ಷೇರುಪೇಟೆಯಲ್ಲಿ ವಿಸ್ಮಯಗಳ ಪ್ರದರ್ಶನ ಸಾಮಾನ್ಯವಾಗಿರುತ್ತದೆ. ಆಗಸ್ಟ್ 29 ರಂದು 38,989 ಅಂಶಗಳ ವಾರ್ಷಿಕ ಗರಿಷ್ಠ ತಲುಪಿತ್ತು. ನಂತರ ಒಂದೇ ತಿಂಗಳಿನಲ್ಲಿ 2,700 ಅಂಶಗಳಷ್ಟು ಹಾನಿಗೊಳಗಾಗಿ 36,227 ಅಂಶಗಳಿಗೆ ಕುಸಿಯಿತು. ಪೇಟೆಯ ಬಂಡವಾಳ ಮೌಲ್ಯ ಆಗಸ್ಟ್ 31 ರಂದು ₹159 ಲಕ್ಷ ಕೋಟಿ ಇತ್ತು. ಅದು ಸೆಪ್ಟೆಂಬರ್ 28 ರಂದು ₹145 ಲಕ್ಷ ಕೋಟಿಗೆ ಕುಸಿದು ಸುಮಾರು 14 ಲಕ್ಷ ಕೋಟಿಯಷ್ಟು ಬಂಡವಾಳ ಕರಗಿದೆ.
ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪನಿಗಳು ಹೆಚ್ಚಿನ ಕುಸಿತಕ್ಕೊಳಗಾಗಿವೆ. ಪೇಟೆಗಳು ಗರಿಷ್ಠ ಮಟ್ಟದಲ್ಲಿದ್ದಾಗ ಹೂಡಿಕೆ ನಿರ್ಧಾರ ಕೈಗೊಂಡವರಿಗೆ ಕೇವಲ ಒಂದೇ ತಿಂಗಳಲ್ಲಿ ಬಂಡವಾಳ ಕರಗುವ ಕಹಿ ಅನುಭವವು ಅಸಹನೀಯವಾಗಿರುತ್ತದೆ.
ಷೇರಿನ ಬೆಲೆಗಳು ಉತ್ತುಂಗಕ್ಕೇರಿದಾಗ ಖರೀದಿಸಲು ಮುಂದಾಗುವ ಹೂಡಿಕೆದಾರರು, ಷೇರಿನ ಬೆಲೆಗಳು ಕುಸಿದಾಗಲೂ ಖರೀದಿ ಮಾಡಿದಲ್ಲಿ ಹೆಚ್ಚು ಗಳಿಕೆ ಮಾಡಲು ಸಾಧ್ಯ. ಅಲ್ಲದೆ ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳು ಭಾರಿ ಕುಸಿತದಲ್ಲಿರುವಾಗ ದೀರ್ಘಕಾಲೀನ ಚಿಂತನೆಯಿಂದ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಕಾಲವಾಗಿರುತ್ತದೆ. ‘ಸಿಪ್‘ ಮೂಲಕವೂ ಹೂಡಿಕೆಯ ಹವ್ಯಾಸ ಬೆಳೆಸಿಕೊಳ್ಳಬಹುದಾಗಿದೆ. ಹೂಡಿಕೆಯನ್ನು ಒಂದೇ ಬಾರಿಗೆ ನಿರ್ಧರಿಸದೆ ಪ್ರತಿ ಕುಸಿತದಲ್ಲೂ ಹಂತ ಹಂತವಾಗಿ, ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
ಕಾರ್ಪೊರೇಟ್ ವಲಯದ ಹೆಚ್ಚಿನ ಕಂಪನಿಗಳು ತಮ್ಮ ಸಂಪನ್ಮೂಲ ಸಂಗ್ರಹಣೆಯ ಯೋಜನೆಗಳತ್ತ ಗಮನಹರಿಸಿ ವೈವಿಧ್ಯಮಯ ಯೋಜನೆಗಳನ್ನು ತೇಲಿಬಿಡುತ್ತಿವೆ. ಸತತವಾಗಿ ಕುಸಿಯುತ್ತಿರುವ ಪೇಟೆಯಲ್ಲಿ ಮ್ಯೂಚುಯಲ್ ಫಂಡ್‌ಗಳ ನಿವ್ವಳ ಸಂಪತ್ತು ಮೌಲ್ಯವೂ ಕರಗುತ್ತಿರುವ ಕಾರಣ ಚಟುವಟಿಕೆ ಮುಂದುವರೆಸಲು, ಆರ್ಥಿಕ ಒತ್ತಡ ನಿಭಾಯಿಸಲು ಹೆಚ್ಚಿನ ಫಂಡ್ ಹೌಸ್‌ಗಳು ಹೊಸ ಹೊಸ ಯೋಜನೆಗಳನ್ನು ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ. ಇವುಗಳಲ್ಲಿ ಗಣ್ಯಾತಿಗಣ್ಯ ಸಂಸ್ಥೆಗಳೂ ಸೇರಿವೆ. ಆ್ಯಕ್ಸಿಸ್, ಎಲ್ ಆ್ಯಂಡ್ ಟಿ, ಬ್ಯಾಂಕ್ ಆಫ್ ಇಂಡಿಯಾ, ಸುಂದರಂ, ಎಚ್‌ಡಿಎಫ್‌ಸಿ, ಐಸಿಐಸಿಐ, ಟಾಟಾ, ರಿಲಯನ್ಸ್, ಕೋಟಕ್, ಯುಟಿಐ, ಎಸ್‌ಬಿಐ ಸಮೂಹದ ಫಂಡ್ ಹೌಸ್‌ಗಳು ಹೊಸ ಯೋಜನೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ.
ಶುಕ್ರವಾರ ಅನೇಕ ಅಗ್ರಮಾನ್ಯ ಕಂಪನಿಗಳು ವಾರ್ಷಿಕ ಕನಿಷ್ಠಕ್ಕೆ ಕುಸಿದಿವೆ. ಅದರಲ್ಲಿ ಪ್ರಮುಖವಾಗಿ ಮಾರುತಿ ಸುಜುಕಿ, ಅರವಿಂದ್, ಅಶೋಕ ಬಿಲ್ಡ್‌ಕಾನ್, ಬ್ಲೂ ಸ್ಟಾರ್, ಬ್ಲೂ ಡಾರ್ಟ್, ಕ್ಯಾಸ್ಟ್ರಾಲ್, ದೀಪಕ್ ಫರ್ಟಿಲೈಸರ್ಸ್, ಎಂಜಿನಿಯರ್ಸ್ ಇಂಡಿಯಾ, ಜನರಲ್ ಇನ್ಶುರನ್ಸ್ ಕಾರ್ಪೊರೇಷನ್, ಹೀರೊ ಮೋಟೊಕಾರ್ಪ್, ಜೆ ಕೆ ಟೈರ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ಸುಂದರಂ ಫೈನಾನ್ಸ್, ಸುಪ್ರೀಂ ಇಂಡಸ್ಟ್ರೀಸ್, ಟಾಟಾ ಸ್ಪಾಂಜ್, ಟಿಂಕನ್, ವಿಗಾರ್ಡ್, ವಿಆರ್‌ಎಲ್ ಲಾಜಿಸ್ಟಿಕ್ಸ್, ಎಸ್ ಬ್ಯಾಂಕ್, ಝೀ ಎಂಟರ್ ಪ್ರೈಸಸ್‌ನಂತಹ ಕಂಪನಿಗಳು ಕನಿಷ್ಠದ ದಾಖಲೆ ನಿರ್ಮಿಸಿವೆ. ಅಲ್ಲದೆ ಹೆಚ್ಚು ಚುರುಕಾದ ಚಟುವಟಿಕೆಯಲ್ಲಿದ್ದ ಹಣಕಾಸು ವಲಯದ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಡೆಲ್ವೇಸ್ ಫೈನಾನ್ಶಿಯಲ್ ಸರ್ವಿಸಸ್, ದಿವಾನ್ ಹೌಸಿಂಗ್ ಫೈನಾನ್ಸ್, ಕ್ಯಾನ್ ಫಿನ್ ಹೋಮ್ಸ್ , ಪಿಎನ್‌ಬಿ ಹೌಸಿಂಗ್ ಕಂಪನಿಗಳು ಹೆಚ್ಚಿನ ಕುಸಿತಕ್ಕೊಳಗಾದವು.
ಇದೇ ತಿಂಗಳಲ್ಲಿ ವಾರ್ಷಿಕ ಗರಿಷ್ಠ ದಾಖಲೆ ತಲುಪಿದ ಪಿರಾಮಲ್ ಎಂಟರ್ ಪ್ರೈಸಸ್ ಷೇರಿನ ಬೆಲೆ ಶುಕ್ರವಾರ ₹ 2,254 ಕ್ಕೆ ತಲುಪಿ ವಾರ್ಷಿಕ ಕನಿಷ್ಠ ದಾಖಲಿಸಿತು. ಹಿಂದಿನ ಶುಕ್ರವಾರ ಪ್ರಮುಖ ಮ್ಯೂಚುವಲ್ ಫಂಡ್, ₹ 300 ಕೋಟಿ ಮೌಲ್ಯದ ದಿವಾನ್ ಹೌಸಿಂಗ್ ಫೈನಾನ್ಸ್ ಷೇರು ಮಾರಾಟ ಮಾಡಿದೆ ಎಂಬ ಸುದ್ದಿ ಸಹ ಈ ಕುಸಿತಕ್ಕೆ ಕಾರಣವಾದರೆ, ಯೆಸ್ ಬ್ಯಾಂಕ್‌ನ ಪ್ರವರ್ತಕರು ಶೇ 0.4 ರಷ್ಟು ಮಾರಾಟ ಮಾಡಿದ್ದಾರೆ. ಅಪೋಲೊ ಟೈರ್‌ನ ಮುಖ್ಯಸ್ಥರ ಸಂಭಾವನೆ ಏರಿಕೆಗೆ ಷೇರುದಾರರ ತಿರಸ್ಕಾರದ ಕಾರಣಕ್ಕೆ ಷೇರಿನ ಬೆಲೆ ಇಳಿಯುವಂತಾಯಿತು.
ತಂತ್ರಜ್ಞಾನ ವಲಯದ ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್ ತನ್ನ ಅಂಗ ಸಂಸ್ಥೆಗೆ ಬಡ್ಡಿ ರಹಿತ ಸಾಲ ನೀಡಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯು ₹197 ರ ಸಮೀಪದಿಂದ ₹54 ರವರೆಗೂ ಜಾರಿತು. ₹58.80 ರಲ್ಲಿ ಕೊನೆಗೊಂಡಿತು. ತಾನು ನೀಡಿರುವ ಈ ಸಾಲವನ್ನು ಕಂಪನಿಯುಸಮರ್ಥಿಸಿಕೊಂಡಿದೆಯಾದರೂ, ಬಡ್ಡಿ ರಹಿತ ಸಾಲ ನೀಡಿರುವುದು ಸಮಂಜಸವಲ್ಲ. ಅಂದರೆ ಸುಮಾರು ಶೇ 70 ಕ್ಕೂ ಹೆಚ್ಚಿನ ಹೂಡಿಕೆ ಒಂದೇ ದಿನ ನಶಿಸಿಹೋಗಿದೆ. ಈ ಕಂಪನಿಯ ಷೇರು ಬಂಡವಾಳವು ₹66 ಕೋಟಿ ಇದ್ದು, ಕಂಪನಿಯು ಕಳೆದ ತ್ರೈಮಾಸಿಕದಲ್ಲೂ ಹಾನಿಗೊಳಗಾಗಿದೆ. ಇಂತಹ ಸಂದರ್ಭದಲ್ಲಿ ತನ್ನ ಅಂಗ ಸಂಸ್ಥೆಗೆ ಬಡ್ಡಿ ರಹಿತ ಸಾಲವನ್ನು ನೀಡಿರುವುದು ಸರಿಯಲ್ಲವೆಂಬುದು ನೀತಿಪಾಲನೆಯ ಲೋಪವೆನ್ನಬಹುದು.
ರೂಪಾಯಿಯ ಬೆಲೆ ಸ್ವಲ್ಪ ಸ್ಥಿರತೆಯನ್ನು ಕಂಡಿದೆ. ಈಗಾಗಲೇ ಕಚ್ಚಾ ತೈಲ ಬೆಲೆಯು ಅತಿ ಹೆಚ್ಚಾಗಿರುವುದರಿಂದ ತನ್ನ ಏರಿಕೆಯ ದಿಸೆಯನ್ನು ಬದಲಾಯಿಸಲೂಬಹುದು. ಆ ಸಂದರ್ಭದಲ್ಲಿ ಈಗ ಕಂಡಿರುವ ತೀವ್ರ ಕುಸಿತವು ಸಹ ದಿಕ್ಕು ಬದಲಿಸಿ ಅತಿ ಹೆಚ್ಚಿನ ವೇಗದ ಏರಿಕೆ ಕಂಡರೂ ಅಚ್ಚರಿಯಿಲ್ಲ. ಸಂವೇದಿ ಸೂಚ್ಯಂಕದ 30 ಕಂಪನಿಗಳಲ್ಲಿ 9 ಕಂಪನಿಗಳು ವಲಯದವುಗಳಾದ್ದರಿಂದ ಸದ್ಯದ ಹಣಕಾಸಿನ ಒತ್ತಡವು ಈ ಕಂಪನಿಗಳ ಮೇಲೆ ಹೆಚ್ಚಿನ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಸೇವಾ ವಲಯವು ದೇಶದ ಜಿಡಿಪಿ ಬೆಳವಣಿಗೆಗೆ ಮಹತ್ತರವಾದ ಕೊಡುಗೆ ನೀಡುತ್ತಿದ್ದು, ನಿರೀಕ್ಷಿತ ಆರ್ಥಿಕ ಬೆಳವಣಿಗೆ ಸಾಧ್ಯವಾಗಬೇಕಾದರೆ ಬ್ಯಾಂಕಿಂಗ್ ಮತ್ತು ಎನ್‌ಬಿಎಫ್‌ಸಿ ವಲಯಗಳು ಚೇತರಿಕೆ ಕಾಣಲೇ ಬೇಕು. ಉತ್ತಮ ಗುಣಮಟ್ಟದ ಅಗ್ರಮಾನ್ಯ ಕಂಪನಿಗಳ ಮೇಲೆ ಅವಕಾಶಕ್ಕಾಗಿ ನಿಗಾ ಇರಲಿ. ತಂತ್ರಜ್ಞಾನ ವಲಯದ ಟಿಸಿಎಸ್, ಇನ್ಫೊಸಿಸ್, ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್‌ಗಳ ಮೂಲಕ ಸಂವೇದಿ ಸೂಚ್ಯಂಕ ಸಮತೋಲನ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
ಹೊಸ ಷೇರು:ಇತ್ತೀಚಿಗೆ ಪ್ರತಿ ಷೇರಿಗೆ ₹475 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಇರ್ಕಾನ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಷೇರುಗಳು ಶುಕ್ರವಾರ ವಹಿವಾಟಿಗೆ ಬಿಡುಗಡೆಯಾಗಿದ್ದು, ಷೇರಿನ ಬೆಲೆ ₹410 ರ ಕನಿಷ್ಠದಿಂದ ₹464 ರ ಗರಿಷ್ಠದವರೆಗೂ ವಹಿವಾಟಾಗಿ ₹417 ರಲ್ಲಿ ಕೊನೆಗೊಂಡಿತು. ವಿತರಣೆ ಬೆಲೆ ತಲುಪದಾಯಿತು.
ಲಾಭಾಂಶ: ತಾಲ್ ಎಂಟರ್ಪ್ರೈಸಸ್ ಪ್ರತಿ ಷೇರಿಗೆ ₹10
ಮುಖಬೆಲೆ ಸೀಳಿಕೆ: ಜೆಎಂಸಿ ಪ್ರಾಜೆಕ್ಟ್ಸ್ ಇಂಡಿಯಾ ಕಂಪನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಅಕ್ಟೊಬರ್ 5 ನಿಗದಿತ ದಿನ.ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್ ಲಿಮಿಟೆಡ್ ಕಂಪನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಅಕ್ಟೊಬರ್ 22 ನಿಗದಿತ ದಿನ.ಸಾಧನ ನೈಟ್ರೊ ಕೆಮ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲಿದೆ.
(ಮೊ: 9886313380, ಸಂಜೆ 4.30 ರನಂತರ)
ಮುನ್ನೋಟ
ಈ ವಾರ, ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಷೇರುಪೇಟೆಯ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.
ಇನ್ನು, ಕಚ್ಚಾ ತೈಲ ದರ, ರೂಪಾಯಿ ಮೌಲ್ಯದಲ್ಲಿನ ಏರಿಳಿತ ಕೂಡಾ ಸೂಚ್ಯಂಕದ ದಿಕ್ಕನ್ನು ನಿರ್ಧರಿಸಲಿವೆ.ಎನ್‌ಬಿಎಫ್‌ಸಿ ಷೇರುಗಳ ಬಗ್ಗೆಯೂ ಹೂಡಿಕೆದಾರರು ಹೆಚ್ಚಿನ ಗಮನ ನೀಡಲಿದ್ದಾರೆ.
ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಗುರುವಾರ ಷೇರುಪೇಟೆಗೆ ರಜೆ. ಹೀಗಾಗಿ ನಾಲ್ಕು ದಿನ ಮಾತ್ರವೇ ವಹಿವಾಟು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.