ADVERTISEMENT

ಷೇರು ಹೂಡಿಕೆ: ಸೂತ್ರಬದ್ಧ ಲೆಕ್ಕಾಚಾರ

ಶರತ್ ಎಂ.ಎಸ್.
Published 8 ಫೆಬ್ರುವರಿ 2021, 19:30 IST
Last Updated 8 ಫೆಬ್ರುವರಿ 2021, 19:30 IST
   

‘ಷೇರು ಮಾರುಕಟ್ಟೆ ಅಂದರೆ ಏನು’ ಎಂದು ಕೇಳಿದರೆ ಬಹುತೇಕರು, ‘ಹೌದು! ಇದರ ಬಗ್ಗೆ ಕೇಳಿದ್ದೇವೆ’ ಎಂದು ಉತ್ತರಿಸುತ್ತಾರೆ. ಆದರೆ ಮಾರುಕಟ್ಟೆ ಕುರಿತು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದರೆ ಅಸ್ಪಷ್ಟ ಉತ್ತರ ಕೊಡುತ್ತಾರೆ. ಸಾಮಾನ್ಯ ಜನರ ವಿಚಾರ ಹಾಗಿರಲಿ, ಕೆಲವು ಚಾರ್ಟೆಡ್ ಅಕೌಂಟೆಂಟ್‌ಗಳು, ದೊಡ್ಡ ಉದ್ಯಮಗಳನ್ನು ಕಟ್ಟಿದವರು, ಹೆಸರಾಂತ ಸಂಸ್ಥೆಗಳಲ್ಲಿ ಎಂಬಿಎ ಓದಿದವರು ಕೂಡ ಸ್ವಂತ ಪರಿಶ್ರಮದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದೆ ಬ್ರೋಕರ್‌ಗಳ ಸಹಾಯ ಪಡೆದು ಹೂಡಿಕೆ ಮಾಡಿರುವ ನಿದರ್ಶನಗಳಿವೆ.

ಶರತ್ ಎಂ.ಎಸ್.

ಹಾಗಾಗಿ ನಿಮಗೆ ಷೇರು ಮಾರುಕಟ್ಟೆ ಬಗ್ಗೆ ಏನೇನೂ ತಿಳಿದಿಲ್ಲ ಎಂಬ ಭಾವನೆ ನಿಮ್ಮಲ್ಲಿದ್ದರೆ ಅದರ ಬಗ್ಗೆ ಒಂದಿಷ್ಟೂ ಚಿಂತೆ ಮಾಡಬೇಡಿ. ಷೇರು ಹೂಡಿಕೆ ಮಾಡುವಾಗ, ‘ನನ್ನ ಸ್ನೇಹಿತ ಹೇಳಿದ ಅಂತ ಆ ಕಂಪನಿಯ ಷೇರು ಖರೀದಿಸಿದೆ. ಬ್ರೋಕರ್ ಹೇಳಿದರು, ಟಿ.ವಿ.ಯಲ್ಲೂ ಸಲಹೆ ಬಂತು ಅದಕ್ಕೆ ಈ ಕಂಪನಿಯ ಷೇರು ಖರೀದಿಸಿದೆ’ ಎನ್ನುವವರ ಸಂಖ್ಯೆಯೇ ಹೆಚ್ಚು. ಹಾಗಾದರೆ, ಷೇರು ಮಾರುಕಟ್ಟೆ ಎಂದರೆ ಜೂಜಾಟವೇ?

ಸ್ವಂತ ಪರಿಶ್ರಮದಿಂದ ಷೇರು ಖರೀದಿಸಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲವೇ? ಖಂಡಿತವಾಗಿಯೂ ಸಾಧ್ಯ. ಆದರೆ ಅದಕ್ಕೊಂದು ಭದ್ರ ಬುನಾದಿ ಬೇಕು, ಅಷ್ಟೆ. ಯಾವುದೇ ಹೊಸ ವಿಚಾರ ತಿಳಿಯುವಾಗ ನಾವು ಕಪೋಲಕಲ್ಪಿತ ಚಿಂತನೆಗಳನ್ನು ಪಕ್ಕಕ್ಕಿಟ್ಟು ಮುಕ್ತ ಮನಸ್ಸಿನಿಂದ ಕಲಿಕೆ ಶುರು ಮಾಡಬೇಕು. ಷೇರು ಮಾರುಕಟ್ಟೆ ಬಗ್ಗೆ ಸ್ಪಷ್ಟ ಅರಿವು ಹೊಂದಬೇಕು.

ADVERTISEMENT

ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. 2008ರಲ್ಲಿ ಅಮೆರಿಕದ ಅಗ್ರಮಾನ್ಯ ಹಣಕಾಸು ಸಂಸ್ಥೆ ಲೀಮನ್ ಬ್ರದರ್ಸ್ ದಿವಾಳಿ ಘೋಷಿಸಿತು. ಇದರ ಬೆನ್ನಿಗೇ ಭಾರತದಲ್ಲಿ ಸತ್ಯಂ ಹಗರಣ ಬೆಳಕಿಗೆ ಬಂತು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಸತ್ಯಂ ಹಗರಣದ ಪರಿಣಾಮವಾಗಿ, 17,000 ಅಂಶಗಳಲ್ಲಿದ್ದ ಸೆನ್ಸೆಕ್ಸ್ ಏಕಾಏಕಿ 8,000 ಅಂಶಗಳಿಗೆ ಇಳಿಕೆ ಕಂಡಿತು. ಆದರೆ 2014ರಲ್ಲಿ ದೇಶದಲ್ಲಿ ಬಹುಮತದ, ಸ್ಥಿರ ಸರ್ಕಾರ ಬಂದಾಗ ಮಾರುಕಟ್ಟೆ ಪುಟಿದೆದ್ದಿತ್ತು.

2014ರಲ್ಲಿ ಸೆನ್ಸಕ್ಸ್ 25,000 ಅಂಶಗಳಿಗೆ ಜಿಗಿತ ಕಂಡಿತು. 2018ರ ವೇಳೆಗೆ 35,000 ಅಂಶಗಳ ಗಡಿ ಮುಟ್ಟಿದ್ದ ಸೆನ್ಸೆಕ್ಸ್, 2020ರ ಫೆಬ್ರುವರಿಯಲ್ಲಿ 40,000 ಅಂಶಗಳ ಗಡಿ ದಾಟಿತು. ಆದರೆ 2020ರ ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚೆಚ್ಚು ವರದಿಯಾದ ಕಾರಣ ಷೇರು ಮಾರುಕಟ್ಟೆ ಸೂಚ್ಯಂಕ ಏಕಾಏಕಿ 25,000 ಅಂಶಗಳಿಗೆ ಕುಸಿತ ಕಂಡಿತು. ಈ ವೇಳೆ ಆತುರಕ್ಕೆ ಬಿದ್ದು ಹಲವರು ತಮ್ಮ ಹೂಡಿಕೆಗಳನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡರು. ಆದರೆ, ಈಗ ಸೆನ್ಸೆಕ್ಸ್ ಸೂಚ್ಯಂಕ 50,000 ಗಡಿದಾಟಿ ಮುನ್ನುಗ್ಗುತ್ತಿದೆ!

ಇತಿಹಾಸವನ್ನು ಹೀಗೆ ತಿರುಗಿ ನೋಡಿದಾಗ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಎನ್ನುವುದು ಒಂದು ವ್ಯವಸ್ಥಿತ ಸೂತ್ರಕ್ಕೆ ಅನುಗುಣವಾಗಿ ನಡೆಯುವ ಲೆಕ್ಕಾಚಾರ ಎನ್ನುವುದು ಸ್ಪಷ್ಚವಾಗುತ್ತದೆ. ಅರಿತು ಹೂಡಿಕೆ ಮಾಡುವವರಿಗೆ ಷೇರು ಮಾರುಕಟ್ಟೆ ಸಂಪತ್ತು ಗಳಿಸುವ ಕೇಂದ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಲ್ಪಾವಧಿಯಲ್ಲಿ ರಿಸ್ಕ್, ದೀರ್ಘಾವಧಿಯಲ್ಲಿ ಲಾಭ

ಷೇರು ಮಾರುಕಟ್ಟೆ ಹೂಡಿಕೆ ದೀರ್ಘಾವಧಿಗೆ ಅಪಾಯಕಾರಿಯಲ್ಲ, ಆದರೆ ಅಲ್ಪಾವಧಿ ಲಾಭದ ಉದ್ದೇಶವಿದ್ದರೆ ಷೇರುಪೇಟೆಯಲ್ಲಿನ ಹೂಡಿಕೆಯಲ್ಲಿ ಖಂಡಿತವಾಗಿಯೂ ದೊಡ್ಡ ಮಟ್ಟದ ರಿಸ್ಕ್ ಇದೆ. 1991ರಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ 5,000 ಅಂಶಗಳಿಗಿಂತ ಕೆಳಗಿತ್ತು. ಇಂದು ಸೂಚ್ಯಂಕ 50,000 ಅಂಶಗಳ ಗಡಿದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಅಂದರೆ ಷೇರು ಮಾರುಕಟ್ಟೆ ಏಂದಿಗೂ ಇಳಿದೇ ಇಲ್ಲವೇ? ಖಂಡಿತವಾಗಿಯೂ ಇಳಿಕೆ ಕಂಡಿದೆ. ಆದರೆ ಆ ಏರಿಳಿತಗಳೆಲ್ಲ ತಾತ್ಕಾಲಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.