ADVERTISEMENT

ಬ್ಯಾಂಕಿಂಗ್ ಷೇರುಗಳ ಮಾರಾಟ ಒತ್ತಡ

ಕೆ.ಜಿ ಕೃಪಾಲ್
Published 24 ಫೆಬ್ರುವರಿ 2013, 19:59 IST
Last Updated 24 ಫೆಬ್ರುವರಿ 2013, 19:59 IST

ಷೇರುಪೇಟೆಯನ್ನು ವರ್ಣಿಸಲು ಕೇವಲ ಸೂಚ್ಯಂಕಗಳನ್ನಾಧರಿಸಿದರೆ ಹಿಂದಿನ ವಾರದ ಪೇಟೆಗಳು ನೀರಸಮಯವಾಗಿದ್ದವು ಎನ್ನಬಹುದು. ಪ್ರಧಾನವಾಗಿ ಸಂವೇದಿ ಸೂಚ್ಯಂಕವು 151 ಅಂಶಗಳಷ್ಟು ಇಳಿಕೆ ದಾಖಲಿಸಿದೆ. ಮೊದಲ ಮೂರು ದಿನ ಏರಿಕೆ ಕಂಡು ಗುರುವಾರ ಇಳಿದಿದೆ. ಇದಕ್ಕೆ ಮಧ್ಯಮಶ್ರೇಣಿ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳೂ ಜೊತೆಗೂಡಿದ್ದವು. ಆದರೆ, ಇದುವರೆಗೂ ನಿರ್ಲಕ್ಷ್ಯಕ್ಕೊಳಗಾಗಿದ್ದಂತಹ ಝೈಲಾಗ್ ಸಿಸ್ಟಮ್ಸ, ಶಿವವಾಣಿ ಆಯಿಲ್ ಮಿಲ್ಸ್, ಓರಿಯಂಟ್ ಗ್ರೀನ್ ಪವರ್ ಕಂಪೆನಿಗಳು ಶೇ 20ಕ್ಕೂ ಹೆಚ್ಚಿನ ಏರಿಕೆಯಿಂದ ವಿಜೃಂಭಿಸಿದವು. ಬರ್ಜರ್ ಪೇಂಟ್ಸ್ ಫಲಿತಾಂಶದ ಕಾರಣ ಏರಿಕೆ ಕಂಡರೆ, ಲಾಭಾಂಶದ ನಂತರ ಇಳಿಕೆ ಕಂಡಿದ್ದ ಗೇಲ್ ಇಂಡಿಯಾ ಚುರುಕಾದ ಏರಿಕೆ ಕಂಡಿತು. 27 ರಂದು ತ್ರೈಮಾಸಿಕ ಫಲಿತಾಂಶದೊಂದಿಗೆ ವಾರ್ಷಿಕ ಫಲಿತಾಂಶ ಮತ್ತು ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಪ್ರಕಟಿಸಿದ ಕಾರಣ ಕ್ಯಾಸ್ಟ್ರಾಲ್ ಇಂಡಿಯಾ ರೂ307ರ ಸಮೀಪದಿಂದ ರೂ317 ರವರೆಗೂ ಜಿಗಿತ ಕಂಡಿತು. ಫೆಬ್ರುವರಿ 4 ರಂದು ಪ್ರತಿ ಷೇರಿಗೆ ರೂ248 ರಂತೆ ಆಫರ್ ಫಾರ್ ಸೇಲ್ ಮೂಲಕ ಪ್ರವರ್ತಕರ ಭಾಗಿತ್ವ ಮಾರಾಟದ ನಂತರ ಅದಾನಿ ಎಂಟರ್‌ಪ್ರೈಸಸ್ ರೂ 215 ರವರೆಗೂ ಕುಸಿದು ಈ ವಾರ ಚೇತರಿಕೆಯನ್ನು ಪ್ರದರ್ಶಿಸಿ ರೂ 230ರ ಸಮೀಪ ಅಂತ್ಯ ಕಂಡಿತು.

ಮಹೀಂದ್ರ ಅಂಡ್ ಮಹೀಂದ್ರ ಫೈನಾನ್ಶಿಯಲ್ ಸರ್ವಿಸಸ್ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ 2ಕ್ಕೆ ಸೀಳಿದ ಕಾರಣ ರೂ200ರ ಸಮೀಪ ವಹಿವಾಟಾಗುತ್ತಿದೆ. ಗುರುವಾರದಂದು ಟಿಪಿಜಿ ಕ್ಯಾಪಿಟಲ್ 2,26,50,000 ಷೇರನ್ನು ಗಜಗಾತ್ರದ ವಹಿವಾಟಿನಲ್ಲಿ ಮಾರಾಟ ಮಾಡಿದ ಕಾರಣ ಶ್ರೀರಾಂ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿಯ ಷೇರಿನ ಬೆಲೆಯು ರೂ758ರ ಗರಿಷ್ಠ ಮಟ್ಟದಿಂದ ರೂ687ರ ಕನಿಷ್ಠ ದರದವರೆಗೂ ಕುಸಿದು ರೂ714ರ ಹಂತದಲ್ಲಿ ಅಂತ್ಯಗೊಂಡಿತು. ಬ್ಯಾಂಕಿಂಗ್ ವಲಯದ ಓರಿಯಂಟಲ್ ಬ್ಯಾಂಕ್‌ಗಳಾದ ಐಎನ್‌ಜಿ ವೈಶ್ಯ, ಐಸಿಐಸಿಐ ಬ್ಯಾಂಕ್ ಮುಂತಾದವು ಮಾರಾಟದ ಒತ್ತಡದಲ್ಲಿದ್ದು ಕುಸಿತ ಕಂಡವು. ಅಗ್ರಮಾನ್ಯ ಕಂಪೆನಿಗಳಾದ ಬಿಪಿಸಿಎಲ್, ಗೇಲ್, ಕರ್ನಾಟಕ ಬ್ಯಾಂಕ್, ಗ್ಲೆನ್‌ಮಾರ್ಕ್ ಫಾರ್ಮ, ಸ್ಟ್ರೈಡ್ಸ್ ಆರ್ಕೊಲ್ಯಾಬ್‌ನಂತಹವು ಉತ್ತಮ ಏರಿಳಿತ ಪ್ರದರ್ಶಿಸಿದವು. ವಿದೇಶಿ ವಿತ್ತೀಯ ಸಂಸ್ಥೆಗಳು ರೂ 1,200 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ ಪೇಟೆಯ ಬಂಡವಾಳ ಮೌಲ್ಯವು ರೂ67.66 ಲಕ್ಷ ಕೋಟಿಯಿಂದ ರೂ67.53 ಲಕ್ಷ ಕೋಟಿಗೆ ಇಳಿದಿದೆ.

ಹೊಸ ಷೇರಿನ ವಿಚಾರ
 ಪ್ರತಿ ಷೇರಿಗೆ ರೂ210 ರಂತೆ ಸಾರ್ವಜನಿಕ ವಿತರಣೆ ಮಾಡಿದ ದೆಹಲಿಯ ವಿ-ಮಾರ್ಟ್ ರೀಟೇಲ್ ಇಂಡಿಯಾ ಲಿ. 20 ರಿಂದ `ಟಿ' ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. 10 ದಿನಗಳ ಕಾಲ `ಟಿ' ಗುಂಪಿನಲ್ಲಿ ವಹಿವಾಟಾಗಲಿದೆ.

ಇತ್ತೀಚೆಗೆ ಪ್ರತಿ ಷೇರಿಗೆ ರೂ70 ರಿಂದ ರೂ. 75ರ ಅಂತರದಲ್ಲಿ ಸಾರ್ವಜನಿಕ ವಿತರಣೆ ಮಾಡಿದ ಸಾಯಿ ಸಿಲ್ಕ್ಸ್ (ಕಲಾಮಂದಿರ್) ಲಿ. ಕಂಪೆನಿಗೆ ಸುರಕ್ಷಾ ಚಕ್ರದ ಕಾರಣ ಸಣ್ಣ ಹೂಡಿಕೆದಾರರ ಬೆಂಬಲ ದೊರೆತಿದ್ದರೂ ವಿತ್ತೀಯ ಹಾಗೂ ಮ್ಯೂಚುಯಲ್ ಫಂಡ್‌ಗಳ ಬೆಂಬಲದ ಕೊರತೆಯ ಕಾರಣ ಕಂಪೆನಿಯು ವಿತರಣೆಯನ್ನು ಹಿಂಪಡೆದಿದೆ.

ಲಾಭಾಂಶ ವಿಚಾರ
ಎಬಿಬಿ ಶೇ 150 (ಮು.ಬೆ. ರೂ 2), ಅಬ್ಬಾಟ್ ಇಂಡಿಯಾ ಶೇ 170, ಕ್ರೆಡಿಟ್ ಅನಾಲಿಸಿಸ್, ರಿಸರ್ಚ್ ಶೇ 120, ಡಿ-ನೋರಾ ಇಂಡಿಯಾ ಶೇ 70, ಇಸಾಬ್ ಇಂಡಿಯಾ ಶೇ 75, ಗ್ಲಾಸ್ಕೊ ಸ್ಮಿತ್‌ಕ್ಲೈವ್ ಫಾರ್ಮ ಶೇ 500, ಕೆ.ಎಸ್.ಬಿ. ಪಂಪ್ಸ್ ಶೇ 45, ನೆಸ್ಲೆ ಶೇ 125, ರಾಜಪಾಳ್ಯಂ ಮಿಲ್ ಶೇ 50, ರೇನ್ ಕಮಾಡಿಟೀಸ್ ಶೇ 55 (ಮು.ಬೆ. ರೂ2), ಎಸ್‌ಕೆಎಫ್ ಇಂಡಿಯಾ ಶೇ 75, ಸ್ಟರ್ಲಿಂಗ್ ಟೂಲ್ಸ್ ಶೇ 50, ಥಾಮಸ್ ಕುಕ್ ಶೇ 37.5 (ಮು.ಬೆ. ರೂ 1).

ಬೋನಸ್ ಷೇರಿನ ವಿಚಾರ
ರೊಲಟೇನರ್ಸ್ ಲಿ. ಕಂಪೆನಿ ವಿತರಿಸಲಿರುವ 3:2 ಅನುಪಾತದ ಬೋನಸ್ ಷೇರಿಗೆ ಫೆಬ್ರುವರಿ 28 ನಿಗದಿತ ದಿನವಾಗಿದೆ.

ಹಕ್ಕಿನ ಷೇರಿನ ವಿಚಾರ
ಹಿಟಾಚಿ ಹೋಂ ಅಂಡ್ ಲೈಫ್ ಸೊಲೂಷನ್ಸ್ (ಇಂಡಿಯಾ) ಲಿ. ಕಂಪೆನಿಯು 1:5ರ ಅನುಪಾತದಲ್ಲಿ ಪ್ರತಿ ಷೇರಿಗೆ ರೂ 130 ರಂತೆ ಹಕ್ಕಿನ ಷೇರು ವಿತರಿಸಲಿದೆ.

ಮುಖಬೆಲೆ ಸೀಳಿಕೆ ವಿಚಾರ
ರಾಜ್ ರೆಯಾನ್ ಇಂಡಸ್ಟ್ರೀಸ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ1ಕ್ಕೆ ಸೀಳಲು 5ನೇ ಮಾರ್ಚ್ ನಿಗದಿತ ದಿನವಾಗಿದೆ.

ಶ್ರೀ ಕಾಲೀನ್ ಟೆಕ್ಸ್‌ಟೈಲ್ಸ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ2ಕ್ಕೆ ಸೀಳಲು 7ನೇ ಮಾರ್ಚ್ ನಿಗದಿತ ದಿನವಾಗಿದೆ.

ವಹಿವಾಟಿನಿಂದ ಹಿಂದಕ್ಕೆ
ಅಮೃತ್ ವನಸ್ಪತಿ ಕಂ. ಲಿ. 28 ರಿಂದ ಷೇರು ವಿನಿಮಯ ಕೇಂದ್ರದ ವಹಿವಾಟಿನಿಂದ ಹಿಂದೆ ಸರಿಯಲಿದೆ. ಈ ಡೀಲೀಸ್ಟಿಂಗ್ ಕಾರಣ ಮುಂದಿನ ಒಂದು ವರ್ಷದವರೆಗೂ ರೂ150 ರಂತೆ ಷೇರುದಾರರಿಂದ ನೇರ ಕೊಳ್ಳುವಿಕೆ ವ್ಯವಸ್ಥೆ ಮಾಡಲಾಗಿದೆ.

ಷೇರುದಾರರಾಗಲು ತೆರೆದ ಕರೆ
ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಸ್ಯಾಮ್ ಲೇಸ್ಕೊ ಲಿ. ಕಂಪೆನಿಯು ಲೀಸ್ಟಿಂಗ್ ನಿಯಮದಂತೆ ಪ್ರವರ್ತಕರ ಭಾಗಿತ್ವವನ್ನು ಶೇ 75ಕ್ಕೆ ಇಳಿಸಲು, ಶೇ 7.63 ರಷ್ಟು ಭಾಗಿತ್ವದ ಷೇರನ್ನು (15,250 ಷೇರುಗಳು) ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯ ಮೂಲಕ 26 ರಂದು ವಿತರಿಸಲಿದೆ. ಈ ಕಂಪೆನಿಯ ಷೇರು ವಹಿವಾಟಿಗೆ ನೋಂದಾಯಿಸಿಕೊಂಡಿದ್ದರೂ ವಹಿವಾಟಾಗುತ್ತಿಲ್ಲ. ವಿತರಣೆಗಾಗಿ ನಿಗದಿಪಡಿಸಿದ ಬೆಲೆಯನ್ನಾಧರಿಸಿ ನಿರ್ಧರಿಸುವುದು ಸೂಕ್ತ.

ತೆರೆದ ಕರೆ
ಅಕ್ಟೋಬರ್ 2010 ರಲ್ಲಿ ಪ್ರತಿ ಷೇರಿಗೆ ರೂ. 47 ರಂತೆ ಸಾರ್ವಜನಿಕ ವಿತರಣೆ ಮಾಡಿದ, ನವೀಕರಿಸಬಹುದಾದ ಇಂಧನ ವಲಯದ ಓರಿಯಂಟ್ ಗ್ರೀನ್ ಪವರ್ ಕಂಪೆನಿ ಲಿ. ಈಗ ಸುಮಾರು 13 ರೂಪಾಯಿ ಸಮೀಪ ವಹಿವಾಟಾಗುತ್ತಿದ್ದು ಈ ಕಂಪೆನಿಯ ಶೇ 26 ಭಾಗಿತ್ವ ಅಂದರೆ 14,77,345 ಷೇರಿಗೆ ಪ್ರತಿ ಷೇರಿಗೆ ರೂ15 ರಂತೆ ಶ್ರೀರಾಂ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಪ್ರೈ ಲಿ. ಪರವಾಗಿ ಆಕ್ಸಿಸ್ ಕ್ಯಾಪಿಟಲ್ ಲಿ. ತೆರೆದ ಕರೆ ನೀಡಲಿದೆ.

ಬಂಡವಾಳ ಕಡಿತ
ಬಾಂಬೆ ಉಚ್ಚನ್ಯಾಯಾಲಯದ ಅನುಮತಿಯಂತೆ ಐ ಬಿ ಇನ್‌ಫೊಟೆಕ್ ಎಂಟರ್ ಪ್ರೈಸಸ್ ಲಿ. ಕಂಪೆನಿಯು ಷೇರು ಬಂಡವಾಳವನ್ನು ಶೇ 90 ರಷ್ಟು ಕಡಿತಗೊಳಿಸಲಿದ್ದು, ಈಗಿನ ರೂ 6,10,69,300 ರೂಪಾಯಿಗಳಿಂದ ರೂ61,06,930ಕ್ಕೆ ಇಳಿಯಲಿದೆ. ಈ ಪ್ರಕ್ರಿಯೆಗೆ 23ನೇ ಫೆಬ್ರುವರಿ ನಿಗದಿತ ದಿನವಾಗಿದೆ.

ಗುಜರಾತ್ ಸಿದ್ದಿ ಸೀಮೆಂಟ್ ಲಿ. ಕಂಪೆನಿಯ ಷೇರು ಬಂಡವಾಳವನ್ನು ಶೇ 75 ರಷ್ಟು ಕಡಿತಗೊಳಿಸಲು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಅಂಡ್ ಫೈನಾನ್ಶಿಯಲ್ ರಿಕನ್ಸ್‌ಟ್ರಕ್ಷನ್ ಆದೇಶಿಸಿದೆ. ಈ ಪ್ರಕ್ರಿಯೆಗಾಗಿ 25ನೇ ಫೆಬ್ರುವರಿ ನಿಗದಿತ ದಿನವಾಗಿದೆ.

ಡಯಾನ್ ಗ್ಲೋಬಲ್ ಸೊಲೂಷನ್ಸ್ ಲಿ. ಕಂಪೆನಿಯು ದೆಹಲಿ ಉಚ್ಚನ್ಯಾಯಾಲಯದ ಅನುಮತಿಯಂತೆ ಬಂಡವಾಳವನ್ನು ಅರ್ಧದಷ್ಟು ಕಡಿತಗೊಳಿಸಲಿದೆ. ಮೊದಲು ರೂ10ರ ಮುಖ ಬೆಲೆ ಷೇರನ್ನು ರೂ5ಕ್ಕೆ ಕಡಿತಗೊಳಿಸಿ ನಂತರ ಎರಡು ಷೇರುಗಳನ್ನು ಕ್ರೋಡೀಕರಿಸಲು ಮಾರ್ಚ್ 1 ನಿಗದಿತ ದಿನಾಂಕವಾಗಿದೆ.

ವಾರದ ಪ್ರಶ್ನೆ
ಈಗಿನ ಷೇರು ಪೇಟೆ ವಾತಾವರಣದಲ್ಲಿ ಯಾವ ಸೆಕ್ಟಾರ್‌ಗೆ ಹೆಚ್ಚಿನ ಪ್ರಿಫರೆನ್ಸ್, ಪೋರ್ಟ್ ಫೋಲಿಯೋ ರಚನೆಯಲ್ಲಿ ನೀಡಬಹುದು ದಯವಿಟ್ಟು ತಿಳಿಸಿರಿ.

ಉತ್ತರ: ಹೂಡಿಕೆ ಮಾಡು - ಮರೆತು ಬಿಡು. ಅದು ನಮ್ಮ ಹಿತ ಕಾಪಾಡುತ್ತದೆ ಎನ್ನುವ ಮಾತು ಹಳೆಯದಾಯಿತು. ಈಗಿನ ದಿನಗಳಲ್ಲಿ ಷೇರುಪೇಟೆಯ ವೇಗ ಎಷ್ಟಿದೆ ಎಂದರೆ ಬದಲಾವಣೆ ಅದರಲ್ಲೂ ಷೇರುಗಳ ದರಗಳ ಏರಿಳಿತ ಅತೀವವಾಗಿದೆ. ಇಂತಹ ವಾತಾವರಣವು ಹೂಡಿಕೆದಾರರು ಸದಾ ನಿಗಾವಹಿಸಬೇಕಾಗುತ್ತದೆ. ಇದಕ್ಕೆ ಸ್ಟೈಡ್ಸ್ ಆರ್ಕೊಲ್ಯಾಬ್ ಪ್ರದರ್ಶಿಸಿರುವ ರೂ1100 ರಿಂದ ರೂ 865ರ ನಡುವಿನ ಹಲವು ಸುತ್ತು ಏರಿಳಿತಗಳು ಮತ್ತು ಅದರ ಅತಿಯಾದ ವೇಗ ಉತ್ತಮ ಉದಾಹರಣೆಯಾಗಿದೆ. ಶುಕ್ರವಾರವೂ ಷೇರಿನ ಬೆಲೆ ರೂ973 ರಿಂದ ರೂ1044ರ ವರೆಗೂ ಏರಿಕೆ ಕಂಡಿದೆ. ಈ ಕಂಪೆನಿ ಫೆಬ್ರುವರಿ 28 ರಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಹ ಕಳೆದ ಒಂದು ತಿಂಗಳ ಅವದಿಯಲ್ಲಿ ಹೆಚ್ಚಿನ ಏರಿಳಿತ ತೋರಿದೆ. ಹಿಂದಿನ ಹತ್ತು ದಿನಗಳಲ್ಲಿ ರೂ370ರ ಹಂತದಿಂದ ರೂ399ರ ಗರಿಷ್ಠ ತಲುಪಿದೆ. ಅಂತೆಯೇ ಗೇಲ್ ಇಂಡಿಯಾ, ಒ.ಎನ್.ಜಿ.ಸಿ., ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಒಎನ್‌ಜಿಸಿಯಂತಹ ಸಾರ್ವಜನಿಕ ವಲಯದ ಕಂಪೆನಿಗಳು ಏರಿಳಿತಕ್ಕೊಳಗಾಗಿವೆ. ಈಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ವಲಯದ ಡಿಎಲ್‌ಎಫ್ ಕಂಪೆನಿಯು ಹೆಚ್ಚಿನ ಏರಿಳಿತಗಳನ್ನು ತೋರಿಸಿದೆ. ಶುಕ್ರವಾರವೂ ರೂ271 ರಿಂದ ವಾರ್ಷಿಕ ಗರಿಷ್ಠ ರೂ 283ರ ವರೆಗೂ ಜಿಗಿತ ಕಂಡಿದೆ. ಪೂರ್ವಾಂಕರ ಪ್ರಾಜೆಕ್ಟ್ಸ್ ಕಂಪೆನಿಯೂ ಸಹ ಈ ರೀತಿಯ ಏರಿಳಿತಗಳನ್ನು ಪ್ರದರ್ಶಿಸಿ ಆಕರ್ಷಣೆಯಲ್ಲಿದೆ.

ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ ಈ ಎರಡು ಕಂಪೆನಿಗಳಲ್ಲಿ ಪ್ರವರ್ತಕರು ಶೇ 75ಕ್ಕೂ ಹೆಚ್ಚಿನ ಭಾಗಿತ್ವ ಹೊಂದಿದ್ದು ಈ ಭಾಗಿತ್ವವನ್ನು ಶೇ 75ಕ್ಕೆ ಇಳಿಸಿಕೊಳ್ಳಲು ಹೆಚ್ಚುವರಿ ಭಾಗಿತ್ವದ ಷೇರನ್ನು ಷೇರು ವಿನಿಮಯ ಕೇಂದ್ರಗಳ `ಆಫರ್ ಫಾರ್ ಸೇಲ್' ಮೂಲಕ ಮಾರಾಟ ಮಾಡಬೇಕಾಗಿರುವುದು ಪೇಟೆಯ ದರ ಉತ್ತಮವಾಗಿದ್ದಲ್ಲಿ ಮಾತ್ರ ಈ ಆಫರ್ ಫಾರ್ ಸೇಲ್‌ಗೆ ಆಕರ್ಷಕ ದರ ಗೊತ್ತು ಪಡಿಸಬಹುದು ಎಂಬ ಅಂಶವೂ ಅಡಕವಾಗಿರಬಹುದು. ಕಳೆದ ಎರಡು ದಿನಗಳಲ್ಲಿ ಭಾರತಿ ಟೆಲಿ, ಐಎಫ್‌ಸಿಐ, ವಿಡಿಯೋಕಾನ್, ಎಚ್.ಸಿ.ಎಲ್. ಟೆಕ್ನಾಲಜೀಸ್ ಮುಂತಾದವು ಹೆಚ್ಚಿನ ಏರಿಳಿತಕ್ಕೊಳಗಾಗಿವೆ. ಪ್ರಮುಖ ವಿದೇಶೀ ವಿತ್ತೀಯ ಸಂಸ್ಥೆಯೊಂದು ಎಚ್.ಡಿ.ಎಫ್.ಸಿ. ಷೇರನ್ನು `ಮಾರಾಟ'ದ ಕಾಲ್ ಕೊಟ್ಟಿರುವುದು, ಆ ಷೇರು ಶುಕ್ರವಾರ ಮಾರಾಟದ ಒತ್ತಡಕ್ಕೆ ಕಾರಣವಾಯಿತು.

ಷೇರುಪೇಟೆಗಳು ಬೆಳಿಗ್ಗೆ 9-15 ರಿಂದ ಮಧ್ಯಾಹ್ನ 3-30ರ ವರೆಗೂ ಕಾರ್ಯನಿರತವಾಗಿದ್ದು, ದಿನದ ಮಧ್ಯೆ ವಿಶ್ವದಾದ್ಯಂತ ನಡೆಯಬಹುದಾದ ಘಟನೆ, ಬೆಳವಣಿಗೆಗಳಿಗೆ ಸ್ಪಂದಿಸುವ ಸೂಕ್ಷ್ಮತಾಣವಾಗಿರುವುದರಿಂದ ಹೂಡಿಕೆದಾರರು ಇಲ್ಲಿ ಯಶಸ್ಸು ಕಾಣಬೇಕಾದರೆ ಹೂಡಿಕೆಯ ಗುಚ್ಚದಲ್ಲಿನ ಕಂಪೆನಿಗಳ ಸಂಖ್ಯೆಯನ್ನು ಹೆಚ್ಚಾಗಿ ಹರಡಿಕೊಳ್ಳುವುದು ಸೂಕ್ತ. ಮೂಲತಃ ಸುಭದ್ರ ಕಂಪೆನಿ ಎಂಬ ಅಂಶ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಮಾತ್ರ ಆದ್ಯತೆ ನೀಡಿ ನಂತರ ಲಾಭಗಳಿಕೆಗೆ ಆದ್ಯತೆ ನೀಡಿ, ಅಲ್ಪಾವಧಿಯಲ್ಲಿ ಲಭ್ಯವಾಗುವ ಸಹಜ ಲಾಭವನ್ನು ಕಿಸೆ ಸೇರಿಸುವುದರಿಂದ ಬಂಡವಾಳ ಸುರಕ್ಷತೆ. ಲಾಭ ನಗದೀಕರಿಸಿಕೊಳ್ಳುವಾಗ ಕಾರಣಗಳ ಅನ್ವೇಷಣೆಗೆ ಹೋಗಬೇಡಿರಿ. ಷೇರುಪೇಟೆಯಲ್ಲಿ ಸುಲಭವಾಗಿ ಉತ್ತಮ ಫಲಿತಾಂಶ ಪಡೆಯಲು ಸುಲಭ ಸೂತ್ರ `ಎಂಟ್ರಿ ಆನ್ ಫಂಡ್ ಮೆಂಟಲ್ಸ್ - ಎಕ್ಸಿಟ್ ಫಾರ್ ಪ್ರಾಫಿಟ್' ಮಾತ್ರ.

 98863-13380
(ಮಧ್ಯಾಹ್ನ 4.30ರ ನಂತರ)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.