ADVERTISEMENT

ಸೂಚ್ಯಂಕಗಳ ಏಕಮುಖ ಇಳಿಕೆ

ಕೆ.ಜಿ ಕೃಪಾಲ್
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

2014-15 ರ  ಆರ್ಥಿಕ ವರ್ಷ ಕೊನೆಗೊಳ್ಳುತ್ತಿರುವುದು  ಮತ್ತು ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕೊನೆಯ ದಿನಗಳ ಕಾರಣ ಷೇರುಪೇಟೆಯ ಸಂವೇದಿ ಸೂಚ್ಯಂಕ ಹಾಗೂ ಉಪ  ಸೂಚ್ಯಂಕಗಳು  ಏಕಮುಖವಾಗಿ ಇಳಿಕೆ ಕಂಡವು.

ಚುಕ್ತಾ ಚಕ್ರದ  ಕೊನೆಯದಿನ ಗುರುವಾರವಂತು ಆಳದ ಅರಿವಿಲ್ಲದೆ ಪೇಟೆಯು ಜಾರಿತು. ಈ ರೀತಿಯ ಅನಿಶ್ಚಿತ ಚಲನೆಯು ಶುಕ್ರವಾರವೂ ಬಿಂಬಿತವಾದರೂ ದಿನದ ಅಂತ್ಯದಲ್ಲಿ ಸ್ಥಿರತೆ ಕಾಣುವಂತಾಗಿ ಅಂದು ಒಂದು ಅಂಶದಿಂದ ಏರಿಕೆ ಕಂಡಿತು. 

ಪೇಟೆಯ ಬಂಡವಾಳ ಮೌಲ್ಯವು ಜನವರಿ 15ರ ನಂತರ ಮೊದಲಭಾರಿಗೆ ಒಂದು ನೂರು ಲಕ್ಷ ಕೋಟಿ ರೂಪಾಯಿಗಳ ಒಳಗೆ ಕುಸಿದು ವಾರಾಂತ್ಯದಲ್ಲಿ ರೂ99.35 ಲಕ್ಷ ಕೋಟಿಯಲ್ಲಿತ್ತು. 

ಟೆಲಿಕಾಂ ವಲಯದ ಎ.ಡಿ.ಸಿ.  ಇಂಡಿಯಾ ಕಮ್ಯುನಿಕೇಶನ್ ಕಂಪೆನಿಯು ಪ್ರತಿ ಷೇರಿಗೆ ರೂ 29 ರಂತೆ ವಿಶೇಷ ಲಾಭಾಂಶ ಪ್ರಕಟಿಸಿದ ಕಾರಣ ಶುಕ್ರವಾರ ಆ ಷೇರಿನ ಬೆಲೆಯು ಸುಮಾರು ಶೇ 17 ರಷ್ಟು ಏರಿಕೆ ಕಂಡಿತು. ಅಂದರೆ ರೂ29 ರ ಲಾಭಾಂಶಕ್ಕೆ ಷೇರಿನ ಬೆಲೆಯು  ರೂ 40 ರಷ್ಟು ಏರಿಕೆ ಕಂಡಿದೆ.

ಬ್ಯಾಂಕಿಂಗ್ ವಲಯದ ಕಂಪೆನಿಗಳು ಏಕ ಮುಖವಾಗಿ ಕುಸಿಯತೊಡಗಿದವು. 
ಗುರುವಾರದ ಡೆರೈವೆಟೀವ್ ಮಾರ್ಕೆಟ್ ನ ಸೆಟ್ಲ್ ಮೆಂಟ್ ನ ಕೊನೆ ದಿನವಾದ್ದರಿಂದ, ಜೊತೆಗೆ 2014–15ರ ವರ್ಷಾಂತ್ಯವು ಸಮೀಪಿಸುತ್ತಿರು ವುದರಿಂದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿ ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಪಿ.ಎಸ್.ಯು, ಆಟೋ, ಗ್ರಾಹಕ ಬಳಕೆ ವಸ್ತುಗಳು, ಎಫ್.ಎಂ.ಸಿ.ಜಿ, ಹೆಲ್ತ್ ಕೇರ್, ಐ ಟಿ ಸೂಚ್ಯಂಕಗಳು ಬರ್ಜರಿ ಇಳಿಕೆ ಕಂಡರೆ, ಬ್ಯಾಂಕೆಕ್ಸ್ 528 ಅಂಶಗಳ ಭಾರಿ ಇಳಿಕೆ ದಾಖಲಿಸಿ ಸಾಮೂಹಿಕ ಕುಸಿತವನ್ನು ಪ್ರದರ್ಶಿಸಿವೆ. ಇಂತಹ ಕುಸಿತದ ದಿನ ಕೇವಲ ಪ್ರಾಧನ ಸರಕುಗಳ ಸೂಚ್ಯಂಕ 12 ಅಂಶಗಳ ಏರಿಕೆಯಿಂದ ಭಿನ್ನತೆ ಪ್ರದರ್ಶಿಸಿದೆ.

ವಾರದ ವಿಶೇಷ

ಷೇರುಪೇಟೆಯ ವಿಶ್ಲೇಷಣೆಗಳು ಇತ್ತೀಚಿನ ದಿನಗಳಲ್ಲಿ ಇಂತಹ ಬೆಳವಣಿಗೆಗಳಿಗೆ ಹೀಗೆ ಇರುತ್ತದೆ ಎಂದು ನಿಖರವಾಗಿ, ನಿರ್ಧಿಷ್ಟವಾಗಿ ಹೇಳುವಂತಿರದೇ, ವಹಿವಾಟುದಾರರ, ವಿತ್ತೀಯ ಸಂಸ್ಥೆಗಳ ಚಿಂತನೆ, ಸ್ಥಾನ ಮುಂತಾದ ವರ್ತಮಾನ ವನ್ನು ಅವಲಂಭಿಸಿರುತ್ತವೆ ಎಂಬುದಕ್ಕೆ ಈಚಿನ ದಿನಗಳಲ್ಲಿ ಪೇಟೆಯ ಚಲನೆ ವಲನೆಗಳು ಕನ್ನಡಿ ಹಿಡಿದಿದೆ.
ರೂಪಾಯಿಯ ಬೆಲೆ ಇಳಿದಿರುವಾಗ ರಪ್ತು ಮಾಡುವ ಕಂಪೆನಿಗಳಿಗೆ ಅನುಕೂಲಕರವೆಂದು ಐ.ಟಿ., ಟೆಕ್, ಫಾರ್ಮಾ ವಲಯಗಳು ವಿಜೃಂಭಿಸು ವುದನ್ನು ಹಿಂದೆ ಅನುಭವಿಸಿದ್ದೇವೆ.  ಆದರೆ ಈಗ ರೂಪಾಯಿಯ ಬೆಲೆಯಲ್ಲಿನ ಏರಿಳಿತಗಳು ಯಾವುದೇ ಪ್ರಭಾವಿಯಾಗಿರದೆ, ಅದು ಸಾರಾಸಗಟಾಗಿ ಇಡೀ ಪೇಟೆಯ ಮೇಲೆ ಸಂದರ್ಭಕ್ಕೆ ತಕ್ಕಂತೆ ಪ್ರಭಾವ ಬೀರುತ್ತದೆ.
ಈ ವಾರದಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾದ ಗೊಂದಲವು ಪ್ರಪಂಚದ ಎಲ್ಲೆಡೆ ಪೇಟೆಗಳು ಇಳಿಮುಖದಲ್ಲಿದ್ದವು. ಇದು ನಮ್ಮ ಕರೆನ್ಸಿ ಮೇಲೂ ಒತ್ತಡ ಹೇರಿತು. ಈ ವಾರದ ಆರಂಭದಲ್ಲಿ ಫಾರ್ಮಾ ವಲಯದ ಕಂಪೆನಿಗಳಾದ ಸ್ಟ್ರೈಡ್ಸ್  ಆರ್ಕೋಲ್ಯಾಬ್, ಸನ್ ಫಾರ್ಮಾ, ಅಲೆಂಬಿಕ್, ಬ್ಲಿಸ್ ಜಿ ವಿ ಕೆ, ನ್ಯಾಟ್ಕೋ ಫಾರ್ಮಾ, ವೀನಸ್ ರಿಮೆಡೀಸ್, ಮುಂತಾದವು ಶೇ4 ರಿಂದ6ರಷ್ಟು ಇಳಿಕೆ ಕಂಡವು. ರಾನ್ ಬಾಕ್ಸಿ ಲ್ಯಾಬ್ ವಿಲೀನಕ್ಕೆ ಹಸಿರು ನಿಶಾನೆ ದೊರೆತ ಕಾರಣ ಸನ್ ಫಾರ್ಮಾ ನಂತರದ ದಿನಗಳಲ್ಲಿ ಚುರುಕಾಯಿತು.
ಸ್ಟ್ರೈಡ್ಸ್  ಆರ್ಕೋಲ್ಯಾಬ್ ಕಂಪೆನಿಯ ಷೇರಿನ ಬೆಲೆಯು ಶುಕ್ರವಾರದಂದು ವಾರದ ಕನಿಷ್ಟ ಬೆಲೆ ರೂ 1,022 ರಲ್ಲಿದ್ದಾಗ ಕಂಪೆನಿಯ  ಜನರಿಕ್ ಡ್ರಗ್   'ವಿರ್ಸೋ ' ಬಿಡುಗಡೆ ಬಗ್ಗೆ ಬಂದ ಸುದ್ಧಿಯು ಷೇರಿನ ಬೆಲೆಯಲ್ಲಿ ಏರಿಕೆ ತಂದು ರೂ1,116 ರವರೆಗೂ ತಲುಪುವಂತಾಯಿತು. ಇಂತಹ ಅಸಹಜ ಬೆಳವಣಿಗೆಗಳು ಒದಗಿಸುವ ಅವಕಾಶಗಳ  ಲಾಭ ಪಡೆಯುವ ಹವ್ಯಾಸ ಬೆಳೆಸಿಕೊಂಡಲ್ಲಿ ಮಾತ್ರ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸಾಧ್ಯ. ಇಲ್ಲವಾದಲ್ಲಿ ಅದು ಭಾಷಣಕ್ಕೆ ಭೂಷಣವಷ್ಟೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 802 ಅಂಶಗಳ ಇಳಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕವು 265 ಅಂಶಗಳ, ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು 419 ಅಂಶಗಳ ಕುಸಿತಕಂಡು ಜೊತೆಗೂಡಿದವು.

ವಿದೇಶಿ ವಿತ್ತೀಯ ಸಂಸ್ಥೆಗಳು   ರೂ1,126 ಕೋಟಿ ಹೂಡಿಕೆ ಮಾಡಿದವು, ಸ್ವದೇಶಿ ವಿತ್ತೀಯ ಸಂಸ್ಥೆಗಳು ಸಹ ರೂ1,230 ಕೋಟಿ ಮೌಲ್ಯದ ಹೂಡಿಕೆ ಮಾಡಿವೆ. ಆದರೂ ವಾತಾವರಣವು ಮಂದಗತಿಯಲ್ಲಿದ್ದುದು ಅಚ್ಚರಿಯ ಸಂಗತಿಯಾಗಿದೆ.

ಹೊಸ ಷೇರು
* ಬೈಕ್ ಸ್ಟೀಲ್ ಇಂಡಸ್ಟ್ರೀಸ್ ಲಿ. ಕಂಪೆನಿಯು ಕಲ್ಕತ್ತಾ ಮತ್ತು ಯು.ಪಿ. ಷೇರುವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದು25 ರಿಂದ ಬಿ ಎಸ್ ಇ ಯ  ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ತಿರುಪತಿ ಟೈರ್ಸ್ ಲಿ ಕಂಪೆನಿಯು ಅಹ್ಮದಾಬಾದ್, ಲೂದಿಯಾನ, ಕಲ್ಕತ್ತಾ, ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದು, 27 ರಿಂದ ಬಿ. ಎಸ್.ಇ.ನ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ಫ್ರೇಸರ್ ಅಂಡ್ ಕಂಪೆನಿ ಕಲ್ಕತ್ತಾ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾ ಟಾಗುತ್ತಿದ್ದು 27 ರಿಂದ ಡಿ. ಟಿ ಗುಂಪಿ ನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿದೆ.

* ಮನಾಕ್ಸಿಯ ಲಿ. ನ ಕೋಟೆಡ್ ಮೆಟಲ್ಸ್ ಮತ್ತು ಮಸ್ಕಿಟೋ ವಿಭಾಗವನ್ನು ಬೇರ್ಪಡಿಸಿ ಮನಾಕ್ಸಿಯಾ ಕೋಟೆಡ್ ಮೆಟಲ್ಸ್ ಮತ್ತು ಇಂಡಸ್ಟ್ರೀಸ್ ಲಿ ನಲ್ಲಿ ವಿಲೀನಗೊಳಿಸಿದ ಈ ಕಂಪೆನಿಯು 30 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಮನಾಕ್ಸಿಯ ಲಿ. ನ ಪ್ಯಾಕೇಜಿಂಗ್ ವಿಭಾಗವನ್ನು ಬೇರ್ಪಡಿಸಿ ಮನಾಕ್ಸಿಯ ಇಂಡಸ್ಟ್ರೀಸ್ ನಲ್ಲಿ ವಿಲೀನ ಗೊಳಿಸಲಾಗಿದ್ದು ಈ ಕಂಪೆನಿಯು 30 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಮನಾಕ್ಸಿಯ ಲಿ.,ನ ಅಲ್ಯುಮಿನಿಯಂ ವಿಭಾಗವನ್ನು ಬೇರ್ಪ ಡಿಸಿ ಮನಾಕ್ಸಿಯ ಅಲ್ಯುಮಿನಿಯಂ ಕಂಪೆನಿಯಲ್ಲಿ  ವಿಲೀನಗೊಳಿಸಲಾಗಿದ್ದು ಈ ಕಂಪೆನಿಯು 30 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ADVERTISEMENT

ಬೋನಸ್ ಷೇರು
*ಸಿ ಮಹೇಂದ್ರ ಎಕ್ಸ್ ಪೋರ್ಟ್ ಲಿ. ಕಂಪೆನಿಯು ಏಪ್ರಿಲ್ 20 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ .
* ವಿ.ಸಾಗರ್ ಪೊಲಿಟೆಕ್ಸ್ ಲಿ., ಕಂಪೆನಿಯು ಏಪ್ರಿಲ್ 6 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ

ಹಕ್ಕಿನ ಷೇರು
* ಟಾಟಾ ಮೋಟಾರ್ಸ್ ಲಿ., ಕಂಪೆನಿಯು ಪ್ರತಿ109 ಷೇರಿಗೆ 6 ರಂತೆ, ಪ್ರತಿ ಷೇರಿಗೆ ರೂ450 ರ ಬೆಲೆಯಲ್ಲಿ ಹಕ್ಕಿನ ಷೇರು ವಿತರಿಸಲಿದೆ. ಹಾಗೆಯೇ ಅದೇ ಅನುಪಾತದಲ್ಲಿ ವ್ಯತ್ಯಯ ಮತದಾನದ ಹಕ್ಕಿರುವ ಡಿ.ವಿ.ಆರ್. ಷೇರುಗಳಿಗೆ ಪ್ರತಿ ಷೇರಿಗೆ ರೂ269 ರಂತೆ ವಿತರಿಸಲಿದೆ. ಇದಕ್ಕಾಗಿ ಏಪ್ರಿಲ್ 8 ನಿಗದಿತ ದಿನವಾಗಿದೆ. ಏಪ್ರಿಲ್ 6 ರಿಂದ ಹಕ್ಕಿನ ಷೇರಿನ ನಂತರದ ವಹಿವಾಟು ಆರಂಭವಾಗಲಿದೆ.
* ಯೂನಿವರ್ಸಲ್ ಕೇಬಲ್ಸ್ ಕಂಪೆನಿ 31 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

ಕಂಪೆನಿ ವಿಲೀನ ವಿಚಾರ: ಫಾರ್ಮಾ ಕಂಪೆನಿ ರ್‍ಯಾನ್‌ಬಾಕ್ಸಿ ಲ್ಯಾಬೊರೇಟರೀಸ್ ಲಿ ಕಂಪೆನಿಯು ಮತ್ತೊಂದು ಫಾರ್ಮಾ ವಲಯದ ಅಗ್ರಮಾನ್ಯ ಕಂಪೆನಿ, ಸಂವೇದಿ ಸೂಚ್ಯಂಕದ ಅಂಗವಾಗಿರುವ ಸನ್ ಫಾರ್ಮಾಾಸ್ಯುಟಿಕಲ್ ಇಂಡಸ್ಟ್ರೀಸ್ ನಲ್ಲಿ ವಿಲೀನಗೊಳಿಸಲು ಬೇಕಾದ ನಿಯಂತ್ರಕರ ಅನುಮತಿ ದೊರೆತಿರು ವುದರಿಂದ ಏ. 7 ವಿಲೀನಕ್ಕೆ ನಿಗದಿತ ದಿನವಾಗಿದೆ.  ರೂ 5 ರ ಮುಖಬೆಲೆಯ ಪ್ರತಿ ಹತ್ತು ರ್‍ಯಾನ್‌ಬಾಕ್ಸಿ ಲ್ಯಾಬೊರೇಟರೀಸ್ ಲಿ., ಷೇರಿಗೆ ರೂ 1 ರ ಮುಖಬೆಲೆಯ 8 ಸನ್ ಫಾರ್ಮಾಾ ಸಿಟಿಕಲ್ ಇಂಡಸ್ಟ್ರೀಸ್ ನೀಡುವ ಮೂಲಕ  ವಿಲೀನ ಪ್ರಕ್ರಿಯೆ ಪೂರ್ಣ ಗೊಳಿಸಲಾಗುವುದು.
ಈ ಕಾರಣದಿಂದಾಗಿ 6 ರಿಂದ ರ್‍ಯಾನ್‌ಬಾಕ್ಸಿ ಲ್ಯಾಬೊರೇಟರೀಸ್ ಲಿ.,ನ ಕಂಪೆನಿಯ ಷೇರುಗಳು ವಹಿವಾಟಾ ಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.