ನವದೆಹಲಿ: ದೇಶದಲ್ಲಿ ನವೋದ್ಯಮ ಸಂಸ್ಕೃತಿಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಉದ್ದೇಶದಿಂದ ಜನವರಿ 16ನ್ನು ರಾಷ್ಟ್ರೀಯ ನವೋದ್ಯಮ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ 150ಕ್ಕೂ ಅಧಿಕ ನವೋದ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ‘ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಿ ಇರುತ್ತವೆ ಎಂದು ನಾನು ನಂಬುತ್ತೇನೆ’ ಎಂದರು. ದೇಶಕ್ಕಾಗಿ ಆವಿಷ್ಕಾರ ಮಾಡೋಣ, ದೇಶದಿಂದ ಆವಿಷ್ಕಾರ ಮಾಡೋಣ ಎಂದು ಕರೆ ನೀಡಿದರು.
ಸರ್ಕಾರವು ಮೂರು ಅಂಶಗಳ ಮೇಲೆ ಕೇಂದ್ರೀಕರಿಸುತ್ತಿದೆ. ಮೊದಲನೆಯದಾಗಿ, ಅಧಿಕಾರಶಾಹಿ ವರ್ಗ ಮತ್ತು ಸರ್ಕಾರಿ ಪ್ರಕ್ರಿಯೆಗಳ ಜಾಲದಿಂದ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಮುಕ್ತಗೊಳಿಸುವುದು, ಎರಡನೆಯದಾಗಿ, ನಾವಿನ್ಯತೆಯನ್ನು ಉತ್ತೇಜಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸುವುದು ಹಾಗೂ ಮೂರನೆಯದಾಗಿ, ಯುವ ನವೋದ್ಯಮಿಗಳು ಮತ್ತು ಯುವ ಉದ್ಯಮಗಳಿಗೆ ಆಸರೆ ಆಗುವುದು ಎಂದು ಮೋದಿ ತಿಳಿಸಿದರು.
ನವೋದ್ಯಮಗಳು ಪ್ರಮುಖ ಪಾತ್ರ ವಹಿಸಬಹುದಾದ ಹಲವು ವಲಯಗಳ ಬಗ್ಗೆ ಮೋದಿ ಅವರು ಯುವ ಉದ್ಯಮಿಗಳ ಗಮನ ಸೆಳೆದರು.ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ ಕಲ್ಪಿಸಲು ಗತಿಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ರಕ್ಷಣೆ ಮತ್ತು ಚಿಪ್ ತಯಾರಿಕೆಯು ಹಲವು ಅವಕಾಶಗಳನ್ನು ತೆರೆದಿಡುತ್ತವೆ ಎಂದರು.
ಕೇಂದ್ರ ಸರ್ಕಾರದ ಈ ಕಾರ್ಯಕ್ರಮವು ಯುವ ನವೋದ್ಯಮಿಗಳಿಗೆ ಉತ್ತೇಜನವನ್ನು ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಟ್ರೆಲ್‌ನ ಸಹ-ಸಂಸ್ಥಾಪಕ, ಸಿಇಒ ಪುಲ್ಕಿತ್ ಅಗರವಾಲ್ ಮಾತನಾಡಿ, ‘ಕೇಂದ್ರ ಸರ್ಕಾರ ಬಜೆಟ್‌ಗೂ ಮುನ್ನ ಇಂತಹ ಸ್ಪೂರ್ತಿದಾಯಕ ಯೋಜನೆ ಪ್ರಕಟಿಸಿರುವುದರಿಂದ ಎಲ್ಲಾ ನವೋದ್ಯಮಿಗಳಿಗೆ ಭರವಸೆ ಮತ್ತು ಉತ್ತೇಜನ ನೀಡುತ್ತದೆ’ ಎಂದರು.
ವಿಡಿಒ.ಎಐನ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಶರ್ಮಾ ಮಾತನಾಡಿ, ‘ರಾಷ್ಟ್ರೀಯ ನವೋದ್ಯಮ ದಿನದ ಘೋಷಣೆಯಿಂದ ಹೊಸ ಸ್ಟಾರ್ಟ್‌ಅಪ್‌ಗಳ ಯಶಸ್ಸು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭರವಸೆ ದೊರೆತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.