿಯಲ್ಲಿರಿಸಿದ್ದೇನೆ. ನಿಮ್ಮ ಸಲಹೆ ನನಗೆ ಬೇಕಾಗಿದೆ

ಉತ್ತರ: ನಿಮ್ಮ ಕುಟುಂಬ ಪರಿಸರ ಪರಿಗಣಿಸುವಾಗ, ನೀವು ನಿಮಗೆ ಬಂದಿರುವ ಹಣ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿಯಲ್ಲಿ ಇರಿಸಿ, ಜೀವನದ ಸಂಜೆಯಲ್ಲಿ ನೆಮ್ಮದಿಯಿಂದ ಬಾಳುವುದೇ ಲೇಸು. ನಿಮಗೆ ಪಿಂಚಣಿ ಪ್ರತಿ ತಿಂಗಳೂ₹ 30,000 ಬರುವುದರಿಂದ₹ 6000 ಬಾಡಿಗೆ ಕೊಟ್ಟರೂ, ನೀವು ಹಾಗೂ ತಾಯಿ ಸುಖವಾಗಿ ಜೀವಿಸಲು ಈ ಆದಾಯ ಸಾಕಾಗುತ್ತದೆ. ನಿಮ್ಮ ವಾರ್ಷಿಕ ಆದಾಯ ಪಿಂಚಣಿ ಹಾಗೂ ಬ್ಯಾಂಕ್ ಠೇವಣಿ ಸೇರಿಸಿ₹ 3 ಲಕ್ಷ ದಾಟುವುದರಿಂದ, ನೀವು ಆದಾಯ ತೆರಿಗೆಗೆ ಒಳಗಾಗುತ್ತೀರಿ. ತೆರಿಗೆ ಉಳಿಸಲು ಪ್ರತೀ ವರ್ಷ₹ 1.50 ಲಕ್ಷ, 5 ವರ್ಷಗಳ ತೆರಿಗೆ ಉಳಿಸುವ, ಠೇವಣಿಯಲ್ಲಿ ಇರಿಸಿರಿ.₹ 30 ಲಕ್ಷ ವಿಂಗಡಿಸಿ₹ 10 ಲಕ್ಷದಂತೆ ಮೂರು ಪ್ರತ್ಯೇಕ ಬ್ಯಾಂಕ್ ಠೇವಣಿ ಮಾಡಿರಿ. ಅತೀ ಅವಶ್ಯ ಬಿದ್ದಾಗ ಒಂದು ಠೇವಣಿ ಅವಧಿಗೆ ಮುನ್ನ ಪಡೆದು ಅವಶ್ಯಕತೆ ನೀಗಿಸಿಕೊಳ್ಳಬಹುದು. ಎಲ್ಲಾ ಠೇವಣಿಗೆ ನಿಮ್ಮ ಮಗಳ ನಾಮ ನಿರ್ದೇಶನ ಮಾಡಿರಿ. 90 ವರ್ಷದ ನಿಮ್ಮ ಹೆತ್ತ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಲಿ ಎಂದು ಆಶಿಸುತ್ತೇನೆ.

***

1)ಹೆಸರು, ಊರು ಬೇಡ, (2) ವಿಜಯ ರಾಘವನ್, ಮೈಸೂರು
‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆಯು’ (Financial Resolution and Deposit Insurance -FRDI) ಜಾರಿಗೆ ಬಂದರೆ ನಾವಿಟ್ಟ ಠೇವಣಿ ಕಳೆದುಕೊಳ್ಳುವ ಸಂದರ್ಭವಿದೆಯೇ ತಿಳಿಸಿ.

ಉತ್ತರ: ಹಾಗೇನೂ ಇಲ್ಲ. ಬ್ಯಾಂಕ್‌ಗಳಲ್ಲಿನ ಜನರ ಠೇವಣಿ ಸುರಕ್ಷಿತವಾಗಿರುತ್ತದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ಬಗ್ಗೆ ಆತಂಕಪಡಬೇಕಾಗಿಲ್ಲ. ಸರ್ಕಾರಿ ಸ್ವಾಮ್ಯದ ಬಹಳಷ್ಟು ಬ್ಯಾಂಕುಗಳು ತಾವು ನೀಡಿದ ದೊಡ್ಡ ದೊಡ್ಡ ಸಾಲಗಳು ವಸೂಲಾಗದೆ, ಗರಿಷ್ಠ ಪ್ರಮಾಣದಲ್ಲಿನ ವಸೂಲಾಗದ ಸಾಲ (Non Performing Assets) ಹೆಚ್ಚಳದಿಂದ ತೊಂದರೆಗೀಡಾಗಿರುವುದು ನಿಜ. ಕೇಂದ್ರ ಹಣಕಾಸು ಸಚಿವಾಲಯ ಇಂತಹ ಬ್ಯಾಂಕುಗಳನ್ನು ರಕ್ಷಿಸಲು ದೊಟ್ಟ ಮಟ್ಟದಲ್ಲಿ ಹಣ ನೀಡುತ್ತಿದ್ದು, ನೀವು ತಿಳಿದಂತೆ ನೀವು ಕಷ್ಟಪಟ್ಟು ಠೇವಣಿಯಾಗಿ ಇರಿಸಿದ ಹಣಕ್ಕೆ ತೊಂದರೆ ಆಗಲಾರದು. ಭಯಪಡುವ ಆಗತ್ಯವಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದ ಮೇಲೆ ಸಾಲಕೊಟ್ಟು ಮೂರು ತಿಂಗಳ ನಂತರ ಮರುಪಾವತಿ ಪ್ರಾರಂಭವಾಗದಿದ್ದರೆ ಸಂಪೂರ್ಣ ಸಾಲವು ಎನ್‌ಪಿಎ ಎಂದು ಪರಿಗಣಿಸಬೇಕಾಗುತ್ತದೆ. ಈ ಕಾರಣದಿಂದ ಬ್ಯಾಂಕುಗಳು ಇಂತಹ ಸಾಲದ ಸಂಪೂರ್ಣ ಮೊತ್ತಕ್ಕೆ ಲಾಭದಲ್ಲಿನ ಹಣವನ್ನು ತೆಗೆದು ಇಡಬೇಕಾಗುತ್ತದೆ. ಇದರಿಂದಾಗಿ ಎಲ್ಲಾ ಬ್ಯಾಂಕುಗಳು ನಷ್ಟಕ್ಕೆ ಗುರಿಯಾಗುತ್ತಿವೆ.

***

* ಬಿ.ಜಿ. ತಲವಾರ್, ನವಲಗುಂದ
ನಾನು ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ. ಪಿಂಚಣಿ₹ 16,000. ನನ್ನ‍ಪತ್ನಿ ಸರ್ಕಾರಿ ನೌಕರಳು. ಸಂಬಳ 40,000. ನನಗೆ ಒಳ್ಳೆಯ ಉಳಿತಾಯ ಯೋಜನೆ ತಿಳಿಸಿ

ಉತ್ತರ: ನಿಮ್ಮ ಮನೆ ಖರ್ಚು ಹಾಗೂ ಇತರೆ ಖರ್ಚು ಕಳೆದು ಉಳಿಯುವ ಹಣ ನಿಮ್ಮ ಹೆಂಡತಿ ಸಂಬಳ ಪಡೆಯುವ ಬ್ಯಾಂಕಿನಲ್ಲಿ ಠೇವಣಿಯಾಗಿಡಿ. ಹೀಗೆ ಠೇವಣಿಯಿಡುವಾಗ 2 ಆರ್.ಡಿ. ಮಾಡಿರಿ. ಒಮ್ಮೆ ಏನಾದರೂ ಅನಿರೀಕ್ಷಿತ ಖರ್ಚು ಬಂದಲ್ಲಿ ಒಂದನ್ನು ನಿಲ್ಲಿಸಿ ಇನ್ನೊಂದನ್ನು ಮುಂದುವರೆಸಿರಿ.

***
ಹಾಲಪ್ಪ, ಹೊಸದುರ್ಗ
ನಾನು ನಿವೃತ್ತ ನೌಕರ. ನನ್ನ ಮಾಸಿಕ ಪಿಂಚಣಿ ‌₹ 16,500. ನನಗೆ ತಂದೆಯಿಂದ ಬಂದ 10 ಎಕರೆ ಕೃಷಿ ಜಮೀನಿದೆ. ನನಗೆ ಆದಾಯ ತೆರಿಗೆ ಬಾರದಿದ್ದರೂ 15 H ಬ್ಯಾಂಕಿಗೆ ಸಲ್ಲಿಸಬೇಕೇ?.

ಉತ್ತರ:
ಒಬ್ಬ ವ್ಯಕ್ತಿ ಆದಾಯ ತೆರಿಗೆಗೆ ಒಳಗಾಗದಿದ್ದರೂ ಆತ ಬ್ಯಾಂಕಿನಲ್ಲಿ ಪಡೆಯುವ ವಾರ್ಷಿಕ ಬಡ್ಡಿ₹ 10,000 ದಾಟಿದಲ್ಲಿ 15G , 15Hಗಳನ್ನು ವಯಸ್ಸಿಗನುಗುಣವಾಗಿ ಸಲ್ಲಿಸದಿದ್ದಲ್ಲಿ, ಬಡ್ಡಿ ಮೂಲದಲ್ಲಿ ಶೇ 10 ಕಡಿತ ಮಾಡುತ್ತಾರೆ ಹಾಗೂ ತೆರಿಗೆ ಇಲಾಖೆಗೆ ಕಳುಹಿಸುತ್ತಾರೆ. ತಾ. 1–4–2018 ರಿಂದ ಹಿರಿಯ ನಾಗರಿಕರು ಬ್ಯಾಂಕಿನಲ್ಲಿ ವಾರ್ಷಿಕವಾಗಿ ಪಡೆಯುವ ಬಡ್ಡಿಯಲ್ಲಿ₹ 50,000 ತನಕ, ಸೆಕ್ಷನ್ 80 TTB ಆಧಾರದ ಮೇಲೆ ತೆರಿಗೆ ವಿನಾಯ್ತಿ ಇದೆ. ನೀವು ತೆರಿಗೆದಾರರಲ್ಲದಿದ್ದರೂ ನಿಮ್ಮ ವಾರ್ಷಿಕ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ₹ 50,000 ದಾಟಿದಲ್ಲಿ 15H ನಮೂನೆ ಫಾರಂ ಸಲ್ಲಿಸಬೇಕು. ಇದೇ ವೇಳೆ ಇಂತಹ ಬಡ್ಡಿ ಆದಾಯ₹ 50,000 ದಾಟದಿರುವಲ್ಲಿ 15H ನಮೂನೆ ಫಾರಂ ಸಲ್ಲಿಸುವ ಅವಶ್ಯವಿಲ್ಲ.

***

ಶಿವಾನಂದಸ್ವಾಮಿ, ಮೈಸೂರು
ನಾನು ನಿವೃತ್ತ ಸರ್ಕಾರಿ ನೌಕರ. ಪಿಂಚಣಿ₹ 20,000. ನನ್ನ ಹೆಸರಿನಲ್ಲಿರುವ ನಿವೇಶನ ಮಾರಾಟ ಮಾಡಿದ್ದೇನೆ.₹ 7 ಲಕ್ಷಕ್ಕೆ ಕೊಂಡಿದ್ದು, 27 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಈ ಹಣ ಹಾಗೂ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿಸಿದ್ದೇನೆ. ನನಗೆ ತೆರಿಗೆ ಬರುತ್ತದೆಯೇ ತಿಳಿಸಿ?

ಉತ್ತರ: ಸೆಕ್ಷನ್ 54F- Capital Gain ಆಧಾರದ ಮೇಲೆ, ಒಬ್ಬ ವ್ಯಕ್ತಿ ಸ್ಥಿರ ಆಸ್ತಿ ಮಾರಾಟ ಮಾಡಿ ಬಂದಿರುವ ಲಾಭದಿಂದ, ಮೂರು ವರ್ಷಗಳಲ್ಲಿ, ಇನ್ನೊಂದು ಮನೆ ಕಟ್ಟುವಲ್ಲಿ Capital Gain Tax ಬರುವುದಿಲ್ಲ. ನೀವು ಇದೇ ರೀತಿ ಮಾಡಿದ್ದೀರಿ ಹಾಗೂ ಲಾಭಕ್ಕಿಂತ ಹೆಚ್ಚಿಗೆ ಹಣ ಮನೆಯಲ್ಲಿ ತೊಡಗಿಸಿದ್ದೀರಿ. ನಿಮಗೆ ತೆರಿಗೆ ಬರುವುದಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ₹ 2.40 ಲಕ್ಷ, ಇದರಲ್ಲಿ ಗೃಹ ಸಾಲದ ಬಡ್ಡಿ, ಕಂತು ಕೂಡಾ ಕಳೆಯುವ ಸೌಲತ್ತು ಇದೆ. ಇವೆಲ್ಲವನ್ನೂ ಪರಿಗಣಿಸುವಾಗ ನೀವು Capital Gain ಅಥವಾ Income Tax ಗಳಿಗೆ ಒಳಗಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.