ADVERTISEMENT

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ರದ್ದು ಪ್ರಭಾವ

ಕೆ.ಜಿ ಕೃಪಾಲ್
Published 28 ಸೆಪ್ಟೆಂಬರ್ 2014, 19:30 IST
Last Updated 28 ಸೆಪ್ಟೆಂಬರ್ 2014, 19:30 IST

ಷೇರುಪೇಟೆಯ ಚಟುವಟಿಕೆಯು ಕೇವಲ ಕೆಲವೇ ಕಂಪೆನಿಗಳ ಷೇರುಗಳ ಮೇಲೆ ಕೇಂದ್ರೀಕೃತವಾಗಿದ್ದು ಹಿಂದಿನ­ವಾರದ ಚಟುವಟಿಕೆ­ಯು ಹೆಚ್ಚು ಮಾರಾಟದ ಒತ್ತಡವನ್ನು ಹೇರಿತ್ತು.

ಕಳೆದ ಸೋಮವಾರದಂದು ಸಂವೇದಿ ಸೂಚ್ಯಂಕ ಕಂಡ 27,254.80ರ ವಾರದ ಗರಿಷ್ಠದಿಂದ ಶುಕ್ರವಾರದ 26,220 ಅಂಶಗಳ ಕನಿಷ್ಠದವರೆಗೆ ಸಂವೇದಿ ಸೂಚ್ಯಂಕ ಕುಸಿದಿರುವುದನ್ನು ಕಾಣಬಹು­ದಾಗಿದ್ದು, ಸುಮಾರು ಒಂದು ಸಾವಿರ ಅಂಶಗಳವರೆಗೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ.

ಆದರೆ ಮಧ್ಯಮ ಶ್ರೇಣಿ ಸೂಚ್ಯಂಕ 443 ಅಂಶಗಳೂ ಹಾಗೂ ಕೆಳಮಧ್ಯಮಶ್ರೇಣಿ ಸೂಚ್ಯಂಕ 680 ಅಂಶಗಳ ಕುಸಿತವನ್ನು ಈ ವಾರ ಪ್ರದರ್ಶಿಸಿದೆ. ಇದರ ಹಿಂದಿನ ಕಾರಣವೆಂದರೆ ಹೆಚ್ಚಿನ ಕಂಪೆನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಿ ಹೊರಬಂದಿರುವುದು. ಇದರಿಂದ ಹಿತಾಸಕ್ತ ಚಟುವಟಿಕೆಗೆ ಬ್ರೆಕ್‌ ಕೊಟ್ಟಂತಾಗಿದೆ.

ADVERTISEMENT

ಸಂವೇದಿ ಸೂಚ್ಯಂಕವು ಈ ವಾರ ಒಟ್ಟಾರೆ 464 ಅಂಶಗಳ ಹಾನಿ ಪಡೆದಿದೆಯಾದರೂ ಸೋಮ­ವಾರ ಮತ್ತು ಬುಧವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸುಮಾರು 500 ಅಂಶಗಳಷ್ಟು ಏರಿಳಿತ ಪ್ರದರ್ಶಿಸಿ­ರುವುದು ಗಮನಾ­ರ್ಹವಾ­ಗಿದೆ. ಈ ಗಾತ್ರದ ಏರಿಳಿತಗಳಿಗೆ ಪ್ರಮುಖ ಕಾರಣವೆಂದರೆ ಸುಪ್ರೀಂ­ಕೋರ್ಟ್ ಕಲ್ಲಿದ್ದಲು ಗಣಿಗಾರಿಕೆ ಪರವಾನ­ಗಿ­­ಗಳನ್ನು ರದ್ದುಗೊಳಿಸಿದ ಕ್ರಮದೊಂದಿಗೆ ಈ ವಾರವು ಮೂಲಾಧಾರಿತ ಪೇಟೆಯ ಚುಕ್ತಾಚಕ್ರವು ಗುರುವಾರ ಕೊನೆ­ಗೊಂಡದ್ದೂ ಸಹ ಪ್ರಮುಖ ಕಾರಣವಾಗಿದೆ.

ಪೇಟೆಯು ಹೆಚ್ಚು ಒತ್ತಡದಲ್ಲಿದ್ದರೂ ಸಹ ಕಂಪೆನಿಗಳಾದ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಈ ವಾರ ರೂ 1,655 ರಿಂದ ರೂ 1,734 ರವರೆಗೂ ಏರಿಕೆ ಕಂಡು ರೂ 1,714ರಲ್ಲಿ ಕೊನೆಗೊಂಡಿದೆ. ಹೊಸದಾಗಿ ವಹಿವಾಟಿಗೆ ಬಿಡುಗಡೆಯಾದ ಶಾರದ ಕ್ರಾಪ್‌ ಕೆಂ. ಕಂಪೆನಿ ಷೇರು ವಿತರಣೆ ಬೆಲೆ ರೂ 156 ಕ್ಕಿಂತ ರೂ 117 ಹೆಚ್ಚು ಏರಿಕೆ ಕಂಡು ರೂ 253 ರಲ್ಲಿ ಕೊನೆಗೊಂಡಿದೆ.

ಬ್ಯಾಂಕಿಂಗ್‌ ವಲಯದ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಮುಂತಾದವು ಹೆಚ್ಚು ಕುಸಿತ­ಕ್ಕೊಳಗಾದವು ಅಂತೆಯೇ ಟಾಟಾ ಸ್ಟೀಲ್‌, ಜಿಂದಾಲ್‌ ಸ್ಟೀಲ್‌ ಅಂಡ್‌ ಪವರ್‌, ಹಿಂಡಾಲ್ಕೊ, ರಿಲೈಯನ್ಸ್ ಇನ್‌ಫ್ರಾ,ಗಳು ಹೆಚ್ಚು ಒತ್ತಡ­ಕ್ಕೊಳಗಾದವು. ಆದರೆ ಶುಕ್ರವಾರದ ಚಟು­ವಟಿಕೆಯ ಅಂತಿಮ ಸಮಯದಲ್ಲಿ ಅಂತರ­ರಾಷ್ಟ್ರೀಯ ರೇಟಿಂಗ್‌ ಸಂಸ್ಥೆ ಸ್ಟಾಂಡರ್ಡ್ ಅಂಡ್‌ ಪೂರ್‌ ಭಾರತದ ಅರ್ಥವ್ಯವಸ್ಥೆಯ ರೇಟಿಂಗ್‌ನ್ನು ನೆಗೆಟಿವ್‌ ಹಂತದಿಂದ ಸ್ಟೇಬಲ್‌ ಹಂತಕ್ಕೆ ಭಡ್ತಿ ನೀಡಿದುದರ ಕಾರಣ ಷೇರಿನ ಬೆಲೆಗಳು ಹೆಚ್ಚಿನ ಚೇತರಿಕೆಗೆ ಮುಂದಾದವು.

ಈ ವಾರದುದ್ದಕ್ಕೂ ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ 4,149 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ ಸ್ಥಳೀಯ ಸಂಸ್ಥೆಗಳು ರೂ 2,496 ಕೋಟಿ ಹೂಡಿಕೆ ಮಾಡಿವೆ. ಬಂಡವಾಳ ಮೌಲ್ಯ ರೂ 93.39 ಲಕ್ಷ ಕೋಟಿಯಲ್ಲಿತ್ತು.

ಹೊಸ ಷೇರು
ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾ­ಯಿಸಿ­­ಕೊಂಡಿರುವ ಹೈದರಾ­ಬಾದ್‌ನ ಸಿಟಿ ಆನ್‌ಲೈನ್‌ ಸರ್ವಿಸಸ್‌ ಲಿ. ಕಂಪೆನಿಯು 29 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ­ಯಾಗಲಿದೆ.

ಬೋನಸ್‌ ಷೇರಿನ ವಿಚಾರ
* ಸುದರ್ಶನ್‌ ಕೆಮಿಕಲ್ಸ್ ಲಿ. ಕಂಪನಿಯು ಷೇರಿನ ಮುಖಬೆಲೆ ಸೀಳಿಕೆ ನಂತರ ರೂ 2ರ ಮುಖಬೆಲೆಯ ಪ್ರತಿ ಒಂದು ಷೇರಿಗೆ ಒಂದರಂತೆ (1:1) ಬೋನಸ್‌ ಷೇರು ವಿತರಿಸಲು ಅಕ್ಟೋಬರ್‌ 1 ನಿಗದಿತ ದಿನವಾಗಿದೆ.
* ನರ್ಮದಾ ಜೆಲೆಟಿನ್‌ ಕಂಪನಿಯು ವಿತರಿಸಲಿರುವ 1:2ರ ಅನುಪಾತದ ಬೋನಸ್‌ ಷೇರಿಗೆ ಸೆಪ್ಟೆಂಬರ್‌ 30 ನಿಗದಿತ ದಿನವಾಗಿದ್ದು 26 ರಿಂದ ಬೋನಸ್‌ ನಂತರದ ವಹಿವಾಟು ಆರಂಭವಾಗಿದೆ.
* ಜೆಬಿಎಂ ಆಟೋ ಲಿ. ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಅಕ್ಟೋಬರ್‌ 9 ನಿಗದಿತ ದಿನವಾಗಿದೆ.

ಹಕ್ಕಿನ ಷೇರು
* ನ್ಯೂಲ್ಯಾಂಡ್‌ ಲ್ಯಾಬೊರೇಟರೀಸ್‌ ಕಂಪೆನಿ ವಿತರಿಸಲಿರುವ 4.25ರ ಅನುಪಾತದ ಪ್ರತಿ ಷೇರಿಗೆ ರೂ 204 ರಂತೆ, ಹಕ್ಕಿನ ಷೇರು ಯೋಜನೆಯು ಸೆಪ್ಟೆಂಬರ್‌ 29 ರಿಂದ ಆರಂಭವಾಗಿ ಅಕ್ಟೋಬರ್‌ 16 ಕೊನೆಯ ದಿನವಾಗಿರುತ್ತದೆ.

ಆಫರ್‌ ಫಾರ್‌ ಸೇಲ್‌
* ಫಿನಿಕ್ಸ್ ಟೌನ್‌ಶಿಪ್‌ ಲಿ. ಕಂಪೆನಿಯ ಪ್ರವರ್ತಕ ಕಂಪೆನಿ ಕೊಲಾಬಾ ರಿಯಲ್‌ ಎಸ್ಟೇಟ್ ಪ್ರೈ ಲಿ. ಕಂಪನಿಯು 3,69,600 ಷೇರುಗಳನ್ನು (ಶೇ 2.64) ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ, ಆಫರ್‌ ಫಾರ್‌ ಸೇಲ್‌ ಮೂಲಕ ಸೆಪ್ಟೆಂಬರ್‌ 30 ರಂದು ಮಾರಾಟ ಮಾಡಲಿದೆ.
* ಮುದ್ರಾ ಲೈಫ್‌ ಸ್ಟೈಲ್‌ ಲಿ. ಕಂಪೆನಿಯ ಪ್ರವರ್ತಕರು 51.80 ಲಕ್ಷ ಷೇರನ್ನು ರೂ 12.75 ರಂತೆ 26 ರಂದು ಆಫರ್‌ ಫಾರ್‌ ಸೇಲ್‌ ಮೂಲಕ ಮಾರಾಟ ಮಾಡಿದೆ.

ಲಾಭಾಂಶ ವಿಚಾರ
* ಕಾಲ್ಗೇಟ್‌ ಪಾಲ್ಮೊಲಿವ್‌ ಕಂಪೆನಿ ಪ್ರತಿ ರೂ 1ರ ಮುಖಬೆಲೆ ಷೇರಿಗೆ ರೂ 8 ರಂತೆ ಲಾಭಾಂಶ ಪ್ರಕಟಿಸಿದೆ. 29ನೇ ಸೆಪ್ಟೆಂಬರ್‌­ನಿಂದ ಲಾಭಾಂಶ ರಹಿತ ವಹಿ­ವಾಟು ಆರಂಭವಾಗಲಿದೆ.
* ಸಾಸ್ಕೆನ್‌ ಕಮ್ಯುನಿಕೇಷನ್‌ 29 ರಂದು ವಿಶೇಷ ಲಾಭಾಂಶ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ
* ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 1ಕ್ಕೆ ಸೀಳಲಿದೆ.
* ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 2ಕ್ಕೆ ಸೀಳಲಿದೆ.
* ಸುದರ್ಶನ್‌ ಕೆಮಿಕಲ್ಸ್ ಲಿ. ಕಂಪೆನಿ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 2ಕ್ಕೆ ಸೀಳಲು ಅಕ್ಟೋಬರ್‌ 1 ನಿಗದಿತ ದಿನವಾಗಿದೆ.
* ಜೆಬಿಎಂ ಟೂಲ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 5ಕ್ಕೆ ಸೀಳಲು ಅಕ್ಟೋಬರ್‌ 9 ನಿಗದಿತ ದಿನವಾಗಿದೆ.
* ಜೆಕೆ ಟೈರ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 2ಕ್ಕೆ ಸೀಳಲಿದೆ.
* ಸುರಾನ ವೆಂಚರ್ಸ್ ಲಿ. ಕಂಪೆನಿ ಷೇರಿನ ಮುಖಬೆಲೆ ಸೀಳಿಕೆಯನ್ನು ರೂ 10 ರಿಂದ ರೂ 5ಕ್ಕೆ ಮಾಡಲಿದೆ.
* ರೀಸಾ ಇಂಟರ್‌ನ್ಯಾಶನಲ್‌ ಲಿ. ಕಂಪೆನಿ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ 2ಕ್ಕೆ ಸೀಳಲಿದೆ.
* ಈಗಾಗಲೇ ಪೆನ್ನಿ ಷೇರಾಗಿರುವ ಜಾಗ್ರಣ್‌ ಪ್ರೊಡಕ್ಷನ್‌ ಲಿ. ಕಂಪೆನಿ ಷೇರಿನ ಮುಖಬೆಲೆ­ಯನ್ನು ರೂ 5 ರಿಂದ ರೂ 1ಕ್ಕೆ ಸೀಳಲು ಅಕ್ಟೋಬರ್‌ 9 ನಿಗದಿತ ದಿನವಾಗಿದೆ.

ಸ್ಟ್ರೈಡ್ಸ್ ಆರ್ಕೊಲ್ಯಾಬ್‌ ಲಿ.
ಈ ಕಂಪೆನಿಯು ಕಳೆದ ವರ್ಷ ಎಜಿಲಾ ಸ್ಪೆಷಲಿಟೀಸ್‌ ವಿಭಾಗವನ್ನು ಮೈಲಾಸ್‌ ಕಂಪೆನಿಗೆ ಮಾರಾಟ ಮಾಡಿ ಬಂದ ಹಣವನ್ನು ಪ್ರತಿ
ಷೇರಿಗೆ ರೂ 500 ರಂತೆ ವಿಶೇಷ ಲಾಭಾಂಶ ನೀಡಿತ್ತು.

ಮೈಲಾನ್‌ ಕಂಪೆನಿಯು 250 ದಶಲಕ್ಷ ಅಮೆರಿಕನ್‌ ಡಾಲರ್‌ ಹಣವನ್ನು ಅಮೆರಿಕಾದ ಎಫ್‌ಡಿಎ, ಸ್ಟ್ರೈಡ್ಸ್ ಆರ್ಕೊಲ್ಯಾಬ್‌ ಕಂಪೆನಿಯ ಮೇಲೆ ಕ್ರಮ ಜರುಗಿಸಿದಲ್ಲಿ ಬರಬಹುದಾದ ವಿಪತ್ತಿನಿಂದ ರಕ್ಷಿಸಿಕೊಳ್ಳಲು ತಡೆಹಿಡಿದು­ಕೊಂಡಿತ್ತು. ಈಗ ಸ್ಟ್ರೈಡ್ಸ್ ಆರ್ಕೊಲ್ಯಾಬ್‌
150 ದಶಲಕ್ಷ ಡಾಲರ್ ಹಣವನ್ನು ವಾಪಸ್‌ ಪಡೆಯಲು ಒಪ್ಪಂದ ಮಾಡಿಕೊಂಡಿದೆ.

ಸ್ಟ್ರೈಡ್ಸ್ ಆರ್ಕೊಲ್ಯಾಬ್‌ ಕಂಪನಿಯು ಈ 150 ದಶಲಕ್ಷ ಕೋಟಿ ಡಾಲರ್‌ ಹಣದಲ್ಲಿ 20 ದಶಲಕ್ಷ ಡಾಲರ್‌ ಹಣವನ್ನು ಬಯೋಟೆಕ್‌ ಉದ್ಯಮದಲ್ಲಿ ಹೂಡಿಕೆ ಮಾಡಿ ಉಳಿದ ಹಣವನ್ನು ತೆರಿಗೆಗಳ ನಂತರ ಲಾಭಾಂಶದ ರೂಪದಲ್ಲಿ ಷೇರುದಾರರಿಗೆ ವಿತರಿಸಲಿದೆ ಎಂದು ತಿಳಿಸಿದೆ.

ವಾರದ ವಿಶೇಷ
ಕಾರ್ಪೊರೇಟ್: ಉತ್ತಮ ತ್ರೈಮಾಸಿಕ ಫಲಿತಾಂಶ ನಿರೀಕ್ಷೆ

ಈ ವಾರದ ಷೇರುಪೇಟೆ ಹೆಚ್ಚು ಒತ್ತಡ­ಗಳಿಂದ ಭಾರಿ ಕುಸಿತಕ್ಕೊಳ­ಗಾಗಿದ್ದು ಹೆಚ್ಚಿನ ಹೂಡಿಕೆ­ದಾರರಲ್ಲಿ ಆತಂಕ ಮೂಡಿಸಿ­ರುವುದು ಸಹಜಮಮ­ಯ­ವಾದರೂ ಇದು ತಾತ್ಕಾಲಿಕ ಪರಿಸ್ಥಿತಿ­ಯಷ್ಟೆ.

ಸುಪ್ರೀಂಕೋರ್ಟ್‌ ಕಲ್ಲಿದ್ದಲು ಗಣಿಗಾರಿಕೆ ಪರವಾನಗಿ ರದ್ದುಗೊಳಿಸಿದ ಕ್ರಮದೊಂದಿಗೆ ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕಾರಣ ಪೇಟೆ ಒತ್ತಡವೆದುರಿಸಬೇಕಾಯಿತು. ಶುಕ್ರವಾರದ ಅಂತ್ಯದಲ್ಲಿ ಚೇತರಿಕೆ ಕಂಡುಕೊಂಡ ಪೇಟೆಯು ಚೇತರಿಕೆಯ ಮುನ್ಸೂಚನೆ ನೀಡಿದೆ.
ಮುಂದಿನ ದಿನಗಳು ಹೆಚ್ಚು ಉತ್ಸಾಹಭರಿತ­ವಾಗುವುದೆಂಬುದಕ್ಕೆ ಎಸ್‌ಅಂಡ್‌ಪಿ ರೇಟಿಂಗ್‌ ಸಂಸ್ಥೆಯು ಸಕಾರಾತ್ಮಕವಾಗಿ ರೇಟಿಂಗ್‌ ಹೆಚ್ಚಿಸಿ­ರುವುದು, ಪ್ರಧಾನಿಯವರ ಅಮೆರಿಕಾ ಪ್ರವಾಸದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ಸ್ಪೂರ್ತಿದಾ­ಯಕ ವಾತಾವರಣ ಮೂಡಿಸಲು ಸಾಧ್ಯ.

ಮತ್ತೊಂದು ಪ್ರಮುಖ ಬೆಳವಣಿಗೆ­ಯಲ್ಲಿ ಕೇಂದ್ರ ಸರ್ಕಾರದ ಕಲ್ಲಿದ್ದಲು ಮಂತ್ರಾಲಯವು ಅಂತರ್‌ ಮಂತ್ರಾಲಯ ಸಮಿತಿ ರಚಿಸಿ ಸುಪ್ರೀಂಕೋರ್ಟ್‌ ಕಲ್ಲಿದ್ದಲು ಗಣಿಗಾರಿ­ಕೆಯ ಬಗ್ಗೆ ನೀಡಿದ ತೀರ್ಪಿನ ಕಾರಣ ಕೈಗೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲು ಮುಂದಾಗಿರುವುದು ಮಹತ್ವದ್ದಾಗಿದೆ. ಈ ಕ್ರಮವು ಪೇಟೆಯಲ್ಲಿ ಈಗಾಗಲೇ ಕಳೆಗುಂದಿರುವ ಸ್ಟೀಲ್‌, ಪವರ್‌ ಕಂಪನಿಗಳಲ್ಲಿ ಚೈತನ್ಯ ಮೂಡಿಸ­ಬಹುದಾಗಿದೆ.

ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ವಿದೇಶಿ ಕಂಪೆನಿಗಳು ಲೀಸ್ಟಿಂಗ್‌ ಮಾಡಿಕೊಂಡು ವ್ಯವಹಾರ ನಡೆಸಲು ಅನುವು ಮಾಡಿಕೊಡಲು, ಎಡಿಆರ್‌ಗಳ ರೀತಿ­ಯಲ್ಲಿ ಭಾರತ್‌ ಡಿಪಾಜಿಟರಿ ರಸೀಟ್‌ಗಳ ಯೋಜನೆ ಜಾರಿಗೊಳಿಸ­ಲಿರುವುದು ಸಹ ಪೇಟೆಯ ಚಟುವಟಿಕೆ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಈ ಎಲ್ಲಾ ಕಾರಣಗಳಿಗೂ ಮಿಗಿಲಾಗಿ ಆಂತರಿಕವಾಗಿ ಕಾರ್ಪೊರೇಟ್‌ಗಳು ಈಗಿನ ತ್ರೈಮಾಸಿಕ ಅಂದರೆ ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಪ್ರದರ್ಶಿಸುವ ನಿರೀಕ್ಷೆಯಿದ್ದು, ಪ್ರಮುಖ ಕಂಪೆನಿಗಳು ಪ್ರಕಟಿಸ­ಬಹುದಾದ ಆಕರ್ಷಕ ಫಲಿತಾಂಶಗಳು, ಘೋಷಿಸುವ ಲಾಭಾಂಶಗಳು, ಯೋಜನೆ­ಯ ಪೇಟೆಗೆ ಮಾರ್ಗದರ್ಶನ ನೀಡಬಲ್ಲುದಾಗಿದೆ. ಒಟ್ಟಾರೆ ವಾತಾವರಣವು ಸಕಾರಾತ್ಮಕ­ವಾಗುವುದರಿಂದ ಪೇಟೆಯು ಆರೋಗ್ಯಕರ ಏರಿಕೆ ಕಾಣಬಹು­ದಾದ್ದರಿಂದ ಸಣ್ಣ ಹೂಡಿಕೆದಾರರು ಭಯಪಡುವ ಅಗತ್ಯವಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.