ADVERTISEMENT

ಷೇರು‍ಪೇಟೆ | 80,000 ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌

ಪಿಟಿಐ
Published 3 ಜುಲೈ 2024, 16:21 IST
Last Updated 3 ಜುಲೈ 2024, 16:21 IST
ಸೆನ್ಸೆಕ್ಸ್‌
ಸೆನ್ಸೆಕ್ಸ್‌   

ಮುಂಬೈ: ರಾಷ್ಟ್ರೀಯ ಷೇರು‍ಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರದ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ 80,000ದ ಗಟಿ ದಾಟಿ ದಾಖಲೆ ಬರೆದಿದೆ. 

ಒಂದು ಹಂತದಲ್ಲಿ 632 ಅಂಶ ಏರಿಕೆ ದಾಖಲಿಸಿದ ಸೆನ್ಸೆಕ್ಸ್‌ 80,074ಕ್ಕೆ ಏರಿತು. ವಹಿವಾಟು ಮುಕ್ತಾಯದ ಹೊತ್ತಿಗೆ 545 ಅಂಶಗಳಷ್ಟು ಏರಿಕೆ ದಾಖಲಿಸಿತ್ತು. ಸೂಚ್ಯಂಕವು 79,986ರಲ್ಲಿ ಇತ್ತು. 

ಇತ್ತೀಚಿನ ದಿನಗಳಲ್ಲಿ ಸೆನ್ಸೆಕ್ಸ್‌ ಏರಿಕೆ ಹಾದಿಯಲ್ಲಿಯೇ ಇದ್ದು, ಜೂನ್‌ 25ರಂದು 78,000 ಮತ್ತು ಜೂನ್‌ 27ರಂದು 79,000ದ ಗಡಿ ದಾಟಿತ್ತು.

ADVERTISEMENT

ಸೆನ್ಸೆಕ್ಸ್‌ ಏರಿಕೆಯಲ್ಲಿ ಅತಿ ಹೆಚ್ಚು ಲಾಭ ಆಗಿರುವುದು ಅದಾನಿ ಪೋರ್ಟ್ಸ್‌ಗೆ. ಈ ಕಂಪನಿಯ ಷೇರು ಶೇ 2.49ರಷ್ಟು ಏರಿಕೆ ಕಂಡಿದೆ. ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪವರ್‌ ಗ್ರಿಡ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಬಜಾಜ್‌ ಫೈನಾನ್ಸ್‌ ಮತ್ತು ಟಾಟಾ ಸ್ಟೀಲ್‌ ಅತಿ ಹೆಚ್ಚು ಲಾಭ ಗಳಿಸಿದ ಕಂಪನಿಗಳ ಪಟ್ಟಿಯಲ್ಲಿವೆ. 

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಟೈಟನ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಮೋಟರ್ಸ್‌, ಎಲ್‌ ಆ್ಯಂಡ್‌ ಟಿ ಕಂಪನಿಗಳು ನಷ್ಟದ ಹಾದಿ ಹಿಡಿದವು. 

ನಿಫ್ಟಿ ಕೂಡ ದಾಖಲೆ ಮಟ್ಟಕ್ಕೆ ಏರಿದೆ. 162 ಅಂಶ ಏರಿಕ ಕಂಡು ಸೂಚ್ಯಂಕವು 24,286 ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ 183 ಅಂಶ ಏರಿಕೆಯಾಗಿ 24,307 ಅಂಶಕ್ಕೆ ತಲುಪಿತ್ತು. 

ಏರಿಕೆಯ ಕಾರಣ: ಬ್ಯಾಂಕಿಂಗ್‌ ವಲಯದ ಷೇರು ಮೌಲ್ಯದಲ್ಲಿ ಆದ ಭಾರಿ ಏರಿಕೆಯು ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಕಾರಣವಾಯಿತು. ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು 12 ವರ್ಷಗಳ ಕನಿಷ್ಠ ಮಟ್ಟಕ್ಕೆ ಬಂದಿದೆ. ಅದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಮಾರುಕಟ್ಟೆ ಮುನ್ನುಗ್ಗುತ್ತಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.