ADVERTISEMENT

ಷೇರುಪೇಟೆ: ಅಂಕಿ ಅಂಶಗಳದ್ದೇ ಆಟ

ಕೆ.ಜಿ ಕೃಪಾಲ್
Published 14 ಅಕ್ಟೋಬರ್ 2013, 19:30 IST
Last Updated 14 ಅಕ್ಟೋಬರ್ 2013, 19:30 IST

ಷೇರು ಪೇಟೆಯು ಇತ್ತೀಚಿನ ದಿನಗ­ಳಲ್ಲಿ ಅಂಕಿ – ಅಂಶಗಳ ತಾಳಕ್ಕೆ ಕುಣಿ­ಯುತ್ತಿ­ರುವುದು ಸ್ವಾಭಾವಿ­ಕವಾಗಿದೆ. ಅಂಕಿ– ಅಂಶಗಳು ಅಂದರೆ ಹಣದುಬ್ಬರ, ಬ್ಯಾಂಕ್‌ ಬಡ್ಡಿ ದರ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ, ಜೆ.ಡಿ.ಪಿ. ಬೆಳವಣಿಗೆ, ಚಾಲ್ತಿ ಖಾತೆ ಕೊರತೆ, ವಾಣಿಜ್ಯ ವಹಿವಾಟು ಕೊರತೆ ಮುಂತಾದ ಅಂಶಗಳು ಪ್ರಕಟವಾಗದೇ ಇದ್ದಲ್ಲಿ ಪೇಟೆಯು ನೀರಸಮಯ­ವಾಗುತ್ತದೆ.

ಒಂದು ರೀತಿಯಲ್ಲಿ ಅಂಕಿ – ಅಂಶಗಳು ಷೇರುಪೇಟೆಯ ಏರಿಳಿತಕ್ಕೆ ಉತ್ತೇಜನಕಾರಿ ಆಗಿವೆ. ಕಳೆದ ವಾರದಲ್ಲಿ ಶುಕ್ರವಾರದವರೆಗೂ (ಸೋಮವಾರ ಹೊರತುಪಡಿಸಿ) ಸಂವೇದಿ ಸೂಚ್ಯಂಕ ಏರಿಕೆ ಕಂಡು ವಾರ್ಷಿಕ ಗರಿಷ್ಠ ಹಂತ­ವಾದ ಸೆಪ್ಟೆಂಬರ್‌ 19ರ 20,739 ಅಂಶಗಳ ಸಮೀಪ ಅಂದರೆ 20,528 ಅಂಶಗಳ ಸಮೀಪ ಕೊನೆಗೊಂಡಿತು. ಸೋಮವಾರ ನೂತನ ದಾಖಲೆ ನಿಮಿರ್ಸ­ಬಹುದೆಂಬ ಭಾವನೆಯನ್ನು ವಹಿವಾಟು ಅಂತ್ಯದ ಸಮಯದಲ್ಲಿ ಮೂಡಿಸಿತು.

ಕಳೆದ ಎರಡು ವಾರಗಳಲ್ಲಿ ಸುಮಾರು 800 ಅಂಶಗಳಷ್ಟು ಸೂಚ್ಯಂಕ ಏರಿಕೆ ಕಂಡಿದೆ. ಆದರೆ, ಶುಕ್ರವಾರ ಸಂಜೆ ಪ್ರಕಟವಾದ ಆಗಸ್ಟ್ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕವು (ಐಐಪಿ) ಜುಲೈ ತಿಂಗಳಿನ ಶೇ 2.8 ರಿಂದ ಶೇ 0.6ಕ್ಕೆ ಕುಸಿದಿರುವ ಅಂಶವು ಪೇಟೆಗೆ ಪ್ರತಿಕೂಲವಾಗಿ ಪರಿಗಣಿಸಬ­ಹುದು. ಈ ಅಂಶದಿಂದ ಗಾಬರಿಯಾಗಬೇಕಿಲ್ಲ. ಆ ತಿಂಗಳಲ್ಲಿ ರೂಪಾಯಿಯ ಬೆಲೆಯು ಡಾಲರ್‌ ವಿರುದ್ಧ 69ರ ಸಮೀಪಕ್ಕೆ ಕುಸಿದು ಆತಂಕ ಮೂಡಿಸಿ ವಾಣಿಜ್ಯ ವಲಯದಲ್ಲಿ ಮಾತ್ರವಲ್ಲದೆ ಎಲ್ಲಾ ವಲಯಗಳನ್ನೂ ತಲ್ಲಣಗೊಳಿಸಿತ್ತು. ನಂತರದ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಂಡು ಈಗ ರೂಪಾಯಿಯ ರೂ61ರ ಸಮೀಪಕ್ಕೆ ಬಂದಿದೆ.

ಸುಮಾರು 2 ತಿಂಗಳ ಹಿಂದಿನ ಅಂಕಿ – ಅಂಶಗಳಿಂದ ಪೇಟೆಯ ಆರಂಭದಲ್ಲಿ ಇಳಿಕೆ ಕಂಡರೂ ಚೇತರಿಕೆ ಕಾಣುವ ಸಾಧ್ಯತೆ ಇದೆ. ಷೇರು ಪೇಟೆಯು ಸ್ವಲ್ಪ ಚುರುಕಾಗುತ್ತಿರುವ ಲಕ್ಷಣ ಹಾಗೂ ವಾಣಿಜ್ಯ ವಹಿವಾಟು ಕೊರತೆಯು ಕ್ಷೀಣಿಸುತ್ತಿರುವುದು, ಚಿನ್ನ – ಬೆಳ್ಳಿ ಆಮದು ತಗ್ಗಿರುವುದು, ರೂಪಾಯಿಯ ಮೌಲ್ಯ ಚೇತರಿಕೆ ಕಾಣುತ್ತಿರುವುದು ಸಕಾರಾತ್ಮಕ ಅಂಶಗಳು. ಕಳೆದ ವಾರಾಂತ್ಯದ ಎರಡು ದಿನಗಳಲ್ಲಿ  ಷೇರುಪೇಟೆ ವಹಿವಾಟು ಅಂತ್ಯಗೊಂಡ­ನಂತರ ರೂಪಾಯಿ ಮೌಲ್ಯ ಚೇತರಿಕೆ ಕಂಡಿವುದು ವಿಶೇಷ.  ಇದು ಮರುದಿನದ ಚಟುವಟಿಕೆ ಚುರುಕಾಗಲು ಕಾರಣವಾ­ಗುತ್ತಿದೆ.

ದೇಶದ ಜಿಡಿಪಿ ಈ ವರ್ಷ ಶೇ 5 ರಿಂದ 5–5ರಷ್ಟಿರುತ್ತದೆಂಬ ಹಣಕಾಸು ಸಚಿವರ ಹೇಳಿಕೆ, ಬೆಳವಣಿಗೆಯು ಚುರುಕಾ­ಗುತ್ತಿರುವುದರಿಂದ ಅಂತರ­ರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯುವ ಅವಶ್ಯಕತೆ ಇಲ್ಲವೆಂಬ ಆರ್.ಬಿ.ಐ. ಗೌರ್ನರ್‌ ಅಭಿಪ್ರಾಯ ಪೇಟೆಗೆ ಬಲ ತುಂಬಿವೆ. ತಾಂತ್ರಿಕ ವಲಯದ ಅಗ್ರಮಾನ್ಯ ಕಂಪೆನಿ ಇನ್ಫೊಸಿಸ್‌ ಸಾಧನೆ, ಪೇಟೆ ನಿಯಂತ್ರಕ ಸೆಬಿ, ರಿಯಲ್‌ ಎಸ್ಟೇಟ್‌ ಹೂಡಿಕೆ ಟ್ರಸ್ಟ್‌­ಗಳಿಗೆ ಪುನಃ ಅವಕಾಶ ಕಲ್ಪಿಸಿರುವ ಕ್ರಮ, ಹೆಚ್ಚುತ್ತಿರುವ ವಿದೇಶಿ  ವಿತ್ತೀಯ ಚಟುವಟಿಕೆ ಎಲ್ಲಕ್ಕೂ ಮಿಗಿಲಾಗಿ ಜನಸಾ­ಮಾನ್ಯರಲ್ಲಿ ಕೊಳ್ಳುವ ಶಕ್ತಿ ಬೆಳೆಸ­ಬೇಕೆಂಬ ಭಾವನೆ ಮುಂದಿನ ದಿನಗಳನ್ನು ಸಂತಸಗೊಳಿಸಬಹುದಾಗಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 612 ಅಂಶಗಳಷ್ಟು ಏರಿಕೆ ಕಂಡು 20 ಸಾವಿರದ ಗಡಿ ದಾಟಿ 20,528ರಲ್ಲಿ ಅಂತ್ಯಗೊಂಡಿತು. ಮಧ್ಯಮ ಶ್ರೇಣಿ ಸೂಚ್ಯಂಕವು 139 ಅಂಶ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 152 ಅಂಶ ಏರಿಕೆ ಕಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಭರ್ಜರಿ ರೂ2219 ಕೋಟಿ  ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ1823 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ65.04 ಲಕ್ಷ ಕೋಟಿಯಿಂದ  ರೂ66.18 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಹೊಸ ಷೇರಿನ ವಿಚಾರ
4ಅಹಮದಾಬಾದ್‌ ಮತ್ತು ಚೆನ್ನೈ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿ­ಕೊಂಡಿ­ರುವ ಹೈದರಾಬಾದ್‌ನ ತ್ರಿಮೂರ್ತಿ ಡ್ರಗ್ಸ್ ಅಂಡ್‌ ಫಾರ್ಮಾಸ್ಯುಟಿಕಲ್ಸ್ ಲಿ. ಕಂಪೆನಿಯ ರೂ10ರ ಮುಖ ಬೆಲೆಯ 81 ಲಕ್ಷ ಷೇರುಗಳು ಮುಂಬೈ ಷೇರು ವಿನಿಮಯ ಕೇಂದ್ರದ ‘ಬಿ’ ಗುಂಪಿನಲ್ಲಿ ಅಕ್ಟೋಬರ್‌ 14 ರಿಂದ ವಹಿವಾಟಾ­ಗಲಿವೆ.

4 ಸತ್ಕಾರ್‌ ಫಿನ್‌ಲೀಸ್‌ ಲಿಮಿಟೆಡ್‌ ದೆಹಲಿಯ ಎಸ್‌.ಎಂ.ಇ. ವಿಭಾಗದ ಕಂಪೆನಿಯಾಗಿದೆ. ಈ ಕಂಪೆನಿಯ 1.90 ಕೋಟಿ ಷೇರುಗಳ ಬಾಂಬೆ ಷೇರು ವಿನಿಮಯ ಕೇಂದ್ರದ ಎಂಟಿ ವಿಭಾಗದಲ್ಲಿ 11 ರಿಂದ ವಹಿವಾಟಾಗಲಿದೆ. ಈ ಕಂಪೆನಿ­ಯು ಪ್ರತಿ ಷೇರಿಗೆ 18 ರೂಪಾಯಿಗಳಂತೆ ಸಾರ್ವಜನಿಕ ವಿತರಣೆ ಮಾಡಿದ್ದ 8000 ಷೇರುಗಳು ವಹಿವಾಟಿನ ಗುಚ್ಚವಾಗಿದೆ.

ಲಾಭಾಂಶ ವಿಚಾರ
ಇನ್ಫೊಸಿಸ್‌ ಉತ್ತಮ ಸಾಧನೆ ಕಾರಣ ರೂ5ರ ಮುಖ ಬೆಲೆ ಷೇರಿನ ಮೇಲೆ ಪ್ರತಿ ಷೇರಿಗೆ ರೂ20 ರಂತೆ ಮಧ್ಯಂತರ ಲಾಭಾಂಶ ಪ್ರಕಟಿಸಿದೆ. ಹಿಂದಿನ ವರ್ಷ ರೂ15 ರಂತೆ ಲಾಭಾಂಶ ವಿತರಿಸಿತ್ತು. ಶುಕ್ರವಾರ ವಾರ್ಷಿಕ ಗರಿಷ್ಠ ದರ ತಲುಪಿತ್ತು.

ಬೋನಸ್‌ ಷೇರಿನ ವಿಚಾರ
2012ರ ಅಕ್ಟೋಬರ್‌ನಲ್ಲಿ ಪ್ರತಿ ಷೇರಿಗೆ ರೂ27 ರಂತೆ ಎಸ್‌.ಎಂ.ಇ. ವಿಭಾಗದಲ್ಲಿ, ಸಾರ್ವಜನಿಕ ವಿತರಣೆ ಮಾಡಿದ ಅನ್‌ಶೂಸ್‌ ಕಾಲಿಂಗ್ ಲಿ. ಕಂಪೆನಿಯು 16 ರಂದು ಬೋನಸ್‌ ಷೇರು ವಿತರಣೆ ಪರಿಶೀಲಿಸುವ ಕಾರ್ಯ­ಸೂಚಿ ಹೊಂದಿದೆ. ಈ ಷೇರು ‘ಎಂ’ ವಿಭಾಗದಲ್ಲಿ ವಹಿವಾಟಾಗುವುದರಿಂದ ವಹಿವಾಟಿನ ಗುಚ್ಚವು 4000 ಸಾವಿರ ಷೇರುಗಳಾಗಿರುತ್ತದೆ.

ಮುಖ ಬೆಲೆ ಸೀಳಿಕೆ ವಿಚಾರ
4ಸೆಂಟ್ರಾನ್‌ ಇಂಡಸ್ಟ್ರಿಯಲ್‌ ಅಲೈಯನ್ಸ್ ಲಿ. ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ. 1ಕ್ಕೆ ಸೀಳಲು ಅಕ್ಟೋಬರ್‌ 28 ನಿಗದಿತ ದಿನವಾಗಿದೆ.

4ಅತರ್ವ್‌ ಎಂಟರ್‌ ಪ್ರೈಸಸ್‌ ಲಿ. ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ. 1ಕ್ಕೆ ಸೀಳಲು 21ನೇ ಅಕ್ಟೋಬರ್‌ ನಿಗದಿತ ದಿನವಾಗಿದೆ.

ಹೂಡಿಕೆ ಮಿತಿ ಏರಿಕೆ
ಕರೂರು ವೈಶ್ಯ ಬ್ಯಾಂಕ್‌ನಲ್ಲಿ ವಿದೇಶಿ ಸಂಸ್ಥೆಗಳು ಶೇ 40 ರಷ್ಟು ಬಂಡವಾ­ಳದವರೆಗೂ ಹೂಡಿಕೆ ಮಾಡುವ ಅವಕಾಶಕ್ಕೆ ಷೇರುದಾರರು ಅಂಚೆ ಮತದಾನದ ಮೂಲಕ ಸಮ್ಮತಿಸಿದ್ದಾರೆ.

ಎಂ.ಸಿ.ಎಕ್ಸ್‌. ಸ್ಫಾಟ್‌ ಎಕ್ಸ್‌ಚೇಂಜ್‌
ಎಂ.ಸಿ.ಎಕ್ಸ್‌ – ಎಸ್‌ ಎಕ್ಸ್‌ನ ಪ್ರವರ್ತಕ ಕಂಪೆನಿಯಾದ ಫೈನಾನ್ಶಿ­ಯಲ್‌ ಟೆಕ್ನಾಲಜೀಸ್‌ನ ಮತ್ತೊಂದು ಸಂಸ್ಥೆ ನ್ಯಾಶನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌ನ ಹಗರಣದ ಕಾರಣ ಈ ಎಕ್ಸ್‌ಚೇಂಜ್‌ನ ಪ್ರವರ್ತಕರಾದ  ಜೆಗ್ನೇಶ್‌ ಷಾ ಮತ್ತು ಜೊಸೆಫ್‌ ಮಸ್ಸೆ ಅವರನ್ನು ನಿರ್ದೇಶಕ ಮಂಡಳಿಯಿಂದ ಹೊರಗಿಡಲಾಗಿದೆ.

ಎಂ.ಸಿ.ಎಕ್ಸ್‌ – ಎಸ್‌ ಎಕ್ಸ್‌ನಲ್ಲಿ ಬ್ಯಾಂಕ್‌ಗಳಾದ ಆಕ್ಸಿಸ್‌, ಆಂಧ್ರ, ಅಲಹಾಬಾದ್‌, ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡ, ಕಾರ್ಪೊರೇಷನ್‌ ಬ್ಯಾಂಕ್‌, ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಐಎಫ್‌ಸಿಐ ಮತ್ತು ಐಎಲ್‌ ಅಂಡ್‌ ಎಫ್‌ ಎಸ್‌ ಫೈನಾಶ್ಶಿಯಲ್‌ ಸರ್ವಿಸಸ್‌ ಸೇರಿ ಒಟ್ಟು ಶೇ 87.42ರ ಭಾಗಿತ್ವ ಹೊಂದಿವೆ. ‘ಸೆಬಿ’ ನಿರ್ದೇಶನದ ಕಾರಣ ಆಡಳಿತ ಮಂಡಳಿಯ ಪುನರ್‌ ರಚನೆ­ಯಾಗಿದೆ. ಇದಕ್ಕಾಗಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.

ವಾರದ ವಿಶೇಷ
ಆತಂಕದ ದಿನಗಳಿಗೆ ವಿದಾಯ!
ಇದುವರೆಗೂ ಕೇವಲ ನಕಾರಾತ್ಮಕ ಅಂಶಗಳೇ ತಾಂಡವವಾಡಿ ದೇಶದ ತುಂಬ ವಿಶೇಷವಾಗಿ ವಾಣಿಜ್ಯ ವಲಯ­ದಲ್ಲಿ ಆತಂಕ ಮೂಡಿಸಿದ ವಾತಾವರಣ­ವನ್ನು ಕಂಡಿದ್ದೇವೆ. ಆದರೆ, ಈ ನವ­ರಾತ್ರಿಯು ಹರ್ಷದಾಯಕ ಅಂಶಗಳನ್ನು ಕಾಣುವ ಮುನ್ಸೂಚನೆ ನೀಡಿ ಅನಿರೀಕ್ಷಿತ, ಅನಪೇಕ್ಷಿತವಾದ ಕುಸಿತ ದಿನಗಳು ಮಾಯವಾಗಿ ಅಲ್ಪಮಟ್ಟಿನ ಸಹಜತೆ ಮೂಡುವ ಲಕ್ಷಣಗಳನ್ನು ತೋರಿದೆ.

ಮೊದಲಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಮಾರ್ಜಿನಲ್‌ ಸ್ಟಾಂಡಿಂಗ್‌ ಫೆಸಿಲಿಟಿ (ಎಂ.ಎಸ್‌.ಎಫ್‌.) ದರವನ್ನು 50 ಮೂಲಾಂಶಗಳಷ್ಟು ಕಡಿತಗೊಳಿಸಿ ಹಣದ ಹರಿವು  ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ಈ ಸಡಿಲಿಕೆಯು ಹಲವು ಬ್ಯಾಂಕ್‌ಗಳು ನೀಡುವ ಗೃಹೋಪಯೋಗಿ ವಾಹನ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿ ವಹಿವಾಟು ವೃದ್ಧಿಗೆ ಚಾಲನೆ ನೀಡಿವೆ.

ಎಲ್ಲಕ್ಕೂ ಮಿಗಿಲಾಗಿ ಬುಧವಾರ ಪ್ರಕಟವಾದ ವ್ಯಾಪಾರ ಕೊರತೆ ಪ್ರಮಾಣ  ಕಡತಗೊಂಡಿ­ರುವುದು ಸ್ವಾಗತಾರ್ಹ ಅಂಶವಾಗಿದೆ. ಆಗಸ್‌್ಟ ಕೊನೆಯ ವಾರದಲ್ಲಿ ರೂಪಾಯಿ ಮೌಲ್ಯ ಡಾಲರ್‌ ವಿರುದ್ಧ ರೂ69ರ ಸಮೀಪಕ್ಕೆ ಕುಸಿದಾಗ ಸರ್ಕಾರ ಚಿನ್ನದ ಮೇಲಿನ ಸುಂಕವನ್ನು ಹೆಚ್ಚಿಸಿ ಆಮದು ಪ್ರಮಾಣ ತಗ್ಗಿಸಿತು. 

ಈ ಕಾರಣ ಚಿನ್ನದ ಆಮದು ಮೊದಲ ತ್ರೈಮಾಸಿಕದಲ್ಲಿದ್ದ 16.5 ಶತಕೋಟಿ ಡಾಲರ್‌ನಿಂದ ಎರಡನೇ ತ್ರೈಮಾಸಿಕದಲ್ಲಿ ಕೇವಲ 3.5 ಶತಕೋಟಿ ಡಾಲರ್‌ಗೆ ಮಿತಿಗೊಳಿಸಲು ಸಹಾಯಕವಾಯಿತು. ಜತೆಗೆ ರಫ್ತು ಪ್ರಮಾಣವೂ ಸಹ ಹೆಚ್ಚಾಗಿ ಕೊರತೆಯನ್ನು 2011ರ ಏಪ್ರಿಲ್‌ ಮಟ್ಟಕ್ಕೆ ನಿಯಂತ್ರಿಸಿದ್ದು ಪೇಟೆಯನ್ನು ಹುರಿದುಂಬಿಸಲು ಕಾರಣವಾಗಿದೆ. ಸಿರಿಯಾ ಗೊಂದಲವು ದೂರವಾಗಿ ಕಚ್ಚಾ ತೈಲ ಬೆಲೆಯನ್ನು ಸ್ಥಿರಗೊಳಿಸಿದ್ದು ಸಹ ತೈಲ ಆಮದಿನ ಗಾತ್ರವನ್ನು ಕಡಿಮೆಗೊಳಿಸಿದೆ.

2012ರ ಸೆಪ್ಟೆಂಬರ್‌ ಅಂತ್ಯದಲ್ಲಿ 17149 ಶತಕೋಟಿ ಡಾಲರ್‌ ವ್ಯಾಪಾರ ಕೊರತೆ ಇದ್ದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಕೊರತೆಯ ಪ್ರಮಾಣ 6750 ಶತಕೋಟಿ ಡಾಲರ್‌ಗೆ ಕ್ಷೀಣಿತಗೊಂಡಿ­ರುವುದು ಉತ್ತಮ ಅಂಶವಾಗಿದೆ.

ಇದಕ್ಕೆ ಹೆಚ್ಚಿನ ಮಹತ್ವ ನೀಡಲು ಮತ್ತೊಂದು ಕಾರಣ ಚಾಲ್ತಿ ಖಾತೆ ಕೊರತೆಯ ಪ್ರಮಾಣವು 2013–14ರಲ್ಲಿ  ಜಿಡಿಪಿಯ ಶೇ 3.9ರ ಭಾಗವಹಿಸುವುದೆಂಬ ನಿರೀಕ್ಷೆ ಇದೆ. ಮೊದಲ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆಯು ಶೇ 4.9 ರಷ್ಟಿತ್ತು. ಈ ಪ್ರಮಾಣದ ಅಭಿವೃದ್ಧಿಯು ಮುಂದಿನ ದಿನಗಳಲ್ಲಿ ವಾಣಿಜ್ಯ ವಹಿವಾಟು ಉದ್ಯಮಗಳಲ್ಲಿ ಚೈತನ್ಯ ಮೂಡಿಸಿ ಆರ್ಥಿಕ ಹಿಂಜರಿತದ ದಿನಗಳನ್ನು ಹಿಮ್ಮೆಟ್ಟಿಸಬಹುದಾಗಿದೆ.

ಕೈಗಾರಿಕಾ ಉತ್ಪನ್ನ ಸೂಚ್ಯಂಕವು ಆಗಸ್ಟ್ ತಿಂಗಳಲ್ಲಿ ಕುಸಿದಿರುವ ಅಂಶ ಆತಂಕಕಾರಿಯಲ್ಲ. ಕಾರಣ ಆಗಿನ ಮತ್ತು ಸದ್ಯದ ಪರಿಸ್ಥಿತಿಗಳು, ವಿಭಿನ್ನವಾ­ಗಿವೆ. ರೂಪಾಯಿಯ ಬೆಲೆಯು ಡಾಲರ್‌ ವಿರುದ್ಧ ರೂ69ರ ಸಮೀಪದಿಂದ ರೂ61ರ ಸಮೀಪಕ್ಕೆ ಚೇತರಿಕೆ ಕಂಡರು­ವುದು ಪರಿಸ್ಥಿತಿಯ ಬದಲಾವಣೆಯನ್ನು ಬಿಂಬಿಸುತ್ತದೆ.

ಕಳೆದ ಒಂದು ತಿಂಗಳಲ್ಲಿ ಪ್ರಮುಖ ಕಂಪೆನಿಗಳಾದ ಎಸ್‌ ಬ್ಯಾಂಕ್‌ ರೂ280 ರಿಂದ ರೂ386ರ ವರೆಗೂ, ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ರೂ593 ರಿಂದ ರೂ683ರ ವರೆಗೂ, ರಾನ ಬಾಕ್ಸಿಲ್ಯಾಬ್‌ ರೂ 318 ರಿಂದ ರೂ 450ರ ವರೆಗೂ, ಬ್ಯಾಂಕ್‌ ಆಫ್‌ ಬರೋಡ ರೂ577 ರಿಂದ ರೂ493ರ ವರೆಗೂ, ಇಂಡಸ್‌ ಇಂಡ್‌ ಬ್ಯಾಂಕ್‌ ರೂ368 ರಿಂದ ರೂ430ರ ವರೆಗೂ ಎಲ್‌ಅಂಡ್‌ಟಿ ಫೈನಾನ್ಸ್ ಹೋಲ್ಡಿಂಗ್‌ ರೂ64 ರಿಂದ ರೂ78ರ ವರೆಗೂ ಹೀಗೆ ಹಲವಾರು ಕಂಪೆನಿಗಳು ಏರಿಳಿತ ಕಂಡಿದ್ದರೂ ಈ ಗರಿಷ್ಠ – ಕನಿಷ್ಠಗಳ ಮಧ್ಯೆ ಷೇರಿನ ದರಗಳು ಕುಣಿದಾಡಿ ಹಲವು ಅಲ್ಪಕಾಲೀನ ಅವಕಾಶಗಳನ್ನೂ ಪೇಟೆ ಕಲ್ಪಿಸಿದೆ.

ಕಂಪೆನಿಯ ಮೂಲಾಂಶಗಳು ಸುಭದ್ರವಾಗಿದ್ದು ಅವಕಾಶಗಳ ಲಾಭ ಪಡೆದುಕೊಳ್ಳುವ ಇಚ್ಚೆಯುಳ್ಳವರಿಗೆ ವಿಶಾಲವಾದ ಅವಕಾಶ ಕಲ್ಪಿಸಿದೆ. ಬೃಹತ್‌ ಕಂಪೆನಿಗಳಲ್ಲಿ ಹೂಡಿಕೆ ಈಗಿನ ದಿನಗಳಲ್ಲಿ ಸುರಕ್ಷಿತ. ಕೆಳಮಧ್ಯಮ, ಕಳಪೆ ಷೇರುಗಳ ವ್ಯಾಮೋಹ ಸರಿಯಲ್ಲ.

*98863–13380 ಮಧ್ಯಾಹ್ನ 4.30ರ ನಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.