ಅನೇಕ ಅಗ್ರಮಾನ್ಯ ಕಂಪೆನಿಗಳ ಜೊತೆಗೆ ಮಧ್ಯಮ ಹಾಗೂ ಕೆಳಮಧ್ಯಮ ಶ್ರೇಣಿಯ ಕಂಪೆನಿಗಳೂ ಆಕರ್ಷಕ ಲಾಭಾಂಶವನ್ನು ಘೋಷಿಸಿ ಷೇರುದಾರರನ್ನು ಸಂತಸಗೊಳಿಸುತ್ತಿವೆ. ಇತ್ತೀಚಿಗೆ 4ತ್ರೈಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರ ಪ್ರಕಟಣೆ ವೇಳೆ ಕಂಪೆನಿಗಳು ಘೋಷಿಸಿದ ಲಾಭಾಂಶದ ಪ್ರಮಾಣವನ್ನು ಗಮನಿಸಿದರೆ ಆರ್ಥಿಕ ಒತ್ತಡವು ಕೇವಲ ಕಲ್ಪಿತವೇನೊ ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.
ಆದರೂ ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ರೀತಿ ಎಂದರೆ ಕಂಪೆನಿಗಳು ಹೆಚ್ಚಿನ ಲಾಭ ಗಳಿಸದೇ ಇದ್ದರೂ ತಮ್ಮ ಮೀಸಲು ನಿಧಿಯಿಂದ ಆಕರ್ಷಕ ಲಾಭಾಂಶವನ್ನಂತೂ ವಿತರಿಸುತ್ತಿವೆ. ಷೇರುದಾರರನ್ನು ಸಂತೋಷಪಡಿಸುವ ಕ್ರಮ ಇದಾಗಿದೆ.
ಹಲವಾರು ಕಂಪೆನಿಗಳು ಶೇ 1, ಶೇ 5ರ ಲೆಕ್ಕದಲ್ಲಿ ಅಲ್ಪ ಪ್ರಮಾಣದ ಲಾಭಾಂಶ ಪ್ರಕಟಿಸುವುದೂ ಉಂಟು. ಉದಾಹರಣೆಗೆ ಐಡಿಯಾ ಸೆಲ್ಯುಲರ್ ಕಂಪೆನಿ ಪ್ರತಿ ಷೇರಿಗೆ ಕೇವಲ 40 ಪೈಸೆಯಷ್ಟು ಲಾಭಾಂಶ ಘೋಷಿಸಿದೆ.
ಟ್ರಾನ್ಸಫಾರ್ಮರ್ ಅಂಡ್ ರೆಕ್ಟಿಫೈಯರ್ಸ್ (ಇಂಡಿಯಾ) ಕಂಪೆನಿಯು ಪ್ರತಿ ಷೇರಿಗೆ 75 ಪೈಸೆಯಂತೆ ಲಾಭಾಂಶ ಪ್ರಕಟಿಸಿದೆ. ಷೇರಿನ ಮುಖಬೆಲೆಯಾದ ರೂ.10ರ ಮೇಲಿನ ಈ ಲಾಭಾಂಶ ಪ್ರಮಾಣವು ತೀರಾ ಕನಿಷ್ಠ ಮಟ್ಟದ್ದಾಗಿದೆ.
ಕೆಲವು ಭಾರಿ ಕಂಪೆನಿಯು ‘ಸತತವಾಗಿ ಲಾಭಾಂಶ ವಿತರಿಸಿದ್ದೇವೆ’ ಎಂದು ಹೇಳಿಕೊಳ್ಳಲೂ ಹೀಗೆ ಅತ್ಯಲ್ಪ ಪ್ರಮಾಣದ ಲಾಭಾಂಶ ಪ್ರಕಟಿಸುವುದು ಉಂಟು. ಆದ್ದರಿಂದ ‘ಇದು ಸದಾ ಲಾಭಾಂಶ ನೀಡುವ ಕಂಪೆನಿ’ ಎಂದು ಮರುಳಾಗದೆ ಲಾಭಾಂಶದ ಪ್ರಮಾಣವನ್ನೂ ಅರಿತುಕೊಳ್ಳುವುದು ಹೂಡಿಕೆಯ ತೀರ್ಮಾನಕ್ಕೆ ಪೂರಕ ಅಂಶವಾಗಿದೆ.
ಕಾರ್ಪೊರೇಟ್ ಸಂಸ್ಥೆಗಳು ಅತ್ಯಲ್ಪ ಪ್ರಮಾಣದ ಲಾಭಾಂಶ ಪ್ರಕಟಿಸುವುದು ಸಮಯ, ಸೇವೆ, ಶಕ್ತಿಗಳ ವ್ಯಯ ಅಷ್ಟೆ.
ಇಂತಹ ಕಾರಣಗಳಿಂದ ಕಂಪೆನಿಗಳು ಲಾಭಾಂಶ ಪ್ರಕಟಿಸುವುದಾದರೆ ಕನಿಷ್ಠ ಲಾಭಾಂಶದ ಮಿತಿಯನ್ನು ಶೇ 15ರಷ್ಟಕ್ಕೆ ನಿಗದಿಪಡಿಸುವುದು ಉತ್ತಮ. ಷೇರುಪೇಟೆ ನಿಯಂತ್ರಕರು ಇಂತಹ ಕ್ರಮಕ್ಕೆ ಮುಂದಾಗುವರೆ?
ಷೇರುಪೇಟೆಯ ಏರಿಕೆ ಇಳಿತಕ್ಕೆ ಹತ್ತಾರು ವೈವಿಧ್ಯಮಯ ಕಾರಣಗಳು ಇವೆ. ಷೇರುಪೇಟೆ ಸಂವೇದಿ ಸೂಚ್ಯಂಕವು ದಾಖಲೆಯ ಹಂತ ತಲುಪಿದ ಕಾರಣ ಲಾಭದ ನಗದೀಕರಣಕ್ಕೆ ಹೂಡಿಕೆದಾರರು ಹಾತೊರೆಯುವುದು.
ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನ ಸಮೀಪಿಸುತ್ತಿರುವುದರಿಂದ ವಿವಿಧ ರೀತಿಯ ವಿಶ್ಲೇಷಣೆಗಳು, ಮಾರಾಟಕ್ಕೆ ಪ್ರೇರೇಪಿಸುವುದು, ಕಾರ್ಪೊರೇಟ್ ಸಂಸ್ಥೆಗಳ ಸಾಧನೆಯಲ್ಲಿನ ಏರುಪೇರು ಮೊದಲಾದ ಅಂಶಗಳು ಷೇರುಪೇಟೆಯಲ್ಲಿನ ಅಸ್ಥಿರತೆಗೆ ಕಾರಣವಾಗಿವೆ.
ಚುನಾವಣಾ ರ್‍ಯಾಲಿ ಸಂದರ್ಭದಲ್ಲಿನ ಈ ಏರಿಕೆಯಲ್ಲಿ ಔಷಧ ತಯಾರಿಕಾ ಕಂಪೆನಿಗಳು, ಬ್ಯಾಂಕಿಂಗ್ ಷೇರುಗಳು ಹೆಚ್ಚಿನ ಏರಿಕೆಯಿಂದ ಮಿಂಚಿದವು. ಗ್ಲೆನ್ ಮಾರ್ಕ್ ಫಾರ್ಮಾ, ಸ್ಟ್ರೈಡ್ಸ ಆರ್ಕೊಲ್ಯಾಬ್ ಶೇ 10ಕ್ಕೂ ಹೆಚ್ಚಿನ ಏರಿಕೆ ದಾಖಲಿಸಿದರೆ; ಅರವಿಂದೋ ಫಾರ್ಮಾ, ಗ್ಲೆನ್‌ಮಾರ್ಕ್ ಫಾರ್ಮಾ, ವಾರ್ಷಿಕ ಗರಿಷ್ಠ ದಾಖಲಿಸಿದವು. ವಾರಾಂತ್ಯದಲ್ಲಿ ತಾಂತ್ರಿಕ ವಲಯದ ಕಂಪೆನಿಗಳು ಪುಟಿದೇಳುವ ಸೂಚನೆ ನೀಡಿವೆ. ಫಾರ್ಮಾ ಕಂಪೆನಿಗಳು ದಣಿವಾರಿಸಿಕೊಳ್ಳಬಹುದೇ ಎಂಬುದನ್ನು ಕಾದುನೋಡಬೇಕಿದೆ.
ವಾರದಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲವೂ ಸಂವೇದಿ ಸೂಚ್ಯಂಕವು ಮಾರಾಟದ ಒತ್ತಡದಲ್ಲಿತ್ತು. ಒಟ್ಟಾರೆ 248 ಅಂಶಗಳ ಹಾನಿಗೊಳಗಾಗಿದೆ. ಮಧ್ಯಮ ಶ್ರೇಣಿ ಸೂಚ್ಯಂಕ 16 ಅಂಶ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 64 ಅಂಶಗಳ ಹಾನಿಯೊಂದಿಗೆ ಜೊತೆಗೂಡಿದೆ. ವಾರದುದ್ದಕ್ಕೂ ವಿದೇಶಿ ವಿತ್ತೀಯ ಸಂಸ್ಥೆಗಳು ಖರೀದಿ ಮಾಡಿವೆ ಒಟ್ಟು ರೂ.1,200 ಕೋಟಿಗಳಷ್ಟು ಹೂಡಿಕೆ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.1,320 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನವಾರ ರೂ.75.95 ಲಕ್ಷ ಕೋಟಿಯಿಂದ ರೂ.75.08 ಲಕ್ಷ ಕೋಟಿಗೆ ಇಳಿದಿತ್ತು.
ಲಾಭಾಂಶ ಘೋಷಣೆ
ಅಲೆಂಬಿಕ್ ಫಾರ್ಮಾ ಪ್ರತಿ ಷೇರಿಗೆ ರೂ.3, ಆಪ್ಕೊಟೆಕ್‌್ಸ ಪ್ರತಿ ಷೇರಿಗೆ ರೂ.5, (ಮುಖಬೆಲೆ ರೂ.5), ಬನಾರಸ್ ಹೋಟೆಲ್‌್ಸ ಪ್ರತಿ ಷೇರಿಗೆ ರೂ.20, ಭಾರತಿ ಏರ್‌ಟೆಲ್ ಪ್ರತಿ ಷೇರಿಗೆ ರೂ.1.80 (ಮು.ಬೆ. ರೂ.5), ಸಿಯಟ್ ಲಿ. ಪ್ರತಿ ಷೇರಿಗೆ ರೂ.10, ಡಾಬರ್ ಪ್ರತಿ ಷೇರಿಗೆ ರೂ.1 (ಮು.ಬೆ. ರೂ. 1), ಕ್ಯಾನ್‌ಫಿನ್ ಹೋಮ್ಸ ಪ್ರತಿ ಷೇರಿಗೆ ರೂ.6.50, ಫೆಡರಲ್ ಬ್ಯಾಂಕ್ ಪ್ರತಿ ಷೇರಿಗೆ ರೂ.2, ಐಎನ್‌ಜಿ ವೈಶ್ಯ ಬ್ಯಾಂಕ್ ಪ್ರತಿ ಷೇರಿಗೆ ರೂ.6, ಹೆಕ್ಸಾವೇರ್ ಟೆಕ್ನಾಲಜಿ ಪ್ರತಿ ಷೇರಿಗೆ ರೂ.3 (ಮು.ಬೆ. ರೂ.2), ಹಿಂದೂಸ್ಥಾನ್ ಯುನಿಲೀವರ್ ಪ್ರತಿ ಷೇರಿಗೆ ರೂ.7.50 (ಮು.ಬೆ. ರೂ.1),
ಎವರೆಸ್ಟ ಇಂಡಸ್ಟ್ರೀಸ್ ಪ್ರತಿ ಷೇರಿಗೆ ರೂ.2.50, ಕನ್ಸಾಯ್ ನೆರೋಲ್ಯಾಕ್ ಪ್ರತಿ ಷೇರಿಗೆ ರೂ.11, ಪೋಲಾರಿಸ್ ಫೈನಾನ್ಷಿಯಲ್ ಟೆಕ್ನಾಲಜಿ ಪ್ರತಿ ಷೇರಿಗೆ ರೂ.6.25, ಓರಿಯಂಟಲ್ ಬ್ಯಾಂಕ್ ಪ್ರತಿ ಷೇರಿಗೆ ರೂ.3.50, ನವೀನ್ ಫ್ಲೊರೋ ಪ್ರತಿ ಷೇರಿಗೆ ರೂ.8.50, ಗುಜರಾತ್ ಕ್ರಾಫ್‌್ಟ ಇಂಡಸ್ಟ್ರೀಸ್ ಪ್ರತಿ ಷೇರಿಗೆ ರೂ.17, ದಿವಾನ್ ಹೌಸಿಂಗ್ ಪ್ರತಿ ಷೇರಿಗೆ ರೂ.5, ಸೀಸಾ ಸ್ಟರ್ಲೈಟ್ ಪ್ರತಿ ಷೇರಿಗೆ ರೂ.1.75 (ಮು.ಬೆ. ರೂ.1), ಟಾಟಾ ಸ್ಪಾಂಜ್ ಪ್ರತಿ ಷೇರಿಗೆ ರೂ.10, ಶ್ರೀರಾಂ ಟ್ರಾನ್ಸಪೋರ್ಟ್ ಫೈನಾನ್ಸ ಪ್ರತಿ ಷೇರಿಗೆ ರೂ.4,
ಶ್ರೀರಾಂ ಸಿಟಿ ಯೂನಿಯನ್ ಫೈನಾನ್‌ಸ ಪ್ರತಿ ಷೇರಿಗೆ ರೂ.6, ವಿ–ಗಾರ್ಡ್ ಇಂಡಸ್ಟ್ರೀಸ್ ಪ್ರತಿ ಷೇರಿಗೆ ರೂ.4.50, ಗ್ರಾಸಿಂ ಪ್ರತಿ ಷೇರಿಗೆ ರೂ.21, ದೀಪಕ್ ನೈಟ್ರೈಟ್ ಪ್ರತಿ ಷೇರಿಗೆ ರೂ.10, ರಿಲಯನ್‌ಸ ಕ್ಯಾಪಿಟಲ್ ಪ್ರತಿ ಷೇರಿಗೆ ರೂ.8.50, ಪೌಷಕ್ ಲಿ. ಪ್ರತಿ ಷೇರಿಗೆ ರೂ.3, ರೇಮಾಂಡ್‌್ಸ ಪ್ರತಿ ಷೇರಿಗೆ ರೂ.2, ನೊಯ್ಡ ಟೊಲ್‌ಬ್ರಿಡ್‌್ಸ ಪ್ರತಿ ಷೇರಿಗೆ ರೂ.2.50, ಕೆಇಸಿ ಇಂಟರ್‌ನ್ಯಾಷನಲ್ ಪ್ರತಿ ಷೇರಿಗೆ 60 ಪೈಸೆ (ಮು.ಬೆ. ರೂ. 2) ಲಾಭಾಂಶ ಘೋಷಿಸಿವೆ.
ಸಿಂಟೆಕ್‌ಸ ಮತ್ತು ಎಚ್‌ಐಎಲ್ ಕಂಪೆನಿ ಮೇ 8ರಂದು ಎಸ್‌ಆರ್‌ಎಫ್ 9ರಂದು, ಅಲ್ಟ್ರಾಮರೈನ್ ಪಿಗ್ಮೆಂಟ್‌್ಸ ಮೇ 27ರಂದು ಲಾಭಾಂಶ ಪ್ರಕಟಿಸಲಿವೆ.
ಬೋನಸ್ ಷೇರು
* ದೀಪಕ್ ನೈಟ್ರೇಟ್ ಲಿ. ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.
ಹಕ್ಕಿನ ಷೇರು
* ವಿಂಟ್ಯಾಕ್ ಲಿ. ಕಂಪೆನಿಯು ಮೇ 9ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.
* ಡೆನಿಮ್ ಕೆಂ ಲ್ಯಾಬ್ ಕಂಪೆನಿಯು ವಿತರಿಸಲಿರುವ 2:1ರ ಅನುಪಾತದ ಹಕ್ಕಿನ ಷೇರಿನ ಯೋಜನೆ. ಮೇ 8ರಂದು ಆರಂಭವಾಗಲಿದ್ದು ಮೇ 22ರವರೆಗೂ ತೆರೆದಿರುತ್ತದೆ.
ಹೊಸ ಷೇರು
ಶಾರ್ಪ್ ಇಂಡಸ್ಟ್ರೀಸ್ ಲಿ. ಕಂಪೆನಿಯು ಕೋಲ್ಕತ್ತ ಮೂಲದ ಕಂಪೆನಿಯಾಗಿದ್ದು ಅಲ್ಲಿನ ಷೇರು ವಿನಿಮಯ ಕೇಂದ್ರದಲ್ಲಿಯೇ ವಹಿವಾಟಾಗುತ್ತಿದೆ. ಈ ಕಂಪೆನಿಯ ಷೇರುಗಳನ್ನು ಮೇ 2ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ(ಬಿಎಸ್‌ಇ) ‘ಟಿ’ ವಿಭಾಗದಲ್ಲಿ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ.
ಮುಖಬೆಲೆ ಸೀಳಿಕೆ
* ದೀಪಕ್ ನೈಟ್ರೇಟ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.2ಕ್ಕೆ ಸೀಳಲಿದೆ. ಈ ಪ್ರಕ್ರಿಯೆಯು ಬೋನಸ್ ಷೇರು ವಿತರಣೆಗಿಂತ ಮುಂಚಿತವಾಗಿ ನಡೆಯಲಿದೆ.
* ಗ್ರೀನ್ ಕ್ರೆಸ್ಟ ಫೈನಾನ್ಷಿಯಲ್ ಸರ್ವಿಸಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಲಿದೆ.
ವಾರದ ವಿಶೇಷ
ಇತ್ತೀಚಿನ ದಿನಗಳಲ್ಲಿ ಅಗತ್ಯ ಎಂಬುದು ಹೆಚ್ಚಾಗುತ್ತಿವೆ. ಅದಕ್ಕೆ ತಕ್ಕಂತೆ ಪೂರೈಕೆಗೆ ತಗಲುವ ವೆಚ್ಚವೂ ದಿನೇ ದಿನೇ ಹೆಚ್ಚುತ್ತಿದೆ. ಜನಸಾಮಾನ್ಯರಿಂದ ಶ್ರೀಮಂತರವರೆಗೂ ಈಗ ಅತ್ಯವಶ್ಯಕವಾಗಿರುವ ಸಂಪರ್ಕ ಸಾಧನವೆಂದರೆ ಮೊಬೈಲ್ ಫೋನ್. ವಿದ್ಯಾರ್ಥಿಗಳಿಗಂತೂ ಇದು ಹವ್ಯಾಸಿ ಸಾಧನ. ಹಾಗೆಂದು ಇದೇನೂ ಈಗ ಐಷಾರಾಮಿ ಸಾಧನವಾಗಿ ಉಳಿದಿಲ್ಲ.
ದೇಶದಲ್ಲಿರುವ ಮೊಬೈಲ್ ಸೇವಾ ಕಂಪೆನಿಗಳು ಎಲ್ಲರಲ್ಲೂ ಮೊಬೈಲ್ ಫೋನ್ ಬಳಕೆಯನ್ನು ಚಟವಾಗಿಯೇ ಬೆಳೆಯುವಂತೆ ಮಾಡಿ ಸೇವಾ ಶುಲ್ಕ ಮುಂತಾದವನ್ನು ದಿಢೀರ್ ಹೆಚ್ಚಿಸುತ್ತಿವೆ. ಈಗಾಗಲೇ ದುಬಾರಿ ಜೀವನದ ಕಹಿ ಅನುಭವಿಸುತ್ತಿರುವವರಿಗೆ ಇನ್ನೊಂದು ಹೊರೆಯ ಬರೆ ಬಿದ್ದಂತಾಗಿದೆ. ಕಳೆದ ಆಗಸ್ಟನಿಂದಲೂ ಹಗರಣಕ್ಕೆ ಒಳಗಾಗಿರುವ ನ್ಯಾಷನಲ್ ಸ್ಪಾಟ್ ಎಕ್ಸಚೇಂಜ್ ಲಿ. (ಎನ್‌ಎಸ್‌ಇಎಲ್) ಇ–ಸಿಲ್ವರ್, ಇ–ಗೋಲ್ಡ ಮುಂತಾದವುಗಳಲ್ಲಿ ಹೂಡಿಕೆ ಮಾಡಿರುವ ಸುಮಾರು 33 ಸಾವಿರ ಗ್ರಾಹಕರ ಬೆವರಿನ ಗಳಿಕೆಗೆ ಮುಕ್ತಿ ಸಿಗದಾಗಿದೆ.
ಈಗ ಇ–ಸೀರೀಸ್‌ನ ಗ್ರಾಹಕರು ತಾವು ಭೌತಿಕ ಪರಿವರ್ತನೆಗೆ ಇಚ್ಚಿಸಿದಲ್ಲಿ ಅವಕಾಶವಿದೆ ಎಂದು ಪ್ರಕಟಿಸಲಾದರೂ ಅಂತಹ ಪರಿವರ್ತನಾ ಕೇಂದ್ರವು ಬೆಂಗಳೂರಿನಂತಹ ಮಹಾ ನಗರದಲ್ಲಿ ಇಲ್ಲದೇ ಇರುವುದು ಖಂಡನೀಯ.
ಈ ರೀತಿಯ ಬೆಳವಣಿಗೆಯು ನಿಯಂತ್ರಣಕ್ಕೊಳಗಾಗಿರುವಂತಹ ಸಂಸ್ಥೆಗಳ ಮೇಲಿನ ನಂಬಿಕೆ ಕ್ಷೀಣಿಸುವಂತೆ ಮಾಡಿದೆ.ಪೇಟೆಯ ಸಂವೇದಿ ಸೂಚ್ಯಂಕವು ಏಪ್ರಿಲ್ 25ರಂದು ತಲುಪಿದ 22,939 ಅಂಶಗಳು ಸರ್ವಕಾಲೀನ ದಾಖಲೆಯಾದರೂ ಮಧ್ಯಮ ಮತ್ತು ಕೆಳ ಮಧ್ಯಮ ಕಂಪೆನಿಗಳಲ್ಲಿ ಹೆಚ್ಚಿನವು ಅಧಿಕ ಚಟುವಟಿಕೆ ಪ್ರದರ್ಶಿಸಿವೆ.
ಈಗ ನಾಲ್ಕೈದು ವರ್ಷಗಳ ಹಿಂದೆ ಹೂಡಿಕೆ ಮಾಡಿರುವ ಸಣ್ಣ ಹೂಡಿಕೆದಾರರು ಚಿಂತೆಗೊಳಗಾಗಿ ಪೇಟೆಯಲ್ಲಿ ನಿಷ್ಕ್ರಿಯತೆ ಪ್ರದರ್ಶಿಸಿದ್ದಾರೆ. ಮೇ 16ರ ಚುನಾವಣಾ ಫಲಿತಾಂಶದ ನಂತರ ಪೇಟೆಯು ಯಾವ ರೀತಿ ಏರಿಳಿತ ತೋರುವುದೆಂಬುದರ ಬಗ್ಗೆ ವೈವಿಧ್ಯಮಯ ವಿಶ್ಲೇಷಣೆಗಳು ಬರುತ್ತಿವೆಯಾದರೂ, ವರ್ತಮಾನದಲ್ಲಿ ಲಭ್ಯವಾಗುತ್ತಿರುವ ಅವಕಾಶಗಳನ್ನು ಪರಿಗಣಿಸುತ್ತಿಲ್ಲ. ಈಗಿನ ವಾತಾವರಣದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಚಟುವಟಿಕೆಯ ಪರಿಯನ್ನು ಬದಲಾಯಿಸಿಕೊಂಡಲ್ಲಿ ಹತ್ತಾರು ಅವಕಾಶಗಳು ಲಭ್ಯವಾಗುತ್ತಿರುತ್ತವೆ.
ಉದಾಹರಣೆಗೆ ಏಪ್ರಿಲ್‌ನಲ್ಲಿ ಪ್ರಮುಖ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಬಯೋಕಾನ್, ಆಯಿಲ್ ಇಂಡಿಯಾ, ಕಮ್ಮಿನ್‌್ಸ ಅರವಿಂದೋ ಫಾರ್ಮಾ, ಗ್ಲೆನ್‌ಮಾರ್ಕ್ ಫಾರ್ಮಾ, ಅಲೆಂಬಿಕ್ ಫಾರ್ಮಾ, ಯುಪಿಎಲ್, ದಿವಿ ಲ್ಯಾಬ್, ಡಾಕ್ಟರ್ ರೆಡ್ಡೀಸ್ ಲ್ಯಾಬ್, ಷಾಸೂನ್ ಫಾರ್ಮಾ, ಟಿವಿಎಸ್ ಮೋಟಾರ್‌್ಸ, ಇಂಡಸ್ ಇಂಡ್ ಬ್ಯಾಂಕ್ ಮೊದಲಾದ ಕಂಪೆನಿಗಳ ಷೇರುಗಳ ಏರಿಳಿತ ಪರಿಶೀಲಿಸಿದಾಗ ಅಲ್ಪಕಾಲೀನ ಅವಕಾಶಗಳ ಬಗ್ಗೆ ಅರಿವಾಗುವುದು.
ಬುಧವಾರ ಆರಂಭದ ಸಮಯದಲ್ಲಿ ಸಂವೇದಿ ಸೂಚ್ಯಂಕ 200 ಅಂಶಗಳಷ್ಟು ಏರಿಕೆಯಲ್ಲಿದ್ದು, ನಂತರ ಮಧ್ಯಂತರದಲ್ಲಿ 180 ಅಂಶಗಳ ಇಳಿಕೆ ಕಂಡಿತು. ಅಂತ್ಯದಲ್ಲಿ 48 ಅಂಶಗಳ ಇಳಕೆ ದಾಖಲಿಸಿದೆ. ಆದರೆ ದಿನದ ಮಧ್ಯಂತರದ ಚಟುವಟಿಕೆಯು ಅಪಾರವಾದ ಅವಕಾಶಗಳನ್ನು ಕಲ್ಪಿಸಿತ್ತು. ಅಂದು ಅದಾನಿ ಪೋರ್ಟ್ಸ ಅಂಡ್ ಸ್ಪೆಷಲ್ ಎಕೊನಾಮಿಕ್ ಜೋನ್ (ಎಸ್‌ಇಜೆಡ್) ಕಂಪೆನಿ ಆರಂಭದ ರೂ.193ರಿಂದ ದಿನದ ಮಧ್ಯಂತರದಲ್ಲಿ ರೂ.174.85 ರವರೆಗೂ ಕುಸಿದು ರೂ.188ರ ಸಮೀಪ ಅಂತ್ಯಗೊಂಡಿತು. ಅಡ್ವಾಂಟಾ ಕಂಪೆನಿಯ ಷೇರಿನ ಬೆಲೆಯು ರೂ.192 ರಿಂದ ರೂ.205ಕ್ಕೆ ತಲುಪಿ ರೂ.183ರ ಸಮೀಪ ಕೊನೆಗೊಂಡಿದೆ. ಆಲ್‌ಸ್ತೊಂ ಇಂಡಿಯಾ, ಐಎನ್‌ಜಿ ವೈಶ್ಯ ಬ್ಯಾಂಕ್, ಎಲ್ಐಸಿ ಹೌಸಿಂಗ್ ಫೈನಾನ್ಸನಂತಹ ಅಗ್ರಮಾನ್ಯ ಕಂಪೆನಿಗಳ ಷೇರುಗಳು ಅವಕಾಶ ಒದಗಿಸಿದವು.
ಉತ್ತಮವಾದ, ಹೆಚ್ಚು ಬಂಡವಾಳದ ಅಗ್ರಮಾನ್ಯ ಕಂಪೆನಿಯ ಷೇರಿನ ಬೆಲೆ ಕುಸಿದಾಗ ಹೂಡಿಕೆಯಾಗಿ ಆಯ್ದುಕೊಳ್ಳಿ. ನಂತರ ದೊರೆತ ಅಲ್ಪಕಾಲೀನ ಅವಕಾಶಗಳಲ್ಲಿ ಲಾಭ ನಗದೀಕರಿಸಿಕೊಳ್ಳಬಹುದು. ಆಗ ಹೂಡಿಕೆಯು ಭದ್ರವಾಗಿ ಗ್ರಾಹಕರ ಆರ್ಥಿಕ ಸಾಮರ್ಥ್ಯ ಬೆಳೆಸುವ ಶಕ್ತಿ ಹೆಚ್ಚುವುದರಿಂದ ಅವರು ಹಣದುಬ್ಬರವನ್ನು ಎದುರಿಸಲು ಸಶಕ್ತರಾಗುವರು.
ಚಟುವಟಿಕೆ ಮಾತ್ರ ಲಾರ್ಜ್ ಕ್ಯಾಷ್ ಮತ್ತು ಫಂಡಮೆಂಟಲ್‌್ಸ ಪ್ರಬಲವಾಗಿರುವ ಕಂಪೆನಿಗಳಿಗೆ ಸೀಮಿತವಾಗಿರುವುದು ಅತ್ಯವಶ್ಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.