ADVERTISEMENT

ಲಾಭ ಮಾಡಿಕೊಳ್ಳಲು ಹತ್ತಾರು ಅವಕಾಶ

ಕೆ.ಜಿ ಕೃಪಾಲ್
Published 20 ಮಾರ್ಚ್ 2016, 19:38 IST
Last Updated 20 ಮಾರ್ಚ್ 2016, 19:38 IST

ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಮರೆತು ಬಿಟ್ಟಲ್ಲಿ ಉತ್ತಮ ಲಾಭ ಗಳಿಸಬಹುದು ಎಂಬ ಅಭಿಪ್ರಾಯ ತುಂಬ ಹಳೆಯದು. ಸದ್ಯದ ಸಂದರ್ಭದಲ್ಲಿ  ಇದು ಹೆಚ್ಚು ಪ್ರಸ್ತುತವಾಗಲಾರದು. ಈಗ ಷೇರುಪೇಟೆಗಳ ವಹಿವಾಟು  ಸಾಕಷ್ಟು ಏರಿಳಿತ ಕಾಣುತ್ತಿದ್ದು ಎಲ್ಲರಿಗೂ ಲಾಭ ಮಾಡಿಕೊಳ್ಳಲು ಹತ್ತಾರು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ. 

ಹೂಡಿಕೆಯ ಮಿತಿಯನ್ನು ಅವಧಿಗೆ ಗೊತ್ತುಪಡಿಸುವುದಕ್ಕಿಂತ ಲಾಭ ಗಳಿಕೆಗೆ ಮಿತಿಗೊಳಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.  ಇಂತಹ ನಡವಳಿಕೆಗೆ ಉತ್ತಮ ಉದಾಹರಣೆ ಇಲ್ಲಿದೆ. ಇಂಡಿಯಾ ಬುಲ್ಸ್  ಹೌಸಿಂಗ್ ಫೈನಾನ್ಸ್ ಕಂಪೆನಿಯು ಈ ಆರ್ಥಿಕ ವರ್ಷದಲ್ಲಿ ಐದು ಬಾರಿ ಪ್ರತಿ ಷೇರಿಗೆ ₹9 ರಂತೆ ಲಾಭಾಂಶ ಘೋಷಿಸಿ, ನಾಲ್ಕು ಬಾರಿ ವಿತರಿಸಿದೆ. 

ಐದನೇ ಬಾರಿ ವಿತರಿಸಲು ಮಾರ್ಚ್ 21 ನಿಗದಿತ ದಿನವಾಗಿದೆ.  ನಾಲ್ಕನೇ ಬಾರಿ ₹ 9 ರ ಲಾಭಾಂಶ ವಿತರಿಸಲು ಫೆ.1 ನಿಗದಿತ ದಿನವಾಗಿತ್ತು. ತದನಂತರ ಷೇರಿನ ಬೆಲೆಯು ₹680 ಸಮೀಪದಿಂದ ₹551 ರವರೆಗೂ ಇಳಿಕೆ ಕಂಡು,   5 ನೇ ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಹೊರಬಂದ ನಂತರ ಷೇರಿನ ಬೆಲೆಯು ಪುಟಿದೆದ್ದು ಮತ್ತೊಮ್ಮೆ ₹670 ರ ಸಮೀಪಕ್ಕೆ ಬಂದು ₹646 ರ ಸಮೀಪ ವಾರಾಂತ್ಯ ಕಂಡಿದೆ.  ಈ ಬೆಳವಣಿಗೆಯು ಷೇರುಪೇಟೆಯ ಬದಲಾವಣೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

ಇತ್ತೀಚೆಗಷ್ಟೆ ಪ್ರತಿ ಷೇರಿಗೆ ₹9.50 ರಂತೆ ಲಾಭಾಂಶ ನೀಡಿದ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ ಕಂಪೆನಿಯು 19 ರಂದು ಮತ್ತೊಮ್ಮೆ ಲಾಭಾಂಶ ನೀಡುವ ಕಾರ್ಯಸೂಚಿ ಪ್ರಕಟಿಸಿದೆ.

ಸಾಸ್ಕಿನ್ ಕಮ್ಯುನಿಕೇಶನ್ ಕಂಪೆನಿ ಮತ್ತು ಸ್ಪ್ರೆಡ್ ಟ್ರಂ ಕಮ್ಯುನಿಕೇಶನ್ ಇಂಕ್ ಕಂಪೆನಿಗಳ ನಡುವಿನ ತಗಾದೆಯು ರಾಜಿ ಸೂತ್ರದೊಂದಿಗೆ ಕೊನೆಗೊಂಡಿದ್ದು, ಈ ರಾಜಿ ಸೂತ್ರದ ಪ್ರಕಾರ ಸಾಸ್ಕಿನ್ ಕಮ್ಯುನಿಕೇಶನ್ ಕಂಪೆನಿಯು 45 ದಶ ಲಕ್ಷ  ಡಾಲರ್‌ಗಳ (₹ 306 ಕೋಟಿ) ಪರಿಹಾರ ಪಡೆಯಲಿರುವ ಕಾರಣ ಷೇರಿನ ಬೆಲೆಯು ₹324 ರ ಸಮೀಪದಿಂದ ₹430 ರವರೆಗೂ ಈ ವಾರ ಜಿಗಿತ ಕಂಡು ನಂತರ ಸ್ವಲ್ಪ ಸ್ಥಿರತೆಗೊಂಡಿತು. 

ಸೋನಾಟಾ ಸಾಫ್ಟ್‌ವೇರ್ ಕಂಪೆನಿಯು ಪ್ರತಿ ಷೇರಿಗೆ ₹5.50 ರ ಲಾಭಾಂಶ ಪ್ರಕಟಿಸಲು ಕಳೆದವಾರದ 17ರಂದು ನಿಗದಿತ ದಿನಾಂಕವಾಗಿತ್ತು.  15  ರಂದು ಷೇರಿನಬೆಲೆಯು  ₹172 ರ ಗರಿಷ್ಠದಿಂದ ಕುಸಿದು 17 ರಂದು ₹151 ರವರೆಗೂ ಇಳಿಕೆ ಕಂಡಿತು. ಕೇವಲ ₹5.50 ರ ಲಾಭಾಂಶಕ್ಕೆ ಸುಮಾರು ₹20 ರಷ್ಟು ಕುಸಿತ ಕಾಣಲು ಮುಖ್ಯ ಕಾರಣ ಈ ಷೇರಿನ ಬೆಲೆಯು ಕಳೆದ ಒಂದು ತಿಂಗಳಲ್ಲಿ ₹126 ರಿಂದ ಏರಿಕೆ ಕಂಡಿರುವುದು ಹೆಚ್ಚಿನ ಪ್ರಮಾಣದ ಲಾಭದ ನಗದೀಕರಣವಾಗಿದೆ.

ಕ್ರಾಂಪ್ಟನ್ ಗ್ರೀವ್ಸ್ ಕಂಪೆನಿಯ ಗ್ರಾಹಕ ಬಳಕೆಯ ವಿಭಾಗವನ್ನು ಬೇರ್ಪಡಿಸಿದ  ಕಾರಣ  ಷೇರಿನ ಬೆಲೆಯು 15 ರಂದು,  ₹156 ರ ಸಮೀಪದಿಂದ ₹40.50 ರವರೆಗೂ ಕುಸಿದು ನಂತರ ಚೇತರಿಕೆಯಿಂದ ₹47 ರ ಸಮೀಪದಲ್ಲಿ ಸ್ಥಿರತೆ ಕಂಡು ಕೊಂಡಿತು.

ಫಾರ್ಮಾ ವಲಯದ ಲುಪಿನ್ ಕಂಪೆನಿಯ ಷೇರಿನ ಬೆಲೆಯು ಈ ವಾರ ಯುಎಸ್‌ಎಫ್‌ಡಿಎ ಯಿಂದ ಬಂದ ಎಚ್ಚರಿಕೆ ಪತ್ರದ ಕಾರಣ ₹1,874 ರ ಸಮೀಪದಿಂದ ₹1,535 ರವರೆಗೂ ಕುಸಿದಿದೆ. ಇದೇ ಕಂಪೆನಿಯ ಷೇರು ಇತ್ತೀಚೆಗಷ್ಟೇ ಕಂಪೆನಿಯೊಂದನ್ನು ಸ್ವಾಧೀನಪಡಿಸಿಕೊಂಡ ಕಾರಣ ಏರಿಕೆಯನ್ನು ಕಂಡಿತ್ತು ಎಂಬುದು ಗಮನಾರ್ಹ.

ಒಟ್ಟಾರೆ ಸಂವೇದಿ ಸೂಚ್ಯಂಕವು ಈ ವಾರ 234 ಅಂಶಗಳ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 29 ಹಾಗೂ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು 30 ಅಂಶಗಳ ಏರಿಕೆ ಕಾಣುವಂತಾಯಿತು. ವಿದೇಶಿ ವಿತ್ತೀಯ ಸಂಸ್ಥೆಗಳು ನಿವ್ವಳ ₹4,064ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,359 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.  ಪೇಟೆಯ ಬಂಡವಾಳ  ಮೌಲ್ಯವು ಕಳೆದವಾರದ ₹91.82 ಲಕ್ಷ ಕೋಟಿ ಕೋಟಿ ಮೌಲ್ಯದಿಂದ ₹92.74 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಲಾಭಾಂಶ ವಿಚಾರ: ಕಾಸ್ಮೋ ಫಿಲಂಸ್  ₹10,  ಸನ್ ಟಿ ವಿ ನೆಟ್ ವರ್ಕ್ ಪ್ರತಿ ಷೇರಿಗೆ ₹7.50, ಹಿಂದುಜಾ ವೆಂಚರ್ಸ್ ಪ್ರತಿ ಷೇರಿಗೆ ₹17.50, ನೀಲಾಮಲೈ ಆಗ್ರೋ ₹20 (ನಿ.ದಿ.22), ಕರೂರ್ ವೈಶ್ಯ ಬ್ಯಾಂಕ್ ಪ್ರತಿ ಷೇರಿಗೆ ₹10, ಸುಂದರಂ ಕ್ಲೇಟನ್ ಪ್ರತಿ ಷೇರಿಗೆ ₹20,  ಸಿಯಾಟ್ ಪ್ರತಿ ಷೇರಿಗೆ ₹11.50, ಸ್ಯಾಸ್ಕಿನ್ ಕಮ್ಯುನಿಕೇಷನ್ ಪ್ರತಿ ಷೇರಿಗೆ ₹29, 

ಹೊಸ ಷೇರು: ಭಾರತ ವೈರ್ ರೋಪ್ಸ್ ಲಿ. ಕಂಪೆನಿಯ ₹70ಕೋಟಿ ಗಾತ್ರದ ಸಾರ್ವಜನಿಕ ವಿತರಣೆಯು 18 ರಿಂದ ಆರಂಭವಾಗಿದೆ. ಪ್ರತಿ ಷೇರಿಗೆ ₹40 ರಿಂದ 45 ರ ಅಂತರದಲ್ಲಿ, 300 ಷೇರುಗಳ ಗುಣಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಮಾರ್ಚ್ 22 ಕೊನೆಯದಿನವಾಗಿದೆ.
ಇನ್ಫಿ ಬೀಮ್ ಇನ್ಕಾರ್ಪೋರೇಷನ್ ಲಿಮಿಟೆಡ್ ಕಂಪೆನಿಯ ₹450 ಕೋಟಿ ಗಾತ್ರದ ಸಾರ್ವಜನಿಕ ವಿತರಣೆಯು 21 ರಿಂದ ಆರಂಭವಾಗಲಿದ್ದು ಮಾರ್ಚ್ 23ರಂದು ಕೊನೆಗೊಳ್ಳಲಿದೆ.  ವಿತರಣೆಯು ₹360 ರಿಂದ ₹422 ರ ಅಂತರದಲ್ಲಿದ್ದು ಅರ್ಜಿಯನ್ನು 34 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಒಟಿಸಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಫ್ರೆಡನ್ ಫಾರ್ಮಾಸ್ಯುಟಿಕಲ್ಸ್  ಲಿ. ಕಂಪೆನಿಯು ಬಾಂಬೆ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ 21 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.

ಮುಖಬೆಲೆ ಸೀಳಿಕೆ: ವಿವಿಮೆಡ್ ಲ್ಯಾಬ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಏಪ್ರಿಲ್ 8 ನಿಗದಿತ ದಿನವಾಗಿದೆ.

ಲಕ್ಸ್ ಇಂಡಸ್ಟ್ರೀಸ್  ಕಂಪೆನಿಯು ಏಪ್ರಿಲ್ 12 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

ವಾರದ ವಿಶೇಷ
ಷೇರುಪೇಟೆಯು ಒಂದು ರೀತಿಯ ಜೂಜಾಟ, ಇದು ವ್ಯಕ್ತಿಯು ನಡೆಸುವ ವ್ಯವಹಾರಿಕ ರೀತಿಯನ್ನವಲಂಭಿಸಿದೆ. ಹೂಡಿಕೆಯಾಗಿ ಕೊಂಡ ಷೇರಿಗೆ ಪೂರ್ಣ ಹಣವನ್ನು ಪಾವತಿಸಿ ತನ್ನ ಖಾತೆಗೆ ಷೇರುಗಳನ್ನು ವರ್ಗಾಯಿಸಿಕೊಂಡಿದ್ದಲ್ಲಿ ಅದು ಜೂಜಾಟವೆಂದಿನಿ

ಸದು. ಕಾರಣ ಇಲ್ಲಿ ಹೂಡಿಕೆ ಮಾಡಿದ ಕಂಪೆನಿಗಳು ದಿನ ನಿತ್ಯದ ಚಟುವಟಿಕೆಯಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುತ್ತವೆ. 
ಉತ್ತಮವಾದ, ಚಟುವಟಿಕೆ ಭರಿತ, ಕಾರ್ಯಸಾಧನೆಯ, ಅಗ್ರಮಾನ್ಯ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಷೇರಿನ ದರಗಳು ಏರಿಳಿತ ಪ್ರದರ್ಶಿಸಬಹುದು. ಆದರೆ ಹೂಡಿದ ಬಂಡವಾಳ ಸಂಪೂರ್ಣವಾಗಿ ನಶಿಸುವುದಿಲ್ಲ.

ಜೊತೆಗೆ ಹೂಡಿಕೆಯನ್ನು ಮುಂದುವರೆಸಿಕೊಂಡು ಹೋದರೆ ಕಂಪೆನಿಯು ನೀಡುವ ಟ್ಯಾಕ್ಸ್ ಫ್ರೀ  ಡಿವಿಡೆಂಡ್‌ಗಳು ದೊರೆಯುತ್ತವೆ.  ಹೂಡಿಕೆಯು ಕಳಪೆ ಷೇರುಗಳು, ಅಥವಾ ಕೆಳಮಧ್ಯಮ ಶ್ರೇಣಿಯ ಮತ್ತು ಅಲ್ಪ ಮೌಲ್ಯದ ಷೇರುಗಳಲ್ಲಿಯಾದರೆ ಅಪಾಯದ ಮಟ್ಟ ಹೆಚ್ಚಿರುತ್ತದೆ.  ಹಲವಾರು ಬಾರಿ ಕಳಪೆ ಷೇರುಗಳು, ಅಥವಾ ಕೆಳಮಧ್ಯಮ ಶ್ರೇಣಿಯ ಮತ್ತು ಅಲ್ಪ ಮೌಲ್ಯದ ಷೇರುಗಳು ದಿನೇ ದಿನೇ ಕುಸಿತ ಕಂಡು ಸ್ಟಾಕ್ ಎಕ್ಸ್‌ಚೇಂಜ್ ಗಳ ಲೀಸ್ಟಿಂಗ್‌ನಿಂದ ಸಸ್ಪೆಂಡ್ ಆಗಬಹುದು.  ಇಂತಹ ಕಂಪೆನಿಗಳು ನಂತರದ ದಿನಗಳಲ್ಲಿ ತಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪೇಟೆ ಮರುಪ್ರವೇಶಿಸಿ ಹೂಡಿಕೆದಾರರಿಗೆ ಲಾಭ ತಂದುಕೊಟ್ಟ ನೂರಾರು ಉದಾಹರಣೆಗಳಿವೆ.

ತೀರಾ ಇತ್ತೀಚಿನ ಉದಾಹರಣೆ ಎಂದರೆ 2002 ರ ಜನವರಿಯಲ್ಲಿ ಸಸ್ಪೆಂಡ್ ಆಗಿದ್ದಂತಹ ಎವರೆಸ್ಟ್ ಆರ್ಗ್ಯಾನಿಕ್ಸ್ ಕಂಪೆನಿಯು ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮಾರ್ಚ್ 11 ರಿಂದ ಟ್ರೇಡಿಂಗ್‌ಗೆ ಬಿಡುಗಡೆಯಾಗಿದೆ. ಹಾಗೆಯೇ 2013 ರ ಜನವರಿಯಿಂದ ಸಸ್ಪೆಂಡ್ ಆಗಿದ್ದಂತಹ ಟೆಲಿಕನಾರ್ ಗ್ಲೋಬಲ್ ಲಿ. ಲೀಸ್ಟಿಂಗ್ ನಿಯಮಗಳನ್ನು ಸರಿಪಡಿಸಿಕೋಂಡು ಮಾರ್ಚ್ 17  ರಿಂದ  ಟ್ರೇಡಿಂಗ್ ಗೆ ಬಿಡುಗಡೆಯಾಗಿದೆ. ಸಂಪೂರ್ಣವಾಗಿ ಸ್ಥಗಿತಗೊಂಡಿದ್ದಂತಹ ಹೂಡಿಕೆಗೆ ಪುನರ್ಜೀವ ಬರುವುದು  ಷೇರುಪೇಟೆಯಲ್ಲಿ ಸಾಧ್ಯ.  ಇಂತಹವು ಜೂಜಾಟದಲ್ಲಿ ಸಾಧ್ಯವಿಲ್ಲ.

ಷೇರುಪೇಟೆಯ  ಚಟುವಟಿಕೆಗೆ ಹೆಚ್ಚಿನ ಹಣವಿರಬೇಕು, ಈ ಹಿಂದೆ ಡಿ -ಮಟೀರಿಯಲೈಸೆಷನ್ ವಿಧಾನ ಆರಂಭವಾಗುವುದಕ್ಕೆ ಮುಂಚೆ ಯಾವುದಾದರೂ ಉತ್ತಮ ಕಂಪೆನಿಗಳಲ್ಲಿ ಇನ್ವೆಸ್ಟ್ ಮಾಡಬೇಕೆಂದರೆ ಹೆಚ್ಚಿನ ಹಣದ ಅವಶ್ಯಕತೆಯಿತ್ತು. ಆಗಿನ ದಿನಗಳಲ್ಲಿ ಭೌತಿಕ ಸರ್ಟಿಫಿಕೆಟ್‌ಗಳಲ್ಲಿ ವ್ಯವಹಾರ ನಡೆಯುತ್ತಿತ್ತು ಹಾಗಾಗಿ ಟ್ರೇಡಬಲ್ ಲಾಟ್ ಅಂತ 50, 100  ಷೇರುಗಳಲ್ಲಿ ವ್ಯವಹರಿಸಬೇಕಾಗಿತ್ತು. 

ಈಗ ಡಿ -ಮಟೀರಿಯಲೈಸ್ ರೂಪದಲ್ಲಿ ಟ್ರೇಡ್ ನಡೆಸುವುದರಿಂದ ಕನಿಷ್ಠ ಒಂದು ಷೇರಿನ ಗುಣಕಗಳಲ್ಲಿ ಟ್ರೇಡ್ ನಡೆಸಬಹು
ದಾದ್ದರಿಂದ ಇದು ಜನಸಾಮಾನ್ಯರಿಗೂ ಎಟುಕುವಂತಿದೆ.  ಆದರೆ ಟ್ರೇಡ್ ನಡೆಸುವ ಮುನ್ನ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಕಂಪೆನಿಯ ಬಗ್ಗೆ, ಆ ಕಂಪೆನಿಯ ಷೇರಿನ ಏರಿಳಿತಗಳ ಬಗ್ಗೆ ಅರಿತು ಮಾಡಿದಲ್ಲಿ ಸ್ವಲ್ಪ ಮಟ್ಟಿನ ಸುರಕ್ಷತೆ ಸಾಧ್ಯ.

ಒಟ್ಟಿನಲ್ಲಿ ಷೇರುಪೇಟೆಯು ಎಲ್ಲಾ ವರ್ಗದವರಿಗೂ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಸರಿಯಾದ ತಿಳುವಳಿಕೆ, ಮಾರ್ಗದರ್ಶನ, ಅಧ್ಯಯನ, ಅಪಾಯದ ಅರಿವು, ನಿರ್ಧರಿಸುವ ಚಿತ್ತ, ಹೂಡಿಕೆಯ ಮೊತ್ತ ಗಳಿದ್ದಲ್ಲಿ ವಹಿವಾಟು ನಡೆಸುವುದು ಸುಲಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT