ADVERTISEMENT

ಭಾರತ್ ಬಾಂಡ್‌ ಇಟಿಎಫ್‌ ಚಾಲನೆಗೆ ಕೇಂದ್ರ ಸಂಪುಟ ಒಪ್ಪಿಗೆ; ಯೂನಿಟ್‌ಗೆ ₹1000

ಪಿಟಿಐ
Published 4 ಡಿಸೆಂಬರ್ 2019, 9:39 IST
Last Updated 4 ಡಿಸೆಂಬರ್ 2019, 9:39 IST
ಬಾಂಡ್‌ ಇಟಿಎಫ್‌– ಸಾಂದರ್ಭಿಕ ಚಿತ್ರ
ಬಾಂಡ್‌ ಇಟಿಎಫ್‌– ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹೆಚ್ಚುವರಿ ಹಣಕಾಸು ಪೂರೈಕೆಗೆ ಅನುವಾಗುವ ನಿಟ್ಟಿನಲ್ಲಿ 'ಭಾರತ್‌ ಬಾಂಡ್‌ ಇಟಿಎಫ್‌'ಗೆ ಚಾಲನೆ ನೀಡಲು ಸಚಿವ ಸಂಪುಟ ಬುಧವಾರ ಸಮ್ಮತಿ ಸೂಚಿಸಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹೊರಡಿಸುವ ಹಲವು ಬಾಂಡ್‌ಗಳನ್ನು ಇಟಿಎಫ್‌ ಒಳಗೊಂಡಿರಲಿದೆ. ಷೇರುಪೇಟೆಯಲ್ಲಿ ಬಾಂಡ್‌ಗಳು ವಹಿವಾಟಿಗೆ ಒಳಪಡಲಿದ್ದು, ಸಣ್ಣ ಹೂಡಿಕೆದಾರರೂ ಸಹ ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಬಾಂಡ್‌ ಇಟಿಎಫ್‌ ಪ್ರತಿ ಯೂನಿಟ್‌ಗೆ ₹1000 ಇರಲಿದೆ.

ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹೆಚ್ಚುವರಿ ಹಣದ ಹರಿವು ಸಿಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ADVERTISEMENT

ಈಗಾಗಲೇ ಷೇರುಗಳ ವಿನಿಮಯ ವಹಿವಾಟು ನಿಧಿ ಚಾಲ್ತಿಯಲ್ಲಿದ್ದು, ಇದೀಗ ಬಾಂಡ್‌ಗಳ ವಿನಿಮಯ ವಹಿವಾಟು ನಿಧಿಗೆ ಸಮ್ಮತಿ ದೊರೆತಿದೆ. ಭಾರತ್‌ ಬಾಂಡ್‌ವಿನಿಮಯ ವಹಿವಾಟು ನಿಧಿ ದೇಶದ ಮೊದಲ ಕಾರ್ಪೊರೇಟ್‌ 'ಬಾಂಡ್‌ ಇಟಿಎಫ್‌' ಆಗಲಿದೆ.

ಬಾಂಡ್‌ಗಳ ಇಟಿಎಫ್‌ ನಿಗದಿತ ಪರಿಪಕ್ವ ದಿನ (ಮೆಚ್ಯುರಿಟಿ ಡೇಟ್‌) ಹೊಂದಿರಲಿದೆ. ವಹಿವಾಟಿಗೆ ಒಳಪಡುವ ಬಾಂಡ್‌ಗಳು 3 ವರ್ಷ ಮತ್ತು 10 ವರ್ಷಗಳ ಮೆಚ್ಯುರಿಟಿಅವಧಿ ಹೊಂದಿರಲಿವೆ ಎಂದು ನಿರ್ಮಲಾ ಸೀತಾರಾಮನ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.