ADVERTISEMENT

2ನೇ ದಿನವೂ ಗೂಳಿ ಓಟ

ಪಿಟಿಐ
Published 17 ಮೇ 2024, 18:30 IST
Last Updated 17 ಮೇ 2024, 18:30 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.

ಮಹೀಂದ್ರ ಆ್ಯಂಡ್‌ ಮಹೀಂದ್ರ, ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿಸಿ ಷೇರುಗಳ ಖರೀದಿಯು ಸೂಚ್ಯಂಕಗಳ ಏರಿಕೆಗೆ ನೆರವಾಯಿತು.

ಬೆಳಿಗ್ಗಿನ ವಹಿವಾಟಿನಲ್ಲಿ ಇಳಿಕೆ ದಾಖಲಿಸಿದ್ದ ಸೂಚ್ಯಂಕಗಳುಬಳಿಕ ಚೇತರಿಕೆಯ ಹಳಿಗೆ ಮರಳಿದವು. ವಿದೇಶಿ ಸಾಂಸ್ಥಿಕ ಬಂಡವಾಳದ ಹೊರಹರಿವಿನ ಪ್ರಮಾಣವು ತಗ್ಗಿದ್ದು, ದೇಶೀಯ ಕಂಪನಿಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ನೆರವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 253 ಅಂಶ ಏರಿಕೆ (ಶೇ 0.34ರಷ್ಟು) ಕಂಡು 73,917 ಅಂಶಗಳಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 62 ಅಂಶ ಹೆಚ್ಚಳ ಆಗಿದ್ದು,(ಶೇ0.28ರಷ್ಟು) 22,466 ಅಂಶಗಳಲ್ಲಿ ವಹಿವಾಟು ಅಂತ್ಯ ಗೊಂಡಿತು. ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರಿನ ಮೌಲ್ಯ ಶೇ 5.97ರಷ್ಟು ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಮೌಲ್ಯದಲ್ಲಿ ಶೇ 0.73ರಷ್ಟು ಹೆಚ್ಚಳವಾಗಿದೆ. 

ಜೆಎಸ್‌ಡಬ್ಲ್ಯು ಸ್ಟೀಲ್‌, ಅಲ್ಟ್ರಾ ಸಿಮೆಂಟ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಐಟಿಸಿ ಹಾಗೂ ಎನ್‌ಟಿಪಿಸಿ ಷೇರಿನ ಮೌಲ್ಯದಲ್ಲಿಯೂ ಏರಿಕೆಯಾಗಿದೆ.

ಟಿಸಿಎಸ್‌, ಎಚ್‌ಸಿಎಲ್‌, ಎಚ್‌ಯುಎಲ್‌, ನೆಸ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್‌, ವಿಪ್ರೊ ಹಾಗೂ ಇನ್ಫೊಸಿಸ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

‘ಜಾಗತಿಕ ವಿದ್ಯಮಾನಗಳ ಮಿಶ್ರ ಬೆಳವಣಿಗೆ ಹಾಗೂ ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತದ ಅನಿಶ್ಚಿತತೆಯ ನಡುವೆಯೂ ದೇಶದ ಷೇರುಪೇಟೆಗಳು ಚೇತರಿಸಿಕೊಂಡಿವೆ. ಮಾರ್ಚ್‌ ತ್ರೈಮಾಸಿಕದಲ್ಲಿ ಲಾರ್ಜ್‌ ಕ್ಯಾಪ್‌ ಕಂಪನಿಗಳ ಲಾಭದಲ್ಲಿಏರಿಕೆಯಾಗಿರುವುದು ಕೂಡ ಇದಕ್ಕೆ ನೆರವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಬಿಎಸ್‌ಸಿ ಮಿಡ್‌ ಕ್ಯಾಪ್ ಸೂಚ್ಯಂಕ ಶೇ 1.18ರಷ್ಟು ಹಾಗೂ ಸ್ಮಾಲ್‌ ಕ್ಯಾಪ್‌
ಸೂಚ್ಯಂಕ ಶೇ 1.39ರಷ್ಟು ಏರಿಕೆ ಕಂಡಿದೆ.   ಶಾಂಘೈ, ಹಾಂಗ್‌ಕಾಂಗ್‌ ಮಾರುಕಟ್ಟೆ
ಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹776 ಕೋಟಿ ಮೌಲ್ಯದ ಷೇರುಗಳನ್ನು
ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.