ಶಿರಸಿ: ವಾಲಿಬಾಲ್ ಆಡುವ ಗೆಳೆಯರ ನೀರಡಿಕೆಯ ದಾಹ ತಣಿಸಲು ತಂಪು ಪಾನೀಯ ಸಿದ್ಧಪಡಿಸಿಕೊಂಡು ಹೋಗುತ್ತಿದ್ದ ಯುವಕ ದಿನವೂ ಕನಸು ಹೆಣೆಯುತ್ತಿದ್ದ. ಗೆಳೆಯರು ನೀಡುತ್ತಿದ್ದ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ರುಚಿಗೊಂದು ರೂಪಕೊಟ್ಟು ಸಣ್ಣ ಉದ್ಯಮ ಆರಂಭಿಸಿದ ಈತ ಈಗ ಗ್ರಾಹಕರ ಮನಗೆದ್ದಿದ್ದಾನೆ.
ಇಲ್ಲಿನ ಮಾರಿಕಾಂಬಾ ನಗರದಲ್ಲಿ ತಯಾರಾಗುವ ‘ಕಾಮಕಸ್ತೂರಿ ಲೆಮನ್ ಜ್ಯೂಸ್’ಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಆರೋಗ್ಯಕ್ಕೆ ಹಿತವಾದ, ನಾಲಿಗೆಗೆ ರುಚಿಯಾದ ಈ ತಂಪು ಪಾನೀಯವನ್ನು ಗ್ರಾಹಕರು ಕೇಳಿ ಖರೀದಿಸುತ್ತಾರೆ. ತೀರಾ ಅಪರೂಪವಾಗಿರುವ ಕಾಮಕಸ್ತೂರಿ ಜ್ಯೂಸ್ ತಯಾರಕ ಸಂಜಯ್ ಪಟಗಾರ.
ಮಂಗಳೂರಿನಲ್ಲಿ ಪದವಿ ಶಿಕ್ಷಣ ಓದುವಾಗಲೇ ಊರಿನಲ್ಲೊಂದು ಉದ್ಯಮ ಆರಂಭಿಸಬೇಕೆಂದು ಯೋಚಿಸಿದ್ದ ಸಂಜಯ್, ಹೊಸತನದ ಹುಡುಕಾಟದಲ್ಲಿದ್ದರು. ಆಗ, ಅವರಿಗೆ ಹೊಳೆದಿದ್ದು ದೇಹಕ್ಕೆ ತಂಪು ನೀಡುವ ಕಾಮಕಸ್ತೂರಿ ಪಾನೀಯ. ಮನೆಯ ಮಹಡಿಯ ಮೇಲೆ ಪಾನೀಯ ತಯಾರಿಸಿ, ಮಾರಾಟ ಮಾಡುವಾಗ, ಅವರ ಬಳಿ ಬಂಡವಾಳವೂ ಇಲ್ಲ. ಅಂಗಡಿಗಳಲ್ಲಿ ಇರುವ ಖಾಲಿ ಬಾಟಲ್‌ಗಳನ್ನು ತಂದು, ಚೊಕ್ಕವಾಗಿ ತೊಳೆದು ಅದರಲ್ಲಿ ಪಾನೀಯ ತುಂಬಿಸಿ, ಮತ್ತೆ ಅಂಗಡಿಗಳಿಗೆ ನೀಡುತ್ತಿದ್ದರು.
ದಿನಕ್ಕೆ 50ರಿಂದ 100 ಪಾನೀಯ ಬಾಟಲಿಗಳನ್ನು ಸಿದ್ಧಪಡಿಸಿ, ಊರೆಲ್ಲ ಓಡಾಡಿ, ಅಂಗಡಿಗಳಿಗೆ ಕೊಡುತ್ತಿದ್ದರು. ‘ಇವನ್ನೆಲ್ಲ ಮಾಡಿ ಬದುಕು ಕಟ್ಟಿಕೊಳ್ಳಲು ಕಷ್ಟ’ ಎಂದು ಹಿತೈಷಿಗಳು ಉಪದೇಶಿಸಿದರು. ಆದರೆ, ಸಂಜಯ್ ಅವರ ಉತ್ಸಾಹ ತಗ್ಗಲಿಲ್ಲ. ಕಾಮಕಸ್ತೂರಿ ಜ್ಯೂಸ್ ಕುಡಿದವರು ಅದರ ರುಚಿಗೆ ಮನಸೋತರು. ಬೇಡಿಕೆ ಹೆಚ್ಚಾಯಿತು, ಇದಕ್ಕೊಂದು ಸಣ್ಣ ಉದ್ಯಮದ ರೂಪಕೊಟ್ಟರು.
‘ಒಂದು ವರ್ಷದ ಶ್ರಮಕ್ಕೆ ಫಲ ಸಿಕ್ಕಿದೆ. ಶಿರಸಿ, ಯಲ್ಲಾಪುರ, ಅಂಕೋಲಾವರೆಗೂ ಈಗ ಕಾಮಕಸ್ತೂರಿ ಪಾನೀಯ ಹೋಗುತ್ತಿದೆ. ಪ್ರತಿ ದಿನ ಸರಾಸರಿ 200 ಎಂ.ಎಲ್.ನ 1000 ಪ್ಯಾಕೆಟ್ ಸಿದ್ಧಪಡಿಸಿ ಮಾರಾಟ ಮಾಡುತ್ತೇನೆ. ಬೇಸಿಗೆಯಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಬೇರೆ ಬೇರೆ ಊರುಗಳಿಂದಲೂ ಬೇಡಿಕೆ ಬರುತ್ತಿದೆ. ನಾಲ್ಕೈದು ಜನರಿಗೆ ಉದ್ಯೋಗ ನೀಡಿರುವ ಖುಷಿಯೂ ಇದೆ’ ಎಂದು ಸಂಜಯ್ ಅಭಿಪ್ರಾಯ ಹಂಚಿಕೊಂಡರು. ಜನವರಿ 26ರಂದು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 1500 ಮಕ್ಕಳಿಗೆ ಅವರು ಉಚಿತವಾಗಿ ಈ ಪಾನೀಯವನ್ನು ವಿತರಿಸಿದ್ದರು.
ಇದರ ಜತೆಗೆ ಅವರು, ಒಂದು ವಾರದಲ್ಲಿ ಮನೆ ನಿರ್ಮಿಸಿಕೊಡುವ ಇನ್ನೊಂದು ಉದ್ಯಮವನ್ನೂ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.