ಷೇರುಪೇಟೆಯ ಸಂವೇದಿ ಸೂಚ್ಯಂಕವು 29ನೇ ಜನವರಿಯಂದು ಮಧ್ಯಂತರದಲ್ಲಿ ತಲುಪಿದ್ದ 21,203 ಅಂಶಗಳ ಗರಿಷ್ಠ ಮಟ್ಟದಿಂದ ಅಂದೇ 112 ಅಂಶಗಳಷ್ಟು ಇಳಿಕೆ ಕಂಡು ಇದುವರೆಗೆ ಸತತವಾದ ಕುಸಿತ ಪ್ರದರ್ಶಿಸುತ್ತಿದೆ. ಕಳೆದ ವಾರವೂ ಎಲ್ಲ ದಿನಗಳಲ್ಲಿ ಕುಸಿತ ದಾಖಲಿಸಿ 19,484 ರಲ್ಲಿ ಅಂತ್ಯಕಂಡಿದೆ.
ಈ ವಾರ ಪ್ರಕಟಗೊಂಡ ತ್ರೈಮಾಸಿಕ ಫಲಿತಾಂಶಗಳು ಮಿಶ್ರಿತ ರೀತಿಯಲ್ಲಿದ್ದು ಬ್ಯಾಂಕಿಂಗ್ ಕ್ಷೇತ್ರದ ಹೆಚ್ಚಿನ ಕಂಪೆನಿಗಳು ಮಾರಾಟದ ಒತ್ತಡವನ್ನೆದುರಿಸಿದವು ಸಿಪ್ಲಾ, ಬ್ಯಾಂಕ್ ಆಫ್ ಬರೋಡ, ಬಿಎಚ್‌ಇಎಲ್, ಹಿಂದೂಸ್ಥಾನ್ ಯೂನಿಲಿವರ್, ಅರವಿಂದೊ ಫಾರ್ಮ ಕಂಪೆನಿಗಳು ಭಾರಿ ಇಳಿಕೆ ಪ್ರದರ್ಶಿಸಿದವು.
ಆದರೆ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಎಸ್ಸಾರ್ ಆಯಿಲ್, ಎಕ್ಸೈಡ್ ಇಂಡಸ್ಟ್ರೀಸ್‌ಗಳು ಆಕರ್ಷಕ ಏರಿಕೆ ಪ್ರದರ್ಶಿಸಿದವು. ಈ ಮಧ್ಯೆ ಗುರುವಾರ ಪ್ರಕಟವಾದ ಜಿಡಿಸಿ ಬೆಳವಣಿಗೆಯು ಕಳೆದ ದಶಕದಲ್ಲಿಯೇ ಕಳಪೆಯಾಗಿರುವ ಅಂಶವು ಪೇಟೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದವು.
ಈ ವಾರದ ಪ್ರಮುಖ ಬೆಳವಣಿಗೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ರೂ248ರ ಮೂಲ ಬೆಳೆಯಂತೆ ಆಫರ್ ಫಾರ್ ಸೇಲ್ ಮೂಲಕ 70 ಲಕ್ಷ ಷೇರು ಮಾರಾಟ ಮಾಡಿದೆ. ಸೋಜಿಗವೆಂದರೆ ಪೇಟೆಯ ದರವು ಈ ಬೆಲೆಗಿಂತ ಕಡಿಮೆಯಲ್ಲಿತ್ತು. ಷೇರಿನ ಬೆಲೆಯು ರೂ 232 ರಲ್ಲಿ ವಾರಾಂತ್ಯ ಕಂಡಿತು. ಅಂತೆಯೇ ಸಾರ್ವಜನಿಕ ವಲಯದ ಎನ್‌ಟಿಪಿಸಿ ಕಂಪೆನಿ 78.32 ಲಕ್ಷ ಷೇರು ರೂ145ರ ಕನಿಷ್ಠ ಬೆಲೆಯಲ್ಲಿ 7 ರಂದು ಆಫರ್ ಫಾರ್ ಸೇಲ್‌ನಲ್ಲಿ ಮಾರಾಟ ಮಾಡಲಾಯಿತು.
ಈ ವಾರ ಒಟ್ಟು 296 ಅಂಶಗಳಷ್ಟು ಕುಸಿತವನ್ನು ಸಂವೇದಿ ಸೂಚ್ಯಂಕ ಪಡೆದರೆ ಇದಕ್ಕೆ ಪೂರಕವಾಗಿ ಮಧ್ಯಮಶ್ರೇಣಿ ಸೂಚ್ಯಂಕ 211 ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 262 ಅಂಶಗಳಷ್ಟು ಹಾನಿ ಪಡೆದವು. ವಿದೇಶಿ ವಿತ್ತೀಯ ಸಂಸ್ಥೆಗಳು, ರೂ4,802 ಕೋಟಿ ಮೌಲ್ಯದ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ4,454 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ70 ಲಕ್ಷ ಕೋಟಿಯಿಂದ ರೂ68.29 ಲಕ್ಷ ಕೋಟಿಗೆ ಇಳಿದಿದೆ.
ಹೊಸ ಷೇರಿನ ವಿಚಾರ
*ಸಾಯಿ ಸಿಲ್ಕ್ಸ್ (ಕಳಾಮಂದಿರ್) ಲಿ. ಕಂಪೆನಿಯು ಪ್ರತಿ ಷೇರಿಗೆ ರೂ 70 ರಿಂದ ರೂ 75 ರವರೆಗಿನ ಅಂತರದಲ್ಲಿ ಫೆಬ್ರುವರಿ 11 ರಿಂದ 13 ರವರೆಗೆ, 200 ಷೇರುಗಳ ಗುಣಕಗಳಲ್ಲಿ ಸಾರ್ವಜನಿಕ ವಿತರಣೆ ಮಾಡಲಿದೆ. ಈ ವಿತರಣೆ ಪ್ರವರ್ತಕರು ಆರಂಭಿಕ ಷೇರು ವಿತರಣೆಯಲ್ಲಿ ಅಲ್ಲಾಟ್ ಆದವರಿಗೆ 6 ತಿಂಗಳವರೆಗೂ ವಿತರಣೆಯ ದರದಲ್ಲಿ ಗರಿಷ್ಠ 1000 ಷೇರಿನವರೆಗೂ ವಾಪಸ್ ಪಡೆಯುವ ಸುರಕ್ಷಾ ಜಾಲದ ಅವಕಾಶವನ್ನು ಸಣ್ಣ ಹೂಡಿಕೆದಾರರಿಗೆ ನೀಡಿರುವುದು ವೈಶಿಷ್ಠ್ಯವಾಗಿದೆ.
*ಸ್ಕೀಂ ಬಯೋ ಆರ್ಗಾನಿಕ್ ಪುಡ್ ಪ್ರೊಸೆಸಿಂಗ್ ಲಿ. ಕಂಪೆನಿಯು ಪ್ರತಿ ಷೇರಿಗೆ ರೂ25 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು ಈಗ ಬಿಎಸ್‌ಇಯ `ಎಂ.ಟಿ.' ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ವಹಿವಾಟಿನ ಗುಚ್ಚ 6,000 ಷೇರುಗಳಾಗಿವೆ.
*ಆಪ್ಟಸ್ ಇಂಡಸ್ಟ್ರೀಸ್ ಲಿ. ಕಂಪೆನಿಯು 6 ರಿಂದ ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
ಬೋನಸ್ ಷೇರಿನ ವಿಚಾರ
*ಮೆಡಿಕ್ಯಾಪ್ಸ್ ಲಿ. ಕಂಪೆನಿಯು 3:1ರ ಅನುಪಾತದ ಬೋನಸ್ ಪ್ರಕಟಿಸಿದೆ.
*ರಸೋಯ ಪ್ರೊಟೀನ್ಸ್ ಲಿ. ಕಂಪೆನಿಯು 11 ರಂದು ಬೋನಸ್ ಷೇರು ಪರಿಶೀಲಿಸಲಿದೆ.
ಮುಖಬೆಲೆ ಸೀಳಿಕೆ ವಿಚಾರ
*ಹೀಂದ್ರ ಅಂಡ್ ಮಹೀಂದ್ರ ಫೈನಾನ್ಶಿಯಲ್ ಸರ್ವಿಸಸ್ ಷೇರಿನ ಮುಖಬೆಲೆಯನ್ನು ರೂ10 ರಿಂದ 2ಕ್ಕೆ ಸೀಳಲು ಫೆಬ್ರುವರಿ 18 ನಿಗದಿತ ದಿನವಾಗಿದೆ.
*ಬಿಲ್ ಎನರ್ಜಿ ಸಿಸ್ಟಮ್ಸ ಲಿ. 12 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.
*ರಸೋಯ ಪ್ರೊಟೀನ್ಸ್ ಲಿ. ಕಂಪೆನಿಯು 11 ರಂದು ಷೇರಿನ ಮುಖಬೆಲೆಯನ್ನು ರೂ5 ರಿಂದ ರೂ1ಕ್ಕೆ ಸೀಳುವುದನ್ನು ಪರಿಶೀಲಿಸಲಿದೆ.
ಹಕ್ಕಿನ ಷೇರಿನ ವಿಚಾರ
* ಅಲೋಕ್ ಇಂಡಸ್ಟ್ರೀಸ್ ವಿತರಿಸಲಿರುವ 2:3 ಅನುಪಾತದ ಹಕ್ಕಿನ ಷೇರಿಗೆ ಫೆಬ್ರುವರಿ 19 ನಿಗದಿತ ದಿನವಾಗಿದೆ.
ಲಾಭಾಂಶ ವಿಚಾರ ಅಂಬುಜಾ ಸೀಮೆಂಟ್ಸ್ ಶೇ 110 (ಮು.ಬೆ. ರೂ2), ಆರತಿ ಡ್ರಗ್ಸ್ ಶೇ 30, ಆರತಿ ಇಂಡಸ್ಟ್ರೀಸ್ ಶೇ 25 (ಮು.ಬೆ. ರೂ5), ಅರವಿಂದೊ ಫಾರ್ಮ ಶೇ 100 (ಮು.ಬೆ. ರೂ1), ಎಸಿಸಿ ಶೇ 190, ಏಜೀಸ್ ಲಾಜಿಸ್ಟಿಕ್ಸ್ ಶೇ 17.5, ಕಾರ್ಬೊರೇಂಡಂ ಯೂನಿವರ್ಸಲ್ ಶೇ 50 (ಮು.ಬೆ. ರೂ1), ಬಿ.ಒ.ಸಿ. ಶೇ 15, ಡಿಐಸಿ ಶೇ 40, ಜಿ.ಎಂ.ಎಂ. ಫೌಡ್ಲರ್ ಶೇ 35 (ಮು.ಬೆ. ರೂ2), ಜಿ.ಇ. ಶಿಪ್ಪಿಂಗ್ ಶೇ 30.
ಹೀಲಿಯೋಸ್ ಅಂಡ್ ಮೆಥೆಸನ್ ಶೇ 18 ಹನಿವೆಲ್ ಆಟೋ ಮೆಷನ್ ಶೇ 100, ಇಂಡಿಯಾ ನಿಪ್ಪಾನ್ ಎಲೆಕ್ಟ್ರಿಕಲ್ಸ್ ಶೇ 40, ಜೆ.ಎಂ. ಫೈನಾನ್ಶಿಯಲ್ಸ್ ಶೇ 40 (ಮು.ಬೆ. ರೂ 1), ಎಂಒಐಎಲ್ ಶೇ 20, ಕೆಪಿಆರ್ ಮಿಲ್ಸ್ ಶೇ 30, ಆರ್ಬಿಟ್ ಎಕ್ಸ್‌ಪೋರ್ಟ್ಸ್ ಶೇ 15, ಪೇಪರ್ ಪ್ರಾಡಕ್ಟ್ಸ್ ಶೇ 26, ರಾಣೆ ಹೋಲ್ಡಿಂಗ್ಸ್ ಶೇ 35, ಸುಂದರಂ ಕ್ಲೇಟನ್ ಶೇ 180 (ಮು.ಬೆ. ರೂ5), ಸುಂದರಂ ಫೈನಾನ್ಸ್ ಶೇ 45.
ಪ್ರೋತ್ಸಾಹ ಧನ
ಹೊಸದಾಗಿ 9 ರಂದು ಪ್ರಾರಂಭವಾಗಲಿರುವ ಎಂ.ಸಿ.ಎಕ್ಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ಆರಂಭಿಸಲು ಗ್ರಾಹಕರ ನೋಂದಾವಣೆಗೆ ಪ್ರೋತ್ಸಾಹ ಧನವನ್ನು ಪ್ರಕಟಿಸಲಿದೆ ಎಂದು ಪ್ರಮುಖ ಮಾಧ್ಯಮದಲ್ಲಿ ಪ್ರಕಟವಾಗಿದೆ. ಪ್ರತಿ 100 ರಿಂದ 999 ಗ್ರಾಹಕ ನೋಂದಾವಣೆಗೆ ರೂ10 ಸಾವಿರ, ಹಾಗೂ 1000 ದಿಂದ 4999 ಗ್ರಾಹಕ ನೋಂದಾವಣೆಗೆ ರೂ 25 ಸಾವಿರ, 5000 ದಿಂದ 7499ರ ವರೆಗೆ ರೂ 50 ಸಾವಿರ ಹೀಗೆ ವಿವಿಧ ಹಂತಗಳ ಪ್ರೋತ್ಸಾಹ ಧನ ನೀಡಿ ಬ್ರೋಕರ್‌ಗಳಿಗೆ ಗ್ರಾಹಕರನ್ನು ನೋಂದಾಯಿಸಿಕೊಳ್ಳುವುದು ಸಮಂಜಸವಲ್ಲ.
ಈ ಹೊಸ ಎಕ್ಸ್‌ಚೆಂಜ್ ಕಾರ್ಯಾರಂಭಕ್ಕೆ ಇಂತಹ ಕ್ರಮಕ್ಕೆ ಮುಂದಾಗಿರುವುದು ಸೇವೆಗಿಂತ ಸ್ಪರ್ಧೆಗೆ ಹೆಚ್ಚಿನ ಆದ್ಯತೆ ನೀಡಿರುವಂತಿದೆ. ಹೂಡಿಕೆದರರು ಪೂರ್ಣವಾಗಿ ಅರಿತು ನಂತರ ನೋಂದಾವಣೆಗೆ ನಿರ್ಧರಿಸುವುದು ಉತ್ತಮ.
ವಾರದ ಪ್ರಶ್ನೆ
ಸ್ಟ್ರೈಡ್ಸ್ ಆರ್ಕೊಲ್ಯಾಬ್ ಕಂಪೆನಿಯ ಷೇರನ್ನು ರೂ 950ರಲ್ಲಿ ಕೊಂಡಿದ್ದೇನೆ. ಫೆ. 7 ರಂದು ಷೇರಿನ ಬೆಲೆಯು ಅತೀವ ಕುಸಿತ ಕಂಡಿದೆ. ಈ ಬಗ್ಗೆ ದಯವಿಟ್ಟು ತಿಳಿಸಿರಿ. ಹೂಡಿಕೆ ಮುಂದುವರೆಸಬಹುದೆ?
ಉತ್ತರ: ಈ ಕಂಪೆನಿಯು ಫಾರ್ಮಾ ವಲಯದ, ಬಿ.ಎಸ್.ಇ. - 200ರ ಸೂಚ್ಯಂಕದಲ್ಲಿ `ಎ' ಗುಂಪಿನಲ್ಲಿ ವಹಿವಾಟಾಗುತ್ತಿರುವ ಕಂಪೆನಿಯಾಗಿದೆ. ಈ ಕಂಪೆನಿಯು ವಹಿವಾಟುದಾರರ ಅಭಿಮಾನಿ ಕಂಪೆನಿಯಾಗಿದೆ. ಹೂಡಿಕೆಯ ದೃಷ್ಟಿಯಿಂದ ಈ ಕಂಪೆನಿಯಿಂದ ಲಭ್ಯವಾಗುತ್ತಿರುವ ಕಾರ್ಪೊರೇಟ್ ಫಲಗಳು ನಿರ್ಲಕ್ಷದ ಮಟ್ಟದ್ದಾಗಿದೆ. ಹಿಂದಿನ ವರ್ಷ ಪ್ರತಿ ಷೇರಿಗೆ ರೂ 2 ರಂತೆ ಲಾಭಾಂಶ ವಿತರಿಸಿದೆ ಅಂದರೆ ಈ ಷೇರಿಗೆ ವಹಿವಾಟಿನ ದೃಷ್ಠಿಯಿಂದ ಮಾತ್ರ ಮಾನ್ಯತೆ ನೀಡಬಹುದು.
ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಈ ಷೇರಿನ ಬೆಲೆಯು ರೂ515ರ ಸಮೀಪದಿಂದ ಸೆಪ್ಟೆಂಬರ್ ತಿಂಗಳವರೆಗೂ ಏಕಮುಖ ಏರಿಕೆಯಿಂದ ರೂ 900ನ್ನು ದಾಟಿದೆ. ನವೆಂಬರ್ ತಿಂಗಳ ರೂ830ರ ಹಂತದಿಂದ ಡಿಸೆಂಬರ್‌ನಲ್ಲಿ ರೂ1200ನ್ನು ದಾಟಿತು. ಇಷ್ಟು ಕ್ಷಿಪ್ರಗತಿಯಲ್ಲಿ ಏರಿಕೆ ಕಂಡಿರುವುದು ಕಂಪೆನಿಯ ಆಂತರಿಕ ಸಾಧನೆಯಿಂದಲ್ಲ.
ಕೇವಲ ಬಾಹ್ಯಕಾರಣದಿಂದಾಗಿ ಮಾತ್ರ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ58.79 ಕೋಟಿ ಬಂಡವಾಳದಿಂದ ರೂ 30 ಕೋಟಿ ಲಾಭಗಳಿಸಿದೆ. ಅದರ ಹಿಂದಿನ ತ್ರೈಮಾಸಿಕದಲ್ಲಿ ಕಂಪೆನಿಯು ನಷ್ಟದಲ್ಲಿತ್ತು. ಗುರುವಾರದಂದು ಷೇರಿನ ಬೆಲೆಯು ದಿನದ ಮಧ್ಯಂತರದಲ್ಲಿ ರೂ1050 ರಿಂದ ಕುಸಿದ ರೀತಿ ಎಂತಹ ವಿಶ್ಲೇಷಕರನ್ನು ದಿಗ್ಭ್ರಮೆಗೊಳಿಸುವಂತಿತ್ತು.
ಕೇವಲ ಒಂದೆರಡು ನಿಮಿಷಗಳಲ್ಲಿ ರೂ 970ರ ಹಂತದಿಂದ ರೂ865ಕ್ಕೆ ಭಾರಿ ಸಂಖ್ಯಾ ಗಾತ್ರದಿಂದ ಇಳಿಕೆ ಕಂಡಿತು. ಇದಕ್ಕೆ ಕಾರಣವಾಗಿ ಕಂಪೆನಿಯು ತನ್ನ ಏಜಿಲಾ ಸ್ಪೆಷಲಿಟೀಸ್ ಎಂಬ ಔಷಧಿ ತಯಾರಿಕಾ ಘಟಕವನ್ನು ಫೈಜರ್ ಸಂಸ್ಥೆಗೆ ಮಾರಾಟ ಮಾಡಲಿರುವ ಪ್ರಕ್ರಿಯೆಯಲ್ಲಿ ಮೌಲೀಕರಣದ ವಿಷಯದಲ್ಲಿ ಅಡಚಣೆಯಾಗಿದೆ ಎಂಬುದಾಗಿದೆ ಎಂಬ ದೃಢೀಕರಿಸಲಾರದ ಸುದ್ದಿಯಾಗಿದೆ.
ಒಟ್ಟಿನಲ್ಲಿ ಈಗಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರು ಉತ್ತಮ ಕಂಪೆನಿ ಎಂದು ಹೂಡಿಕೆ ಮಾಡಿದರೂ ಅನಿರೀಕ್ಷಿತ ರೀತಿಯ ಲಾಭ ಬಂದಾಗ ನಗದೀಕರಿಸಿಕೊಳ್ಳುವುದು ಅತ್ಯವಶ್ಯಕ ಪರಿಸ್ಥಿತಿಯು ಪಲ್ಲಟಗೊಂಡಾಗ ಉಂಟಾಗಬಹುದಾದ ಹಾನಿ ಅಪಾರವೆಂಬುದಕ್ಕೆ ಇದು ಉತ್ತಮ ಉದಾಹರಣೆ. ಈ ರೀತಿಯ ಕುಸಿತದಿಂದ ಚೇತರಿಕೆ ಕಾಣುವುದು ಬಹಳ ವಿರಳ.
ಷೇರಿನ ಬೆಲೆಯು ಏರಿಕೆ ಕಂಡಾಗ ಹೊರಬಂದು ಮತ್ತೊಮ್ಮೆ ಕುಸಿತ ಕಂಡಾಗ ಕೊಳ್ಳಬಹುದು. ಈ ಕಂಪೆನಿಯ ಮೂರನೇ ತ್ರೈಮಾಸಿಕ ಫಲಿತಾಂಶ ಹೊರಬರಬೇಕಿದ್ದು, ಪ್ರಕಟವಾದ ನಂತರ ಸಾಧನೆ ಆಧಾರಿತ ಏರಿಳಿತ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.