ADVERTISEMENT

ದಾಖಲೆ ಪ್ರಮಾಣದಲ್ಲಿ ವಹಿವಾಟು ಏರಿಕೆ

ಕೆ.ಜಿ ಕೃಪಾಲ್
Published 1 ಮೇ 2016, 19:44 IST
Last Updated 1 ಮೇ 2016, 19:44 IST

ಷೇರುಪೇಟೆಯಲ್ಲಿ ಏರಿಳಿತ ಉಂಟು ಮಾಡಲು ವೈವಿಧ್ಯಮಯ ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಅಂತಹ ಪ್ರಯೋಗಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವುದೆಂದರೆ ರೇಟಿಂಗ್ / ಗ್ರೇಡಿಂಗ್ ಅಂಶ.

ಒಂದು ಕಂಪೆನಿಯ ಷೇರಿನ ಬೆಲೆಯು ಭಾರಿ ಏರಿಕೆ ಕಂಡಾಗ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಸಂಸ್ಥೆ ವಿಶೇಷವಾಗಿ ವಿದೇಶಿ ವಿತ್ತೀಯ ಸಂಸ್ಥೆ ಅದನ್ನು ಕೆಳ ದರ್ಜೆಗೆ ಇಳಿಸುವ ಗ್ರೇಡಿಂಗ್ ನೀಡಿದಲ್ಲಿ ಆ ಷೇರಿನ ಬೆಲೆಯಲ್ಲಿ ಕುಸಿತ ಉಂಟಾಗುತ್ತದೆ. ಈ ವಾರ ಜಸ್ಟ್ ಡಯಲ್ ಕಂಪೆನಿಯ ಷೇರಿನ ಬೆಲೆಯು ₹900ನ್ನು ದಾಟಿತ್ತು. ಆ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಇನ್ವೆಸ್ಟ್‌ಮೆಂಟ್ ಬ್ಯಾಂಕ್, ಕ್ರೆಡಿಟ್ ಸೂಸೆ ಯು ಡೌನ್ ಗ್ರೇಡ್ ಮಾಡಿದ ಕಾರಣ ಷೇರಿನ ಬೆಲೆಯಲ್ಲಿ ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಪೇಟೆಗಳಲ್ಲಿ ಕಚ್ಚಾ ತೈಲಬೆಲೆ ಏರಿಕೆಯಾದ ಕಾರಣ ತೈಲ ಉತ್ಪಾದಕ ಮತ್ತು ಸಂಬಂಧಿತ ಕಂಪೆನಿಗಳು ಚುರುಕಾದ ಚಟುವಟಿಕೆ ಪ್ರದರ್ಶಿಸಿದವು. ಆಯಿಲ್ ಇಂಡಿಯಾ, ಒ ಎನ್‌ಜಿಸಿ ಗಳಲ್ಲದೆ ಅಬಾನ್ ಆಫ್ ಶೋರ್ ರಭಸದ ಏರಿಕೆ ಪ್ರದರ್ಶಿಸಿದವು.

ಕೊನೆ  ಹಂತದ ಚಟುವಟಿಕೆಯಲ್ಲಿ   ಕಾಫಿ ಡೇ ಎಂಟರ್ ಪ್ರೈಸಸ್ ಕಂಪೆನಿ ಷೇರಿನ ಬೆಲೆಯು ಅಲ್ಪಸಮಯದಲ್ಲೇ ₹235 ರ ಸಮೀಪದಿಂದ ₹274ರವರೆಗೂ ಏರಿಕೆ ಕಂಡಿದ್ದು ವಿಶೇಷವಾಗಿದೆ.

ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್  ಕಂಪೆನಿಯು 27 ರಂದು ಫಲಿತಾಂಶ ಪ್ರಕಟಿಸುವ ದಿನವಾಗಿತ್ತು. ಅಂದು ದಿನದ ಆರಂಭಿಕ ಚಟುವಟಿಕೆಯಲ್ಲಿ ಷೇರಿನ ಬೆಲೆಯು ₹592 ರ ಸಮೀಪದಲ್ಲಿದ್ದು ನಂತರದಲ್ಲಿ ಫಲಿತಾಂಶ ಪ್ರಕಟವಾದ ನಂತರ ದಿನದ ಕೊನೆಯ ಹಂತದಲ್ಲಿ ₹634 ರವರೆಗೂ ಏರಿಕೆ ಕಂಡಿತು. ನಂತರದ ದಿನಗಳಲ್ಲಿ ಷೇರಿನ ಬೆಲೆಯು ₹587 ರವರೆಗೂ ಕುಸಿದು ಚೇತರಿಕೆ ಕಂಡಿದೆ. ಇದು ಪೇಟೆಯ ರಭಸದ ಚಟುವಟಿಕೆಯ ರೀತಿಯಾಗಿದೆ.

ಒಟ್ಟಾರೆ ಈ ವಾರ  ಸಂವೇದಿ ಸೂಚ್ಯಂಕವು 231 ಅಂಶಗಳ ಇಳಿಕೆ ಕಂಡಿದ್ದರೂ, ವಾರದ ಮಧ್ಯೆ 2016 ರ ಗರಿಷ್ಠ ದಾಖಲೆ ಮಟ್ಟ ತಲುಪಿದೆ. ಫೆಬ್ರುವರಿ ಅಂತ್ಯದಂದು 22,494 ಅಂಶಗಳಲ್ಲಿದ್ದ ಸಂವೇದಿ ಸೂಚ್ಯಂಕವು ಏಪ್ರಿಲ್ ಕೊನೆವಾರದಲ್ಲಿ 26 ಸಾವಿರದ ಗಡಿ ದಾಟಿರುವುದು ಪೇಟೆಯ ವೇಗವನ್ನು ತಿಳಿಸುತ್ತದೆ.

ಇಷ್ಟು ವೇಗವಾಗಿ ಏರಿಕೆ ಕಂಡಿರುವುದು ಸ್ಥಿರತೆ ಕಾಣಲು ಸಾಧ್ಯವಿಲ್ಲ.  ಮಧ್ಯಮ ಶ್ರೇಣಿಯ ಸೂಚ್ಯಂಕವು 24 ಅಂಶಗಳ ಏರಿಕೆ ಕಂಡರೆ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು 58 ಅಂಶಗಳ ಇಳಿಕೆ ಕಂಡು ಭಿನ್ನತೆಯನ್ನು ಪ್ರದರ್ಶಿಸಿದೆ.

ವಿದೇಶಿ ವಿತ್ತೀಯ ಸಂಸ್ಥೆಗಳು ₹1,060 ಕೋಟಿ ಮೌಲ್ಯದ ಷೇರು ಖರೀದಿಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,409 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.

ಹೊಸ ಷೇರು:  ಪರಾಗ್ ಮಿಲ್ಕ್ ಫುಡ್ಸ್ ಲಿಮಿಟೆಡ್ ಕಂಪೆನಿಯ ಆರಂಭಿಕ ಷೇರು ವಿತರಣೆಯು ಮೇ  4 ರಿಂದ 6 ರವರೆಗೂ ನಡೆಯಲಿದ್ದು, – ₹220 ರಿಂದ ₹227 ರ ಅಂತರದ ಬೆಲೆಯಲ್ಲಿ ವಿತರಣೆ ಮಾಡಲಾಗುವುದು. 

ಅರ್ಜಿಯನ್ನು 65 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.  ಈ ವಿತರಣೆಯಲ್ಲಿ ಚಿಲ್ಲರೆ ಗ್ರಾಹಕರಿಗೆ ಮತ್ತು ನೌಕರರಿಗೆ ಮೀಸಲಾಗಿರುವ ಭಾಗದಲ್ಲಿ – ₹12 ರ ರಿಯಾಯಿತಿಯನ್ನು ನೀಡಲಾಗುವುದು.

ತೈರೋಕೇರ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಯ  1.07 ಕೋಟಿ ಷೇರುಗಳ ಆರಂಭಿಕ ಷೇರು ವಿತರಣೆಯು ಶುಕ್ರವಾರ ಕೊನೆಗೊಂಡಿದೆ. ಈ ಆರಂಭಿಕ ಷೇರು ಕೊಡುಗೆಗೆ ಗರಿಷ್ಠ ಮಟ್ಟದ ಹಣ  ಸಂಗ್ರಹವಾಗಿದೆ. ಇದರಿಂದ ಹೂಡಿಕೆದಾರರು  ಹೆಚ್ಚು  ಉತ್ತೇಜಿತರಾಗಬೇಕಿಲ್ಲ.   ಈ ಬೆಳವಣಿಗೆಗೆ ಶ್ರೀಮಂತ ಹೂಡಿಕೆದಾರರು ಮತ್ತು ಅರ್ಹ ವಿತ್ತೀಯ ಸಂಸ್ಥೆಗಳ ಭಾಗವಹಿಸುವಿಕೆಯು ಮುಖ್ಯ ಕಾರಣವಾಗಿದೆ.

ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಹಲ್ದಾರ್ ವೆಂಚರ್ಸ್ ಲಿಮಿಟೆಡ್ ಕಂಪೆನಿ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಎಸ್‌ಕೆಐಎಲ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕಂಪೆನಿಗಳು  ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ಮೇ  3 ರಿಂದ ವಹಿವಾಟಿಗೆ ಬಿಡುಗಡೆಯಾಗಲಿವೆ.

ಆಫರ್‌ ಫಾರ್ ಸೇಲ್ : ಸರ್ಕಾರಿ ವಲಯದ ಕಂಪೆನಿ ಎನ್‌ಎಚ್‌ಪಿಸಿ ಲಿಮಿಟೆಡ್ ಕಂಪೆನಿಯ 125 ಕೋಟಿ ಷೇರುಗಳನ್ನು ಕೇಂದ್ರ ಸರ್ಕಾರವು ತನ್ನ ಷೇರು ವಿಕ್ರಯ ಕಾರ್ಯಕ್ರಮದಡಿ ಏಪ್ರಿಲ್ 27 ಮತ್ತು 28 ರಂದು – ₹21.75 ರಂತೆ ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯ ಮೂಲಕ ಮಾರಾಟ ಮಾಡಿದೆ. ಚಿಲ್ಲರೆ ಹೂಡಿಕೆದಾರರಿಗೆ ಶೇ 5 ರಿಯಾಯಿತಿಯನ್ನು ಸಹ ನೀಡಿದೆ.  ವಿತರಣೆಯಲ್ಲಿ ಚಿಲ್ಲರೆ ಗ್ರಾಹಕರ ಭಾಗವಹಿಸುವಿಕೆ ನೀರಸಮಯ
ವಾಗಿತ್ತು.  ವಿತ್ತೀಯ ಸಂಸ್ಥೆಗಳ ಖರೀದಿ ಕಾರಣ ವಿತರಣೆ ಯಶಸ್ವಿಯಾಯಿತು.

ಲಾಭಾಂಶ: ಆ್ಯಕ್ಸಿಸ್ ಬ್ಯಾಂಕ್ ಪ್ರತಿ ಷೇರಿಗೆ ₹5 (ಮುಖ ಬೆಲೆ ₹ 2),  ಮಹೀಂದ್ರ ಲೈಫ್ ಸ್ಪೇಸ್ – ₹6, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ – ₹6, ಸ್ಟೇಟ್ ಬ್ಯಾಂಕ್ ಆಫ್  ಟ್ರಾವಂಕೋರ್ – ₹5, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ – ₹14.30,  ಸ್ಟಾನ್ ರೋಸ್ ಮಫತ್  ಲಾಲ್  – ₹6, ಕನ್ಸೋಯಿ ನೆರೊಲ್ಯಾಕ್ – ₹3.05 (ಮು ಬೆ ₹1), ಮಾರುತಿ ಸುಜುಕಿ – ₹35 (ಮು ಬೆ ₹5), ಅಲೆಂಬಿಕ್ ಫಾರ್ಮಾ – ₹4 (ಮು ಬೆ ₹2),  ಕೋರಮಂಡಲ್ ಇಂಟರ್‌ ನ್ಯಾಷನಲ್ – ₹4 (ಮು ಬೆ ₹1 ), 

ಎಂ ಕೋ ಎಲೆಕಾನ್ – ₹ 5,  ಕ್ಯಾನ್ ಫಿನ್ ಹೋಮ್ಸ್ – ₹10, ಎಸ್ ಕ್ಯು ಎಸ್ ಇಂಡಿಯಾ  – ₹20,  ಕಜಾರಿಯಾ ಸಿರ್‍ಯಾಮಿಕ್ಸ್ – ₹5 (ಮು ಬೆ ₹2), ಎಚ್ ಸಿ ಎಲ್ ಟೆಕ್ನಾಲಜೀಸ್ ಷೇರಿಗೆ ₹6 (ಮು ಬೆ ₹2), ಶ್ರೀ ರಾಂ ಸಿಟಿ ಫೈನಾನ್ಸ್  ₹10, ಇಂಟರ್ ಗ್ಲೋಬ್ ಏವಿಯೇಷನ್ – ₹15,  ಎವರೆಸ್ಟ್ ಇಂಡಸ್ಟ್ರೀಸ್ – ₹5, ಜಿ ಐ ಸಿ ಹೌಸಿಂಗ್  ₹5, ಯು ಪಿ ಎಲ್ – ₹೫, (ಮು ಬೆ ₹2), ಶ್ರೀ ರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ – ₹6, ಐಸಿಐಸಿಐ ಬ್ಯಾಂಕ್ – ₹5 (ಮು ಬೆ ₹2), ಎಸ್ ಬ್ಯಾಂಕ್ – ₹10 ಮತ್ತು ಟಾಟಾ ಎಲಾಕ್ಸಿ ಪ್ರತಿ ಷೇರಿಗೆ ₹14 ರಂತೆ ಲಾಭಾಂಶ ಪ್ರಕಟಿಸಿವೆ.

ಮುಖಬೆಲೆ ಸೀಳಿಕೆ: ಸೋಲಾರ್  ಇಂಡಸ್ಟ್ರೀಸ್ ಕಂಪೆನಿಯು 16 ರಂದು  ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.
ಹಕ್ಕಿನ ಷೇರು: ಐ ಪಿ ರಿಂಗ್ಸ್ ಕಂಪೆನಿಯು 5 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

ವಾರದ ವಿಶೇಷ
ಕಳೆದವಾರ ಸರ್ಕಾರಿ ವಲಯದ ಎನ್‌ಎಚ್‌ಪಿಸಿ ಯ 125 ಕೋಟಿ ಷೇರುಗಳು ಒಎಫ್‌ಎಸ್ ಗವಾಕ್ಷಿಯ ಮೂಲಕ ಮಾರಾಟ ಮಾಡಲಾಯಿತು. ಈ ಹಿಂದೆ ಅಂದರೆ 2009 ರಲ್ಲಿ ಷೇರು ವಿಕ್ರಯದ ಮೂಲಕ 55.91 ಕೋಟಿ ಷೇರುಗಳನ್ನು – ₹36 ರಂತೆ ಮಾರಾಟ ಮಾಡಲಾಗಿದೆ.  ಆ ನಂತರ ಷೇರಿನ ಬೆಲೆಯು ವಿತರಣೆ ಬೆಲೆಯನ್ನು ತಲುಪದಾಗಿದೆ. 

ನಂತರದಲ್ಲಿನ ಬೆಳವಣಿಗೆಯಲ್ಲಿ 2012 ರಲ್ಲಿ ಈ ಕಂಪೆನಿಯು – ₹19.25 ರಂತೆ ಶೇ10ರಷ್ಟನ್ನು ಷೇರುದಾರರಿಂದ ಹಿಂದೆ ಕೊಳ್ಳಲಾಯಿತು. ಅಂದರೆ 2009ರಲ್ಲಿ ₹36ಕ್ಕೆ ಮಾರಾಟ ಮಾಡಿ 2012 ರಲ್ಲಿ ₹19.25ಕ್ಕೆ ವಾಪಸ್ ಕೊಂಡಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ಹೂಡಿಕೆದಾರರು ಒಂದು ಷೇರಿಗೆ  ₹16.75 ರಷ್ಟು ಹಾನಿಗೊಳಗಾಗಬೇಕಾಯಿತು,

ಅದೂ ಸರ್ಕಾರಿ ಕಂಪೆನಿಯೊಂದರಲ್ಲಿ ವಿನಿಮಯ ಕೇಂದ್ರದ ಹೊರಗಿನ ವಹಿವಾಟಿನಲ್ಲಿ.   ಅದೇ ಕಂಪೆನಿಯ 125 ಕೋಟಿ ಷೇರುಗಳು ಈಗ – 21.75 ರಂತೆ ಒಎಫ್ಎಸ್ ಮೂಲಕ ಮಾರಾಟ ಮಾಡಲಾಗಿದೆ. ಅಂದರೆ ಷೇರು ಪೇಟೆಯ ವಹಿವಾಟಿನಲ್ಲಿ ಸರ್ಕಾರದ ಕಂಪೆನಿಯಾಗಲಿ, ಖಾಸಗಿ ಕಂಪೆನಿಯಾಗಲಿ ಎಲ್ಲಾ ಒಂದೇ ದೃಷ್ಟಿಕೋನದಲ್ಲಿ ಚಟುವಟಿಕೆ ನಡೆಸುತ್ತವೆ. ಅದೆಂದರೆ ಲಾಭ ಗಳಿಕೆಯ ವ್ಯವಹಾರ.  ಇದನ್ನರಿತು ಚಟುವಟಿಕೆ ನಡೆಸುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT