ADVERTISEMENT

ಇ–ತ್ಯಾಜ್ಯ ನಿರ್ವಹಣೆಗೆ ಸೆರೆಬ್ರಾ ಗ್ರೀನ್‌

​ಕೇಶವ ಜಿ.ಝಿಂಗಾಡೆ
Published 17 ಡಿಸೆಂಬರ್ 2019, 19:30 IST
Last Updated 17 ಡಿಸೆಂಬರ್ 2019, 19:30 IST
ಇ–ತ್ಯಾಜ್ಯ ಸಂಸ್ಕರಣಾ ಘಟಕ
ಇ–ತ್ಯಾಜ್ಯ ಸಂಸ್ಕರಣಾ ಘಟಕ   

ಪ್ರತಿಯೊಂದು ಮನೆ– ಮನೆಯಲ್ಲಿಯೂ ಇ–ತ್ಯಾಜ್ಯ ಇದೆ. ಗ್ರಾಹಕರು ಬಳಸಿ ಬೀಸಾಡಿದ, ಹಳೆಯದಾದ ಫ್ರಿಜ್‌, ಕಂಪ್ಯೂಟರ್‌, ಮಿಕ್ಸರ್‌, ದುರಸ್ತಿಯಾಗಬೇಕಾದ ಟೆಲಿವಿಷನ್‌ ಸೆಟ್‌, ಮೊಬೈಲ್‌ ಮತ್ತು ಬ್ಯಾಟರಿಗಳ ದೊಡ್ಡ ರಾಶಿಯೇ ಪ್ರತಿಯೊಬ್ಬರ ಮನೆಯಲ್ಲಿ ಕಂಡುಬರುತ್ತದೆ. ಮನೆ ಸ್ವಚ್ಛ ಮಾಡುವಾಗಲೇ ಈ ತ್ಯಾಜ್ಯದ ರಾಶಿ ಕಣ್ಣಿಗೆ ಬಿದ್ದಾಗಲೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತೇವೆ. ಸಾಕಷ್ಟು ಚೌಕಾಸಿ ಮಾಡಿದ ನಂತರವೇ ಗುಜರಿ ಖರೀದಿದಾರರಿಗೆ ಮಾರುತ್ತೇವೆ. ವಿದೇಶಗಳಲ್ಲಿ ಇಂತಹ ತ್ಯಾಜ್ಯ ವಿಲೇವಾರಿಗೆ ಬಳಕೆದಾರರೇ ಹಣ ಪಾವತಿಸಬೇಕು. ದೇಶದಾದ್ಯಂತ ಪ್ರತಿ ವರ್ಷ ಸಾವಿರಾರು ಟನ್‌ಗಳಷ್ಟು ಇಂತಹ ಇ–ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಕೆಲವರು ಆಸಿಡ್‌ ಹಾಕಿ ಲೋಹ ಕರಗಿಸಿ ಬೇರ್ಪಡಿಸುತ್ತಾರೆ. ಬಳಸಿ ಉಳಿದ ಆಸಿಡ್‌ ಒಳಚರಂಡಿಗೆ ಸೇರ್ಪಡೆಯಾಗುತ್ತದೆ. ಹೀಗೆ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದರಿಂದ ಮಣ್ಣು, ನೀರು ಮತ್ತು ವಾತಾವರಣವೂ ಕಲುಷಿತಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡುತ್ತಿದೆ. ನಮ್ಮಲ್ಲಿ ಇ–ತ್ಯಾಜ್ಯದ ವಿಲೇವಾರಿಯು ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಸರ್ಕಾರದ ನಿಯಮ – ನಿಬಂಧನೆಗಳಿಗೆ ಒಳಪಟ್ಟು ಸಂಘಟಿತ ರೂಪದಲ್ಲಿಯೂ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಒಟ್ಟಾರೆ ಪ್ರಕ್ರಿಯೆಯು ಪಾರದರ್ಶಕವೂ ಆಗಿಲ್ಲ. ಎಲೆಕ್ಟ್ರಾನಿಕ್‌ ತ್ಯಾಜ್ಯ ಸಂಸ್ಕರಣೆಯು ಬಹುಪಾಲು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಅಸಂಘಟಿತ ಸ್ವರೂಪದಲ್ಲಿ ನಡೆಯುತ್ತಿರುವುದರಿಂದ ಅದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ನಿಖರ ಕೂಡ ಲೆಕ್ಕಕ್ಕೆ ಸಿಗುವುದಿಲ್ಲ.

ಬೆಂಗಳೂರಿನ ಇ–ತ್ಯಾಜ್ಯ ನಿರ್ವಹಣಾ ಕಂಪನಿ ಸೆರೆಬ್ರಾ ಗ್ರೀನ್‌ (Cerebra Green), ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ಇ–ತ್ಯಾಜ್ಯ ಸಂಗ್ರಹಿಸುವವರ (ರದ್ದಿ ಆಯುವವರ) ಸಹಯೋಗದಲ್ಲಿ ಕಂಪನಿಯು ಕಾರ್ಯ ನಿರ್ವಹಿಸುತ್ತಿದೆ. ಅಸಂಘಟಿತ ವಲಯದ ಇ–ತ್ಯಾಜ್ಯ ಸಂಸ್ಕರಣಾ ಉದ್ದಿಮೆಗೆ ಹೊಸ ವ್ಯಾಖ್ಯೆ ಮತ್ತು ಸ್ವರೂಪ ನೀಡುವುದು ಅದರ ಉದ್ದೇಶವಾಗಿದೆ. ಅದಕ್ಕೊಂದು ಸಂಘಟಿತ ವಲಯದ ಉದ್ದಿಮೆ ಸ್ವರೂಪವನ್ನೂ ನೀಡುತ್ತಿದೆ. ಇ–ತ್ಯಾಜ್ಯ ಸಂಗ್ರಹ, ನಿರ್ವಹಣೆ ಮತ್ತು ದಾಸ್ತಾನು ವಿಷಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರದ್ದಿ ಆಯುವವರಿಗೆ ತರಬೇತಿಯನ್ನೂ ನೀಡುತ್ತಿದೆ. ಅವರು ಸಂಗ್ರಹಿಸುವ ತ್ಯಾಜ್ಯಕ್ಕೆ ಉತ್ತಮ ಬೆಲೆಯನ್ನೂ ಒದಗಿಸುತ್ತಿದೆ.
ಇ–ತ್ಯಾಜ್ಯ ಸಂಗ್ರಹಿಸುವವರನ್ನು ‘ತ್ಯಾಜ್ಯ ಸಂಗ್ರಹ ಪಾಲುದಾರರನ್ನಾಗಿಸಿ’ ಅವರು ಮಾಡುವ ಕೆಲಸಕ್ಕೆ ಘನತೆ ಮತ್ತು ಗೌರವ ತಂದುಕೊಡುವ ಕೆಲಸವನ್ನೂ ಮಾಡುತ್ತಿದೆ.

‘ಕೋಲಾರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಇರುವ ಕಾರ್ಖಾನೆಯಲ್ಲಿ ವ್ಯವಸ್ಥಿತವಾಗಿ ತ್ಯಾಜ್ಯದ ವಿಲೇವಾರಿ ಮಾಡಲಾಗುತ್ತಿದೆ. ಈ ಘಟಕ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇ–ತ್ಯಾಜ್ಯದಲ್ಲಿನ ಪ್ಲಾಸ್ಟಿಕ್‌, ಗಾಜು, ಪಿಸಿಬಿ ಬೋರ್ಡ್‌, ತಾಮ್ರ ಮುಂತಾದವುಗಳನ್ನು ಸಂಸ್ಕರಿಸಿ ಬೇರ್ಪಡಿಸಲಾಗುವುದು. ಕೇಬಲ್‌ಗಳಲ್ಲಿನ ತಾಮ್ರ ಕರಗಿಸಲಾಗುವುದು, ಪ್ಲಾಸ್ಟಿಕ್‌ ಗ್ರೈಂಡಿಂಗ್‌ ಮಾಡಲಾಗುವುದು. ಆನಂತರ ಅದನ್ನು ಸಂಬಂಧಿಸಿದ ಉದ್ದಿಮೆಗಳಿಗೆ ಮರು ಬಳಕೆ ಉದ್ದೇಶಕ್ಕೆ ಮಾರಾಟ ಮಾಡುತ್ತಿದೆ’
ಎಂದು ಕಂಪನಿಯ ಚೀಫ್‌ ಬಿಸಿನೆಸ್‌ ಆಫೀಸರ್‌ (ಸಿಬಿಒ) ಹರಿಪ್ರಸಾದ್‌ ಶೆಟ್ಟಿ ಅವರು ಹೇಳುತ್ತಾರೆ.

ADVERTISEMENT

‘ಇ–ತ್ಯಾಜ್ಯ ಪೂರೈಕೆ ವ್ಯವಸ್ಥೆಯಲ್ಲಿ ತುಂಬ ಸೋರಿಕೆ ಇದೆ. ಇದನ್ನು ತಡೆಗಟ್ಟಲು ಸಂಸ್ಥೆಯು ಜಿಲ್ಲಾ ಕೇಂದ್ರಗಳಲ್ಲಿ ಇ–ತ್ಯಾಜ್ಯ ಸಂಗ್ರಹಿಸುವವರನ್ನು ನೇಮಕ ಮಾಡಿಕೊಳ್ಳುತ್ತಿದೆ. ಮನೆ –ಮನೆಗಳಿಂದ ಇ–ತ್ಯಾಜ್ಯ ಸಂಗ್ರಹಿಸುವವರಿಗೆ ತರಬೇತಿ ನೀಡುತ್ತದೆ. ಕೆಲವರು ತಮಗೆ ಬೇಕಾದ ಸರಕನ್ನಷ್ಟೆ ಇಟ್ಟುಕೊಂಡು, ಉಳಿದಿದ್ದನ್ನು ಗುಜರಿಗೆ ಹಾಕುತ್ತಾರೆ. ಈ ಪ್ರವೃತ್ತಿಯ ಬಾಧಕಗಳನ್ನು ಮನವರಿಕೆ ಮಾಡಿಕೊಡುತ್ತಿದೆ. ಯಾವುದೇ ಇ–ತ್ಯಾಜ್ಯವು ಒಂದು ಯುನಿಟ್‌ ರೂಪದಲ್ಲಿ (ಪೂರ್ಣ ಸ್ವರೂಪ) ಇದ್ದರೆ ಮಾತ್ರ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ. ಇದರಿಂದ ತ್ಯಾಜ್ಯ ಬೇರ್ಪಡಿಸುವುದು ಸುಲಭ ಮತ್ತು ಹೆಚ್ಚು ಲಾಭದಾಯಕವೂ ಆಗಿರುತ್ತದೆ. ಇದೇ ಕಾರಣಕ್ಕೆ ಯಾವುದೇ ಸರಕನ್ನು ಬಿಡಿಬಿಡಿಯಾಗಿ ಖರೀದಿಸದೆ, ಇಡಿಯಾಗಿ ಖರೀದಿಸುವುದರ ಹಣಕಾಸು ಮತ್ತಿತರ ಪ್ರಯೋಜನಗಳನ್ನು ರದ್ದಿ ಆಯುವವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಜಿಲ್ಲೆಯೊಂದರಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಜಿಲ್ಲಾ ಕೇಂದ್ರದಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಲಾಗುವುದು. ಆನಂತರ ಅದನ್ನು ಕೋಲಾರದ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುವುದು. 1 ಕೆಜಿ ಮೊಬೈಲ್‌ ಪಿಸಿಬಿ ಬೋರ್ಡ್‌ ಪೌಡರ್‌ನಲ್ಲಿ, 1 ಕೆಜಿ ಚಿನ್ನದ ಅದಿರಿನಲ್ಲಿ ಇರುವ ಚಿನ್ನಕ್ಕಿಂತ ಹೆಚ್ಚು ಚಿನ್ನ ಇರಲಿದೆ’ ಎಂದು ಅವರು ಹೇಳುತ್ತಾರೆ.

‘ಮುಂಬೈನಲ್ಲಿ ರೋಟರಿ ಕ್ಲಬ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೆರವಿನಿಂದ ಇ–ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿಯೂ ಇದೇ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಾಲೇಜ್‌ಗಳಲ್ಲಿಯೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇ–ತ್ಯಾಜ್ಯ ನಿರ್ವಹಣೆಯಲ್ಲಿಯೂ ಉದ್ಯೋಗ ಅವಕಾಶಗಳಿವೆ’ ಎಂದು ಕಂಪನಿಯ ಪ್ರಾದೇಶಿಕ ಮ್ಯಾನೇಜರ್‌ ಹೇಮಚಂದ್ರ ಆರ್‌. ಹೇಳುತ್ತಾರೆ.

ಒಟ್ಟಾರೆ ಇ–ತ್ಯಾಜ್ಯ ಪ್ರಕ್ರಿಯೆಯ ನಿರ್ವಹಣೆ ಉದ್ದೇಶಕ್ಕೆಂದೇ ಪ್ರತ್ಯೇಕ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಇದರ ನೆರವಿನಿಂದ ತ್ಯಾಜ್ಯ ಸಾಗಣೆ, ಲಾರಿಗೆ ಲೋಡ್‌ ಆಗಿರುವ ಸರಕಿನ ಪ್ರಮಾಣ, ವೇ–ಬ್ರಿಜ್‌ ಮಾಹಿತಿ – ಹೀಗೆ ಪ್ರತಿಯೊಂದರ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನು ಸಂಸ್ಥೆಯು ಪಾಲಿಸಿಕೊಂಡು ಬರುತ್ತಿದೆ. ಕೆಲ ಕಂಪನಿಗಳು ತಮ್ಮ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಇ–ತ್ಯಾಜ್ಯ ಸಂಗ್ರಹಿಸಲು ಗಮನ ಕೇಂದ್ರೀಕರಿಸಿವೆ. ಸಮರ್ಪಕವಾಗಿ ನಿರ್ವಹಿಸುವವರಿಗೆ ಮಾತ್ರ ಇ–ತ್ಯಾಜ್ಯ
ಕೊಡುವ ಬಗ್ಗೆ ಗ್ರಾಹಕರಲ್ಲಿಯೂ ಕ್ರಮೇಣ ಅರಿವು ಹೆಚ್ಚುತ್ತಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ದೇಶದಲ್ಲಿನ ವಾರ್ಷಿಕ ಉತ್ಪಾದನೆಯಾಗುವ ಇ–ತ್ಯಾಜ್ಯ– 45 ಲಕ್ಷ ಟನ್‌

ಮರು ಸಂಸ್ಕರಣೆಯಾಗುವ ಇ–ತ್ಯಾಜ್ಯ–7 ಲಕ್ಷ ಟನ್‌

ಮಾತ್ರ ಮರು ಸಂಸ್ಕರಣೆ–30 %

ಪ್ರತಿ ತಿಂಗಳೂ ಸೆರೆಬ್ರಾ ಗ್ರೀನ್‌ ಸಂಗ್ರಹಿಸುವ ಇ–ತ್ಯಾಜ್ಯ– 3,000 ಟನ್‌

ಇ–ತ್ಯಾಜ್ಯದಲ್ಲಿನ ಕಂಪ್ಯೂಟರ್‌ ಮತ್ತು ದೂರಸಂಪರ್ಕ ಸಲಕರಣೆಗಳ ಪಾಲು– 82 %

ಅಸಂಘಟಿತ ವಲಯದಲ್ಲಿನ ಇ–ತ್ಯಾಜ್ಯ ನಿರ್ವಹಣೆ–95 %

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.